Sunday, December 9, 2007

ಚಳಿ ಚಳಿ ತಾಳೆನು ಈ ಚಳಿಯ..

ನಮ್ಮೂರಿನಲ್ಲಿ ಆಯಾ ಕಾಲಗಳನ್ನು ಕೆಲ ’ಸ್ಪೆಶಲ್’ ಲಕ್ಷಣಗಳಿಂದ ಗುರುತಿಸಿಬಿಡುತ್ತಾರೆ. ದೀಪಾವಳಿ ಆಸು ಪಾಸಿನಲ್ಲಿ ಉಳ್ಳಾಗಡ್ಡಿ ಜೋರು ಶುರುವಾಗಿಬಿಡುತ್ತೆ,ಜೊತೆಗೆ ಥಂಡಿ ಗಾಳಿಯ ಆಗಮನವೂ ಶುರುವಾಗಿಬಿಡುತ್ತೆ.ಊರ ನಾಯಿಗಳಿಗಿದು ಪ್ರಸ್ಥದ ಕಾಲ.ಅಂತೆಯೇ ಹೆಣ್ಣುನಾಯಿಗಳನ್ನು ಹುಡುಕಿಕೊಂಡು ಗಂಡುನಾಯಿಗಳು ಅಲೆಯುತ್ತಿರುತ್ತವೆ ಮತ್ತು ಅನುಕೂಲವದೆಡೆಯೆಲ್ಲಾ ತಮ್ಮ ರಾಸಲೀಲೆ ಆರಂಭಿಸಿ ನೋಡುಗರಿಗೆ ಮುಜುಗರ ತಂದಿಕುತ್ತವೆ. ಅದೇಕೋ ನಾ ಅರಿಯೆ ಒಮ್ಮಿದೋಮ್ಮೆಲೆ ಹೆಣ್ಣುನಾಯಿಗಳ ಸಂಖ್ಯೆ ಕಡಿಮೆಯಾಗಿ, ಅಳಿದುಳಿದ ’ಪ್ರೇಯಸಿ’ರಿಗಾಗಿ ಗಂಡುನಾಯಿಳ ನಡುವೆ ಪೈಪೋಟಿ ಶುರುವಾಗಿರುತ್ತೆ.ಕೆಲ ಪ್ರಾಣಿವಾದಿಗಳು ಹೆಣ್ಣುನಾಯಿಗಳ ಕಷ್ಟ ನೋಡಲಾಗದೆ ಚಡ್ಡಿ ತೊಡಿಸಿ ಅವುಗಳನ್ನು ಶೋಷಣೆ ಮುಕ್ತರನ್ನಾಗಿಸುವದರ ಜೊತೆಗೆ, ತಮ್ಮ ಈ ಸಾಧನೆಯಿಂದ ಲಭಿಸಬಹುದಾದ ಪುಣ್ಯದ ಲೆಕ್ಕಾಚಾರದಲ್ಲಿ ತೊಡಗಿರುತ್ತಾರೆ.ಮೂಡಗಾಳಿಯ ದೆಸಿಯಿಂದಾಗಿ ಎಲ್ಲರ ಮುಖ ಒಡೆದು, ತುಟಿ ಬಾತು ’ವೆಸ್ಟ ಇಂಡಿಸಿನ’ ಮಾಜಿ ಬೌಲರ್ ’ಕಟ್ನಿ ಆಂಬ್ರೋಸ’ನನ್ನು ನೆನೆಪಿಸತೊಡಗುತ್ತಾರೆ.ನಮ್ಮೂರ ಮನ್ಮಥರು ಹಾಳಾಗುತ್ತಿರುವ ತಮ್ಮ ಡವ್ ಗಳ ತ್ವಚೆಯನ್ನು ಕಂಡು ಮಮ್ಮಲ ಮರುಗುತ್ತಿರುತ್ತಾರೆ.ನಮ್ಮೂರ ವಿಶ್ವಸುಂದರಿಯಾದ ಗೌಡ್ರ ಮಗಳು ಗಂಗಿ ತನ್ನ ಸೌಂದರ್ಯ ಹಾಳಗಿದ್ದಕ್ಕೆ ಕಾಲೇಜಿಗೆ ರಜೆ ಹಾಕಿ ತಮ್ಮ "ದರ್ಶನ ಸೇವೆ" ವನ್ನು ನಿಲ್ಲಿಸಿ ಬಿಡುತ್ತಾಳೆ. ಊರ ಮದ್ಯದ ಶೆಟ್ಟಿ ಅಂಗಡಿಯಲ್ಲಿ ಆಗಲೇ ಎರಡು ಡಬ್ಬಿ "ವ್ಯಾಸಲಿನ" ಖರ್ಚಾಗಿ, ಈ ಶನಿವಾರ ಗದಗಿಗೆ ಹೋದಾಗ ಇನ್ನೆರಡು ಡಬ್ಬಿ ಆರ್ಡರು ಮಾಡಬೇಕೇಂದು ಶೆಟ್ಟಿ ನೆನೆಪಿಟ್ಟುಕೊಳ್ಳುತ್ತಾನೆ.

ಬೇಸಿಗೆಯಲ್ಲಿ ಎಷ್ಟೇ ಬಿಸಿಲಾದರೂ ಡೊಂಟ್ ಕೇರ್ ಮಾಡದೆ ’ಸೂರ್ಯ’ನಿಗೆ ಚಾಲೇಂಜ್ ಮಾಡುವ ನಮ್ಮೂರ ಜನತೆ, ಚಳಿ ಅಂದ್ರೆ ಸಾಕು ಸತ್ತ ಕೀಡಿ ಹುಳುವಂತಾಗುತ್ತಾರೆ. ಅಟ್ಟ ಸೇರಿದ ಸ್ವೇಟರು, ಮಂಕಿ ಕ್ಯಾಪು, ಶಾಲು, ಬೇಸಿಗೆಯಲ್ಲಿ ಹೊಲಿಸಿದ ಕೌದಿ ಎಲ್ಲಾ ಒಮ್ಮೆಲೆ ನೆನಪಾಗತೊಡಗುತ್ತವೆ. ಇಷ್ಟೆಲ್ಲಾ ಇದ್ದರೂ ಚಳಿ ತಡೆಯಲಾಗದ್ದಕ್ಕೆ ಜನ ಬೆಂಗಲೂರಿಗೆ ಉಳ್ಳಾಗಡ್ಡಿ ಮಾರಲು ಹೋದವರ ಹತ್ತಿರ ಮತ್ತು ಗದಗಿಗೆ ನೌಕರಿಗೆ ಹೋಗುವ ’ಗೊರ್ಮೆಂಟು ಮಂದಿ’ಗೆ ಹೊಸ ರಗ್ಗು ತರಲು ಆರ್ಡರು ಮಾಡತೊಡಗುತ್ತಾರೆ.ಲಿಂಗಭೇಧವಿಲ್ಲದೆ ಸ್ವೇಟರು, ಮಂಕಿ ಕ್ಯಾಪು ಧರಿಸಿದ ನಮ್ಮುರಿನ ಜನತೆ ’ಇಂಗ್ಲೀಷು ಸಿನಿಮಾ’ದಲ್ಲಿನ ಅನ್ಯ ಗ್ರಹ ಜೀವಿಗಳಂತೆ ಭಾಸವಾಗುತ್ತಾರೆ.ಅಸ್ತಮಾ ಇರುವವರ ಪಜೀತಿಯಂತೂ ಯಾರಿಗೂ ಬೇಡ, ಕಂಡಲ್ಲಿ ಕ್ಯಾಕರಿಸಿ ಉಗುಳಿ ಉಳಿದವರ ಕೆಂಗಣ್ಣಿಗೆ ಗುರಿಯಾಗುತ್ತಾರೆ.ಲಕ್ಷ್ಮೆಶ್ವರದಲ್ಲಿ ಮೀನಿನಲ್ಲಿ ಕೊಡುವ ನಾಟಿ ಔಷಧಿಯನ್ನು ನುಂಗಿ ಬಂದು ಮೊದಲಿಗಿಂತ ಈಗ ಕಡಿಮೆ ಎಂದು ತಮ್ಮನ್ನೆ ತಾವು ಸಮಾಧಾನಿಸಿಕೊಳ್ಳುತ್ತಾರೆ.ಇವರ ಲಿಸ್ಟಿಗೆ ಹೊಸ ಸೇರ್ಪಡೆ ಎಂದರೆ "ಚಿಕೂನ ಗುನ್ಯ" ಪೀಡಿತರು. ಇವರ ಕೃಪೆಯಿಂದಾಗಿ ಊರ ಮಧ್ಯದ "ಸಂಜೀವೀನಿ ಕ್ಲಿನಿಕ"ನ ಡಾಕ್ಟ್ರು ಚಳಿಗಾಲದಲ್ಲಿ ಬ್ಯುಸಿಯೋ ಬ್ಯುಸಿ.

ಚಳಿಗಾಲ ನಮ್ಮೂರ ದೇವರನ್ನೂ ತಾಗದೆ ಬಿಡುವುದಿಲ್ಲಾ. ದ್ಯಾಮವ್ವನ ಗುಡಿಯ ಪೂಜಾರಪ್ಪನಿಗೆ ಅಸ್ತಮಾ ಇರುವುದರಿಂದ ಗ್ರಾಮದೇವತೆಗೆ ಪೂಜೆಯಾಗುವುದು ಬಿಸಿಲು ಬಿದ್ದ ಮೇಲೆಯೆ.ಅಲ್ಲದೆ ಐದು ಗಂಟೆಗೆ ಎದ್ದು ಗಂಟಲು ಕಿತ್ತು ಹೋಗುವಂತೆ " ಅಲ್ಲ್ಲಾ ಹು ಅಕ್ಬರ" ಅಂತ ಅರಚುವ ಮುಲ್ಲಾನ ನೆಗಡಿ ಚಳಿಗಾಲ ಮುಗಿಯುವ ತನಕ ಬಿಡುವುದೇ ಇಲ್ಲಾ.ಅಲ್ಲಿಯವರೆಗೂ ಅವನ ಮೈಕಿಗೂ ರಜೆ, ಜೊತೆಗೆ ಅಲ್ಲಾನಿಗೂ ಲೇಟಾಗಿ ಏಳುವ ಭಾಗ್ಯ.ದೇವನು ದೇವತೆಗಳ ಪಾಡೇ ಹೀಗಾದರೆ ನಮ್ಮಂತಹ ನರ ಮನುಷ್ಯರ ಪಾಡೇನು?. ಮೊದಲೇ ಹುಟ್ಟು ಸೊಮಾರಿಗಳಾದ ನಮ್ಮಂತವರಿಗೆ ಚಳಿಗಾಲದ ನೆಪದಲ್ಲಿ ಇನ್ನೂ ಲೇಟಾಗಿ ಎಳುವ ಭಾಗ್ಯ ಮತ್ತು ಯಾವುದೋ ನೆಪ ಒಡ್ಡಿ ಜಳಕ ತಪ್ಪಿಸುವ ಸುವರ್ಣ ಅವಕಾಶಕ್ಕಾಗಿ ನಾವು ಕಾದು ಕುಳಿತ್ತಿರುತ್ತೇವೆ. ಅವರಿವರ ಹೊಲದಲ್ಲಿ ಕದ್ದು ಶೇಂಗಾ ಬಳ್ಳಿ ಕಿತ್ತು, ಬೀಡಿ ಜಗ್ಗುವವರಿಂದ ಬೆಂಕೆ ಪೊಟ್ಟಣ ಬೇಡಿ ತಂದು , ಶೇಂಗಾ ಸುಟ್ಟು ತಿಂದರಂತೂ ಪರಮಸುಖ.ಮನೆಯಲ್ಲಿ ಪದೆ ಪದೆ ಚಹಾ ಕೇಳಿ ಕ್ಯಾಕರಿಸಿ ಉಗುಳಿಸಿಕೊಳ್ಳುದಂತೂ ಮಾಮುಲಿನ ವಿಚಾರ.ಚಹದಂಗಡಿಯ ರಂಗನ ದುಕಾನಿನ ಚಹಾದ ಕಿತ್ತಲಿಯ ಕೆಳಗಿನ ಸ್ಟೋವಿನ ಫ್ಲೆಮು ದಿನವಿಡಿ ಆರುವುದೇ ಇಲ್ಲಾ.

ಇನ್ನೂ ಕಾಲೇಜಿಗೆ ಹೋಗುವ ನಮ್ಮ ಕುಲಭಾಂದವರಂತೂ ಮುಂಜಾನೆಯ ಕ್ಲಾಸಿಗೆ ಹೋದರೆ ದ್ಯಾಮವ್ವ ಶಾಪ ಕೊಟ್ಟಾಲೆಂದು ಹೆದರಿ ಆ ಕಡೆ ಹೋಗುವುದೇ ಇಲ್ಲ್ಲಾ. ಅದ್ರೂ ಕಾಲೇಜಿ ಕ್ಯಾಂಟಿನಿಗೆ ಬಂದು ದಮ್ಮು ಎಳೆಯುತ್ತಲೋ ಅಥವಾ ನಮ್ಮ "ಉತ್ತರ ಕರ್ನಾಟಕ"ದ ಹೆಮ್ಮೆಯಾದ ’ಗುಟಖಾ’ ಜಗಿಯುತ್ತಲೋ ತಮ್ಮ ಕಷ್ಟ ಸುಖ ಹಂಚಿಕೊಳ್ಳುವುದರೊಂದಿಗೆ ಕಾಲೇಜಿಗೆ ಬರದೇ ಇರುವ ಹುಡುಗಿಯರ ಗೈರು ಹಾಜರಾತಿಗೆ ಕಾರಣ ಹುಡುಕುವ ಸತ್ಕಾರ್ಯದಲ್ಲಿ ತೊಡಗಿರುತ್ತಾರೆ. ಈ ಕ್ಯಾಂಟಿನಿಗೆ ವಿಧ್ಯಾರ್ಥಿನಿಯರಿಗೆ ಮಾತ್ರ ಅಘೋಷಿತ ನಿರ್ಬಂಧ.ಇದನ್ನು ಮೀರುವ ’ಎದೆಗಾರಿಕೆ’ಯ ಹುಡುಗಿ ಇನ್ನೂ ಕಾಲೇಜಿಗೆ ಬಂದಿಲ್ಲಾ ಎಂದುದೆ ನಮ್ಮ ಹುಡುಗರ ಚಿಂತೆಗೆ ಕಾರಣ.ಸಿನಿಮಾದಲ್ಲಿ ತೋರಿಸುವ ಕಾಲೇಜು ಕ್ಯಾಂಟಿನನ್ನು ನೆನೆದು ತಮ್ಮ ದುರ್ವಿಧಿಯನ್ನು ಶಪಿಸುತ್ತಿರುತ್ತಾರೆ. ಇನ್ನು ಹೈಸ್ಕೂಲು, ಪ್ರೈಮರಿ ಹುಡುಗರಿಗೆ ಚಳಿಗಾಲದ ಶನಿವಾರವೆಂದರೆ ಸಾಕು ಭಯ ಬೀಳುತ್ತಾರೆ.ಪಿಟಿ ಮಾಸ್ತರಿನ ಡ್ರಿಲ್ ನ ಕಿರಿಕಿರಿಯ ಜೊತೆಗೆ, ಚಳಿಯಲ್ಲಿ ಬೀಳುವ ಏಟಿನ ಚುರುಕು ಇನ್ನೂ ಜಾಸ್ತಿ ಎಂಬುದು ಅವರ ಸಂಕಟ.ಇವರಲ್ಲೂ ಕೆಲ ಚಾಲಾಕು ಮುಂಡೆವು ಅಲ್ಲಲ್ಲಿ ಬಿದ್ದಿರುವ ಚಿಂದಿ ಹಾಳೆಗಳನ್ನೂ ಮತ್ತು ಕಚ್ಚ್ಸಾದಲ್ಲಿನ ಶುದ್ಧ ಬರಹದ ಹಾಳೆಗಳನ್ನೂ ಒಟ್ಟುಗೂಡಿಸಿ ಬೆಂಕಿ ಹಚ್ಚಿ ಚಳಿಯನನ್ನು ಒಡಿಸುವದರ ಜೊತೆಗೆ ತಮ್ಮ ಡವ್ ಗಳನ್ನೂ ಇಂಪ್ರೆಸ್ ಮಾಡುತ್ತಾರೆ.

ಬೆಂಗಳೂರಿಗೆ ಬಂದು ವರ್ಷಗಳೇ ಅದರೂ ಇಲ್ಲಿಯ ಚಳಿಗೆ ಹೊಂದಿಕೊಳ್ಳಲಾಗುತ್ತಿಲ್ಲ್ಲಾ ಮತ್ತು ಆ ನೆಪದಲ್ಲಿ ನಮ್ಮೂರಿನ ಹ್ಯಾಂಗೋವರಿನಿಂದ ಹೊರಬರಲೂ ಅಗುತ್ತಿಲ್ಲಾ. ಕಳೆದ ವಾರದ ಮೂರುದಿನಗಳ ಚಳಿಯಲ್ಲಿ ತಲೆಬಿಸಿ ಮಾಡಿಕೊಂಡಿದ್ದಕ್ಕೆ ಇದೆಲ್ಲಾ ನೆನಪಾಯ್ತು.

Sunday, December 2, 2007

ಅಬ್ಬಿಗೇರಿ ಎಕನಾಮಿಕ್ಸು ಮತ್ತು ಉಳ್ಳಾಗಡ್ಡಿ..
ನೀವೊಮ್ಮೆ ನವೆಂಬರ್,ಡಿಸೆಂಬರ್ ಗಳಲ್ಲಿ ಅಬ್ಬಿಗೇರಿಗೆ ಬಂದು ನೋಡಬೇಕು, ಎಲ್ಲೆಲ್ಲಿ ಬಯಲು ಜಾಗವಿರೊತ್ತೋ ಮತ್ತು ಎಲ್ಲೆಲ್ಲಿ ಸಾದ್ಯವೋ, ಅಲ್ಲೇಲ್ಲಾ ಉಳ್ಳಾಗಡ್ಡಿ ರಾಶಿ ಸುರುವಿರುತ್ತಾರೆ.ಗೌಡರ ಹತ್ತಿ ಜೀನಿನ ಖಾಲಿ ಜಾಗ, ಊರ ಮುಂದಿನ ಜಿಡ್ಡಿಯ ಬಳಿ, ಅದೂ ಹೋಗ್ಲಿ ದ್ಯಾಮವ್ವನ ಗುಡಿಯ ಮೂಂದಿನ ಕಿರುಜಾಗದಲ್ಲೂ ಬರೀ ಉಳ್ಳಾಗಡ್ಡಿಯ ಆರ್ಭಟವೇ ಅರ್ಭಟ.ಅದೋಂಥರ ವಿಚಿತ್ರ ಲೋಕವೇ ಉಳ್ಳಾಗಡ್ಡಿ ಸೀಜನ್ನಿನಲ್ಲಿ ನಮ್ಮೂರಿನಲ್ಲಿ ತೆರೆದುಕೊಂಡಿರುತ್ತದೆ.ಇಂತಿಪ್ಪ ಉಳ್ಳಾಗಡ್ಡಿಯ ರಾಶಿಯ ಸುತ್ತಲೂ ಗಡ್ದೆಯನ್ನು ಅದರ ತಪ್ಪಲಿನಿಂದ ಪ್ರತ್ಯೇಕಿಸಲು ಈಳಿಗೆಮಣೆ ಕೈಲಿ ಹಿಡಿದು ಕೂತ ಕೆಲಸದ ಹೆಂಗಸರು ಸೆನ್ಸಾರಿನ ಭಯವಿಲ್ಲದೆ ಧಾರಾಳವಾಗಿ ಸಂಸ್ಕ್ರತ ಪದಗಳನ್ನು ಬಳಸಿ ಹರಟತೊಡಗಿರುತ್ತಾರೆ.ಆದಷ್ಟು ಬೇಗ ಲೋಡ್ ಮಾಡಿ ಮಾರ್ಕೆಟ್ಟಿಗೆ ಕಳಿಸುವ ತರಾತುರಿಯಲ್ಲಿರುವ ಉಳ್ಳಾಗಡ್ಡಿ ಮಾಲೀಕರು ರಾತ್ರಿಯಾದರೂ ಎಲ್ಲಿಂದಲೋ ವೈರೆಳೆದು ತಾತ್ಕಾಲಿಕ ಬೆಳಕಿನ ವ್ಯವಸ್ಥೆ ಮಾಡಿ ಈ ಹೆಂಗಸರ ಕಾರ್ಯ ಮತ್ತು ಹರಟೆಗೆ ಭಂಗ ಬರದಂತೆ ನೋಡಿಕೊಳ್ಳುತ್ತಾರೆ. ಮಧ್ಯೆ ಮಧ್ಯೆ ನಿದ್ದೆ ಓಡಿಸಲು ಬೇಡಿಕೆ ಅನುಸಾರ ಎಲಿ,ಅಡಿಕೆ ,ತಂಬಾಕು ಅಥವಾ ಚಹಾದ ಪೂರೈಕೆಯೂ ಇರುತ್ತದೆ. ಇವರೊಂದಿಗೆ ಉಳ್ಳಾಗಡ್ಡಿಗಳನ್ನು ಗಾತ್ರಾನುಸಾರ ಪ್ರತ್ಯೇಕಿಸಿ ಚೀಲಕ್ಕೆ ತುಂಬಲು ಚಿಣ್ಣರ ಪಡೆ ಸನ್ನದ್ಧವಾಗಿರುತ್ತದೆ ಮತ್ತು ಬಿಸಾಕಿದ ಉಳ್ಳಾಗಡ್ಡಿ ಸಿಪ್ಪೆಗಳಿಗಾಗೆ ಮತ್ತು ಅದರ ತಪ್ಪಲಿಗಾಗಿ ದನಗಳು ಅಲ್ಲೇ ಸುಳಿದಾಡುತ್ತಿರುತ್ತವೆ. ಅದರಿಂದಾಗಿ ಆ ಸೀಜನ್ನಿನಲ್ಲಿ ಎಲ್ಲರ ಮನೆಯ ಹಾಲು ಮತ್ತು ಅದರಿಂದ ಮಾಡಿದ ಚಹಾವು "ಉಳ್ಳಾಗಡ್ಡಿ ಫ್ಲೇವರ್" ಸೂಸುತ್ತಿರುತ್ತವೆ. ಹಗಲಿಗೂ ರಾತ್ರಿಗೂ ವ್ಯತ್ಯಾಸವೇ ತಿಳಿಯದಂತೆ ಈ ಎಲ್ಲಾ ಕಾರ್ಯಗಳು ನಡೆಯುತ್ತವೆ, ಹೀಗಾಗಿ ಕೆಲ " ಪತಿ, ಪತ್ನಿ ಔರ್ ವೋ" ಕಥೆಗಳಿಗೂ ಉಳ್ಳಾಗಡ್ಡಿ ಸೀಜನ್ನು ತಿಳಿಯದೆ ಕಾರಣವಾಗಿಬಿಟ್ಟಿರುತ್ತೆ.

ನಮ್ಮೂರಿನ ಜನರ ಬಾಯಲ್ಲಂತೂ ಬರೀ " ಗೌಡ್ರ, ನಿಮ್ಮವು ಎಷ್ಟು ಪಿ,ಸಿ ಆದ್ವು?" "ನಿಂಗಪ್ಪ ಈ ವರ್ಷ ಚಾನ್ಸು ಹೊಡೆದ ನೊಡಪಾ" "ಇವತ್ತು ಎಷ್ಟು ಲಾರಿ ಲೋಡಾಗಿವೆ?" " ರೇಟು ಇನ್ನೂ ಏರುತ್ತೆ ನೊಡ್ತಾ ಇರೀ" " ಥೂ ಈ ಆಳು ಸುಳೆಮಕ್ಳುದು ಹಡಿಬಿಟ್ಟಿ ವ್ಯವಹಾರ ಜಾಸ್ತಿ ಆಯ್ತು" ಇತ್ಯಾದಿ ಮಾತುಗಳು ಸರ್ವೇಸಾಮಾನ್ಯವಾಗಿರುತ್ತೆ.

ಆದ್ರೇ ಒಂದಂತೂ ನಿಜ, ಈ ಸೂಳೆಮಗನ ಉಳ್ಳಾಗಡ್ಡಿ ರೇಟು ಮಟಕಾ ನಂಬರಿದ್ದ ಹಾಗೇ, ಒಂದು ದಿನ ಇದ್ದುದು ಇನ್ನೊಂದು ದಿನ ಇರುವುದೇ ಇಲ್ಲಾ. ಭಲೇ ರಿಸ್ಕಿನ ಜೂಜನ್ನು ನಮ್ಮೂರಿನ ರೈತರು ಪ್ರತಿ ವರುಶವೂ ಆಡುತ್ತಲೇ ಇರುತ್ತಾರೆ.ಏನೇ ಆದರೂ ನಮ್ಮೂರಿನ ರೈತರಿಗೆ ಉಳ್ಳಾಗಡ್ಡಿ ಮೇಲಿನ ನಂಬಿಕೆ, ನಿಷ್ಠೆ, ಪ್ರೀತಿ ಕಡಿಮೆಯಾಗಿಲ್ಲಾ ಅನ್ನುವುದೇ ಸೋಜಿಗ.ನಿಮಗೆ ನೆನಪಿರಬೇಕು ಹಿಂದೊಮ್ಮೆ ವಾಜಪೇಯಿ ಪ್ರಧಾನಿಯಾಗಿದ್ದಾಗ ಉಳ್ಳಾಗಡ್ಡಿ ಬೆಲೆ ಗಗನಕ್ಕೇರಿ ಸರಕಾರವೇ ಉರುಳುವ ಮಟ್ಟಕ್ಕೆ ಬಂದಾಗ,ನಮ್ಮೂರಿನ ಜನತೆ ತಾವು ಬೆಳೆಯುವ ಉಳ್ಳಾಗಡ್ಡಿಗಿರುವ ಪವರ್ ಕಂಡು ಹಿರಿಹಿರಿ ಹಿಗ್ಗಿದ್ದರು. ಉಳ್ಳಾಗಡ್ಡಿಗೆ ಸರಕಾರ ಉರುಳಿಸುವ ಶಕ್ತಿ ಇದೆ ಎಂಬ ಭಾವವೇ ನಮ್ಮೂರಿನ ರೈತ ಸಮುದಾಯಕ್ಕೆ ಇನ್ನಷ್ಟು ಉಳ್ಳಾಗಡ್ಡಿ ಬೆಳೆಯುಲು ಪ್ರೇರಣೆ ನೀಡಿತ್ತು. ನಿಮಗೆ ಹೇಳ್ತಿನಿ ಆ ವರ್ಷ ನಮ್ಮುರಿನ ರೈತರು ಉಳ್ಳಾಗಡ್ಡಿ ರೇಟಿನೊಂದಿಗೆ ತಾವೂ ಆಕಾಶಕ್ಕೇರಿಬಿಟ್ಟಿದ್ದರು. ಪ್ರತಿಯೊಬ್ಬನ ಮನೆಯ ಮುಂದೆಯೂ "ಹಮಾರ ಬಜಾಜ", ಆ ವರುಶ ಮದುವೆ ಮಾಡಿಕೊಟ್ಟ ಹೆಣ್ಣುಮಕ್ಕಳ ಮೈತುಂಬ ಬಂಗಾರ, ಗಣೇಶ ಬೀಡಿ ಸೇದಲೂ ಉದ್ರಿ ಕೇಳುತ್ತಿದ್ದ ಚಪರಾಸಿಗಳ ತುಟಿಯ ಮೇಲೆ ಕಿಂಗು ಸೀಗರೇಟು, ಕಂಟ್ರಿ ಕುಡಿಯುತ್ತಿದ್ದವರೂ ಗದಗಿಗೆ ಹೋಗಿ "DSP" ಏರಿಸಿ ಬರತೊಡಗಿದರು, ಆಶ್ರಯ ಯೋಜನೆಗಳ ಮನೆಯಲ್ಲೂ ಕಲರ್ ಟಿವ್ಹಿ ಮತ್ತು ಟೇಪ್ ರೇಕಾರ್ಡರ್ರು ಮತ್ತು " ತಪ್ಪಾ? ಪ್ರೀತ್ಸೊದ್ ತಪ್ಪಾ?" ಅಂತ ಅರಚುವ ರವಿಚಂದ್ರನ್ ಹಾಡುಗಳು ಕೇಳಿಬರತೊಡ್ಗಿದ್ದವು. ಇನ್ನೊಂದೆಡೆ ದಲ್ಲಾಳಿಗಳು ನಮ್ಮೂರಿನ ರೈತರನ್ನು ಹುಡುಕಿಕೊಂಡು ಮನೆಬಾಗಿಲಿಗೆ ಬಂದು ವ್ಯವಹಾರ ಕುದುರಿಸತೊಡಗಿದರು. ಇನ್ನೂ ಬೇಂಗಳೂರಿಗೆ ಲಾರಿ ಒಯ್ದ ರೈತರಿಗಂತೂ ದಲ್ಲಾಳಿಗಳಿಂದ ರಾಜೋಪಚಾರ;ರೈತ ಭವನದ ಸೆಕ್ಯುರಿಟಿಯೂ ಭರ್ಜರಿ ಸೆಲ್ಯುಟು ಕುಟ್ಟತೊಡಗಿದ್ದ. ಇದೆಲ್ಲಾ ಕಂಡು,ಅನುಭವಿಸಿದ ನಮ್ಮೂರಿನ ರೈತ ಧಣಿಗಳ ಲೆವೆಲ್ಲ್ಲೆಬದಲಾಗತೊಡಗಿತ್ತು.ಉಳ್ಳಾಗಡ್ಡಿ ಬೆಳೆದವರೆಲ್ಲರೂ ತಮ್ಮ ನಸೀಬಿಗೆ ಬೀಗಿದ್ದೇ ಬೀಗಿದ್ದು.ಉಳ್ಳಾಗಡ್ಡಿ ಮಾರಲು ಬೆಂಗಳೂರಿಗೆ ಹೋಗೆ ಬಂದ ಜನ ತಮ್ಮ ಯಾತ್ರೆಯ ಜೊತೆಗೆ ಉಳ್ಳಾಗಡ್ಡಿ ಮಾರಿ ಬಂದ ಹಣವನ್ನು ತಮ್ಮ ಅಂಡರವೇರಿನಲ್ಲೋ, ಹಳೆಯ ಚಾದರದಲ್ಲೋ ಮುಚ್ಚಿಟ್ಟು ಜೋಪಾನವಾಗಿ ಕಳ್ಳರಿಂದ ಪಾರಾದ ರೋಚಕ ಕಥೆಯನ್ನು ಉಪ್ಪು ಖಾರ ಹಾಕಿ ಹೇಳುತ್ತಿದ್ದರೆ ಉಳಿದವರ ಮುಂದೆ ಹೇಳುತ್ತಿದ್ದವ ಸಲ್ಮಾನಖಾನ್ ಆಗಿಬಿಡುತ್ತಿದ್ದ.

ಮುಂದೆ ನಡೆದಿದ್ದೆ ನಮ್ಮೂರ ರೈತರ ಅರ್ಧ ರಾತ್ರೀಲಿ ಕೊಡೆ ಹಿಡಿಯುವ ಕಾಯಕ.ಯಾವುದೋ ಮಹಾಶಯ "ಬನಶಂಕರಿ"ಗೆ ಬಂಗಾರದ ಉಳ್ಳಾಗಡ್ಡಿ ದೇಣೆಗೆ ನೀಡಿದ ಪ್ರಹಸನವೂ ನಡೆದು ಹೋಯಿತು. ಅದು ಹಾಳಾಗ್ಲಿ ನಮ್ಮೂರಲ್ಲೆ ಉಳ್ಳಾಗಡ್ಡಿ ದೇವಸ್ಥಾನ ನಿರ್ಮಿಸುತ್ತ್ತಾರೆ ಎಂಬ ತಲೆಬುಡವಿಲ್ಲದ ಗಾಳಿಸುದ್ದಿಯೂ ಸೇರಿಕೊಂಡು ಉಳ್ಳಾಗಡ್ಡಿಗೆ ದೈವತ್ವವನ್ನು ಆರೋಪಿಸುವ ಸತ್ಕಾರ್ಯವೂ ನಡೆಯಿತು, ಹೀಗಾಗಿ ’ಉಳ್ಳಾಗಡ್ಡಿ’ ಅಂದ್ರೆ ನಮ್ಮೂರ ಜನಕ್ಕೆ ಭಯ ಭಕ್ತಿ ಉಕ್ಕತೊಡಗಿತ್ತು.ಆ ವರ್ಷ ನಡೆದ ಪಂಚಾಯಿತಿ ಚುಣಾವಣೆಯಲ್ಲಿ ಉಳ್ಳಾಗಡ್ಡಿ ಯನ್ನು ಚುನಾವಣಾ ಚಿಹ್ನೆಯಾಗಿ ಪಡೆಯಲು ನಮ್ಮೂರಿನ ರೈತರ ಧುರೀಣರ ನಡುವೆ ಪೈಪೋಟಿ ಶುರುವಾಗಿತ್ತು.ಕೊನೆಗೆ ನಮ್ಮೂರಿನ ರೈತರ ಶ್ರೀಮಂತಿಕೆ "ಮಲಪ್ರಭಾ ಗ್ರಾಮೀಣ ಬ್ಯಾಂಕಿ"ನವರ ಕಣ್ಣು ಕುಕ್ಕಿ ಒಂದು ಶಾಖೆಯನ್ನು ಅಗಸೆ ಬಾಗಿಲಿನಲ್ಲಿ ತೆರೆದೆ ಬಿಟ್ಟರು ಮತ್ತು ಕಳ್ಳರ ಭಯದಿಂದ ನಮ್ಮೂರಿಗೆ ರಾತ್ರಿ ಡ್ಯೂಟಿಗೆ ಇಬ್ಬರು ಪೋಲಿಸರೂ ಬರತೊಡಗಿದ ಮೇಲೆ ನಮ್ಮ ಊರಿನ ಖದರ್ರೆ ಬದಲಾಗತೊಡಗಿತ್ತು.

ಮುಂದೆ ಶುರುವಾಗಿದ್ದೆ ಕಹಾನಿ ಮೇ ಟ್ವಿಸ್ಟ. ಮುಂದಿನ ಹಂಗಾಮಿನಲ್ಲಿ ಎಲ್ಲಾ ಹಿರಿ ಕಿರಿ ರೈತರು ಉಳಿದ ಎಲ್ಲಾ ಬೆಳೆಗಳನ್ನು ಬಿಟ್ಟು ಉಳ್ಳಾಗಡ್ಡಿಯನ್ನು ಮಾತ್ರ ಬಿತ್ತತೊಡಗಿದ್ದರು.ತುಟ್ಟಿಯ ಯೂರಿಯಾ ತಂದು ಸುರಿದದ್ದೆ ಸುರಿದದ್ದು,ಮೇಲಿಂದ ಮೇಲೆ ಕಳೆ ಕಿತ್ತು ಮಕ್ಕಳಂತೆ ಉಳ್ಳಾಗಡ್ಡಿ ಸಸಿಗಳನ್ನು ಪೋಷಿಸಿದ್ದಕ್ಕೆ ಉಳ್ಳಾಗಡ್ಡಿ ಕೈ ಬಿಡಲಿಲ್ಲಾ. ಎಲ್ಲರ ಹೊಲದಲ್ಲೂ ಬಂಪರ್ ಬೆಳೆ. ಯಡವಟ್ಟು ಆಗಿದ್ದೆ ಇಲ್ಲಿ, ಅತಿ ಆದರೆ ಅಮೃತವೂ ವಿಷ ಅಂತೆ, ಹಾಗೇಯೇ ಆ ವರ್ಷ ಉಳ್ಳಾಗಡ್ಡಿ ರೇಟು ಪಾತಾಳ ಕಂಡಿತ್ತು. ಅದರೂ ದೀಪಾವಳಿ ಕಳೆದ ಮೇಲೆ ರೇಟು ಬಂದೇ ಬರುತ್ತೆ ಎಂಬ ನಂಬಿಕೆಯಲ್ಲಿ ಉಳ್ಳಾಗಡ್ಡಿ ಕಿತ್ತು ಗುಡ್ಡೆ ಹಾಕತೊಡಗಿದರು.ಮೊದಲೆಲ್ಲಾ ಮನೆ ಬಾಗಿಲಿಗೆ ಬಂದು ಚೌಕಾಸಿ ಆರಂಭಿಸುತ್ತಿದ್ದ ದಲ್ಲಾಳಿಗಳು ನಮ್ಮೂರಿನ ಕಡೆ ತಲೆ ಹಾಕಿ ಮಲಗುವದನ್ನೆ ಬಿಟ್ಟಿದ್ದರು. ಆಗಲೇ ನಮ್ಮೂರಿನ ರೈತರ ಪಸೆ ಆರತೊಡಗಿತ್ತು. ಎಕರೆಗೆ ಸಾವಿರಾರು ಖರ್ಚು ಮಾಡಿದ ಹೊಟ್ಟೆಯೊಳಗಿನ ಸಂಕಟ ಪ್ರತಿಭಟನೆ ರೂಪು ಪಡೆದು, ಉಳ್ಳಾಗಡ್ಡಿಯನ್ನು ರಸ್ತೆಯಲ್ಲೆ ಸುರುವಿ, ಸರಕಾರಿ ಬಸ್ಸು ನಿಲ್ಲಿಸಿ " ಅಬ್ಬಿಗೇರಿ ರೈತರಿಂದ ಉಳ್ಳಾಗಡ್ಡಿಗೆ ಬೆಂಬಲ ಬೆಲೆಗೆ ಆಗ್ರಹಿಸಿ ಉಗ್ರ ಹೋರಾಟ. ದಿ||......... " ಅಂತ ಬಸ್ಸಿನ ಏರಡೂ ಕಡೆ ಬರೆಸಿ "ಉಗ್ರ ಓರಾಟ" ಶುರು ಮಾಡಿದರೂ ಉಳ್ಳಾಗಡ್ಡಿ ಚಿಹ್ನೆಯಿಂದಲೇ ಅರಿಸಿ ಹೋದ ರೈತ ಧುರೀಣರು ಇತ್ತ ಕಡೆ ಹಾಯಲೇ ಇಲ್ಲಾ.ಕೆಲವರು ಧೈರ್ಯ ಮಾಡಿ ಲೋಡು ಮಾಡಿಸಿ ಬೆಂಗಳೂರಿಗೆ ಲಾರಿ ತಂದು ರೇಟು ವಿಚಾರಿಸಿದಾಗ ಲಾರಿಯ ಬಾಡಿಗೆಯೂ ಗಿಟ್ಟುವುದಿಲ್ಲಾ ಎಂಬ ಖಾತ್ರಿಯಾದಾಗ ತಂದ ಉಳ್ಳಾಗಡ್ಡಿಯನ್ನು ಲಾರಿಯಲ್ಲೇ ಬಿಟ್ಟು ರಾತ್ರೋ ರಾತ್ರಿ ಊರಿಗೆ ಮರಳಿ ಬಿಟ್ಟಿದ್ದರು, ಕೆಲ ಹತಾಶ ರೈತರು ಮಾರ್ಕೆಟ್ಟಿನಲ್ಲೇ ಉಳ್ಳಾಗಡ್ಡಿ ಸುರುವಿ ತಮ್ಮ ಆಕ್ರೋಶ ತೋರ್ಪಡಿಸತೋಡಗಿದ್ದರು.ಇಡಿ ಊರಲ್ಲಿ ಸೂತಕದ ಛಾಯೆ. ಎಲ್ಲರೂ ಸರಕಾರವನ್ನು, ತಮ್ಮ ಹಣೆಬರಹವನ್ನು ಜರೀಯುವವರೆ ಆದರು. ಕೆಲ ಅರ್ಧ ಕೊಡಗಳು ಎಕ್ಸಪೋರ್ಟ್ ಪರ್ಮಿಶನ್ನು, ಪಾಕಿಸ್ತಾನ ಮಾರ್ಕೇಟ್ಟು, ಆಂಧ್ರದ ಉಳ್ಳಾಗಡ್ಡಿ ಲಾಬಿ ಅಂತೆಲ್ಲಾ "ಅರ್ಥಶಾಸ್ತ್ರ"ದ ಕೊಲೆ ಮಾಡತೊಡಗಿದರು.ಎನೇ ಆದರೂ ನಮ್ಮೂರ ರೈತನ ಸ್ಥಿತಿ ಇಂಗು ತಿಂದ ಮಂಗನದಾಗಿತ್ತು..

ಮೊನ್ನೆ ರಿಲಾಯನ್ಸ್ ಪ್ರೆಶ್ ಗೆ ಹೋದಾಗ ಉಳ್ಳಾಗಡ್ಡಿ ಬೆಲೆ ಕೆಜಿಗೆ ಹದಿನೆಂಟು ಅಂತ ನೋಡಿ ಹೊಟ್ಟೆ ಉರಿಯಿತು. ಯಾಕೆಂದರೆ ಕಳೆದ ದಿನವಷ್ಟೆ ಉಳ್ಳಾಗಡ್ಡಿ ಮಾರಲು ಬಂದ್ ನಮ್ಮೂರ ರೈತನೊಬ್ಬ ಮೆಜೆಸ್ಟಿಕನಲ್ಲಿ ಸಿಕ್ಕಾಗ " ಎಷ್ಟಕ್ಕೆ ಮಾರಿದೆ?" ಅಂತ ಕೇಳಿದ್ರೆ " ಆರು ನೂರಕ್ಕಿಂತ ನಯಾ ಪೈಸೆನೂ ಮುಂದೆ ಜಗ್ಗಲಿಲ್ಲಾ ಗೌಡ್ರೆ " ಅಂತ ಬೇಸರದಿಂದ ಹೇಳಿ, ಕೊನೆಗೆ " ಈ ವರ್ಸಾನು ನಮ್ಮನ ಹಟ್ರು ನೊಡ್ರಿ ಗೌಡ್ರ" ಅಂದ.ಎಷ್ಟು ಯೋಚಿಸಿದರೂ ಅವರನ್ನೂ ಹಟ್ಟಿದ್ದೂ ಸರಕಾರವಾ? ದಲ್ಲಾಳಿಗಳಾ? ಅಥವಾ ಎಲ್ಲವನ್ನೂ ನುಂಗುತ್ತಿರುವ ಭಂಡವಾಳಶಾಯಿಗಳಾ? ಅಂತ ತಿಳಿಲೇ ಇಲ್ಲಾ.ಅದ್ಯಾಕೋ ಗೊತ್ತಿಲ್ಲಾ! ನಮ್ಮೂರಿನ ರೈತರ ದಡ್ದತನ, ಅವರ ದರಿದ್ರತನ, ಮುಂದಾಲೋಚನೆಯೇ ಇಲ್ಲದ ಪೆದ್ದುತನ,ಹುಸಿ ನಂಬಿಕೆಯಲ್ಲಿ ದೇವರ ಮೇಲೆ ಭಾರ ಹಾಕಿ ಪ್ರತಿವರ್ಷವೂ ಅವರು ಉಳ್ಳಾಗಡ್ಡಿ ರೇಟಿನೋಂದಿಗೆ ಆಡುವ ಜೂಜು ನೆನಪಿಗೆ ಬಂತು. ಯುಗಾದಿಯ ಹೊಸ ಬಟ್ಟೆ, ಹೆರಿಗೆಗೆ ಬಂದ ಅಕ್ಕನ ಬಾಣಂತನದ ಖರ್ಚು,ಅಜ್ಜನ ಕಣ್ಣಿನ ಪೊರೆಯ ಆಪರೇಶನ್ನು, ಅವ್ವನ ಧಡಿ ಸೀರೆಯ ಕನಸು, ಮಳೆಗಾಲಕ್ಕೆ ಬಿದದೆ ಸೋರುವ ಮಾಳಿಗೆಯ ರೀಪೆರಿಯ ಖರ್ಚು, ಅಣ್ಣನ ಓದಿನ ಖರ್ಚು ಇತ್ಯಾದಿ ಕನಸುಗಳು "ಉಳ್ಳಾಗಡ್ಡಿ ಧಾರಣಿ" ಎಂಬ ನಮ್ಮ ಎಣಿಕೆಗೆ ನಿಲುಕದ ಮಾಯೆಯೆ ಜೊತೆಗೆ ತಳಕು ಹಾಕಿಕೊಂಡಿರುವುದು ನಮ್ಮೂರಿನ ದುರ್ದೈವ.ಬೇಡ ಬೇಡವೆಂದರೂ ಬಿಸಿಲಿಗೆ ಬಾಡಿದ ಕಪ್ಪುಮೊಗದ,ಪ್ಯಾಲಿ ನಗೆಯ,ಹರಿದ ಬನೀನಿನ,ಹಳೆಯ ಎಕ್ಕಡದ, ಅದೆ ತುಂಬು ಭರವಸೆಗಣ್ಣಿನ ನಮ್ಮೂರಿನ ರೈತನ ಚಿತ್ರ ಕಣ್ಣಿಂದ ಕದಲುತ್ತಲೇ ಇಲ್ಲ್ಲ........

Sunday, November 18, 2007

ನಾವು ಶಾಪಗ್ರಸ್ತರೇ?


ಗದಗ-ಹುಬ್ಬಳ್ಳಿ ರಸ್ತೆ ಮತ್ತಷ್ಟು ಕೆಟ್ಟು ಕೆರ ಹಿಡಿದಿದೆ.ರಾಮುಲು ಏನು ಕಿಸಿದರೂ ಗದಗೆಂಬ ಗದಗನ್ನು ಇನ್ನೂ ಸುಧಾರಿಸಲು ಅಗ್ತಿಲ್ಲಾ. ಮ್ಯಾಂಗನೀಸ ಲಾರಿಗಳ ಅಬ್ಬರ ಇನ್ನೂ ಕಡಿಮೆ ಆಗಿಲ್ಲಾ.ಯಾವ ಸಾರ್ವಜನಿಕ ಸ್ಥಳಕ್ಕೆ ಹೋದರೂ ಗುಟಖಾದ ವಾಸನೆ ತಪ್ಪುವದಿಲ್ಲಾ.ಸಾರ್ವಜನಿಕ ಶೌಚಾಲಯಗಳಿಗೆ ಹೋದರಂತೂ "ಇಶ್ಶಿ" ಎಂದು ಮೂಗು ಮುಚ್ಚಿಕೊಳ್ಳದೆ ಹೊರಬರಲಾಗುವದಿಲ್ಲಾ.ಮಣ್ಣಿವಣ್ಣನ್ ಎಷ್ಟು ಲಗಾ ಒಗದ್ರು ಹಳೇ ಹುಬ್ಬಳ್ಳಿಯ ರಸ್ತೆಗಳನ್ನು ಮತ್ತು ಅವುಗಳ ಪಕ್ಕವೇ ಒಂದು, ಎರಡು ಮಾಡಿ ಧನ್ಯರಾಗುವ ಪ್ರಜಾಪ್ರಭುಗಳನ್ನು ಸುಧಾರಿಸಲಾಗುವದಿಲ್ಲ.ಹೊರಟ್ಟಿ ಶಿಕ್ಷಣ ಮಂತ್ರಿಯಾಗಿ ಕಂಡಲ್ಲಿ ರಿಬ್ಬನ್ನು ಕತ್ತರಿಸಿದ್ದೆ ಬಂತು ನಯಾ ಪೈಸೆಯಷ್ಟೂ ಶಿಕ್ಷಣದ ಗುಣಮಟ್ಟ ಅಥವಾ ಶಾಲೆಗಳ ಗುಣಮಟ್ಟ ಸುಧಾರಿಸಲಾಗಲಿಲ್ಲ್ಲ. ಅಲ್ಲಿಗೆ ರೈಲು ಬರುತ್ತೆ, ಇಲ್ಲಿಗೆ ವಿಮಾನ ನಿಲ್ದಾಣ ಬರುತ್ತೆ ಅಂತ ಹಳಿ ಇಲ್ಲದೆ ರೈಲು ಬಿಟ್ಟಿದ್ದೆ ಬಂತು ದೇವರಾಣೆಗೂ ಬರುವ ನೀರಿಕ್ಷೆಯಂತೂ ಇಲ್ಲಾ. ಪಂಚನದಿಗಳ ಜಿಲ್ಲೆ ಅಂತ ಹಾಡಿ ಹೊಗಳಿ ಅಟ್ಟಕ್ಕೆರಿಸಿದ ಬಿಜಾಪುರ ಜಿಲ್ಲೆಯಲ್ಲಿನ ಹಳ್ಳಿಗಳಲ್ಲಿನ ಕುಡಿಯುವ ನೀರಿನ ಸಮಸ್ಯೆ ಇಂದಿಗೂ ತಪ್ಪಿಲ್ಲಾ. ಬೇಸಿಗೆಯಲ್ಲಿ ಇಡಿ ಗದಗಕ್ಕೆ "ನೀರು" ಎನ್ನುವುದು ಮರೀಚಿಕೆ ಆಗಿ ಬಿಡುತ್ತೆ. ( ಕಳೆದ ಕೆಲ ವರ್ಷಗಳಿಂದ ರೈಲಿನಲ್ಲಿ ಕುಡಿಯುವ ನೀರು ಪೂರೈಸಿದ್ದಾರೆ ನಮ್ಮ ಜನಪ್ರತಿನಿಧಿಗಳು ) . ಹುಬ್ಬಳ್ಳಿ- ಧಾರವಾಡದ ಹೈಕೋರ್ಟಿಗೆ ಇನ್ನೂ ಜಾಗ ಹುಡುಕುತ್ತಿದ್ದಾರೆ ಮತ್ತು ಹುಡುಕುತ್ತಲೇ ಇರುತ್ತಾರೆ. ಇನ್ನು ದೂರದ ಗುಲ್ಬರ್ಗ, ಬೀದರ,ಬಳ್ಳಾರಿಗಳ ಬಗ್ಗೆ ಹೇಳಿದರೆ ನಮ್ಮ ಕೆರ ತಗೊಂಡು ನಾವೇ ಹೊಡ್ಕೊಬೇಕು ಹಾಗಿದೆ ಅಲ್ಲಿಯ ಸ್ಥಿತಿ..

ಎಷ್ಟು ತಲೆ ಕೆರೆದುಕೋಂಡರೂ ಅರ್ಥವಾಗದಿರುವುದೇ ಇದು; "ಕಾವೇರಿ" ಅಂದ ಕೂಡಲೇ ಚಪ್ಪಲಿ ಹಾಕ್ಕೊಂಡು, ಮೈಕು ಹಿಡ್ಕೊಂಡು "ಪಾದಯಾತ್ರೆ" ಅಂತ ತಮ್ಮ "ಜನಪರ ಕಾಳಜಿ(?)" ಪ್ರದರ್ಶಿಸಿಲು ಸನ್ನಧ್ಧರಾಗುವ ನಮ್ಮ ರಾಜಕಾರಣಿಗಳಿಗೆ
ಅದೇ ಕಳಕಳಿಯನ್ನು ಕೃಷ್ಣೆಯ ಅಥವಾ ಸಮಸ್ತ ಉ.ಕರ್ನಾಟಕದ ಕುಡಿಯುವ ನೀರಿನ ಸಮಸ್ಯೆಗೆ ಇತಿ ಹಾಡಬಲ್ಲ ಮಹದಾಯಿ ನದಿ ಯೋಜನೆಯ ವಿಷಯದಲ್ಲಿ ಯಾಕೆ ತೋರಿಸಲಾಗುವಿದಿಲ್ಲಾ? ನಮ್ಮ ವಿಷಯದಲ್ಲಿ ಯಾಕೆ ಉದಾಸೀನ ಭಾವ? ಕೇವಲ ಒಂದು ಹಂಗಾಮಿನ ಕಬ್ಬು, ಅಥವಾ ಭತ್ತ ಬರದೇ ಹೋದ್ರೆ ಸತ್ತೇ ಹೋಗುತ್ತೀವಿ ಅನ್ನೊ ತರ ಮಾತಾಡುವ ಹಳೆ ಮೈಸುರು ರೈತರ ಮದ್ಯೆ ಬರೀ ಬರದಲ್ಲೇ ಬದುಕು ದೂಡುತ್ತಿರುವ ನನ್ನ ಜನಗಳ ನೋವು ಯಾಕೇ ಅರ್ಥವಾಗುವುದಿಲ್ಲಾ?. ಪ್ರತಿ ವರ್ಷವೂ ಅದೇ ಬೆಲೆ ಕುಸಿತ, ಅದೇ ಭಿಕ್ಷೆ ಎಂಬಂತೆ ಘೋಷಿಸುವ ಬೆಂಬಲ ಬೆಲೆಯ ನಾಲಾಯಕ್ ನಾಟಕಗಳು. ಪ್ರತಿ ವರ್ಷವೂ ಅದೆ ಕಥೆ. "ಹಾಡಿದ್ದು ಹಾಡೊ ಕಿಸುಬಾಯಿ ದಾಸ" ಎಂಬಂತೆ ಅವೇ ಹಳೆ ಭರವಸೆಗಳು, ಕಣ್ಣೊರಿಸುವ ಹಲ್ಕಟ್ ರಾಜಕೀಯ.ಎಲ್ಲಾ ಸಮಸ್ಯೆಗಳಿಗೂ ಒಂದು ಸಮರ್ಥ ಕೃಷಿನೀತಿ ರೂಪಿಸೋಕೆ ಇನ್ನೂ ಎಷ್ಟು ಹೆಣ ಬೀಳಬೇಕು?.ಬೇಕಾದ್ರೆ ಗಮನಿಸಿ ನೋಡಿ ಬೆಂಗಳೂರಿನ ಬಹುತೇಕ ಕಾಮಗಾರಿಗಳಲ್ಲಿ ದುಡಿಯುತ್ತಿರುವ ಕೂಲಿ ಕಾರ್ಮಿಕರು ಬರೀ ಉ.ಕರ್ನಾಟಕದವರು. ಅಲ್ಲಿಯೇ ಅವರಿಗೆ ಅನ್ನ ಸಿಕ್ಕಿದ್ದರೆ ಇಲ್ಯಾಕೆ ಬಂದು ಕೈಯೊಡ್ದಿ ನಿಲ್ಲುತ್ತಿದ್ದರು? ಸರಕಾರದ ಯೋಜನೆಗಳು ತಲುಪುದಾದರೂ ಯಾರನ್ನು?.ಇತ್ತೀಚಿಗಂತೂ ಮೈನಿಂಗ ಲಾರಿಗಳು ಅಳುದುಳಿದ ಉ.ಕರ್ನಾಟಕದ ರಸ್ತೆಗಳನ್ನೂ ಹಾಳು ಮಾಡಿ ಹತ್ತಿ ಬಿತ್ತುತ್ತಿವೆ, ಕೇಳುವುವರು ಯಾರೂ ಇಲ್ಲದದಂತಾಗಿದೆ. ಯಾಕಂದ್ರೆ ಬಹುತೇಕ ಮೈನಿಂಗ ಕಂಪನಿಗಳು ನಮ್ಮ ನನಪ್ರತಿನಿಧಿಗಳವೇ ಆಗಿವೆ, ಬೇಲಿಯೇ ಎದ್ದು ಹೊಲ ಮೆಯ್ದರೆ ಮಾಡುವುದಾದ್ರು ಏನು? . ಇದನ್ನು ಬಿಟ್ಟ ಹಾಕಿ ಇನ್ನು ಹಲವಾರು ಅವಧಿಗೆ ಅರಿಸಿ ಬರುತ್ತಿರುವ ಮತ್ತು ರಾಜ್ಯದ ಅತ್ಯುನ್ನತ ಪದವಿ ಅಲಂಕರಿಸಿದ ಧರ್ಮಸಿಂಗ, ಖರ್ಗೆ ಮೊದಲಾದವರು ಕಿಸಿದಿದ್ದಾದರೂ ಎನು? ಪಧವೀದರ ಕ್ಷೇತ್ರದಿಂದ ಆರಿಸಿ ಬರುತ್ತಾ ಇರುವ ಎಚ್ಕೆ, ನಮ್ಮ ಪಧವೀದರರಿಗೆ ಮಾಡಿದ ಅನುಕುಲತೆಯಾದ್ರು ಏನು?. ನೀರಾವರಿ ಖಾತೆ ಇಟ್ಕೊಂಡೂ ಸಹ ಇನ್ನೂ ಉ.ಕರ್ನಾಟಕದ ಹಲವು ಯೋಜನೆಗಳು ಅಮೆಗತಿಯಲ್ಲಿ ನಡೆಯುತ್ತಿದ್ದರೂ ಇವರು ಹರಿದಿದ್ದಾದರೂ ಏನು?

ಮುಕಳಿ ತಿರುವಿದಲ್ಲಿ ಒಂದು ಪಾರ್ಕು,ಹೆಜ್ಜೆಗೊಂದು ಬೀದಿದೀಪ, ಹಂಗೆ ತಿಂಗಳುಗಳಿಗೊಮ್ಮೆ ಡಾಂಬರು ಕಾಣುವ ರಸ್ತೆಗಳು ಇವೆಲ್ಲ ಬೆಂಗಳೂರಿಗೆ ಮಾತ್ರವಾ?. ಇಡೀ ಹುಬ್ಬಳ್ಳಿಯಲ್ಲಿ ಇರುವ ಎಕೈಕ ಪಾರ್ಕನ್ನೂ ಸಹ ಉತ್ತಮ ಸ್ಥಿತಿಯಲ್ಲಿ ಇಟ್ಟುಕೊಂಡಿಲ್ಲ, ಅಲ್ಲಿ ಹಂದಿಗಳು ಮಾತ್ರ ಅರಾಮವಾಗಿ ಅಧಿಕಾರಿಗಳ ಹೆಸರಿನಲ್ಲಿ ಸಂಸಾರ ಮಾಡಿಕೊಂಡಿವೆ. ಜನಪ್ರತಿನಿಧಿಗಳು ಹಾಳಾಗ್ಲಿ ಬೆಂಗಳೂರಿನ ಕೊಳೆಗೇರಿ ಮಕ್ಕಳಿಗೆ Lux ಸೋಪು ಉಜ್ಜಿ, ಸ್ನಾನ ಮಾಡಿಸಿ, ಕೊಳೆಗೇರಿ ಸುಧಾರಣೆ ಮಾಡಿದೆ ಅಂತ ಪೇಪರುಗಳಿಗೆ ಹಲ್ಲು ಕಿಸಿದ ಫೋಟೊ ಕಳಿಸಿ ಧನ್ಯರಾಗುವ NGOಗಳಿಗೆ ಉ.ಕರ್ನಾಟಕದ ಅವ್ಯವಸ್ಠೆ, ಬಡತನ ಕಾಣುವುದೇ ಇಲ್ಲಾ. ಇನ್ನು ನಾರಾಯನ ಮೂರ್ತಿ, ಪ್ರೇಮಜೀ ಯವರ ಸಾಮಾಜಿಕ ಕಳಕಳಿ ಬೆಂಗಳೂರು ಬಿಟ್ಟು ಆಚೆ ಬರುವುದೇ ಬೇಡ ಅನ್ನುತ್ತೆ.ಇನ್ನು ಅಲ್ಲೆ ಹುಟ್ಟಿ ಬೆಳೆದ ನಮ್ಮಂತಹವರು ಮಾಡುತ್ತಿರುವುದಂತೂ ಯಾವುದಕ್ಕೂ ಬೇಡ; ಚೆನ್ನಮ್ಮ ರೈಲಿಗೆ ರಿಜರ್ವೆಶನ್ನು ಮಾಡಿಸಿ ಹಬ್ಬಕ್ಕೆ ಮಾತ್ರ ಹೋಗಿ " ನಮ್ಮೂರು ಈ ಜನ್ಮದಲ್ಲಿ ಮಾತ್ರ ಉದ್ದಾರ ಅಗುವದಿಲ್ಲ" ಅಂತ ಜಗ್ಗೇಶ್ ಡೈಲಾಗು ಬಿಟ್ಟು ಬಂದ್ರೆ ನಮ್ಮ ಕರ್ತವ್ಯ ಮುಗಿಯಿತು.

ಮೊನ್ನೆ ದೀಪಾವಳಿಗೆ ಹೋದಾಗ ಅನಿಸಿದ್ದಿಷ್ಟು . ಇಲ್ಯಾಕೆ ಹೀಗೆ? ಅಂತಾ. ಸಮಸ್ಯೆ ವ್ಯವಸ್ಥೆಯದಾ? ಅಥವಾ ನಮ್ಮ ಜನಗಳದಾ? ಅಥವಾ ವ್ಯವಸ್ಠೆ ರೂಪಿಸುತ್ತಿರುವ ರಾಜಕಾರಣಿಗಳದಾ?. ಎಲ್ಲೋ ಓದಿದ ನೆನಪು " If we are not part of the solution, then we are part of the problem" ಅಂತಾ, ಹಂಗಾದ್ರೆ ಬಹುಶಃ ನಾವೂ ಸಹ " part of problem" ಆಗಿರಬಹುದಲ್ವಾ? ಕಣ್ಣ ಮುಂದಿರುವ ಸಾವಿರ ಪ್ರಶ್ನೆಗಳಲ್ಲಿ ಕೆಲವಾಕ್ಕಾದರೂ ಉತ್ತರ ಹುಡುಕುವ ಪ್ರಯತ್ನ ಮಾಡಬೇಕಲ್ವಾ?

Sunday, September 30, 2007

ಬೆಂಗಳೂರು ಗಣೇಶನೂ, ನಗೆಹಬ್ಬವೂ ಮತ್ತು ಆರ್ಕೆಸ್ಟ್ರಾ.....ಈ Week end ಯಾವ ಥೇಟರಿಗೆ ಲಗ್ಗೆ ಹಾಕಬೇಕೆಂದು ತಲೆ ಕೆರೆದುಕೊಳ್ಳುತ್ತಿರುವಾಗಲೇ ನಮ್ಮ ಮನೋಜ ಈ ವಾರ ನಮ್ಮ ಏರಿಯಾದಲ್ಲಿ ಗಣೇಶನನ್ನು ಕೂರಿಸ್ತಾರೆ ಎಂಬ ರೋಚಕ ವಿಚಾರವನ್ನು ಹೇಳಿದ.ನಿಮಗೆ ಇನ್ನೊಂದು ಮಾತು,ನಾನು ಹೊಸದಾಗಿ ಬಂದಾಗ ಈ ಬೆಂಗಳೂರಿಗರು ಹಿಂತಾ ಪ್ಯಾಲಿ ನನ್ ಮಕ್ಳು ಅಂತ ಖಂಡಿತ ಗೊತ್ತಿರಲಿಲ್ಲಾ, ನಮ್ ಕಡೆ ಗಣೇಶ ಚೌತಿ ಅಂದ್ರೆ ಎನು ಭಯ-ಭಕ್ತಿ, ಸಡಗರ, ಎಷ್ಟೊಂದು ಆಚರಣೆಗಳು ಅಂತೀರಾ? ಅದನ್ನು ಮಾಡಬಾರದು,ಇದನ್ನೂ ಮಾಡಬಾರದು, ಚಂದ್ರನ್ನ ನೋಡಬಾರದು ಅಂತೆಲ್ಲಾ ನೂರಾರು ಕಟ್ಟುಪಾಡುಗಳು, ಈ ಮುಂಡೆವಕ್ಕೆ ಒಂದಾದ್ರೂ ಬೇಡ್ವೆ? ಅದೂ ಹಾಳಾಗ್ಲಿ ಗುರುವೇ?, ಚೌತಿ ಮುಗಿದ್ರು ಈ ನನ್ ಮಕ್ಳ ಹಬ್ಬ ಮುಗಿದಿರುವದಿಲ್ಲಾ, ತಿಂಗಳು ಪೂರ್ತಿ ಡಂಕ ನಕ ಡಂಕ.. ತಮ್ಮ ಟೈಮ್ ನೋಡ್ಕೊಂಡು , ಆರ್ಕೆಸ್ಟ್ರಾ ಟೈಂ ನೊಡ್ಕೊಂಡು ಗಣೇಶನ್ನ ಕೂರಿಸೋ ನನ್ನ್ ಮಕ್ಳು ಇವರು. ಇದನ್ನು ಕುರಿತು ಸಿಕ್ಕಿದ್ದೆ ಚಾನ್ಸು ಅಂತ ಗಂಟಲು ಸರಿ ಮಾಡಿಕೊಂಡು ಭಾಷಣ ಬಿಗಿಯುತ್ತಿರುವಾಗ
ನಮ್ಮ ಮನೋಜನ ಸಹನೆ ಮೀರಿ "ಅಯ್ಯೊ ಹಾಳಾಗ್ಲಿ! ಯಾವಾಗ ಮಾಡಿದ್ರೆ ನಮಗೇನು? ನೀವು ಮಾತ್ರ ಫ್ರೈಡೆ ಸಂಜೆ ಬೇಗ ಬಂದು ಬಿಡಿ, ಇಬ್ರೂ ಪ್ರೊಗ್ರಾಮ್ ನೊಡೊಣಾ" ಅಂತ ಅಪ್ಪಣೆ ಮಾಡಿದ ನಮ್ಮ ಸುರ್ಯವಂಶಿ. ಆ ಮಹಾತ್ಮನ ಹುನ್ನಾರ ಬಲ್ಲವರಾರು?

"ಫ್ರೈಡೆ ಮದ್ಯಾಹ್ನ ಗಣೇಶನ್ನ ತರ್ತಾರೆ, ಸಾಯಂಕಾಲ ನಗೆಹಬ್ಬ, ಶನಿವಾರ ಮಧಾಹ್ನ ಮಕ್ಕಳಿಂದ ಮನರಂಜನೆ, ಸಂಜೆ ಆರ್ಕೆಸ್ಟ್ರಾ, ಭಾನುವಾರ ಗೇಮ್ಸ್ ಇರ್ತಾವೇ" ಅಂತ ಟೈಂ ಟೇಬಲ್ಲು ಸಹಾ ಹೇಳಿ ’ಇನ್ನೆನು ನಿಂದು ಮುಚ್ಕೊಂಡು ಬಾ’ ಎಂಬಂತೆ ಗುರಾಯಿಸಿ ಪೆಂಡಾಲು ಹಾಕುತ್ತಿದ್ದವರ ಜೊತೆ ಹರಟೆಗಿಳಿದ ನಮ್ಮ ಮನೋಜ್.

ಅವನಾಜ್ಞೆ ಉಲ್ಲಂಘಿಸಿದರೆ ರಾತ್ರಿ ನಿದ್ದೆ ಮಾಡಲು ಬಿಟ್ಟಾನೆಯೇ ಅಂತ ಹೆದರಿ ಶುಕ್ರವಾರ ಬೇಗ ಆಫೀಸ್ ಬಿಟ್ಟೆ. ಆಗ್ಲೆ ನಗೆಹಬ್ಬ(?) ಶುರುವಾಗಿಯೇಬಿಟ್ಟಿತ್ತು. ಯಾವ ಕೋನದಿಂದ ನೋಡಿದರೂ ಹುಡುಗಿಯರೇ ಕಾಣುವಂತಾ ಜಾಗದಲ್ಲಿ ನಮ್ಮ ಮನೋಜ ಖುರ್ಚಿ ಕಾಯ್ದಿರಿಸಿದ್ದ. ಅವನೆಡೆಗೆ ಕೃತಜ್ಞತೆಯಿಂದ ನೋಡಿ ಖುರ್ಚಿಯಲ್ಲಿ ಆಸೀನನಾದೆ. ವೇದಿಕೆ ಮೇಲೆ ನೊಡ್ತಿನೀ ಅದೇ ರಿಚರ್ಡೂ, ಅದೆ ಮೈಸುರು ಆನಂದು, ಪ್ರಾಣೇಶು.. ನಂಗಂತೂ ಸಿಕ್ಕಾಪಟ್ಟೆ ನಿರಾಶೆಯಾಯಿತು.

" ಅಲ್ವೋ ಮನೋಜ್, ಅಣ್ಣಮ್ಮನ ಉತ್ಸವಕ್ಕೂ ಇವರದೆ ಪ್ರೊಗ್ರಾಮ್ ಇತ್ತಲ್ಲವೋ? ಮತ್ತೆ ಎನೂ ಕೇಳ್ತಿಯಾ? ಹಾಡಿದ್ದಾಡೊ ಕಿಸಭಾಯಿ ದಾಸ ಎಂಬಂತೆ" ಎಂದು ಅಲವತ್ತು ಕೊಂಡೆ.

"ಅವರ ಮಾತು ಯಾವ ಬೋ.. ಮಗ ನಿಂಗೆ ಕೇಳು ಅಂದ" ಅಂತ ನಂಗೆ ಕೇಳುವಂತೆ ಗೊಣಗಿ ಆದ್ರೂ ಮಳ್ಳನಂತೆ ಮುಖದ ಮೇಲೆ ನಗು ತಂದುಕೊಂಡು " ಹ್ಹಿ ಹ್ಹಿ ಹ್ಹಿ ಅದರ ಜೊತೆ ಬೇರೆ Entertainment ಇರುತ್ತಪ್ಪಾ, ಸರಿಯಾಗಿ ಗಮನಿಸಿ" ಎಂದವನೆ Entertainment ಹುಡುಕತೊಡಗಿದ.

ಕಸದಲ್ಲಿ ರಸ ತೆಗೆಯುವ ಅವನ ಯುಕ್ತಿಗೆ ಮನದಲ್ಲೆ "ಎಲಾ ಬಡ್ಡಿಮಗನೆ" ಅನ್ಕೊಂಡು ಗಣೇಶನ ಮೂರ್ತಿ ಕಡೆ ನೊಡ್ತೀನಿ ಕೃಷ್ಣಾವತಾರಿ ಗಣೇಶ ರಾಧೆಯ ಮೇಲೆ ಕೈ ಹಾಕಿ ಕುಳಿತ್ತಿದಾನೆ. ನಂಗ್ಯಾಕೋ ಕಸಿವಿಸಿ ಅನ್ನಿಸಿ ದುಃಖ ತೋಡಿಕೊಳ್ಳಲು " ಮನು ಗಣೇಶನ ಮೂರ್ತಿ ನೊಡಿದ್ಯಾ?" ಅಂದೆ.

ಅವನಿಗೆ ಸಿಟ್ಟು ಬಂದಿರಬೇಕು ಈ ಮಗನಿಗೆ ನಾ ನೋಡು ಅಂತಿರೋದೆ ಬೇರೆ ಈ ಮಗ ನೋಡ್ತಿರೋದೆ ಬೇರೆ ಅಂತಾ, ಆದ್ರು ಭಯ ಬಕ್ತಿಯಿಂದ
" ಸಂತೋಷರ, ನಿಮ್ಮ R&D ಇಲ್ಲಿ ಬೇಡ. ಹೊರಗೆ ಹೋದಲ್ಲಾದರೂ ನಿಮ್ಮ ಹುಳುಕು ಹುಡುಕುವ ಬುದ್ಧಿ ಬಿಟ್ಟು Enjoy ಮಾಡೊದನ್ನು ಕಲಿಯಿರಿ" ಅಂತ ಉಪದೇಶ ಕಮ್ ವಾರ್ನಿಂಗ್ ಕೊಟ್ಟ.

" ಅಲ್ವೋ ಹೇಳಿ ಕೇಳಿ ಗಣೇಶ ಶುದ್ಧ ಬ್ರಹ್ಮಾಚಾರಿ, ರಾಧೆ ಪಕ್ಕ ಕುರಿಸೋದು ಅಭಾಸ ಅಗಲ್ವೇನೋ" ಅಂತ ಅವನ ಸಮರ್ಥನೆ ಬಯಸಿದೆ.

"ಹ್ಹಿ ಹ್ಹಿ ಹ್ಹಿ ಹೀಗೆ ಎಷ್ಟು ದಿನ ಅಂತ ಇದ್ದಾನು, ಅವನೂ Enjoy ಮಾಡ್ಲಿ ಬಿಡ್ರಿ. ನಿಮ್ಮ ಪಕ್ಕ ಯಾರಿಲ್ಲಾ ಅಂತ ಉರಿನಾ? ನೀವು ಸುಮ್ನ ಪ್ರೊಗ್ರಾಂ ನೊಡ್ರಿ" ಅಂತ ಉಡಾಫೆಯಿಂದ ಮಾತಾಡಿ ತನ್ನ ಚಟುವಟಿಕೆ ಮುಂದುವರೆಸಿದ.

ಸರಿ ಪ್ರೋಗ್ರಾಂ ಆದ್ರು ನೋಡಿದ್ರಾಯ್ತು ಅಂತ ನೋಡಿದ್ರೆ ರಿಚರ್ಡರ ಅವೇ ಹಳೆ ಪ್ರಸಂಗಗಳು, ಕೆಟ್ಟ ಜೋಕುಗಳು, ಮೈಸುರು ಆನಂದರ ಕಾಮೆಂಟರಿ,ಮೈಕುಣಿತ, ಪ್ರಾಣೇಶರ ಸೂಳೆಮಗ ಜೋಕುಗಳು. " ಥೂ ಸೂಳೆಮಕ್ಳಾ" ಅಂಥ ಮನಸ್ಸಲ್ಲೆ ಉಗಿದುಕೊಂಡೆ.ನಗಿಸಲು ಅವರು ಪಡುತ್ತಿದ್ದ ಕಷ್ಟ ಕಂಡು ಪಾಪ ಅನಿಸಿತು. ರೀಚರ್ಡ್ ಬೇರೆ ಹೊದ ಕಡೆಯವರನ್ನೆಲ್ಲಾ ಹೊಗಳುವ ಹೊಗಳುಭಟ್ಟತನ ಆರಂಭಿಸಿದ್ದ. ಪದೆ ಪದೆ ಸಂಕೋಚ ಪಡದೆ "ಬಾಯ್ತುಂಬ ನಗಿ ಬಾಯ್ತುಂಬ ನಗಿ" ಅಂತ ದೀನನಾಗಿ ಗೋಗರೆಯುತ್ತಿದ್ದ ಕಂಡು , ಬಾಯಿ ಬಿಟ್ಟೂ ಬೇರೆ ಅಂಗದಿಂದಲೂ ನಗಬಹುದಾ ಅನಿಸಿತು.ವೇದಿಕೆ ತುಂಬ ಅವರ ಲಘು ವರ್ತನೆ ಮತ್ತು ಹೇಳುವ ಪಿಜೇಗಳನ್ನು ಕೇಳಿ ಇನ್ನೂ ಸಹಿಸಲಾಗದು ಅಂದುಕೊಂಡು ಮನೋಜನ ಅವತ್ತಿನ ಖೋಟಾ ಮುಗಿಸಿ " ನಾಳೆ ಪೂರ್ತಿ ಕುರೋಣ" ಅಂತ ಪ್ರಮಾಣ ಮಾಡಿ ಮರಳಿ ರೂಮಿಗೆ ಕರೆದುಕೊಂಡು ಬಂದೆ.

ಶನಿವಾರವೂ ಅದೇ ಕಥೆ ಮಕ್ಕಳಿಂದ ಮನರಂಜನೆ ಅಂತಾ ಹೋದ್ರೆ ಕತ್ತೆ ವಯಸ್ಸಿನ ಇಂಗ್ಲೀಷ ಮೀಡಿಯಂ "ಮಕ್ಕಳು" ಪ್ರಾರ್ಥನೆ ಅಂತ ಅರಚಲು ಆರಂಭಿಸಿದ್ದವು. ಎಲ್ಲಾ ಸಮಿತಿ ಸದಸ್ಯರ ಮಕ್ಕಳು ಹಾಡಿ, ಕುಣಿದು, ಹಿಗ್ಗಾ ಮುಗ್ಗಾ ಪ್ರತಿಭೆ ಪ್ರದರ್ಶಿಸಿದ ಮೇಲೆ ಸಾಕಪ್ಪೋ! ಅನಿಸಿತು. ಅದು ಮುಗಿಯುತ್ತಲೇ " ಝೇಂಕಾರ ಮೇಲೊಡೀಸ್ ಮೇಲೊಡೀಸ್ ಮೇಲೊಡೀಸ್" ಅಂತಾ ಮೂರ್ನಾಲ್ಕು ಸಾರಿ ಅರಚಿ, ಜೂನಿಯರ್ ಎಸ್.ಪಿ.ಬಿ , ಜೂನಿಯರ್ ಜಾನಕಿ ಅಂತ ಎಲ್ಲ ಜೂನಿಯರಗಳಿಂದ ಅವೇ ಮಾಮೂಲು ಅರ್ಕೆಸ್ಟ್ರಾ ಗೀತೆಗಳಾದ "ಜೊತೆಯಲಿ, ಜೊತೆ ಜೊತೆಯಲಿ" , " ಹೃದಯ ಸಮುದ್ರ ಕಡೆದು"," ತಂಗಾಳಿಯಲ್ಲಿ ನಾ ತೇಲಿ ಬಂದೆ", "ಕುಚಿಕು ಕುಚಿಕು " ಮತ್ತು " ಅನುಸುತಿದೆ" "ಕರಿಯ ಐ ಲವ್ ಯೂ " ಹಾಡಿ ಕೊನೆಗೆ "ಕುಲದಲ್ಲಿ ಕೀಳ್ಯಾವುದೋ ಹುಚ್ಚಪ್ಪಾ!" ಅಂತ ಮಂಗಳಾರತಿಯನ್ನೂ ಹಾಡಿ ಅಣ್ಣಾವ್ರಿಗೆ ಜೈ! ಎಂದು ಕಾರ್ಯಕ್ರಮ ಮುಗಿಸುವಷ್ಟರಲ್ಲಿ ತಲೆ ಕೆಟ್ಟೂ ಕೆರ ಹಿಡಿದು ಹೋಗಿತ್ತು "ಪಕ್ಷಿ ವೀಕ್ಷಣೆ" ಯಲ್ಲಿ ತೊಡಗಿದ್ದ ನಮ್ಮ ಅಭಿನವ ಸಲೀಂ ಅಲಿಯ " ಕಾಳು ಹಾಕುವ" ಕಾರ್ಯಕ್ರಮ ಮುಗಿಸಿ ಕರೆತರುವಷ್ಟರಲ್ಲಿ ಗಣೇಶ ಎನು ನಿನ್ನ ಲೀಲೆ ಎಂದೆನಿಸತೊಡಗಿತ್ತು..

Monday, August 27, 2007

ನೀವೇನಂತೀರಾ????????

ನಿನ್ನೆ ರಾತ್ರಿ ಮಲಗುತ್ತಿದ್ದಾಗ ಯಾಕೋ ಅಪರೂಪಕ್ಕೆ ಎಂಬಂತೆ " ರೀ ಸಂತೋಷರ, ನಾಳೆ ನಾನ್ನೂ ಲಗೂ ಎಬ್ಬಿಸ್ರಿ" ಅಂತ ಭಿನ್ನಹ ಮಾಡಿಕೊಂಡ. ಆಶ್ಚರ್ಯಚಕಿತನಾಗೆ ನಾನು " ಯಾಕೋ ಮತ್ತೆ ಕ್ರಿಕೆಟ್ ತಾಲೀಮು ಶುರುನಾ?" ಎಂದೆ ಮಾಮುಲಿನಂತೆ.

ನಖಶಿಖಾಂತ ಉರಿದು ಹೋಯ್ತು ಸೂರ್ಯವಂಶಿ " ಕಾಲೇಜು ಮತ್ತೆ ಶುರು ಆಗಿದೆ ಅಂತ ಸಾವಿರ ಸಲ ಬಡ್ಕೊಂಡಿದೀನಿ ಬೆಳಗ್ಗೆಯಿಂದ, ಮತ್ತೆ ಅದನ್ನೆ ಕೇಳ್ತಿರಲ್ಲಾ?" ಅಂದ ಸಿಟ್ತಿನಲ್ಲಿ.

"ಅಲ್ವೋ ಕಾಲೇಜನ್ನ ಅದರ ಪಾಡಿಗೆ ಬಿಟ್ಟು ತುಂಬ ದಿನ ಅಯ್ತಲ್ಲೋ? ಈಗೇನು ಒಮ್ಮೆಲೆ ಕಾಲೇಜು ನೆನಪಾಗಿದೆ ಸಾಹೇಬರಿಗೆ, ಎನ್ ವಿಷಯ, ಹೊಸ ಲವ್ವಾ?" ಎಂದು ಕಾಲೆಳೆದೆ.( ಈ ಪ್ರಾಣಿ ನಾವೆಲ್ಲಾ ಇಂಜಿನಿಯರಿಂಗ್ ನ ಕೊನೆಯ ವರ್ಷಕ್ಕೆ ಬಂದಾಗ ಹೆದರಿ ಹೆದರಿ ಕಾಲೇಜು ತಪ್ಪಿಸುತ್ತಿದ್ದರೆ, ಈ ಸೂರ್ಯವಂಶಿ ಕಾಲೇಜು ಸೇರಿದ ಹೊಸದರಲ್ಲೇ ಎಲ್ಲಾ ಕ್ಲಾಸುಗಳಿಗೆ ಅಪರೂಪವಾಗಿಬಿಟ್ಟಿದ್ದ, ಚಳಿಗಾಲದಲ್ಲಂತೂ ಮುಂಜಾನೆಯ ಕ್ಲಾಸುಗಳಿಗೆ ಈ ವಯ್ಯಾ ಹೋಗುವದೇ ಇಲ್ಲಾ! ಎಷ್ಟೊ ಸಾರಿ ಇಂತಹ ಶೀಷ್ಯೊತ್ತಮನನ್ನೂ ಕರೆಸಿ ಇವರ ದರ್ಶನಭಾಗ್ಯವನ್ನು ಅನೇಕ ಅದ್ಯಾಪಕರು ಪಡೆಯಬೇಕಾಗಿತ್ತು.. ಅಷ್ಟು ದುರ್ಲಭವಾಗಿದ್ದ ಇವನು.)

ಸ್ವಲ್ಪ ದನಿ ತಗ್ಗಿಸಿ ಹೇಳಿದ" ಎಲ್ರೂ ಕೊನೆಯ ವರ್ಷಕ್ಕೆ ಕಾಲೇಜಿಗೆ ಹೋಗಲ್ವಂತೆ, ಆದ್ರೆ ನಾ ಮಾತ್ರ ಈ ವರ್ಷನಾದ್ರೂ ರೆಗ್ಯುಲರ್ ಆಗಿ ಹೋಗಬೇಕು ಅಂತ ಅನ್ಕೊಂಡಿನಿ" ಅಂದ..
ಓಹೋ ಸಾಹೇಬರು ಇನ್ನೂ ಅನ್ಕೊಂಡಿದಾರೆ ಅಂದುಕೊಂಡು ನಗುತ್ತಾ " ನಿಮ್ಮ ಪ್ರಿನ್ಸಿಗೆ ಹೇಳಿದ್ದರೆ ಇಡಿ ಕಾಲೀಜೆಗೆ ಸ್ವೀಟ್ ಹಂಚಿರೋರು, ನಿಮ್ಮಂತಹ ಪ್ರಕಾಂಡ ಪಂಡಿತರ ಪುನರಾಗಮನದ ಖುಷಿಗೆ" ಎಂದೆ.

"ನಿಮ್ದೂ ಮಸ್ಕೀರಿ ಭಾಳ ಆತು, ನಾ ನಿಮ್ಮನ್ನ ಒಂದ ಮಾತು ಕೇಳಲಾ?" ಅಂದ ಮನೋಜ್..

ನಮ್ ಸಿಕ್ಸ್ತ್ ಸೆನ್ಸು ಆಗ್ಲೆ ನಮ್ಮನ್ನು ಎಚ್ಚರಿಸತೊಡಗಿತು, ಆದ್ರೂ ಎನು ಈ ನನ ಮಗ ಯಾವಗ್ಲೂ ಕೇಳಿಯೇ ಹೇಳೊದು ಅಂತಾ ಗೊಣಕ್ಕೊಂಡು " ಹೊತ್ತಾಗೈತಿ ಬೇಗ ಹೇಳಿ ಮುಗಿಸು, ಬೆಳಗ್ಗೆ ಬೇಗ ಬೇರೆ ಏಳಬೇಕು ನೀನು" ಅಂದು ಸೂಕ್ಷ್ಮವಾಗಿ ಹೇಳುವ ಯತ್ನ ಮಾಡಿದೆ.

ಮಾತೂ ಮುಗಿಸುವದೇ ತಡ ಚಕ್ಕನೇ ಎದ್ದವನೇ ಒಳಗೆ ಹೋಗಿ ವಿಜಯ ಕರ್ನಾಟಕ ಪತ್ರಿಕೆಯ " ಮಹಿಳಾ ವಿಜಯ"ದ ಸಂಚಿಕೆಗಳನ್ನು ನನ್ನ ಮುಂದೆ ಗುಡ್ದೆ ಹಾಕಿ " ನೋಡ್ರಿ ಸಂತೋಷರಾ, ಎನೀದರ ಅರ್ಥ? ಎಂದು ಸ್ವಲ್ಪ ಸೀರಿಯಸ್ಸಾಗೇ ಕೇಳಿದ.

ಏನು ನೋಡುವದು ಮಣ್ಣು, ಅರ್ಥ ಆದ್ರೆ ತಾನೆ? ಆದ್ರೆ ಮನಸ್ಸಿನ ಮೂಲೆಯಲ್ಲಿ ಏ ಮನುಷ್ಯನ ಹೊಸ ಸಂಶೋಧನೆಯ ಬಗೆಗೆ ಕೂತುಹಲ ಮೂಡತೊಡಗಿತು, ಕೊನೆಗೆ ಸೋತವನಂತೆ " ರಾತ್ರೀಲಿ ಯಾಕೋ ಪೇಪರ್ ತೋರಿಸಿ ಪ್ರಾಣ ತಿಂತೀಯಾ? ಎನೂ ಅಂತ ಬಿಡಿಸಿ ಹೇಳ್ಬಾರದಾ?" ಅಂತ ಅಲವತ್ತುಕೊಂಡೆ.

ಛಲ ಬಿಡದ ತ್ರಿವಿಕ್ರಮನಂತೆ "ಸ್ವಲ್ಪ ಗಮನಿಸಿ ನೋಡಿ, ಪ್ಲೀಸ್ ಪ್ಲೀಸ್ " ಅಂದ.

ಇದೋಳ್ಳೆ ಗೋಳಾಯ್ತಲ್ಲಾ ಅಂದುಕೊಂಡು ಗಮನಿಸಿದರೆ ಎಲ್ಲಾ ಸಹಜಾರ "ಬಾಲ್ಕನಿಯಿಂದ" ಅಂಕಣದ ಪೇಪರುಗಳು, ಯಾಕೋ ಕೇಸು ಸೀರಿಯಸ್ಸೆ ಅನಿಸಿ " ನಾ ಎಲ್ಲ್ಲಾ ಓದೀದಿನಿ, ನಿನ್ನ ಪ್ರಾಬ್ಲಮ್ ಏನು ಶಿವಾ?" ಅಂದು ಬೇಸರಿಸಿಕೊಂಡು ಹೇಳಿದೆ.

" ಅದಲ್ರೀ ಫೋಟೊ ನೋಡ್ರಿ ಫೋಟೊ " ಅಂದು ಹಲ್ಕಿರಿದ.

" ನೋಡ್ದೆ, ಎನಾಯ್ತಿಗ?" ಎಂದು ಖಾರವಾಗಿ ಕೇಳಿದ್ದಕ್ಕೆ

" ಅಲ್ಲೇ ಇರೋದು ಪಾಯಿಂಟು, ಅಲ್ಲಾ ಆಕಿಗೆ ತನ್ನ ಐಡೆಂಟಿಟಿ ತೋರಿಸೋದು ಇಷ್ಟ ಇಲ್ಲಾ ಅಂದ್ರೆ ಈ ಫೋಟೊನೂ ಹಾಕಬಾರದಿತ್ತು,ಆದ್ರು ನಮ್ ಕಡೆ ಬೆನ್ನು ತಿರುಗಿಸಿದ ಫೋಟೋ ಇದೆ, ಏನಿದರ ಅರ್ಥ?" ಎಂದು ಕೊನೇಗೂ ಬಾಯಿಬಿಟ್ಟ..

ಹೌದಲ್ಲವೇ ಅನ್ನಿಸಿತು ಒಂದು ಕ್ಷಣ ಆದ್ರೂ ಮಾತು ಮೂಂದುವರೆಸಲು ಇಷ್ಟವಿಲ್ಲದೆ " ಅವರವರ ಇಷ್ತ ಬಿಡೊ, ಬೇಕಾದ ಮಾಡ್ಕೊಳ್ಲಿ ಮತ್ತು ಬೇಕಾದ್ದು ಫೋಟೊ ಹಾಕ್ಕೊಳ್ಲಿ ನೀ ಯಾಕೆ ಚಿಂತಿ ಮಾಡ್ತಿ, ಈಗ ಮಲಗು" ಅಂದೆ..

" ನಿಮಗೆ ಎಲ್ಲಾ ಸಿಲ್ಲಿಯಾಗೇ ಕಾಣೊದು, ಅದು ಉದ್ದೇಶಪೂರ್ವಕವಾಗಿ ಹಾಕಿರೋ ಫೋಟೊ," ಎಂದು ಜಗ್ಗ್ಗನ್ನೆತ್ತಿ ಗಟಗಟ ನೀರು ಕುಡಿದವನೆ ಮತ್ತೆ ಶುರು ಮಾಡಿದ ಅವನ ಬಾಯಿಂದನೆ ಕೇಳಿ
" ನೋಡ್ರಿ ಸಂತೋಷರ, ಇದೂ ಎಲ್ಲಾ ಹುಡುಗ್ಯಾರ ಲಕ್ಷಣ, ಕೆಲ ಹುಡುಗಿಯರಿಗೆ ನಾವು ಚಂದ ಅದೀವಿ ಅನ್ನೊದು ಗೊತ್ತಿರ್ತದ, ಮತ್ತು ಫೋಟೊ ಹಾಕಿ ತಮ್ಮ ಐಡೆಂಟಿಟಿ ಬಿಟ್ಟುಕೊಡಲೂಬಾರದು ಅಂತ ಚೆನ್ನಾಗಿ ಗೊತ್ತಿರುತ್ತೆ. ಹಾಗಂತ ಸುಮ್ನಿರೋದು ಇಲ್ಲಾ, ಅರ್ಧ ಮರ್ಧ ಮುಖಾ ತೋರಿಸಿ ನಮ್ ಹುಡುಗ್ರ್ ಕೂತುಹಲ ಹೆಚ್ಚಿಸ್ತಾರ. ಅದು ಬೇಡಾ ಅಂದ್ರ ಪೂರಾ ಫೋಟೊ ಹಾಕಬೇಕು, ಇಲ್ಲಾಂದ್ರೆ ಹಾಕಲೇಬಾರದಿತ್ತು, ಬಿಟ್ಟಿದ್ರೆ ಏನು ಗಂಟು ಖರ್ಚಾಕ್ತಿರಲಿಲ್ಲ್ಲ. ಈ ತರ ನಮ್ ತಲಿಯಾಗ ಹುಳ ಬಿಡ್ದಕ ಹೀಂಗ್ ಮಾಡ್ತಾರ, ಬನ್ನಿ ಬೇಕಾದ್ರ ಆರ್ಕುಟನ್ಯಾಗ್ ನಮ್ಮ್ ಕಾಲೇಜಿನ ಮಸ್ತ ಮಸ್ತ ಹುಡುಗ್ಯಾರು ಸಹ ಅರ್ಧ ಮರ್ಧ ಫೊಟೊ ಹಾಕೀರೊದನ್ನ ತೋರೊಸ್ತಿನಿ, ಹಿಂತಾ ಸಾಕಷ್ಟು ಹುಡುಗ್ಯಾರ್ನ್ ತೋರಿಸ್ತಿನಿ. ಅವರ ಉದ್ದೀಶವೇ ಅರ್ಥ ಆಗೊಲ್ಲಾ? ಅವರು ಏನು ಅನ್ಕೊಂಡು ಹೀಗೆ ಮಾಡ್ತಾರೆ? ಅವರ ಸೈಕಾಲಜಿ ಏನು?" ಅಂತೆಲ್ಲಾ ಪ್ರಶ್ನಾವಳಿಗಳನ್ನು ಎಸೆದು ನನ್ನ ಕಡೆಗೆ ನೋಡಿದ..

ನಂಗೂ ಈ ಪುಣ್ಯಾತ್ಮನ ಮಾತುಗಳು ತುಸುವಾದರು ಹೌದೆನಿಸಿತು, ಅದರೆ ಅವನ ಪ್ರಶ್ನೆಗಳಿಗೆ ಉತ್ತರ ಮಾತ್ರ ದೇವರಾಣೆಗೆ ಹೋಳೆಯಲಿಲ್ಲ.ಅದಕ್ಕೆ ನೀವೆನಂತೀರಾ ಅಂತ ಪೊಸ್ಟಿಸಿದ್ದೇನೆ, ನಿಮ್ಮ ಅಭಿಪ್ರಾಯಗಳಿಗೆ ಸ್ವಾಗತ..

( ಇದನ್ನು ಇಬ್ಬರ ಕುತೂಹಲಿ ಬ್ರಹ್ಮಾಚಾರಿಗಳ ಸಂಭಾಷಣೆ ಎಂದೊ ನೋಡಿರಿ ಹೊರತು ಇದರ ಹೀಂದೆ ಯಾವುದೋ ಘನ ಉದ್ದೇಶಗಳಿಲ್ಲ್ಲಾ! ಕೇವಲ ತಮಾಷೆಭರಿತ ಕೂತುಹಲದಿಂದ ಇದನ್ನು ಪ್ರಕಟಿಸಿದ್ದೇನೆ, ಯಾರಿಗಾದರೂ ನೋವಾದರೆ ಕ್ಶಮಿಸುವ ದೊಡ್ಡತನವಿರಲಿ)

Tuesday, July 31, 2007

" ಜಿಂದಗಿ ಕಟಿಂಗ್ ಸಲೂನ್ "

ನಮ್ಮೂರಿನಲ್ಲೇ ಜಗತ್ಪ್ರಸಿದ್ದವಾದ ಕಷ್ಟದಂಗಡಿಯ ನಿಂಗನಿಗೆ, ಯಾವ ದೇವತೆ ಕನಸಿನಲ್ಲಿ ಬಂದು ಅವನ ಅಂಗಡಿಗೆ " ಜಿಂದಗಿ ಕಟಿಂಗ್ ಸಲೂನ್" ಎಂಬ ಹೆಸರು ಸೂಚಿಸಿದ್ದಳೋ ಅರಿಯೆ,ರಾತ್ರೋ ರಾತ್ರಿ ಊರಿನ ಎಕೈಕ ಪಾರ್ಟ ಟೈಂ ಪೆಂಟರ ಆದ ಕೊಟ್ರನನ್ನು ಕರೆಸಿ, ಅವನ ಎಂದಿನ ಕಾಗಕ್ಕ ಗುಬ್ಬಕ್ಕ ಶೈಲಿಯಲ್ಲಿ "ಜಿಂದಗಿ ಕಟಿಂಗ್ ಸಲೂನ್" ಎಂದು ಬರೆಸಿ ಧನ್ಯನಾದ.

ನಿಂಗನಿಗೆ ಈ ಕಸುಬು ಅವನ ಹಿರಿಯರು ಬಿಟ್ಟು ಹೋದ ಎಕೈಕ ಬಳುವಳಿ.ನಮ್ಮೂರಿನ ಸಮಸ್ತ ತಲೆಗಳ ಉಸ್ತುವಾರಿಯೂ ಇವನದೇ ಆಗಿತ್ತು.ಅಷ್ಟಕ್ಕು ಇವನ ಕಷ್ಟದಂಗಡಿ ಎಂದರೆ ಊರಿನ ಮಧ್ಯದ ಪಂಚಾಯತಿ ಕಟ್ಟಡಕ್ಕೆ ಅಂಟಿದ, ಹಳೆ ಕಟ್ಟಿಗೆ ಹಲಗೆಗಳ ಗೂಡಂಗಡಿ.ಅದರ ಒಳಭಾಗವನ್ನೆಲಾ ಶುಕ್ರವಾರದ ಚಿತ್ರಮಂಜರಿಯ ಪೇಪರುಗಳನ್ನು ಅಂಟಿಸಿ, ಆ ಗೂಡಂಗಡಿಗೂ ಗ್ಲಾಮರ್ ನೀಡಿದ್ದ. ಆ ಚಿತ್ರಮಂಜರಿಯ ಪುಟ ಆರಿಸುವಾಗಲೂ ವೀಶೆಷ ಕಾಳಜಿ ವಹಿಸಿ, ಆಗಿನ ಕಾಲದ ಯುವಕರ ಅರಾದ್ಯ ದೈವವಾಗಿದ್ದ ಡಿಸ್ಕೊ ಶಾಂತಿ ಮತ್ತು ಸಿಲ್ಕ ಸ್ಮಿತಾರ ಪೋಸುಗಳು ಇರುವಂತೆ ನೋಡಿಕೊಂಡು ತನ್ನ " Marketing strategy " ತೋರಿದ್ದ.ಗೋಡೆಗೆ ತಗುಲಿದಂತೆ ಇರುವ ಒಂದು ಶೆಲ್ಫು, ಅದರ ಮೇಲೆ ತರಹೇವಾರಿ ಕತ್ತರಿಗಳು,ಹೊಲಸು ತುಂಬಿದ ಬಾಚಣಿಕೆಗಳು ಮತ್ತು ಹೆಸರೇ ಕೇಳಿರದ ಲೋಕಲ ಬ್ರಾಂಡಿನ ಬ್ಲೇಡು,ಶೇವಿಂಗ್ ಕ್ರೀಮು, ಸ್ನೋ,ಪೌಡರಗಳು ಮತ್ತು ಇಡೀ ಅಂಗಡಿಗೆ ಕಳಶಪ್ರಾಯವಾದ ಎರಡು ಅಭಿಮುಖವಾದ ಕನ್ನಡಿಗಳು, ಅದರ ಮೇಲೆ ವಿವಿಧ ಹೇರ ಸ್ಟೈಲಿನ ಫೋಟೊ ಮತ್ತದರ ಪಕ್ಕದಲ್ಲಿ ನಮ್ಮೂರ ಪಡ್ಡೆಗಳ ೨೪/೭ ಆರಾದ್ಯ ದೈವವಾದ ರವಿಚಂದ್ರನ್, ಖೂಷ್ಬುಳನ್ನು ತಬ್ಬಿ ನಿಂತ ದೊಡ್ಡ ಪೊಸ್ಟರು.ಇವೆಲ್ಲದರ ಜೊತೆಗೆ ಅಂಗಡಿಯ ತುಂಬೆಲ್ಲಾ ಬಿದ್ದಿರುವ ಕರಿ ಬಿಳಿ ಬಣ್ಣದ ವಿವಿಧ ಸೈಜಿನ ಕೂದಲುಗಳು..

ಈ ನಿಂಗ,ಹೊಸ ಹೆಸರಿನೊಂದಿಗೆ ತಿರುಗುವ ಖುರ್ಚಿಯನ್ನು ಇಡಿ ಅಬ್ಬಿಗೇರಿಗೆ ಪ್ರಥಮವಾಗಿ ಪರಿಚಯಿಸಿ, ಊರಿನ ಮೊದಲಿಗರ ಪಟ್ಟಿಯಲ್ಲಿ ತಾನು ಸೇರಿಕೊಂಡ.ಅಂಗಡಿಗೆ ಬರುವ ಪಡ್ಡೆಗಳಿಗೆ ಮಿಲ್ಟ್ರಿ ಕಟ್ಟಿಂಗು, ಪಂಕು,ಸ್ಲೋಪು,ಸೈಡ್ ಲಾಕು ಅಂತೆಲ್ಲಾ ಅವರ ತಲೆಗಳನ್ನೆಲ್ಲಾ ತನ್ನ ಪ್ರಯೋಗಳಿಗೆ ಒಡ್ಡುತ್ತಿದ್ದ.ತನ್ನಂಗಡಿಗೆ ಹೊಸ ಟೇಪ ರೇಕಾರ್ಡರ್ ತಂದಾಗಲಂತೂ, ಇಡಿ ದಿನ ರವಿಚಂದ್ರನನ " ಕಮಾನು ಡಾರ್ಲಿಂಗ್" ಅಂತ ಹಾಡು ಹಾಕಿ, ದಾರಿಯಲ್ಲಿ ಓಡಾಡುವ ಹೆಂಗಸರಿಗೆ ಮುಜುಗರ ತಂದಿಕ್ಕುತ್ತಿದ್ದ.

ಈ ನಿಂಗ ಮಾತ್ರ ಹೀಗಿದ್ದನೋ ಅಥವಾ ಎಲ್ಲಾ ಊರ ಕ್ಷೌರಿಕರು ಹೀಗೋ ಗೊತ್ತಿಲಾ! ತಲೆಕೂದಲು ಕೆತ್ತುವದರೊಂದಿಗೆ, ಎಲ್ಲ ಮನೆಗಳ
ಗಾಸಿಪ್ಪುಗಳನ್ನು ಉಪ್ಪು ಖಾರ ಹಚ್ಚಿ ಮಸಾಲೆ ಅರೆದು ಹೇಳುತ್ತಿದ್ದ, ಮಲ್ಯನ ಬಗ್ಗೆ ರಂಜನಿಯ ಕಥೆಗಳನ್ನು ಹೇಳುತ್ತಿದ್ದ,"ಬೆಂಗ್ಳೂರಲ್ಲಿ ರಾಜ್ ಕುಮಾರನ್ನ ಬೈದರೆ ಅಲ್ಲೇ ಒದೆ ಬಿಳುತ್ತವೆ" ಅನ್ನುವ ಅತಿರಂಜಿತ ಸುದ್ದಿಗಳನ್ನು ಹೇಳುತ್ತಿದ್ದ ಮತ್ತು ರಾಜ್ಕುಮಾರನ್ನ "ಅಣ್ಣಾವ್ರು" ಅಂತಲೇ ಕರೀಬೇಕು ಅಂತ ಬೆಂಗಳೂರು ಶಿಷ್ಟಾಚಾರ ಕಲಿಸುತ್ತಿದ್ದ, ಸಿನಿಮಾ ನಟಿಯರ ಬಗ್ಗೆ ರೋಚಕ ಕಥೆಗಳನ್ನು ಹೇಳಿ ನಮ್ಮಂತಹ ಪಡ್ಡೆಗಳಿಗೆ ಮಾರ್ಗದರ್ಶನ ಮಾಡುತ್ತಿದ್ದ ಮತ್ತು ಕೆಲ " ಆ ಥರಾ" ನಟಿಯರ ರೇಟುಗಳನ್ನು ಹೇಳಿ ನಮಗೇನೋ ಒಂತರ ಕೂತುಹಲವನ್ನೂ ಮೂಡಿಸಿದ್ದ.ಅವನ ಅಂಗಡಿ ಎಂದರೆ ಮುಕ್ತವಾಗಿ ಶುಕ್ರವಾರದ ಪೇಪರ್ ಓದುವ ಮತ್ತು ಹೀರೋಯಿನ್ನುಗಳನ್ನು ಮುಕ್ತವಾಗಿ ನೋಡುವ ಅಡ್ಡಾ ಆಗಿತ್ತು, ಹಳೆ ರೂಪತಾರಾ ತಂದಿಟ್ಟು ನಮ್ಮ ಕೂತುಹಲವನ್ನು ಇನ್ನು ಹೆಚ್ಚಿಸುತ್ತಿದ್ದ.ಕಾಲೇಜಿಗೆ ಹೋಗುವಾಗ ಯಾವುದಕ್ಕೂ ಇರ್ಲಿ ಅಂತ ಕ್ರಾಪು ತಿದ್ದಿಕೊಳ್ಳುವವರಿಗೆ ಅವನ ಅಂಗಡಿ ಆಧಾರವಾಗಿತ್ತು.ಹುಡುಗರ ಗುಪ್ತ ಸಮಸ್ಯೆಗಳಿಗೆ ಎಲ್ಲಾ ಬಲ್ಲವನಂತೆ ತನಗೆ ತಿಳಿದದ್ದನ್ನು ಹೇಳಿ ಅವರನ್ನೂ ಇನ್ನೂ ಗೊಂದಲಕ್ಕೆ ಕೆಡವುತ್ತಿದ್ದ.

ಮಧ್ಯವಯಸ್ಸು ದಾಟಿದ್ದರೂ ಒಂದು ಬಿಳಿ ಕೂದಲು ಕಾಣಿಸದ ದೊಡ್ಡ ಗೌಡರ ಕರಿಕೂದಲಿನ ರಹಸ್ಯ ಇವನಿಗೆ ಮಾತ್ರ ಗೊತ್ತಿತ್ತು. ಯಾರೇ ಬಂದು " ಗದ್ಲ ಐತೇನೋ ನಿಂಗಪ್ಪಾ? " ಅಂತ ಕೇಳಿದ್ರೆ " ನೆಕ್ಸ್ಟ ನಿಮ್ದ ಪಾಳೆ" ಅಂತೆಲ್ಲಾ ಒಳು ಬಿಟ್ಟು ಅನೇಕ " ನೆಕ್ಸ್ಟು" ಮಾಡಿ ಅವರನ್ನು ಕಾಯಿಸಿ ಕಾಯಿಸಿ ಸತಾಯಿಸುತ್ತಿದ್ದ.ಬಾಯಿ ಸುಮ್ನಿರದ ನಿಂಗ " ಈ ಭಾರಿ ಕಾಂಗ್ರೆಸ್ಸೇ ಬರೋದು " ಅಂತ ಭವಿಷ್ಯ ನುಡಿದು ನಮ್ಮೂರ ಭಜರಂಗಿಗಳ ಕೆಂಗಣ್ಣಿಗೆ ಗುರಿಯಾಗಿದ್ದ. ಒಟ್ನಲ್ಲಿ ನಿಂಗ ನಮ್ಮುರ ಜೀವನದ ಅವಿಭಾಜ್ಯ ಅಂಗವಾಗಿದ್ದ..

ಮೊನ್ನೆ "..... ಮೆನ್ಸ್ ಹೇರ ಸ್ಟೈಲ್" ಹೆಸರಿನ ಕಷ್ಟದಂಗಡಿಗೆ ಹೋಗಿದ್ದೆ " ಸಾರ್ , ಆಯಿಲ್ ಹಾಕ್ಲಾ " ಎಂದು ಕೇಳಿದಾಗ ಆಯಿಲ್ಲಿನ ಮರ್ಮ ತಿಳಿಯದೆ ಹೂಂ ಅಂದೆ. ಸ್ವಲ್ಪ ಎಣ್ಣೆ ಹಚ್ಚಿ ತಲೆ ಉಜ್ಜಿದವನೆ," ಎಷ್ಟು ಗುರು" ಅಂದ್ದಿದ್ದಕ್ಕೆ " ನೈಂಟಿ ರುಪೀಸ್ ಸರ್" ಎಂದು ತಲೆಯ ಜೊತೆಗೆ ಜೇಬನ್ನು ಬೋಳಿಸಿ ಕಳಿಸಿದಾಗ ನಿಂಗ ನೆನಪಾದ." ಉದ್ರಿ ಮಾನಭಂಗ" ಎಂದು ಬರೆದಿದ್ದರೂ ಚೆನ್ನಾಗಿ ಕೆರೆಸಿಕೊಂಡು "ಹತ್ತಿ ಬಂದಾಗ ಇಸಗೊಂಡು ಹೋಗು" ಎಂದು ನಿರ್ದಾಕ್ಷಿಣ್ಯವಾಗಿ ಹೇಳುತ್ತಿದ್ದದು ಮತ್ತು ಅವನು ಉಚಿತವಾಗಿ ಮಸಾಜ್ ಮಾಡುತ್ತಿದ್ದುದು, ಚಿಕ್ಕವನಾಗಿದ್ದಗ " ಕಷ್ಟಕ ಒಲ್ಲೆ " ಅಂತಾ ಅಳುತ್ತಿದ್ದವನನ್ನು ಕಥೆ ಹೇಳಿ ಕ್ಷೌರ ಮಾಡುತ್ತಿದ್ದದು, ಎಲ್ಲಾ ಕಣ್ಮುಂದೆ ಹಾದು ಹೋಯಿತು..

Sunday, July 15, 2007

ಅಬ್ಬಿಗೇರಿಯ ಬಸ್ ಸ್ಟಾಂಡು

ಮೊದಲು ಅಬ್ಬಿಗೇರಿಗೆ ಬಸಸ್ಟಾಂಡು ಎಂದರೆ ಗಾಂಧಿಚೌಕವಾಗಿತ್ತು.ಕೂಡ್ರಲು ಹೋಗ್ಲಿ ನಿಲ್ಲಲೂ ಸಹ ಜಾಗವಿಲ್ಲದ ಜನ ಅಲ್ಲೆ ಹತ್ತಿರದ ಪರಿಚಯಸ್ತರ ಮನೆ ಹೊಕ್ಕು ಬಸ್ಸು ಬರುವರೆಗೂ ಅ ಮನೆಯವರ ಇತಿಹಾಸವನ್ನೆಲ್ಲಾ ಬಗೆದು, ಹೊಸದೊಂದನ್ನು ಸಂಶೋದಿಸಿದ ಖುಷಿಯಲ್ಲಿ ಬೀಗುತ್ತಿದ್ದರು.ತೀರ ಇತ್ತಿಚೆಗೆಷ್ಟೆ ನಮ್ಮೂರಿಗೆ ಹೊಸ ಬಸ್ ಸ್ಟಾಂಡು ಸ್ಯಾಂಕ್ಸನ್ ಆಗಿ ಈ ರೀತಿಯ ಇತಿಹಾಸಕಾರರು ನಿರುದ್ಯೊಗಿಗಳಾದರು.ನಮ್ಮೂರ ಬಸ್ ಸ್ಟಾಂಡು ಬರೀ ಬಸ್ ಹಿಡಿಯಲು ಮಾತ್ರ ಉಪಯೋಗವಾಗಿದ್ದರೆ ಇದನ್ನು ಬರೆಯುವ ಮಾತೆ ಬರುತ್ತಿರಲಿಲ್ಲಾ! ಅದು ನರೇಗಲ್ಲಿಗೆ "ಕಾಲ್ಮೆಂಟ್ ಸಾಲಿ" ಕಲಿಯಲು ಹೋಗುವವರು, ಗದಗಿಗೆ ಕದ್ದು ಚೈನಿ ಹೊಡೆಯಲು ಹೋಗುವವರು, ಅಷ್ಟೆ ಯಾಕೆ ರೋಣಕ್ಕೆ ಹೋಗಿ " ಒಂದು ಕ್ವಾರ್ಟರ" ಹಾಕ್ಕೊಂಡೆ ವಸತಿ ಬಸ್ಸಿಗೆ ಬರುವವರ ಅವಿಭಾಜ್ಯ ತಾಣವಾಗಿತ್ತು.ಮೊದಲೆಲ್ಲಾ ಬಯಲಾಗಿದ್ದ ಬಸ್ ಸ್ಟಾಂಡು ಕಾಲ ಕಳೆದಂತೆಲ್ಲಾ "ದಿಲ್ ರೂಬಾ ಪಾನ್ ಶಾಪ್" ನಿಂದ ಹಿಡಿದು, ಮೂಂದೆ ಗೋಣೆಚೀಲ ಮರೆ ಮಾಚಿ ಒಳಗೆ ಚಿಕ್ಕ ಬಾಕಿರಿಸಿ, ಐದಾರು ಗ್ಲಾಸುಗಳೊಂದಿಗೆ ಬರ್ಜರಿ ಕಂಟ್ರಿ ಸಾರಾಯಿ ಮಾರುವ ಹುಸೇನಿಗೂ ಮತ್ತು ಹೊಸದಾಗಿ ಆರಂಬಿಸಿದ " ಬಸವೇಶ್ವರ ಮಿಲಿಟ್ರಿ ಖಾನಾವಳಿ"ಗೂ ವ್ಯಾಪಾರಸ್ಥಾನವಾಯಿತು.

ಹೊಸ ಬಸ್ಟ್ಯಾಂದು ಎಲ್ಲರ ಖುಶಿಗೆ ಕಾರಣವಾದರೂ ನಮ್ಮುರ ಪ್ರಗತಿಪರ ಯುವಕರು ಉರ್ಫ ಪಡ್ಡೆ :-)ಗಳಿಗೆ ಮಾತ್ರ ಭಯಂಕರ ಸಿಟ್ಟು ಬಂದಿತ್ತು.ಯಾಕೆಂದರೆ ಸಂವಿಧಾನದಲ್ಲೆ ಸಮಾನತೆಯ ಬಗ್ಗೆ ಪ್ರಸ್ತಾಪವಿದ್ದರೂ, ಲೀಂಗಭೇಧ ಮಾಡಬಾರದು ಎಂದು ದಿನವೂ ಜಾಹೀರಾತು ಬರುತ್ತಿದ್ದರೂ ಅದನ್ನು ಅರ್ಥ ಮಾಡಿಕೊಳ್ಳದ ಪಂಚಾಯತಿ ಸೂ... ಮಕ್ಕಳು " ಗಂಡಸರಿಗೆ" ಮತ್ತು " ಹೆಂಗಸರಿಗೆ" ಎಂದು ಬರೆಸಿದ ಎರಡೆರಡು ಖೋಲಿ ಮಾಡಿಸಿ ನಮ್ಮೂರಿನ ಸಮಾನತೆಯ ಹರಿಕಾರರಿಗೆ ಈ ಜನ್ಮದಲ್ಲೆ ಮರೆಯಲಾಗದ ಅನ್ಯಾಯ ಮಾಡಿದ್ದರು.ಇಷ್ಟಕ್ಕೆ ಸೋಲೋಪ್ಪಿಕೊಳ್ಳದ ವಾನರಸೇನೆ ಹೆಂಗಸರ ಕೋಣೆಗೆ ರಾತ್ರಿ ನುಗ್ಗಿ " ಸುಮಾ ಐ ಲವ್ ಯೂ" " ಭಾಗ್ಯ ಪ್ರೀತ್ಸೆ" "ಬಸು ಜೊತೆ ವಾಣಿ" ಎಂದು ಬರೆದು ಬಸ್ ಸ್ಟಾಂಡಿನ ಗೋಡೆಗಳಲ್ಲೇ ಪ್ರೇಮ ನೀವೆದನೆ ಮಾಡಿಕೊಂಡು, ಮೇಘಧೂತ ರಚಿಸಿದ ಕಾಳಿದಾಸನಿಗೂ ಹೊಳೆಯದ ಸಾದ್ಯತೆಗಳನ್ನು ಅನ್ವೇಷಿಸಿದ್ದರು. ಇನ್ನೂ ಕೆಲ ಚಿತ್ರ ರಸಿಕರು ರವಿಚಂದ್ರ, ಪ್ರೇಮಲೋಕ,ರಸಿಕ, ಮಲ್ಲ ಇತ್ಯಾದಿ ಚಿತ್ರಗಳ ಹೆಸರನ್ನು ಬರೆದು ತಮ್ಮ ಅಭಿಮಾನವನ್ನು ತೋರುತ್ತಿದ್ದರು.ಆದರೆ ಉಪೇಂದ್ರನ ಅಭಿಮಾನಿಗಳು ಮಾತ್ರ ಸ್ವಲ್ಪ ಡಿಫರೆಂಟು. ಅವರು ಉಪೇಂದ್ರನ ರೇಖಾಚಿತ್ರವನ್ನು ಗೋಡೆಯ ಮೇಲೆ ಬಿಡಿಸಿ ಅದರ ಮೇಲೆ "ಮಾಂತೇಶ" ಅಂತ ಕಲಾವಿದನ ಹೆಸರನು ಸಹ ಬರೆದು ತಾಯಿ ಕಲಾ ಸರಸ್ವತಿಗೂ ಮುಜುಗರವನ್ನುಂಟು ಮಾಡುತ್ತಿದ್ದರು.

ಪ್ರತಿ ಹೊಸವರ್ಷಕ್ಕೂ "Wish you happy new year 200... " ಅಂತ ವಿಶ್ ಮಾಡದೆ ಇದ್ದರೆ ನಮ್ಮೂರ ಕ್ರಿಯಾಶೀಲ ಸಂಘಗಳಾದ "ವೀವೆಕಾನಂದ ಯುವಕ ಸಂಘ" "ಫ್ರೆಂಡ್ಸ ಸ್ಪೋರ್ಟ್ಸ ಕ್ಲಬ್" " ಫೈವ ಸ್ಟಾರ ಕ್ರಿಕೆಟ್ ಕ್ಲಬ್" ಗಳಿಗೆ ಹೊಸವರ್ಷ ಬಂದಂಗೆ ಅನಿಸುತ್ತಿರಲಿಲ್ಲಾ. ಇನ್ನೂ ಗಂಡಸರ ವಿಭಾಗದ ಬಗ್ಗೆ ಹೇಳದಿರುವದೇ ವಾಸಿ . ಅಲ್ಲಿ ಇಡೀ ಜಾಗತಿಕ ವಿದ್ಯಮಾನಗಳನ್ನು ವಿಶ್ಲೇಷಿಸುವ ಪ್ರಕಾಂಡ ಪಂಡಿತರು, ಗಣೇಶ ಬೀಡಿ ಜಗ್ಗುತ್ತಾ ಹಗಲಿರುಳು ಹರಟೆ ಹೋಡೆಯುತ್ತಿದ್ದರು,ಮದ್ಯ ಮದ್ಯ ಊರಿನ ಆ ಮನೆಯ ಹುಡುಗಿ ಓಡಿ ಹೋದಳು, ಇವರ ಮನೆಯ ಹುಡುಗ ಫೇಲಾದ, ಗೌಡರ ಹಿರಿಸೊಸೆ ಹಿಂತವನೋಂದಿಗೆ ಹೀಗೀಗೆ! ಅಂತೆಲ್ಲಾ ಎಲ್ಲಾ ಮನೆಗಳ ವರದಿಯನ್ನು ಸಲ್ಲಿಸುತ್ತಾ ತಮ್ಮದೆ ಆದ ಒಂದು ವಿಕ್ಷಿಪ್ತ ಜಗತ್ತನ್ನು ಸೃಷ್ಟಿಸಿಕೊಂಡಿದ್ದರು..

ಬಸ್ ಸ್ಟಾಂಡಿನ ಎದುರಿನ ಕಂಪೌಂಡಿನ ಮೇಲೆ ಮಾತ್ರ ನರೇಗಲ್ಲಿನಲ್ಲಿನ ಎಕೈಕ ಟಾಕೀಸಿನಲ್ಲಿ ಪ್ರದರ್ಶನವಾಗುತ್ತಿರುವ ಚಿತ್ರಗಳ ಪೋಸ್ಟರನ್ನು ಅಂಟಿಸಿರುತ್ತಿದ್ದರು.ಕೆಲ ಹುಟ್ಟಾ ಕಲಾವಿದರು ನಕ್ಕ ನಾಯಕನ ಹಲ್ಲಿಗೆ ಕಪ್ಪು ಬಳಿಯುವದು, ನಾಯಕಿಯ ಕಣ್ಣಿಗೆ,ಮತ್ತಿತರ ಅಂಗಾಗಳಿಗೆ ತೂತು ಕೊರೆಯುವದೋ, ಇಲ್ಲವೋ ಅವಳಿಗೆ ಮೀಸೆ ಬರೆಯುವದನ್ನು ಮಾಡಿ ತಮ್ಮ ಕ್ರಿಯಾಶೀಲತೆಗೆ ಮಾದ್ಯಮದ ಹಂಗಿಲ್ಲಾ ಎಂದು ನಿರೂಪಿಸಿ ಧನ್ಯರಾಗುತ್ತಿದ್ದರು.ಹೊಸ ಚಿತ್ರದ ಬಗ್ಗೆ ಮಾಹಿತಿ ನೀಡಲು ಈ ಪೋಸ್ಟರ್ರೆ ಕಾರಣವಾಗಿತ್ತು, ಅಪರೂಪಕ್ಕೆ ಪ್ರದರ್ಶನವಾಗುವ "ದೇವರ" ಚಿತ್ರಗಳ ಪೋಸ್ಟರನ್ನು ಕದ್ದು ಕದ್ದು ನೋಡಿಯೂ "ಡಿಸೆಂಟ್" ಆಗಿ ಉಳಿಯುವ ಕೆಲ ಮನಸ್ಸಿನಲ್ಲೆ ಮಂಡಿಗೆ ತಿನ್ನುವ ಗುಂಪಿನವರೂ ಇರುತ್ತಿದ್ದರು..

ಇದಲ್ಲದೆ ನಮ್ಮೂರಿನ ಅನೇಕ ಪ್ರೇಮ ಕಹಾನಿಗಳಿಗೆ ಮುಕ್ತ ವೇದಿಕೆಯಾಗಿತ್ತು.ಪದೇ ಪದೇ ಹುಡುಗನೊಬ್ಬ ಹೆಂಗಸರ ಕೋಣೆಯ ಮುಂದೆ ಓಡಾಡತೊಡಗಿದರೆ ಸಾಕು ನಮಗೆಲ್ಲಾ ಹೊಸ ಪ್ರೇಮಕಥೆಯ ವಾಸನೆ ಬಡಿಯತೊಡಗುತ್ತಿತ್ತು.ಹೆಂಗಸರ ವಿಭಾಗಕ್ಕೆ ಮುಕ್ತ ಪರವಾನಿಗೆ ಇದ್ದ ಬಸವೇಶ್ವರ ಸ್ಕೂಲಿನ ಚಿಲ್ಟಾರಿ ಹುಡುಗರಿಗೆ ಆಗ ಭಾರಿ ಬೇಡಿಕೆ ಇತ್ತು, ಆ ಚಿಂಟುಗಳಿಗೆ ಚಾಕಲೇಟು, ಐಸ್ ಕ್ಯಾಂಡಿ ಕೊಡಿಸಿ " ಅಲ್ಲಿ ಕೊನೆಗೆ ಗುಲಾಬಿ ಚೂಡಿಯ ಅಕ್ಕ ಕೂತಿದ್ದಾಳಲ್ಲಾ, ಆ ಅಕ್ಕನ ಕೈಗೆ ಇದನ್ನು ಕೊಡು, ನಾ ಕೊಟ್ಟೆ ಅಂತ ಮಾತ್ರ ಹೇಳಬಾರದು. ನೀ ಜಾಣಮರಿ ಅಲ್ವಾ? " ಅಂತೆಲ್ಲಾ ಆ ಹುಡುಗರನ್ನು ಪುಸಲಾಯಿಸಿ ಅವರ ಕೈಯಲ್ಲಿ ಪ್ರೇಮಪತ್ರಗಳ ಬಟವಾಡೆಯಾಗುತ್ತಿತ್ತು. ಕೆಲವೊಮ್ಮೆ ಹುಡುಗಿಯರು ಪತ್ರಗಳನ್ನು ಇಸಿದುಕೊಳ್ಳಲು ನಿರಾಕರಿಸಿದಾಗ, ಪತ್ರ ಕೊಟ್ಟವನನ್ನು ಈ ಚಿಲ್ಟಾರಿಗಳು ಹುಡುಕುವದು ಮತ್ತು ಅದು ಇನ್ಯಾರ ಕೈಗೋ ಸಿಕ್ಕಿ ಯಡವಟ್ಟಾಗುವದು ಮಾಮೂಲಿನ ಸಂಗತಿಗಳಾಗಿದ್ದವು.

ಬೆಳಗ್ಗೆ ಮತ್ತು ಸಾಯಂಕಾಲ ನರೇಗಲ್ಲಿನ ಕಾಲೇಜು ಬಿಡುವ ಹೊತ್ತಿಗೆ ಇಡಿ ಊರಿನ ಗಂಡು ಸಂತಾನವೇ ಕಾಲೇಜು ಕನ್ಯೆಯರ ದರುಶನ ಭಾಗ್ಯಕಾಗಿ ಹಾತೊರೆದು ಬಸ್ ಸ್ಟ್ಯಾಂಡಿನಲ್ಲಿ ಠಳಾಯಿಸುತ್ತಿದ್ದರು ಮತ್ತು ವಿವಿಧ ಅಂಗ ಚೇಷ್ಟೆಗಳನ್ನು ಮಾಡಿ ಹುಡುಗಿಯರ ಗಮನ ಸೆಳೆಯಲು ಮತ್ತು ಅವರ ಕೈಯಲ್ಲಿ "ಹೀರೊ" ಅನ್ನಿಸಿಕೊಳ್ಳುವ ಎಲ್ಲ ಬಗೆಯ ಸರ್ಕಸ್ಸುಗಳನ್ನು ಮಾಡುತ್ತಿದ್ದರು. ಕೆಲ ಕಿಲಾಡಿ ಹುಡುಗಿಯರು ಇವರ ಕಡೆ ನೋಡಿ ಕಿಸಕ್ಕೆಂದು ನಕ್ಕು ಇವರ ಕಾರ್ಯಕ್ಕೆ ಕೈಲಾದ ಪ್ರೋತ್ಸಾಹ ನೀಡುತ್ತಿದ್ದರು ಮತ್ತು " ನಮ್ಮಂಗ ಹುಡುಗ್ಯಾರು ಸಹ ಬರಿ ಹುಡುಗ್ರ ಬಗ್ಗೆನೆ ಮಾತಾಡ್ತಾ ಇರ್ತಾರೆ" ಎಂಬ ನಂಬಿಕೆಯಲ್ಲಿ ಇಡಿ ಅಬ್ಬಿಗೇರಿಯ ಯುವ ಸಂತತಿ ಕಾಲಹರಣ ಮಾಡುತ್ತಿತ್ತು.ತಾವು ಕಾಲೇಜಿಗೆ ಹೋಗದಿದ್ದರೂ ಬಸ್ ಸ್ಟಾಂಡಿಗೆ ಬಂದು ತಮ್ಮ "ಲವ್ವರು"ಗಳನ್ನು ಕಣ್ತುಂಬಿಕೊಂಡು ಮನೆಗೆ ಹೋಗುತ್ತಿದ್ದರು.


ಊರಿಗೆ ಹೊಸದಾಗಿ ಬರುವವರು, ಜಾತ್ರೆ ಹಬ್ಬ ಹರಿದಿನಗಳಿಗೆ ಮಾತ್ರ ಬರುವ ಪಾರ್ಟ ಟೈಮ್ ಫಿಗರುಗಳು,ವರ್ಗವಾಗಿ ಬರುವ ಕನ್ನಡ ಸಾಲಿ ಮಾಸ್ತರು, ಮತ್ತು ಯಾವ ಹುಡುಗಿಗೆ ಯಾವ ಹುಡುಗ ಲೈನ್ ಹೊಡೆಯುತ್ತಾನೆ, ಯಾವ ಹುಡುಗಿ ಯಾರಿಗೆ ಹಾರಿದ್ದಾಳೆ ಇತ್ಯಾದಿ ಮಾಹಿತಿಗಳು ಬಸ್ ಸ್ಟ್ಯಾಂಡಿನ ಪಕ್ಕದ "ದಿಲ್ ರೂಬಾ ಪಾನ್ ಶಾಪ್" ನ ಬಸುನ ಬಳಿ ಸದಾ ಲಬ್ಯ.ಕೆಲ ಪ್ರೇಮ ಪತ್ರಗಳ ಮಾದರಿಯನ್ನು ಇಟ್ಟುಕೊಂಡು ತನ್ನ ಅಂಗಡಿಯ ಘನತೆಯನ್ನು ಹೆಚ್ಚಿಸಿಕೊಂಡಿದ್ದ ಮತ್ತು ಅನನುಭವಿಗಳಿಗೆ ದಾರಿ ತೋರುವವನಾಗಿದ್ದ."ಕುಚ್ ಕುಚ್ ಹೋತಾ ಹೈ" ಚಿತ್ರದಲ್ಲಿನ "ಫ್ರೆಂಡ್ ಶಿಪ್" ಬೆಲ್ಟನ್ನು ಅಬ್ಬಿಗೇರಿಗೆ ಪರಿಚಯಿಸಿದ ಕೀರ್ತಿ ಇವನಿಗೆ ಸಲ್ಲಬೇಕು ಮತ್ತು ಕಂಡ ಕಂಡ ಹುಡುಗಿಗೆ ಹುಡುಗರು ಆ ಬೆಲ್ಟನ್ನು ಕೊಟ್ಟು ಇಡೀ ಅಬ್ಬಿಗೇರಿಯ ಹುಡುಗಿಯರನ್ನು ಗೊಂದಲಕ್ಕೆ ತಳ್ಳುವದರಲ್ಲಿ ಪ್ರಮುಖ ಪಾತ್ರ ವಹಿಸಿದ ಕೀರ್ತಿಯೂ ಈ ಮಹಾಶಯನಿಗೆ ಸಲ್ಲಬೇಕು. ಕದ್ದು ಸ್ಮಾಲ್,ಕಿಂಗು ಹೊಡೆಯುವ ಲೋಕಲ್ ಸುದೀಪರಿಗೆ ಇವನ ಅಂಗಡಿಯೇ ಅಡ್ಡಾ ಆಗಿತ್ತು.

ಇದರ ಜೊತೆಗೆ ಬಸ್ ಸ್ಟ್ಯಾಂಡು ಎಂಬುದು ನಮ್ಮೂರ ಹಿರಿ ಕಿರಿ ಪುಂಡರ ಕದನ ಅಖಾಡವಾಗಿತ್ತು.ವಿಶೇಷವಾಗಿ ಈ "ಸ್ವಯಂಸೇವಕರು" ನಮ್ಮೂರ ವಿಧ್ಯಾರ್ಥಿನಿಯರ ಹಿತ ಕಾಯುವ ಸ್ವಯಂ ಘೋಷಿತ ಸಮಾಜ ಕಾರ್ಯ ಮಾಡುತ್ತಿದ್ದರು. ನಮ್ಮುರಿನ ಹುಡುಗಿಯರನ್ನು ಹಾರಿಸುವ ವಿಶೇಷ ಅಧಿಕಾರ ನಮ್ಮೂರ ಪಡ್ಡೆಗಳಿಗೆ ಮಾತ್ರ ಇತ್ತು.ಬೇರೆ ಊರವರೇನಾದರು ನಮ್ಮೂರ ಹುಡುಗಿಯರ ವಿಷಯಕ್ಕೆ ಬಂದರೆ ಇವರು ಹೋರಾಡಿ ನಮ್ಮೂರ ಹುಡುಗರ ಹಕ್ಕುಗಳನ್ನು ಕಾಯುತ್ತಿದ್ದರು.ಆದರೆ ನಾವು ಮಾತ್ರ ಈ ವಿಷಯದಲ್ಲಿ " ವಿಶ್ವ ಮಾನವ " ತತ್ವಕ್ಕೆ ಬದ್ದರಾಗಿದ್ದೆವು..


ಅಖಂಡ ಹತ್ತು ವರ್ಷಗಳ ಕಾಲ ಈ ಬಸ್ ಸ್ಟ್ಯಾಂಡಿನಲ್ಲಿ ನರೇಗಲ್ಲಿನ ಬಸ್ಸುಗಳನ್ನ(?) ಕಾದ ನನಗೆ ಇದು ನನ್ನ ಜೀವನದ ಒಂದು ಭಾಗವೇ ಆಗಿ ಹೋಗಿತ್ತು. ಈಗಲೂ ಅಬ್ಬಿಗೇರಿಗೆ ಹೋದರೆ " ದಿಲ್ ರೂಬಾ ಪಾನ್ ಶಾಪ್" ಗೆ ಭೇಟಿಯಾಗಿ, ಹರಟೆಯ ನೆಪದಲ್ಲಿ ನಾವೂ ಸಹಾ ಯಾವುದಕ್ಕು ಇರಲಿ ಎಂದು "ನಾಲ್ಕು ಕಾಳು" ಹಾಕಿಯೇ ಬರುತ್ತೇವೆ, ಅಂದಾಗಲೆ ನಮ್ಮ ಹತ್ತು ವರ್ಷಗಳ ಅನುಭವಕ್ಕೆ ಒಂದು ದಿವ್ಯ ಸಾರ್ಥಕ್ಯ.

Monday, June 18, 2007

ಮುಂಗಾರು ಮಳೆ ಮತ್ತು ನಿರರ್ಥಕ ಭಾನುವಾರ..ಪ್ರತಿ ಭಾನುವಾರದಂತೆ ಈ ಭಾನುವಾರವು ಹೊತ್ತೆರುವವರೆಗೂ ಹಾಸಿಗೆಯಲ್ಲಿ ಹೊರಳಾಡಿ ಪ್ರತಿಬಾರಿಯೂ ನಮ್ಮ ಹಿಂದಿನ " ಲೇಟಾಗಿ ಎದ್ದ" ಧಾಖಲೆಗಳನ್ನುಉತ್ತಮಪಡಿಸುತ್ತಾ ಸಾಗಿರುವ ನಂಗೆ, ರೂಮಿಗೆ ಹೊಸದಾಗಿ ಬಂದು ವಕ್ಕರಿಸಿರುವ ಅನಿವಾರ್ಯ ಮಿತ್ರ ರಾಜು ಗೊಳಸಂಗಿ ಅಲಿಯಾಸ್ ಫಿನಿಕ್ಸನ್ನು ಎಬ್ಬಿಸಿ, ಮಾಮೂಲಿನಂತೆ ಮೋಬೈಲಿನಲ್ಲಿ ಕಣ್ಣಾಡಿಸಿದಾಗ, ತನ್ನ ಕ್ರಿಕೆಟ್ಟ್ ತಾಲಿಮಿಗಾಗಿ ಬೇಗ ಎದ್ದು(ದೇವರಾಣೆಗೂ ಪರೀಕ್ಷೆಗೂ ಬೇಗ ಏಳದ ಸೂರ್ಯವಂಶಿ)ಕ್ರಿಕೆಟ್ಟು ಆಡಲು ಹೋಗಿದ್ದ ನಮ್ಮ ಮನೋಜನ ಮೇಸೆಜು ನೊಡಿದ ತಕ್ಷಣ ನಂಗೆ ಎನೋ ಘಾತ ಕಾದಿದೆ ಅನಿಸ್ತು. ಹೀಗಿತ್ತು ಅವನ ಮೇಸೆಜು "Lets go to mungaaru male, get tickets for me too, I ll come n join " ಎಂಬ ಹೊಸ ಠರಾವನ್ನು ಪಾಸು ಮಾಡಿ, ಮೊದಲೇ ಲೇಟಾಗಿ ಎದ್ದ ನಮಗೆ ಇನ್ನಷ್ಟು ಗೊಂದಲ ಮೂಡಿಸಿ ಧನ್ಯನಾದ. ಹಾಂ! ನಮ್ಮ ಮನೋಜ ಬಿ ಎಮ್ ಎಸ್ ನಲ್ಲಿ ನಡೆದ ’ಉತ್ಸವ’ ನ ಕನ್ನಡ ಚಿತ್ರವಿಮರ್ಶೆ ಸ್ಪರ್ದೆಯಲ್ಲಿ " ಮುಂಗಾರು ಮಳೆಯನ್ನು" ಹಿಗ್ಗಾ ಮುಗ್ಗಾ ವಿಮರ್ಶಿಸಿ ಪ್ರಥಮ ಸ್ಥಾನ ಪಡೆದ ಮೇಲೆಯಂತೂ ಆ ಚಿತ್ರದ ಮೇಲಿನ ಗೌರವ,ಭಕ್ತಿ ಇನ್ನೂ ಹೆಚ್ಚಾಗಿದೆ, ಆ ಪಾಪಿ ಮುಂಡೆದಕ್ಕೆ..

ವಾಚು ನೋಡಿದವನೇ ನಾನು ಫಿನಿಕ್ಸನ್ನು ಉದ್ದೆಶಿಸಿ " ಲೇ ನಂಗಂತೂ ರೆಡಿಯಾಗಲೂ ಹತ್ತು ನಿಮಿಷ ಸಾಕು,ಸೂ... ಮಗನ ಹುಡುಗ್ಯಾರ ತರಾ ತಾಸುಗಟ್ಲೆ ತೊಗೋಬ್ಯಾಡ, ಲಗೂ ನಡಿ ಮಗನ ಪಿಚ್ಚರಿಗೆ ಹೋಗುನು" ಅಂದೆ. ಮುಂಗಾರು ಮಳೆಯನ್ನು ನನ್ನೊಂದಿಗೆ ನೋಡಿ ತನ್ನೆಲ್ಲಾ ಸುಖ ದುಃಖಗಳನ್ನು ಆ ಚಿತ್ರದೊಂದಿಗೆ ಸಮೀಕರಿಸಿ, ಒಂದು ವಾರ ಕಾಲ ರಾತ್ರಿಯೆಲ್ಲಾ "ಬ್ಲೇಡಾಯಣ"ಕ್ಕೆ ಸಾಕಾಗುವಷ್ಟು ಸರಕು ಹೊಂದಿಸಲು ನಮ್ಮ ಫಿನಿಕ್ಸಿಗೆ ಸುವರ್ಣಾವಕಾಶವಾಯಿತು. ತಟಕ್ಕನೆ " ನೋಡ ಮಗನ ೧೦ ನ್ನುವಳಗ ರೆಡಿ ಆಕ್ಕೇನಿ" ಎಂದವನೆ ನಮ್ಮ ರಾಜೀವ ದಿಕ್ಷಿತರ ಭಾಷಣದ ಪ್ರೇರಣೆಯಿಂದ ಜಾಗೃತವಾದ ನಮ್ಮ ಸ್ವದೇಶ ಪ್ರೇಮಕ್ಕೆ ಕುರುಹಾಗಿರುವ "ಮಿಸ್ವಾಕ್" ಟೂತ್ ಪೇಸ್ಟನಿಂದ ಹಲ್ಲುಜ್ಜತೊಡಗಿದ.ಹಾಗೂ ಹೀಗೂ ಮಾಡಿ ರೆಡಿಯಾಗುವಷ್ಟರಲ್ಲಿ ನಾನು ಬಾತ್ ರೂಮಿನಿಂದ "ರೋಕ್ಕ ತಗೋಳ್ಲೆ ಫಿನಿಕ್ಸು" ಅಂದೆ, ಎಲ್ಲರ ಪ್ಯಾಂಟು ತಡಕಾಡಿ ಮೂರು ಜನಕಾಗುವಷ್ಟು ದುಡ್ದು ಹೋಂದಿಸುಷ್ಟರಲ್ಲಿ ಫಿನಿಕ್ಸು ಗುರ್ರೆನತೊಡಗಿತ್ತು " ಈ ಮಗಗ ಸಾವಿರ ಸರ್ತಿ ಹೇಳೆನಿ, ಜಾಸ್ತಿ ರೊಕ್ಕ ಇಟ್ಕೊಲೆ ಮಗನ ಅಂತ,ಮ್ಯಾಲಿಂದ ಮ್ಯಾಲೆ ಎ ಟಿ ಎಮ್ ಗೆ ಹೋಗಿ ಅವರಮ್ಮ ತರ್ತಾಳೇನು?" ಎಂದು ತನ್ನ ಶುಧ್ದ ಗಾವಟಿ ಭಾಷೆಯಲ್ಲಿ ಗೊಣಗತೊಡಗಿ ನನ್ನ ಮತ್ತು ನಾನು ಕೆಲಸ(?) ಮಾಡುವ ಕಂಪನಿಯ ಮರ್ಯಾದೆಯನ್ನು ಸಿನಿಮಾ ಟಿಕೇಟ್ಟಿಗಾಗಿ ಹರಾಜು ಹಾಕತೊಡಗಿದ . ಸೂಟ್ ಕೇಸಿನಿಂದ ಇಸ್ತ್ರಿ ಮಾಡಿದ ಬಟ್ಟೆ ತೆಗೆಯಲು ಹೋದ ನಂಗೆ " ಲೇ ಪ್ಯಾಲಿ, ನಿಂಗೆನರ ಹೆಣ್ಣ ನೊಡಾಕ ಹೋಂಟೆವಿ ಅನ್ಕೊಂಡಿಯನ? ಸುಮ್ನ ಇದ್ದಿದ್ದ ಹಾಕ್ಕೊಂಡ್ ಬಾರಲೇ" ಎಂದು ಎಚ್ಚರಿಸಿ ನನ್ನಲ್ಲಿನ ಸಾಫ್ಟವೇರ್ ಇಂಜಿನಿಯರ್ ಪ್ರಜ್ಞೆಗೆ ಅವಮಾನ ಮಾಡಿ ಅಂತು ಇಂತೂ ’ಸೂರಿ ದುನಿಯಾ’ದ ಸ್ಟೈಲಿನಲ್ಲಿ ತಯಾರಾಗಿ ಹೋರಟೆವು .( ಸ್ನಾನ, ಪೂಜೆಗಳೆಲ್ಲವನ್ನು ಬೆಳಗ್ಗೆ ಮಾಡಿದರೆ ಬ್ಯಾಚುಲರ ಜೀವನಕ್ಕೆ ಅವಮಾನ ಎಂದು ಭಾವಿಸಿರುವ ನಾವು ಅದರ ಯೋಚನೆಯನ್ನೂ ಸಹ ಮಾಡುವದಿಲ್ಲಾ, ನಮ್ಮದೆನಿದ್ದರೂ " ನೀರು ಬಚಾವೋ ಆಂದೋಲನ")

ನಮ್ಮ ಮೆಚ್ಚಿನ ಪೂರಿ ತಿನ್ನುವಾಗಲೆ ನಮ್ಮ ಮನೋಜನ ಕಾಲ್ ಬಂತು " ರೀ ನಾನು ಗಣೇಶ ಭವನದಲ್ಲೆದಿನಿ, ಬೇಗ ಬರ್ರಿ" ಎಂದ. " ಅಲ್ಲೆ ನಿಂತಿರೋ, ನಾವು ಬರ್ತೆವಿ " ಅಂತ ಭಿನ್ನವಿಸಿಕೊಂಡು ಬಸ್ಸೇರಿ ಅವನನ್ನು ಸೇರಿಕೋಂಡು, ಮೂರು ಜನರ ಸವಾರಿ ಉಮಾ ಥೆಟರಿನತ್ತ ಸಾಗತೊಡಗಿತು. ಬಸ್ಸಲ್ಲಿ ಟಿಕೇಟ್ಟು ಕೊಡದೆ ಚಿಲ್ಲರೆ ಹಿಂದಿರುಗಿಸಿದ ಕಂಡಕ್ಟರ್ ಮೇಲೆ ಗುರಾಯಿಸಿ ಫಿನಿಕ್ಸು ತನ್ನ ದೇಶಭಕ್ತಿಯನ್ನು ಖಾತ್ರಿ ಮಾಡಿಕೊಳ್ಳುವದರೊಂದಿಗೆ ಉಳಿದವರಿಗೂ ಅದರ ಸ್ಯಾಂಪಲ್ಲು ತೋರಿಸಿ ಸಮಾಧಾನದ ನಿಟ್ಟುಸಿರು ಬಿಟ್ಟ.ಟಾಕೀಸಿನ ಮುಂದೆ ಚಲಿಸುತ್ತಿರುವ ಬಸ್ಸಿನಿಂದ ಹಾರಿಕೊಂಡು ನಮ್ಮ ಪೂರ್ವಜರಿಗೆ, ನಮ್ಮ ಶಕ್ತಾನುಸಾರ ಮರ್ಯಾದೆ ಸಲ್ಲಿಸಿದೆವು (ತಮ್ಮ ಅವಗಾಹನೆಗಾಗಿ ’ಮಂಗನಿಂದ ಮಾನವ”).ಉತ್ತರ ಕರ್ನಾಟಕದ ನಮಗೆ ಇಂತಹ ಸರ್ಕಸ್ಸುಗಳೆಲ್ಲಾ ಮಾಮೂಲಿಯಾಗಿಬಿಟ್ಟಿರುತ್ತವೆ. ನಮ್ಮ ವಿದ್ಯೆಗೆ ನಾವೇ ಬೆನ್ನು ಚಪ್ಪರಿಸಿಕೊಂಡು ’ಉಮಾ’ಥೇಟರ್ ಹೋಕ್ಕೆವು.

ಕಡೆಗೂ ಮಾರ್ನಿಂಗ್ ಶೋ ದ ಸರಿಯಾದ ವೇಳೆಗೆ ಬಂದ ನಮ್ಮ ಸಮಯಪ್ರಜ್ಞೆಯನ್ನು ನಾವೇ ಕೊಂಡಾಡಿಕೋಂಡೆವು.ಮತ್ತೆ ಶುರುವಾಯ್ತು ಇನ್ನೊಂದು ಜಟಾಪಟಿ " ಸಂತೋಷರ, ಮೂರು ಬಾಲ್ಕನಿ ತಗೋರಿ" ಅಂದ ನಮ್ಮ ಮನೋಜ, ಅವನಿಗೋ ಪಾಪ, ಹುಡುಗಿಯರು ಬಾಲ್ಕನಿಯಲ್ಲಿ ಮಾತ್ರ ಇರುತ್ತಾರೆ ಎಂಬುದು ಅವನ ಹಳೆಯ ಅನುಭವಗಳಿಂದ ಖಾತ್ರಿಯಾಗಿತ್ತು.ತಕ್ಷಣ ಜಾಗ್ರತನಾದ ಫಿನಿಕ್ಸು " ಬಾಲ್ಕನ್ಯಾಗ ಕುಂತ ನೊಡಿದ್ರ ಐಶ್ವರ್ಯ ಬಂದು ಕುಣಿತಾಳೆನ? ಎಲ್ಲಿ ನೊಡಿದ್ರು ಅದ ಸ್ಕ್ರೀನು, ಕೆಳಗ ತಗೊಳೊನು, ರೊಕ್ಕಕ ಕಿಮ್ಮತ ಇಲ್ಲೇನು?" ಎಂದು ನಮ್ಮ ಮನೋಜನಿಗೆ ಸವಾಲೆಸೆದ. ಅಷ್ಟರಲ್ಲಿ ನನ್ನಲ್ಲಿನ ಸಾಫ್ಟವೇರ್ ಇಂಜಿನಿಯರ್ ಜಾಗ್ರತನಾಗಿ " ಇಲ್ಲಾ ಇಲ್ಲ! ಬಾಲ್ಕನಿಗೇ ಹೋಗೊದು ಯಾರಾದ್ರು ಫ್ರೆಂಡ್ಸು ನನ್ನ ಕೆಳಗ ಕೂಂತಿದ್ದು ನೋಡಿದ್ರ ನನ್ನ ’ಜಿಪುಣ ನನ ಮಗ’ ಅಂತ ಜೋಕ್ ಮಾಡ್ತಾರೆ" ಎಂದು ಅಲವತ್ತುಕೊಂಡೆ. ತನ್ನ ಬಣಕ್ಕೆ ಮತ್ತೊಂದು ಸೇರ್ಪಡೆಯಾಗಿದ್ದನ್ನು ಕಂಡು ಮನೋಜ್ ಹಿರಿ ಹಿರಿ ಹಿಗ್ಗಿದ. ಅಷ್ಟಕ್ಕೆ ಬಿಟ್ಟಾನೆಯೆ ಫಿನಿಕ್ಸು, ದುಡ್ಡಿನ ಬಗ್ಗೆ, ಮದ್ಯಮ ವರ್ಗದ ಬವಣೆ ಬಗ್ಗೆ ಮನಮುಟ್ಟುವಂತೆ ರಜನಿ ಸ್ಟೈಲಲ್ಲಿ ಡೈಲಾಗ್ ಬಿಟ್ಟು ನಮ್ಮಲ್ಲಿ ಅಪರಾಧಿ ಪ್ರಜ್ಞೆ ಮೂಡುವಂತೆ ಮಾಡಿ, ಕೊನೆಗೂ ಡ್ರೆಸ್ ಸರ್ಕಲ್ಲಿನಲ್ಲಿಯೇ ಕುಳಿತುಕೊಳ್ಳುವಂತೆ ಮಾಡಿ ವಿಜಯದ ನಗೆ ಬೀರಿದ. ಮನೋಜನ ಮುಖದಲ್ಲಿ ಮಾತ್ರ ನಿರಾಶೆಭರಿತ ಆಕ್ರೋಶ ಎದ್ದು ಕಾಣುತ್ತಿತ್ತು.

ಈ ಮೊದಲು ಹಲವಾರು ಭಾರಿ ನೊಡಿದ್ದರಿಂದಲೊ ಎನೋ ಮೊದಲಾರ್ದ ಬೋರ್ ಆಗತೊಡಗಿತು. ಮನೋಜನ ಭಾಷೆಯಲ್ಲಿ ಸ್ವಲ್ಪವು ಫೀಲ್ ಆಗಲಿಲ್ಲಾ.ಇಂಟರವೆಲ್ಲಿನಲ್ಲಿ ಕಂಪೌಂಡ ಹಾರಿ "2 by 3 " ಚಹಾ ಕುಡಿದು ಬಂದು, ಉಳಿದ ಭಾಗವನ್ನು ನೋಡತೋಡಗಿದೆವು.ಮೂವರೂ ನಮ್ಮ ನಮ್ಮ ಮಾಜಿ ಲವ್ವರುಗಳನ್ನು ಮನದಲ್ಲಿ ನೆನೆಸಿಕೊಂಡು ಫೀಲ್ ಆದದ್ದೆ ಆದದ್ದು. ಗಣೇಶನ ಪ್ರತಿ ಡೈಲಾಗು ನಮ್ಮ ಜೀವನದಲ್ಲಿ ನಡೆದದ್ದೆನೋ ಎಂಬಂತೆ ಭಾಸವಾಗತೊಡಗಿ, ಅವನ ಕಷ್ಟದಲ್ಲಿ ನಾವೂ ಭಾಗಿಯಾಗತೊಡಗಿದೆವು. ಅಂತು ಇಂತೂ ಯದ್ವಾ ತದ್ವಾ ಫೀಲ್ ಆಗಿ " ಕೊಟ್ಟ ರೊಕ್ಕಕಂತೂ ಮೋಸ ಇಲ್ಲಾ" ಅಂತ ನಮ್ಮನ್ನು ನಾವೇ ಸಮಾಧಾನಿಸಿಕೊಂಡು ಚಿತ್ರ ಕ್ಲೈಮಾಕ್ಸ್ ತಲುಪಿದಾಗ ನಾವು ನಮ್ ಫೀಲಿಂಗಿನ ತಾರಕಕ್ಕೆರಿದೆವು.ಗಣೇಶ " ಅವಳ ಹೆಸರು ಆ ಪುಣ್ಯಾತ್ಮನ ಹಣೇಲಿ ಬರೆದಿದೆ" ಅಂತ ವಿಲನ್ ಜಾಲಿಯನ್ನುದ್ದೇಶಿಸಿ ಹೇಳಿದ ಮಾತಿಗೆ ಮನೋಜ " ತೂ ಅವನವ್ವನ ನಮ್ ಡವ್ ಹೆಸರು ಯಾವ ನನ್ ಮಗನ್ನ್ ಹಣೆಲಿ ಬರೆದಿದೆಯೋ " ಅಂತ ಆವೇಶಭರಿತನಾಗಿ ಹೇಳಿದ ಮಾತಿಗೆ " ಇನ್ನೂ ಚಾನ್ಸಿದೆ ಮನೋಜಾ, ಟ್ರೈ ಮಾಡುವಿಯಂತೆ" ಅಂತ ನಾವಿಬ್ಬರು ಅವನನ್ನು ಸಂತೈಸಬೇಕಾಯ್ತು. ಅಂತು ಇಂತೂ ಒಬ್ಬರನ್ನೋಬ್ಬರು ಸಮಾಧಾನಿಸಿಕೊಂಡು ’ದೇವದಾಸ್’ ಸತ್ತಾಗ ನಾವು ಕಣ್ತುಂಬಿಕೊಂಡೆವು.ಚಿತ್ರ ಮುಗಿದಾಗ ’ಮುಂಗಾರು ಮಳೆ’ಯನ್ನು ನಾಲ್ಕನೇ ಬಾರಿಗೆ ನೋಡಿದ ಸಾಧಕರ ಲಿಸ್ಟಿಗೆ ಸೇರ್ಪಡೆಯಾದೆವು( ಎಲ್ಲಾ ಮನೋಜನ ಕೃಪೆ)" ಅನಿಸುತಿದೆ ಯಾಕೋ ಇಂದು" ಎಂದು ತಾರಕ ಸ್ವರದಲ್ಲಿ ಹಾಡುತ್ತಾ(?) ಎಲ್ಲರೂ ಹೊರಬಿದ್ದೆವು..

ಸುದೀಪ್ ನ "ಹುಚ್ಚ" ಚಿತ್ರ ನೋಡಿ ಭಗ್ನಪ್ರೇಮಿಯ ಕಲ್ಪನೆಯನ್ನು ಮನದಲ್ಲೇ ಮಾಡಿಕೊಂಡಿದ್ದ ನಾವು ಮತ್ತೋಮ್ಮೆ ಕುರುಚಲು ಗಡ್ಡ ಬಿಡುವ ಪ್ರತಿಜ್ಞೆ ಮಾಡಿ, " ಉಸಿರೆ ಉಸಿರೆ" ಎನ್ನುತ್ತಾ ಧಮ್ ಹೊಡೆಯುವ ಧೈರ್ಯವಿಲ್ಲದ ನಾವು ಚಹಾವನ್ನಾದರೂ ವಿಸ್ಕಿ ಎಂದುಕೊಂಡು ಗುಟುಕರಿಸದಿದ್ದರೆ ಇಡೀ "ಭಗ್ನಪ್ರೇಮಿ"ಗಳಿಗೆ ಅವಮಾನ ಮಾಡಿದಂತೆ ಎಂದು ’ಹಳ್ಳಿತಿಂಡಿ’ಗೆ ಚಹಾ ಕುಡಿಯಲು ಹೆಜ್ಜೆ ಹಾಕಿದೆವು..

Tuesday, June 5, 2007

ರಾಯರ ಮಠದ ಹುಡುಗಿಗೆ....


ಅವತ್ತು ರಾಯರ ಮಠದಲ್ಲಿ ಅಷ್ಟೊಂದು ತನ್ಮಯತೆಯಿಂದ ಕಣ್ಣು ಮುಚ್ಚಿ ನಮಿಸುತ್ತಿದ್ದ ನಿನ್ನ ಆರಾಧನಾ ಭಾವ ಬೇಡವೆಂದರೂ ನನ್ನ ಕಂಗಳಿಂದ, ನನ್ನ ಮನದಂಗಳದಿಂದ ದೂರವಾಗುತ್ತಿಲ್ಲಾ. ಅಷ್ಟು ತಾದ್ಯಾತ್ಮದಿಂದ ಪಾದದ ಮುಂದೊಂದು ಪಾದ ಇಟ್ಟು ಅದೆಷ್ಟು ಪ್ರದಕ್ಷಿಣೆ ಹಾಕಿದ್ಯೋ ನಂಗಂತು ಆ ರಾಯರಾಣೆಗೂ ನೆನಪಿಲ್ಲಾ.ಆದ್ರೆ ನೆನಪಿರೋದು ನಿನ್ನ ನೀಲಿ ಜೀನ್ಸಿನ ಮೇಲೆ ತೊಟ್ಟ ತಿಳಿಗುಲಾಬಿ ಬಣ್ಣದ ಕುರ್ತಾ ಮತ್ತು ಹಣೆಯ ಮದ್ಯದ ಕಂಡು ಕಾಣದಂತಿರುವ ನಿನ್ನ ಪುಟ್ಟ ಬಿಂದಿ.ನಿಂಗ್ಯಾರೆ ಹೇಳಿದ್ದು ನಂಗೆ ತಿಳಿಗುಲಾಬಿ ಅಂದ್ರೆ ಇಷ್ಟ ಎಂದು?. ನಿನ್ನ ನೋಡಿದ ತಕ್ಷಣ " ತಥ್ ಇವತ್ತೆ ಈ ಮಾಸಲು ಟೀ ಶರ್ಟು ಹಾಕ್ಕೋಂಡು ಮಠಕ್ಕೆ ಬರಬೆಕಿತ್ತಾ ನಾನು " ಎಂದು ಸಾವಿರ ಸರ್ತಿ ಹಳಿದುಕೊಂಡಿದ್ದಿನಿ.

ಸತ್ಯವಾಗ್ಲೂ ಹೆಳ್ತಿನಿ, ನಂಗೆ ಬುದ್ಧಿ ಬಂದಾಗಿನಿಂದ ದೇವಸ್ಥಾನಕ್ಕೆ, ಮಠಕ್ಕೆ ಅಂತ ಹೋದವನೇ ಅಲ್ಲಾ!.ಆಕಸ್ಮಾತ್ ಹೊದ್ರು ದೇವರಿಗೆ ಕೈ ಮುಗಿದದ್ದು ನೆನಪಿಲ್ಲಾ. ನಮ್ಮ ಮನೋಜ್ ಹೇಳಿಯೇ ಹೇಳ್ತಿದ್ದ " ರೀ ಗುರುವಾರ ರಾಘವೇಂದ್ರನ ಮಠಕ್ಕೆ ಹೋಗಬೇಕ್ರಿ, ಏನ್ ಹೇಳ್ಲಿ ನಿಮ್ಗ, ಕಂಡಾಪಟಿ ಮಸ್ತ್ ಹುಡುಗ್ಯಾರು ಬಂದಿರ್ತಾರ" ಅಂತ ಅತ್ಯಂತ ಉಮ್ಮೆದಿಯಿಂದ ಹೇಳಿದ್ದ.I swear ಇವತ್ತಿನವರೆಗೂ ಅದರ ಸತ್ಯಾಸತ್ಯತೆಯನ್ನು ಪರೀಕ್ಷಿಸಲು ಹೋಗಿರಲಿಲ್ಲಾ. ಇವತ್ತೂ ಸಹ ಅವನು ಒತ್ತಾಯ ಮಾಡಿದ ಅಂತ ಬಂದೆನೆ ಹೊರ್ತು, ಬರಲೇಬೇಕು ಅಂತಲ್ಲಾ.ಆದ್ರೆ ಈಗಲೆ ಹೇಳಿಬಿಡ್ತಿನಿ ಇನ್ನೂ ಮುಂದಿನ ಪ್ರತಿ ಗುರುವಾರಗಳಲ್ಲಿ ಮಠಕ್ಕೆ ನನ್ನ ಕಡ್ಡಾಯ ಹಾಜರಾತಿ ಇರುತ್ತೆ, ಅದು ಕೇವಲ ನಿನಗಾಗಿ, ನಿನ್ನ ಬರುವಿಕೆಗಾಗಿ..

ನೀನು ನನ್ನ ಕಿರುಗಣ್ಣಿನಲ್ಲೆ ನೋಡಿದ್ಯಾ?, ಗೊತ್ತಿಲ್ಲಾ! ಆದ್ರೆ ನೋಡಿದೆ ಅಂತ ಸುಳ್ಳೆ ಅಂದ್ಕೊಂಡು ಖುಶಿ ಪಡೊದ್ರಲ್ಲೂ ಇಷ್ಟು ಸುಖವಿರುತ್ತಾ?. ಏನು ಮಜಾ ಅಂತೀನಿ ಒಂದು ಮೂಲೆಯಲ್ಲಿ ನಿರ್ಭಾವುಕನಾಗಿ ಕೂತಿದ್ದ ನಾನು ಪ್ಯಾಲಿಯಂತೆ ನಿನ್ನ ಹಿಂದೆ ಸುತ್ತಿದ್ದೆ ಸುತ್ತಿದ್ದು.ನಿಂಗೆ ಮುಜುಗುರವಾಯ್ತಾ ಚಿನ್ನು?. ನೀನಿಟ್ಟ ಹೆಜ್ಜೆಯ ಮೇಲೆ ನಾನು ಸಹ ಜಾಗರೂಕತೆಯಿಂದ ಪಾದವೂರಿ ಪ್ರದಕ್ಷಿಣೆ ಹಾಕದೆ ಹೋದರೆ ಈ ಜನ್ಮದಲ್ಲೇನೊ ಕಳೆದುಕೊಂಡುಬಿಡ್ತಿನಿ ಅಂತ ಅನಿಸತೊಡಗಿತ್ತು ಕಣೆ. ಆ ಶಾಸ್ತ್ರಿಗಳು ಕೊಟ್ಟ ಮಂತ್ರದ ಅಕ್ಷತೆಕಾಳನ್ನು ತಲೆ ಮೇಲೆ ಹಾಕ್ಕೊಬೇಕು ಅನ್ನೊದು ತಿಳಿಯದ ಶುದ್ದಾತಿಶುಧ್ದ ಬೆಪ್ಪು ಕಣೆ ನಾನು. ನಿನ್ನ ತಲೆಯಿಂದ ಜಾರಿಬಿದ್ದ ಅ ಅಕ್ಷತೆ ಕಾಳುಗಳನ್ನು ಎಷ್ಟು ಕಷ್ಟ ಪಟ್ಟು ಹೆಕ್ಕಿಕೊಂಡೆನೋ ಗೊತ್ತಿಲ್ಲಾ!

ನೀನಿದ್ದಷ್ಟು ಹೊತ್ತು ನಂಗೆನೋ ಒಂಥರಾ ಸಮಾಧಾನ, ಮನತೃಪ್ತಿ. ಈ ಹಿಂದೆ ಎಷ್ಟು ಭಾರಿ ಬಂದರೂ ಸಿಗದ ಮನಶಾಂತಿ ಆ ಕ್ಷಣಕ್ಕೆ ಆಗತೊಡಗಿತು ಚಿನ್ನು. ನೀ ಮಠದಿಂದ ಹೊರಬಂದು ಹೊರಗಿದ್ದ ತುಳಸಿಗೆ ಹಣೆಯೊತ್ತಿ ನಮಿಸಿದಾಗ ನಾನೂ ತುಳಸಿ ವಿವಾಹದ ದಿನದಂದೆ ಹುಟ್ಟಿದ್ದು ಅಂತ ಕೂಗಿ ಕೂಗಿ ಹೇಳಬೇಕಿನಿಸ್ತು.ಇನ್ನೊಮ್ಮೆ ತಿರುಗಿದವಳೆ ಕಣ್ಮುಚ್ಚಿ ನಮಿಸಿ, ನಿನ್ನ ಪಿಂಕ್ ಪಿಂಕು ಕೈನಿಯ ಕಡೆಗೆ ಬರಿಪಾದದಲ್ಲಿ ಹೆಜ್ಜೆಯನ್ನುಡುತ್ತಿದ್ದರೆ ನನಗಿಲ್ಲಿ
ಯವುದೋ ಶಕ್ತಿ ನನ್ನಿಂದ ದೂರವಾದ ಭಾವ, ಎನೋ ಕಳೆದುಹೋಗುತ್ತಿರುವ ಅನುಭವ..

ರಾಯರ ಮಠದ ಹುಡುಗಿಯೇ ನಿನಗಾಗಿ,ಇನ್ನು ಮುಂದೆ ಬರುವ ಪ್ರತಿ ಗುರುವಾರ ಕಾಯುತ್ತೇನೆ, ಭಾರವಾದ ಎದೆಯಲ್ಲಿ,ಖಾಲಿ ಮನದಲ್ಲಿ. ನೀ ಮತ್ತೆ ಬಂದೆ ಬರುತ್ತಿಯಾ ಎಂಬ ತುಂಬು ನೀರಿಕ್ಷೆಯಲ್ಲಿ! ನೀ ಬರ್ತಿಯಾ ಅಲ್ವಾ?

Wednesday, May 23, 2007

ಲವ್ ಪ್ರವರನನ್ನ ರೂಮ ಮೇಟ ಮನೋಜ ರಾತ್ರಿ ಲೈಟ ಆರಿಸಿ ಹಾಸಿಗೆಗೆ ಒರಗಿ "ಸಂತೋಷರ ನಿದ್ದೆ ಬಂದಿಲ್ವಾ? ಎಂದು ಮಾತಿಗೆಳೆದರೆ ಮುಂದೇನೊ ಅನಾಹುತ ಕಾದಿದೆ ಅಂತಾನೇ ಅರ್ಥ,ಮೊನ್ನೆನೂ ಹಿಂಗೇ ಅಯ್ತು ಅವತ್ತೂ ಸಹ ಯಥಾಪ್ರಕಾರ ತನ್ನೆಲ್ಲಾ ಪ್ರಯೋಗಗಳಿಗೆ ಮೊದಲ ಬಲಿಪಶುವಾದ ನನ್ನನ್ನು ಹಾಸಿಗೆಯಲ್ಲಿ ಕೆಡವಿ, ನನ್ನ ಮೆದುಳು ಬಗೆಯುವ ಸತ್ಕಾರ್ಯವನ್ನು ಸಾಂಗೋಪಾಂಗವಾಗಿ ಶುರು ಮಾಡೇ ಬಿಟ್ಟ.
ಪೀಠಿಕೇಯಾಗಿ" ನಿಮ್ಮ 'True love' ಎಲ್ಲಿಗೆ ಬಂತು ಎಂದು ಪ್ರಶ್ನೆ ಎಸೆದು ಕುಂತ. ಅವನು ಯಾವಾಗ ರಾತ್ರಿಯ ಹೊತ್ತಿನಲ್ಲಿ 'Love' ವಿಷಯ ಆರಂಭಿಸಿದನೋ ನನ್ನ ಹಿಂದಿನ ಭೀಕರ ಅನುಭವಗಳಿಂದ ಇವತ್ತು ರಾತ್ರಿ ಜಾಗರಣೆ ಅಂತ ಖಾತ್ರಿಯಾಯ್ತು.ಪ್ರತ್ಯುತ್ತರವಾಗಿ ನಾನು "Work out ಆಗ್ಲಿಲ್ಲಾ "ಎಂದು ಚುಟುಕಾಗಿ ಹೇಳಿ ಇನ್ನು ನನ್ನ ಮಲಗಲು ಬಿಡು ಅಂತ ಸೂಕ್ಷ್ಮವಾಗಿ ಅರುಹಿದೆ.ಊಹುಂ! ಕೈಗೆ ಸಿಕ್ಕಿದ ಬಲಿಯನ್ನು ಹಂಗೆ ಬಿಟ್ಟಾನಯೇ ಧೀರ
,ಅದುವರೆಗೂ Love ಬಗ್ಗೆ ಮಾಡಿದ ತನ್ನೆಲ್ಲಾ ಕರಾಳ ಸಂಶೋಧನೆಗಳನ್ನು ಒಂದೋದಾಗಿ ಹೋರಗೆಡವತೋಡಗಿದ.ಆ ಬ್ರಹ್ಮಾಂಡ ಸಿದ್ದಾಂತಗಳನ್ನು ಸೋದಾಹರಣವಾಗಿ ವಿವರಿಸಿ, ಮದ್ಯೆ ತಿವಿದು ನನ್ನ ಎಚ್ಹರಿಸಿ ಇದುವರೆಗಿನ ತನ್ನೆಲ್ಲಾ ಹಳೆಯ ಸೇಡುಗಳನ್ನು ತೀರೀಸಿಕೊಂಡಾ.ಮಹಾಭಾರತದ ಶ್ರೀಕೃಷ್ಣ ಅರ್ಜುನನಿಗೆ ಗೀತೋಪದೇಶ ಮಾಡಿದಂತೆ, ನನಗೆ "ಲವ್ವೋಪದೇಶ" ಮಾಡಿದ.
" ನೋಡ್ರಿ ಸಂತೋಷರಾ. ನಿಮ್ದು ಸಾಮಾನ್ಯ ಲವ್ ಅಲ್ಲಾ , ಅದು ’ಟ್ರೂ ಲವ್’,ಹಂಗೆಲ್ಲಾ ಮದ್ಯಕ್ಕೆ ನಿಲ್ಲಿಸಬಾರದು, ಪ್ರಯತ್ನ ಪಡೂತ್ತಾ ಇರಬೇಕು" ಅಂದ ಲವ್ ಗುರು.ಅದ್ಕೆ ನಾನು "ಅಲ್ವೋ! ಲವ್ ನಲ್ಲೂ ಆರ್ಡಿನರಿ ಲವ್ ಮತ್ತು ಟ್ರೂ ಲವ ಇರ್ತಾವೇನೋ? ಹ್ಹ ಹ್ಹ ಹ.." ಎಂದು ನನ್ನ ಪಾಂಡಿತ್ಯ ತೋರಲೆತ್ನಿಸಿದೆ.
’ಹುಲುಮಾನವ’ ಎಂಬಂತೆ ನನ್ನೆಡೆಗೆ ನೋಡಿ ಟ್ರೂ ಲವ್ , ಆರ್ಡಿನರಿ ಲವ್ ,ಮತ್ತು ಪ್ಯೂರ ಲವ್ ಬಗ್ಗೆ ತನ್ನ ಪುರಾಣವನ್ನು ಆರಂಭಿಸಿ, ಹುಡುಗಿಯರಲ್ಲೂ ಸಹ ಪ್ರಕಾರಗಳುಂಟು ಅಂತಾ ಸಾರಿ ನನ್ನ ತಬ್ಬಿಬ್ಬು ಮಾಡಿದ.ಅವನ ಬಾಯಿಂದ ಹೊರಬಂದ ಅನುಭವದ ಮಾಣಿಕ್ಯಗಳಿವು ನೋಡಿ.
"ಅಲ್ರಿ ಟ್ರೂ ಲವ್ ಅಂದ್ರೆ ಡೀಪ್ ಆಗಿ ,ಸಿನ್ಸಿಯರ್ ಆಗಿ ಲವ್ ಮಾಡೊದು, ಆರ್ಡಿನರಿ ಲವ್ ಅಂದ್ರ ಸುಮ್ನ ಲೈನ್ ಹೊಡೆಯೋದು,ಪ್ಯೂರ್ ಲವ್ ಅಂದ್ರೆ
ಪೂರ್ತಿ ಪ್ಯೂರ್, ಇವನಿಲ್ಲಿ,ಅವಳಲ್ಲಿ. ಆದರೂ ಫುಲ್ ಲವ್.ಬೆಳದಿಂಗಳ ಬಾಲೆ, ಯಾರೇ ನೀನು ಚೆಲುವೆ ಸ್ಟೈಲು.ನೋಡ್ರಿ ಹುಡುಗಿಯರಲ್ಲೂ ವೆರೈಟಿ ಇರ್ತಾವು, ಮೊದಲನೆಯದಾಗಿ ನಿಜವಾಗ್ಲೂ ಚಂದ ಇರ್ತಾರ ಮತ್ತು ಫುಲ್ ಡೀಸೇಂಟ್ ಇರ್ತಾರ, ಹಿಂತವರು ಟ್ರೂ ಲವ್ ಮಾಡೊಕೆ ಯೋಗ್ಯ. ಇವರು ಲೈನು ಕೊಡೋದಿರಲಿ, ತಿರುಗಿ ಸಹ ನೋಡಲ್ಲ.ಆದ್ರೂ ಪ್ರಯತ್ನ ಬಿಡಬಾರದು.ಮೊದಲನೆ ಸಲ ಪ್ರಪೋಸ್ ಮಾಡಿದ್ರೆ ಖಂಡಿತ ’ನೋ’ ಅಂತಾರೆ,ಕೆಲವು ಸಲ ನಸೀಬು ಗಾಂಡು ಇದ್ರ ಮಂಗಳಾರುತಿನೂ ತೆಗಿತಾರ, ಅದಕ್ಕೆಲ್ಲಾ ನೀವು ತಲಿ ಕೆಡಿಸ್ಕೊಬಾರದು, ಅಲ್ಲದೆ " ನನ್ನ ಎನಂತ ಅನ್ಕೊಂಡೀರಿ? ನಾನು ಅಂತಾ ಹುಡುಗಿ ಅಲ್ಲಾ" ಅಂತೆಲ್ಲಾ ಡೈಲಾಗ್ ಹೊಡಿತಾರೆ, ಅದಕ್ಕೆಲ್ಲಾ ನಾವು ಕ್ಯಾರೆ ಅನ್ನಬಾರದು ಮತ್ತು ಪ್ರಯತ್ನ ನಿಲ್ಲಿಸಬಾರದು.ಯಾರೇನೆ ಅಂದ್ರು ಕೇರ್ ಮಾಡದೆ ಇರೊದು ಭಾಳ ಮುಖ್ಯ.’ಹುಚ್ಚ’ ಪಿಚ್ಚರ್ ನೋಡಿರಲ್ರಿ ಅ ಟೈಪು ಅಂದ ನಮ್ ಲವ್ ಗುರು.ಮತ್ತೆ ಮುಂದುವರೆಸಿ ಹೇಳಿದ " ಎರಡನೆ ವೆರೈಟಿ ಹುಡುಗಿಯರು ದೇವರಾಣೆಗೂ ಚಂದ ಇರೋದಿಲ್ಲಾ,ಅದ್ರೆ ನಾವು ಅವರನ್ನು ಚಂದ ಅದೀರಿ ಅಂತ ನಂಬಿಸಬೇಕು. ಇಂತವರು ಲೈನ್ ಹೊಡಿಯೋಕೆ ಪರಫೆಕ್ಟ ನೋಡ್ರಿ.ಇವರನ್ನು ಬೀಳಿಸೊಕೆ ಸ್ವಲ್ಪ ಟೈಮು ಮತ್ತು ಇನವೆಸ್ಟಮೆಂಟ್ ಬೇಕು. ಭಾಳ ಏನು ಬ್ಯಾಡ್ರಿ, ಸುಮ್ನ ಅವರ ಹಿಂದ ಬೀಳಬೆಕು, ನೋಡಿ ಸ್ಮೈಲ್ ಕೊಡಬೇಕು, ಸುಮ್ ಸುಮ್ನ ಮತಾಡಿಸಬೇಕು,ನಿಮ್ಮ ಡ್ರೆಸ್ಸು ಸುಪರ್ ಅಂತ ಪುಸಲಾಯಿಸಬೇಕು ಇತ್ಯಾದಿ ಇತ್ಯಾದಿ.ಹಾಂ! ಆಮೇಲೆ ಸ್ವಲ್ಪ ಹುಡುಗಿ ದಾರಿಗೆ ಬಂದಿದಾಳೆ ಅಂದಮೇಲೆ ಮೊದಲು ಕಾಫಿಗೆ, ನಂತರ ಪಿಚ್ಚರಿಗೆ,ಲಾಲಭಾಗಿಗೆ ಕರಿಬೇಕು .ಒಂದು ವೇಳೆ ನೀವು ಲವ್ವು ಗಿವ್ವು ಅಂತೇನಾದ್ರು ಪ್ರಪೋಸ್ ಮಾಡಿದ್ರೆ ನಿಮ್ಮ್ ಖೇಲ್ ಖತಂ.ಅದೊಂತರ ಮುಚ್ಯುವಲ್ ಅಂಡರ್ ಸ್ಟಾಂಡಿಂಗ್.ಈ ವೆರೈಟಿ ಹುಡುಗಿಯರು ಭಾರಿ ಚಾಲೂ ಇರ್ತಾರ, ನೀವು ನೋಡಿ ಖರ್ಚು ಮಾಡಬೇಕು ಮತ್ತು ಎಷ್ಟು ಸಾದ್ಯನೊ ಅಷ್ಟು "ದುಡುಕೊಂಡು"ಬಿಡಬೇಕು.ಇದಕ್ಕ ಹಂಗ ಸುಮ್ನ ಲವ್ (?) ಅಂತರ ಕರೀರಿ ಅಥವಾ ಡವ್ ಅಂತರ ಕರೀರಿ. ಕೊನೆಯ ವೆರೈಟಿ ಬಗ್ಗೆ ಹೇಳುದಾ ಬ್ಯಾಡ, ಯಾಕಂದ್ರ " ನೋ ಯುಸ್", ಬರೀ ಸ್ಚ್ರಾಪ್ ಫಿಗರ್ ಗಳು, ನಿಮಗ ಅಷ್ಟ ’ಬರಗಾಲ’ ಅಂದ್ರ ಇವನ್ನೂ ಟ್ರೈ ಮಾಡಿ ನಿಮ್ಮ ಕರ್ಮ" ಅಂತೆಲ್ಲಾ ರಾತ್ರಿ ಮೂರರವರೆಗೂ ಸಾದ್ಯಂತ ಶೊಷಿಸಿ " ಇನ್ನು ಹೊತ್ತಾತು ಮಲಗ್ರಿ, ನಾಳೆ ಮುಂದ ಹೇಳ್ತಿನಿ", ಅಂತೆಳಿ ’ನಿನಗಿದೆ ಗ್ರಹಚಾರ ನಾಳೆ” ಎಂಬಂತೆ ನೋಡಿ, ಎದ್ದು ಉಚ್ಚೆ ಹೋಯ್ದು ಮಲಗೇ ಬಿಟ್ಟ.
ನಾಳೆ ಎನು ಕಾದಿದೆಯೊ ಅಂತ ಹಾಸಿಗೆಯಲ್ಲಿ ಉರುಳಾಡಿದ್ದೆ ಬಂತು ನಿದ್ದೆಯಂತೂ ದೇವರಾಣೆಗೂ ಬರಲಿಲ್ಲಾ..

Tuesday, May 8, 2007

ಪ್ರತಿದಿನದ ನರಕ
ಸರಿಯಾಗಿ ಒಂದು ವಾರದ ಮೇಲಾಯ್ತು ಆಫೀಸಿಗೆ ಬಂದು ಮತ್ತು ಮಾನಿಟರಿನ ಮುಖ ನೋಡಿ, ಮೌಸ್ ಮೈದಡವಿ, ಕೀ ಬೋರ್ಡಿನ ಕೀಲಿ ಕುಟ್ಟಿ.ಇಲ್ಲಿನ ಬದುಕೆ ವಿಚಿತ್ರ, ಗೋಡೆಯ ಮೇಲಿನ ಕ್ಯಾಲೆಂಡರಿನ ದಿನಗಳು ಬದಲಾಗುತ್ತವೆಯೆ ವಿನಾಃ ಬದುಕಲ್ಲಾ! ಪ್ರತಿದಿನವು ಅದೇ ರಾಗ, ಅದೇ ಎಕತಾನತೆ, ಮತ್ತದೆ ಚಕ್ರ..
ನನ್ನ ಬೆಳಗು ಆರಂಭವಾಗುವದೇ ನನ್ನ ಆಜನ್ಮ ಶತ್ರು ಅಲಾರ್ಮ್ ಬಡಿದುಕೊಳ್ಳುವದರೊಂದಿಗೆ, ಆಗ್ಲೆ FM ನಲ್ಲಿ " ಸುಪ್ರಭಾತ ವಿಥ್ ರಚನಾ" ಅಂತ ಆಯಮ್ಮ ಬಡಿದುಕೊಳ್ಳುವದಕ್ಕೆ ಶುರು ಮಾಡಿರುತ್ತೆ.ಅವಳಿಗೆ ನನ್ನ ಸಂತಾಪಸೂಚಕ ನಿಟ್ಟುಸಿರುಗಳು.ಸ್ನಾನ,ಪೂಜೆ(?),ಮತ್ತೊಂದು ಅಂತ ಅನಿವಾರ್ಯ ಕರ್ಮಗಳನ್ನು ಮುಗಿಸುವಷ್ಟರಲ್ಲೆ ಗಂಟೆ ೭ ರ ಆಸುಪಾಸಿನಲ್ಲಿರುತ್ತೆ.ಕೈಗೆ ಸಿಕ್ಕಿದ( ಅಂದ್ರೆ ಅಪರೂಪಕ್ಕೆ ತೊಳೆದ ಎಂದರ್ಥ)ಪ್ಯಾಂಟು ಸಿಕ್ಕಿಸಿಕೊಂಡೂ ,ಅದ್ಕ್ಕೆ ಸರಿಯಾಗುವ ಅಂಗಿ ಸಿಕ್ಕಿಸಿಕೊಂಡು " ನೀ ಇನ್ ಶರ್ಟ ಮಾಡಿದ್ರೆ ಚಂದ ಕಾಣೀಸ್ತಿಯ" ಅಂತ ಯಾರೊ ನನ್ನ ಕಷ್ಟ ನೋಡಲಾಗದೆ ಹೇಳಿದ್ದನ್ನ ಮನಸ್ಸಿಗೆ ತಂದುಕೊಂಡು, ಅಂಗಿಯನ್ನು ಒಳ ತುರುಕುತ್ತೆನೆ( ಚಂದ ಕಾಣಿಸ್ತಿಯಾ ಮತ್ತು ಚಂದ ಇದ್ದಿಯಾ ಎರಡು ಒಂದೇ ಅಂತ ಊಹಿಸತಕ್ಕದ್ದು :-) ).ಆಗ ಸುರ್ಯೋದಯವನ್ನು ನೋಡಿದರೆ ಪಾಪ ಅಂತ ನಂಬಿರುವ ಸುರ್ಯವಂಶದ ಕುಡಿಯಾದ ನನ್ನ ರೂಮ್ ಮೇಟ್ ಮನೋಜ " ಪಾಪಿ ಇನ್ನೂ ಹೋಗಿಲ್ವಾ?" ಎಂಬಂತೆ ನೋಡಿ ಮುಸುಕೆಳೆದುಕೊಳ್ಳುತ್ತೆ ಪ್ರಾಣಿ. ನಾ ಹೇಳುವ ’ಬೈ’ಗೆ ಮುಸುಕಿನಿಂದಲೆ ’ಕಳಚಿಕೋ ಮಾರಾಯ’ ಎಂಬಂತೆ ’ಬೈ’ ಎಂದು "ಪೇಪರು ಒಳಗೆ ಎಸೀರೀ" ಅಂತ ಮನವಿ ಮಾಡ್ಕೊಳ್ಳುತ್ತೆ ಸೂರ್ಯವಂಶಿ.
ಏಳುತ್ತಾ, ಬಿಳುತ್ತಾ ಸೋಮಾರಿ ಬೆಂಗಳೂರು ಹೆಂಗಸರು ರಾತ್ರಿಯೇ ಹಾಕಿದ ರಂಗೋಲಿಗಳನ್ನು ದಾಟುತ್ತ,ಇನ್ನು ಹಾಳು ಮುಖದಲ್ಲೇ ಕಸ ಹೊಡೆಯುತ್ತಿರುವ ಆಂಟಿಯರನ್ನು ನೊಡುತ್ತ,ದಾರಿಯಲ್ಲಿ ಸಿಗುವ "ಸೊಪ್ಪು ಸೊಪ್ಪು" ಅನ್ನುವವನನ್ನು ಇದಿರುಗೊಳ್ಳುತ್ತ,ಪೇಪರಿನ ಹುಡುಗನೆಡೆಗೆ ಪರಿಚಯದ ನಗೆ ಬೀರುತ್ತಾ ಕಂಪನಿ ಬಸ್ ಸ್ಟಾಪಿನತ್ತ ದೌಡಾಯಿಸುತ್ತೆನೆ.ಅಲ್ಲಿ ಮತ್ತದೇ ಬಸ್ ಸ್ಟಾಪು, ಇನ್ನೂ ತೂಕಡಿಸುತ್ತಾ ನನಗಾಗಿ ಕಾದಿದೆಯೇನೋ ಎಂಬಂತೆ ಭಾಸವಾಗುತ್ತೆ. ಯಾವಾಗಲೂ ನನಗಿಂತ ಮುಂಚೆ ಬಂದಿರುವ ಇಬ್ಬರು ಅಂಟಿಯರನ್ನು ಸೇರಿಕೊಳ್ಳುತ್ತೆನೆ.ಆಗ ಅವಸರದಿಂದ ಬರುತ್ತಾರೆ ತಮ್ಮೆಡೆಗಿನ ನಿಗೂಡತೆಯನ್ನು,ಕೌತುಕವನ್ನು ದಿನದಿಂದ ದಿನಕ್ಕೆ ಹೆಚ್ಚಿಸುತ್ತಾ ಸಾಗಿರುವ ಹುಡುಗಿಯರು( ಅವಳಲ್ಲಿ ಒಬ್ಬಳನ್ನು ನಾನು ಕೆಲದಿನಗಳು True love ಮಾಡಿದ್ದೆ ಮತ್ತು ಇನ್ನು ಗಿಟ್ಟುವದಿಲ್ಲಾ :-)ಅಂತ ಖಚಿತವಾದ ಮೇಲೆಯೇ ಆ ಯತ್ನವನ್ನು ನಿಲ್ಲಿಸಿದ್ದೇನೆ(?)), ನಮ್ಮೊಂದಿಗೆ ಘನಗಂಭೀರ ಇನ್ನೊಬ್ಬ ಇರುತ್ತಾನೆ.ನಮ್ಮೆದುರು ಹಾದು ಹೋಗುವ ಬಸ್ಸುಗಳಲ್ಲಿ ನಮ್ಮಂತೆಯೆ ಬೇರೆ ನಾಮಧೇಯದ ಕಂಪನಿಗೆ ಮಣ್ಣು ಹೊರುತ್ತಿರುವ ಇನ್ನೊಂದಿಷ್ಟು "ಬಿಳಿಕಾಲರ್ ಕಾರ್ಮಿಕರು" ಹುಸಿ ಜಂಭದಿಂದ ಸಾಗುತ್ತಾರೆ. ನನ್ನ ವಾಚಿನ ಮುಳ್ಳು ಸರಿಯಾಗಿ ೭-೧೦ ನ್ನು ದಾಟುತ್ತಿದ್ದಂತೆ ಹಣೆಗೆ 'National' ಅಂತ ಬರೆಸಿಕೊಂಡ, ಇಕ್ಕೆಲಗಳಲ್ಲೂ ಮಾಸಿದ ಸಂತೂರ್ ಸೋಪಿನ ಜಾಹಿರಾತುಗಳನ್ನು ಅಂಟಿಸಿಕೊಂಡ ಸಂಪೂರ್ಣ ನೆರೆತ ಗಡ್ಡದ ಸಾಬಿಯ ಕಪ್ಪುಸುಂದರಿ ಬಸ್ಸು ಬಂದು ನಿಲ್ಲುತ್ತೆ, ಹುಡುಗಿಯರಿಬ್ಬರು ಹೋಗಿ ಯಾರಿಗೂ ಅವರ ದರ್ಶನಬಾಗ್ಯ ಲಭಿಸದಂತೆ ಮೊದಲ ಸೀಟ್ನಲ್ಲೆ ಹೋಗಿ ಕುಳಿತುಕೊಳ್ಳುತ್ತಾರೆ,ಆಂಟಿಯರ ಜಾಗ ಮಾತ್ರ ಬಸ್ಸಿನ ದ್ವಾರದ ಹತ್ತಿರದ ಸೀಟು,ದ್ವಾರಕ್ಕೆ ಅಭಿಮುಖವಾಗಿ ನಮ್ಮದೆ ಕಾಲೇಜಿನ ಪುಟ್ಟದೇಹದ ,ನೀಲಿ ಜೀನ್ಸಿನ ಬಿಹಾರಿ ಕುಳಿತಿರುತ್ತಾನೆ, ನಾನು ಮಾತ್ರ ಗಾಳಿ ತಾಗದ, ಒಬ್ಬನೆ ಕೂಡಬಹುದಾದ ಸೀಟಿಗಾಗಿ ಹುಡುಕಿ ಕುಳಿತುಕೊಳ್ಳುತ್ತೇನೆ. ಬಸ್ಸು ಆಶ್ರಮ ಸರ್ಕಲ್ಲಿನಲ್ಲಿ ತಿರುವಿ ಗಾಂಧಿಬಜಾರಿನ ಎದೆಯ ಮದ್ಯೆ ಹಾದು ಹೋಗುತ್ತಿದ್ದರೆ ಆಗಷ್ಟೆ ಕುಯ್ದ ಹೂಗಳ ದಂಡೆಗಳ ಘಮ ಮೂಗಿಗೆ ಅಡರುತ್ತೆ,Fab Mallನ ಮುಂದೆ ಕುಳಿತ ಕೆಂಪು ಟೀ ಶರ್ಟಿನ ಸೇಲ್ಸ ಹುಡುಗಿಯರ ಮೂಖದಲ್ಲಿ ಎಂದಿನ ಭವಿಷ್ಯದ ಚಿಂತೆಯ ಗೆರೆಗಳು, ಹಗಲೆಲ್ಲ ಕಂಡವರಿಂದ ಮೈತಡವಿಸಿಕೊಂಡ ಅಂಕಿತ ಪುಸ್ತಕ ಮಳಿಗೆಯಲ್ಲಿನ ಪುಸ್ತಕಗಳು ಬೆಚ್ಚಗೆ ಕುಳಿತಿರುತ್ತವೆ.ಮುಂದಿನ ಸ್ಟಾಪಿನಲ್ಲಿ ನಮ್ಮಂತವೆ ಹೊಸ ಮಿಕಗಳು ಬಸ್ಸೆರುತ್ತವೆ, ಆದ್ರೆ ಈ ಮಿಕಗಳದ್ದು ಸ್ವಲ್ಪ ಸದ್ದು ಜಾಸ್ತಿ.ಕೊನೆಗೆ ಹತ್ತುವ ಚೂಡಿದಾರದ ಆಂಟಿಗೆ ಮಾತ್ರ ಹಿಂದಿನ ಸೀಟೆ ಆಗಬೇಕು.
ಎಲ್ಲಾ ಮಿಕಗಳು ಹತ್ತಿದ ಮೇಲೆ ಬಸ್ಸು ತುಂಬಿದ ಬಸುರಿಯಂತೆ ಚಲಿಸಲಾರಂಭಿಸುತ್ತೆ,ಜಯನಗರದ ಉದ್ಯಾನ ಹಾಯುವಾಗ ಕಾಣುವದೆ ಒಂದು ಪ್ರತಿದಿನದ ವಿಚಿತ್ರ ಜಾತ್ರೆ.ವಿವಿಧ ಸೈಜಿನ ಹೊಟ್ಟೆಯ ಅಂಕಲ್ಲುಗಳು ಮತ್ತು ಡ್ರಮ್ಮಿನಾಕಾರದ ಆಂಟಿಗಳನ್ನು ನೋಡುವದೇ ಒಂದು ವಿಸ್ಮಯ.ಮಹಾತ್ಕಾರ್ಯವನ್ನು ಮಡುತ್ತಿರುವೆವೇನೊ ಎಂಬ ಗತ್ತಿನಲ್ಲಿ ಕೈಕಾಲುಗಳನ್ನು ವಿಚಿತ್ರವಾಗಿ ಆಡಿಸುತ್ತಾ , ಎದೆಯುಬ್ಬಿಸಿ ಸಾಗುತ್ತಿರುವದನ್ನು ನೋಡುವುದೇ ಒಂದು ಪರಮಾನಂದ.ಸೊಂಟದ ಮೇಲೆ ಬಿದ್ದ ನೆರಿಗೆ ನೋಡಿ ಹೌಹಾರಿ ಫಿಗರ್ ಮೆಂಟೈನ್ ಮಾಡಲು ತನ್ನ ಪೆಟ್ ನೊಂದಿಗೆ ಬಂದ ಹಾಟ್ ಹಾಟ್ ಹುಡುಗಿ, ಆಯುಷ್ಯದ ಪೂರ್ವಾರ್ಧವನ್ನು ತಿನ್ನುವದರಲ್ಲೆ ಕಳೆದು, ಉಳಿದಿದ್ದನ್ನು ತಿಂದಿದನ್ನು ಜೀರ್ಣಿಸಲು ಪರದಾಡುವ ರಿಟೈರ್ಡ ಆಫೀಸರ್,ನಿನ್ನೆ ಕೊಂಡ ರೀಬಾಕ್ ಶೂಗಳ ಗತ್ತಿನಲ್ಲಿ ಮೈಯಲ್ಲಿ ನೀರಿಳಿಯುತ್ತಿದ್ದರೂ ಗಮನಿಸದೆ ಹುರುಪಿನಲ್ಲಿ ಓಡುತ್ತಿರುವ ಹೊಸಬ,೪೫ರ ಕಿರಿಕಿಗಳನ್ನು ತಾಳಿಕೊಳ್ಳಲೋ ಎಂಬಂತೆ ಬಿರಬಿರನೆ ನಡೆಯುತ್ತಿರುವ ಮದ್ಯವಯಸ್ಕ ಆಂಟಿ,ಕೊನೆಗೆ ಮೈತುಂಬ ಸ್ವೆಟರ್ ಹೊದ್ದು, ತಲೆಗೆ ಸ್ಕಾರ್ಪ್ ಸುತ್ತಿದ ಹಣ್ಣು ಹಣ್ಣು ದಂಪತಿಗಳು ಜೀವನದ ಉಳಿದ ಹೆಜ್ಜೆಗಳನ್ನೆಣಿಸುತ್ತಿದ್ದಾರೆನೋ ಎಂಬಂತೆ ನಿಧಾನಕ್ಕೆ ಸಾಗುತ್ತಿದ್ದಾರೆ,ಅಜ್ಜಿಗೆ ಬೆನ್ನು ನೋವಂತೆ, ಅಜ್ಜಗೆ ಹಿಡಿದೊಕೊಂಡ ಮೊಣಕಾಲುಗಳ ಚಿಂತೆ.ಪಾರ್ಕಿನ ಇನ್ನೊಂದು ಮೂಲೆಯಲ್ಲಿ ಕ್ರಿಕೆಟ್ಟು, ಬ್ಯಾಟ್ಮಿಟನ ಆಡುವ ಪಡ್ಡೆಗಳ ಇನ್ನೊಂದು ಗುಂಪು, ಆಟವೂ ಆಯ್ತು, ಮತ್ತೊಂದು ಅಯ್ತು :-) ಅನ್ನೊದು ಇವರ ಲೆಕ್ಕ.ಮುಂದೆ ಹಾದು ಹೊಗುವವರ ಮೇಲೆ ಇವರ ಆಟದ ಮೇಲಿನ ಗಮನ ನಿರ್ಧರಿತವಾಗುತ್ತೆ.ಇನ್ನೊಂದು ಮೂಲೆಯಲ್ಲಿ "ಹೀ ಹೀ ಹೀ" ಎನ್ನುತ್ತ ಬಾರದ ನಗುವಿನಲ್ಲೂ ಹಲ್ಲು ಕಿರಿಯುತ್ತಾ, ಕೈ ಕಾಲು ಬಡಿಯುವ ಲಾಫಿಂಗ್ ಕ್ಲಬ್ ನ ಸದಸ್ಯರು.ಗೇಟಿನ ಹೊರಗೆ ಇವರ ಬರುವಿಕೆಗೆ ಕಾದು ಕುಳಿತ ಇವರ ಟೂ ವೀಲ್ಹರ್ ಗಳು ಮತ್ತು ವಿವಿಧ ಕಾರುಗಳು, ಜೊತೆಗೆ ಗೇಣು ಹೊಟ್ಟೆಗಾಗಿ ಬೆಳ್ಳಂಬೆಳಗ್ಗೆ ಗಾಡಿಯಲ್ಲಿ ತರಕಾರಿ,ಹಣ್ಣು, ಮಾರುವವರ ನೀರೀಕ್ಷೆಭರಿತ ಕಂಗಳು.ಪಾರ್ಕಿನೊಳಗಡೆ "ಹೊಟ್ಟೆ ಕರಗಿಸುವದರ" ಚಿಂತೆಯಾದರೆ, ಹೊರಗಿನವರದು "ಹೊಟ್ಟೆ ತುಂಬಿಸುವ" ಚಿಂತೆ.ಇದೇ ಅಲ್ಲವೇ ಬದುಕಿನ "Irony".
ಹಾಂ ಉದ್ಯಾನದ ತುದಿಯಲ್ಲೇ ನಿಂತಿರುತ್ತಾನೆ ಒಬ್ಬ ಸಾಬಿ, ಅವನ ಕೈಯಲ್ಲಿ ಮಾತ್ರ ಯಾತ್ರೀ ಹೊರಟು ನಿಂತವರ ಕೈಯಲ್ಲಿರುವಶ್ಟು ಚೀಲಗಳು ಮತ್ತು ಒಂದು ದೊಡ್ಡ ಊಟದ ಡಬ್ಬ, ಅಲ್ಲಿ ಸ್ಟಾಪ್ ಇದೆಯೋ ಅಥವಾ ನಮ್ಮ ಡ್ರೈವರನ ಸ್ವಜಾತಿಪ್ರೆಮವೋ ಅಂತ ಗೊತ್ತಿಲ್ಲ, ಬಸ್ಸಂತು ನಿಲ್ಲುತ್ತೆ. ನನ್ನ ಕಣ್ಣುಗಳು ಆಗ್ಲೆ ಎಳೆಯತೊಡಗುತ್ತವೆ, ಅದರೆ ಸಾಬಿ ಡ್ರೈವರು ಮಾತ್ರ ಹಾರ್ನ ಹೊಡೆಯುವದು ನಿಲ್ಲಿಸುವದಿಲ್ಲಾ, ಅಂತೂ ಇಂತೂ ಜೋಂಪು ಹತ್ತುವ ವೇಳೆಗೆ ಬಸ್ಸು ಇಲೆಕ್ಟ್ರಾನಿಕ್ಸ್ ಸಿಟಿಯಲ್ಲಿ ನಮ್ಮಂತವೆ ನೂರಾರು ಬಸ್ಸುಗಳಲ್ಲಿ ಒಂದಾಗಿಬಿಟ್ಟಿರುತ್ತೆ.
ಈಗ ಮತ್ತೆ ಬಸ್ಸಿನಲ್ಲಿ ಗಡಿಬಿಡಿ ಶುರು, ಮಲಗಿದ ಒಬ್ಬೊಬ್ಬರೇ ಎಚ್ಚರವಾಗತೊಡಗುತ್ತಾರೆ, ಕೆಲವರು ಕಣ್ಣು ತಿಕ್ಕಿದರೆ, ಇನ್ನೂ ಕೆಲವರು "ಆಗ್ಲೆ ಬಂತಾ ಆಫೀಸು?" ಎಂಬಂತೆ ಕಿಟಕಿಯೆಡೆಗೆ ಕಣ್ಣು ಹಾಯಿಸುತ್ತಾರ್.ಹುಡುಗಿಯರಿಗೆ ತಮ್ಮ ಪಾಡಿಗೆ ತಾವಿದ್ದ ಕೂದಲುಗಳನ್ನು ಎಡಗೈಯಿಂದ ಹಿಡಿದು ಬಲಗೈಯಿಂದ ಕ್ಲಿಪ್ಪೋ,ರಬ್ಬರ್ ಬ್ಯಾಂಡೋ ಸಿಕ್ಕಿಸುವ ಆತುರ.ಮತ್ತೆ ಐಡಿ ಕಾರ್ಡ ಹುಡುಕಿ ಕೊರಳಿಗೆ ನೇತು ಹಾಕಿಕೊಳ್ಳುವ ಕಿರಿಕಿರಿ ಬೇರೆ.ಆಫೀಸು ಬಂತು ಎನ್ನುವದಕ್ಕೆ ಪುರಾವೆ ಎಂಬಂತೆ ಹಾರ್ನುಗಳ ಸದ್ದು ತಾರಕಕ್ಕೆರುತ್ತದೆ, ಸೆಕ್ಯುರಿಟಿಗಳ " ಪೀ ಪೀ ಪೀ" ಸದ್ದು ಅದರಲ್ಲಿ ಲೀನವಾಗುತ್ತೆ.
ಕೆಟ್ಟಮನಸ್ಸಿನಿಂದ ಬಸ್ಸಿಳಿದ ನಾನು ಭಾರವಾದ ಒಂದೊಂದು ಹೆಜ್ಜೆಯನ್ನಿಕ್ಕಿ ನನ್ನೊಂತೆಯೇ ಇರುವ ನೂರಾರು,ಸಾವಿರಾರು Resourceಗಳ ಮದ್ಯೆ ಒಬ್ಬನಾಗುತ್ತೇನೆ. ನನ್ನ Identity ಹೆಸರಿನಿಂದ Extn No ಮತ್ತು Emp IDಗೆ ಬದಲಾಗುತ್ತೆ.ಯಂತ್ರದ ಮುಂದಿನ ಇನ್ನೊಂದು ಜೀವಂತ ಯಂತ್ರವಾಗಲು ನಾನು ಅಣಿಗೊಳ್ಳುತ್ತೇನೆ.ಎದೆಯ ಮೂಲೆಯಲ್ಲೋ ಏನೋ ಕಳೆದುಕೊಂಡಂತಹ ಭಾವ, ಮನದ ಮೂಲೆಯಲ್ಲಿ ಎಂತದೋ ನೋವಿನ ಸೆಳವು ಮಿಂಚಿ ಮರೆಯಾಗುತ್ತೆ... ಆಗ ನಾನು ನಾನಾಗಿರುವದಿಲ್ಲಾ!!!!!

Wednesday, April 25, 2007

ನೆನಪುಗಳ ಮಾತು ಮಧುರ!
ಈ ಮೊದಲು ಇದು ನೆನಪೆ ಆಗ್ತಿರಲಿಲ್ಲಾ, ಆದರೀಗ ಯಾಕೋ ಗೊತ್ತಿಲ್ಲಾ,ಇತ್ತೀಚೆಗೆ ಬರೀ ಅವಳದೇ ಧ್ಯಾನ..
ನಂಗೆ ಇನ್ನೂ ನಿನ್ನೆ ಮೊನ್ನೆ ನಡೆದ ಹಾಗೆ ಸ್ಪಷ್ಟವಾಗಿ ನೆನೆಪಿದೆ,ಬಹುಶಃ ನಾವಾಗ ೫ ನೇ ವರ್ಗದಲ್ಲಿರಬೇಕು. ಒಂದು ದಿನದ ಪ್ರವಾಸಕ್ಕೆ ಅಂತ ಹೊಗಿದ್ದ ನೆನಪು.ಬದಾಮಿ ಹತ್ತಿರದ ’ಮಹಾಕೂಟ’ ಕ್ಷೇತ್ರದ ಚಿಕ್ಕಹೊಂಡದಲ್ಲಿ ಕಾಲುಗಳನ್ನು ಚಾಚಿ ಮೇಲೆದ್ದು ಬಂದವಳ ಕಾಲುಗಳೆಲ್ಲಾ ಹಳದಿ ಹಳದಿ,ಬರೀ ಶ್ವೇತವಸ್ತ್ರಧಾರಿಣಿಯಾಗಿದ್ದ ( ಬಿಳಿ Uniform )ಅವಳ ಕಾಲಗೆಜ್ಜೆಯಿಂದ ಹಿಡಿದು ಅವಳ ಕಣ್ಣ ಬೆರಗು ಇನ್ನೂ ಹಸಿರಾಗಿ ನಿಂತಿದೆ. ಅವಳ ಸಂಭ್ರಮ ಮುಗಿಯಲೆ ಇಲ್ಲಾ! ಕಡಿಮೆ ಅಂದ್ರೂ ಐದಾರೂ ಬಾರಿಯಾದರು ಹೊಂಡಕ್ಕಿಳಿದು ಅರಿಶಿಣ ಬಣ್ಣದ ತನ್ನ ಪಾದಗಳನ್ನು ತೊರಿಸಿ ತೊರಿಸಿ ಸಂಭ್ರಮಿಸಿದ್ದಳಾಕೆ.ಯಾಕೊ ಗೊತ್ತಿಲ್ಲಾ!ಇದನ್ನು ಹೇಳದಿರಲಾಗಲಿಲ್ಲ.
ಈಗ ನನ್ನೊಂದಿಗಿರಿರುವದು ಅವಳ ಕಂಗಳ ಬೆರಗು, ಬೆಳ್ಳಿ ಕಾಲಗೆಜ್ಜೆ,ಅರಿಶಿಣ ಬಣ್ಣದ ಅವಳ ಮುದ್ದು ಪಾದಗಳ ಸ್ಪುಟವಾದ, ಅಳಿಸಲಾಗದ ಮಧುರ ನೆನಪುಗಳು ಮಾತ್ರ.ಬದುಕೇ ನಿನಗೆ ಎನೆಲ್ಲಾ ಲಂಚ ಕೊಟ್ಟರೆ ಮರಳಿ ಅವಳನ್ನು ಮತ್ತು ಅವಳೊಂದಿಗೆ ಕಳೆದ ದಿನಗಳನ್ನು ಮತ್ತು ಚಿಕ್ಕದಕ್ಕು ಆಶ್ಚರ್ಯ ಪಡಿತ್ತಿದ್ದ ಅವಳ ಮಗು ಮನಸ್ಸನ್ನು, ಅವಳ ಕಂಗಳ ಬೆರಗನ್ನು ಮರಳಿಸುವೆ?

Thursday, April 19, 2007

ಹೀಗೊಂದು ಕವನ!ಇದು ನಾನೂ ಸಹ ಸಾಹಿತ್ಯದ ಎಲ್ಲಾ ಪ್ರಾಕಾರಗಳಲ್ಲೂ ಕೈಯಾಡಿಸಬೇಕೆಂಬ ಚಪಲಕ್ಕೆ ಬಿದ್ದು ಬರೆದು,ಬರೆದದ್ದನ್ನೆ ’ಕವನ’ಎಂದುಕೊಂಡು ನಾನೇ ಬೆನ್ನು ಚಪ್ಪರಿಸಿಕೊಂಡದ್ದು.ಬ್ಲಾಗಿಗೆ ಭೇಟಿ ನೀಡಿದ ಕರ್ಮಕ್ಕಾಗಿ ಇದನ್ನೂ ಓದುವ ಅನಿವಾರ್ಯ ಕರ್ಮ ನಿಮಗೆ.ನಿಮಗಾಗಬಹುದಾದ ಬೌದ್ದಿಕ ಶೋಷಣೆಗೆ ನಾನು ಹೊಣೆಯಲ್ಲ! :-)
*******************************************************************

ನನ್ನ ಕವನವೆಂದರೆ,
ಸತ್ತ ಶವದ ಹಣೆಯ ಮೇಲಿನ ಸಿಂಧೂರದಂತೆ|
ಘೋರ ಸಮಾಧಿಯ ಮೇಲೆ ನೆಟ್ಟ ತುಳಸಿಯಂತೆ|
ಘಟಸರ್ಪದ ಹೆಡೆಯ ಮೇಲಣ ಮುಕುಟದ ಮಣಿಯಂತೆ|
ವಸುಂಧರೆಯ ಒಡಲಲಿ ಕುದಿವ ಲಾವರಸದಂತೆ|
ಅಘೋರ ಕತ್ತಲಲಿ ಒಡಮೂಡಿದ ಕೊಲ್ಮೀಂಚಿನಂತೆ|
ರುಧ್ರರುಧಿರ ಸ್ನಾನಗೈದ ಉಗ್ರದುರ್ಗಿಯ ಖಡ್ಗದಂತೆ|
ಶೀತಲ ಹಿಮಾಲಯದ ತುದಿಯಲಿ ಸಿಡಿವ ಜ್ವಾಲಾಮುಖಿಯಂತೆ|
ಹಾದಿ ತಪ್ಪಿದ ಸೂಳೆಯ ಕೊರಳ ದೇದಿಪ್ಯಮಾನ ಮಾಂಗಲ್ಯದಂತೆ|
ನನ್ನ ಕವನವೆಂದರೆ,
ತಾಯಹಾಲ ಕುಡಿವ ಹಸೂಗೂಸಿನಂತಲ್ಲಾ,
ಅದು ಹಾಲಾಹಲವನೇ ಕುಡಿದು ಜಯಿಸಿದ ವಿಷಕಂಠನಂತೆ|

*******************************************************************
ಪೂರ್ತಿ ಕವನ(?)ಓದಿದ್ದರೆ Congrats..ನಿಮ್ಮ ತಾಳ್ಮೆಗೆ ಜಯವಿರಲಿ.

Wednesday, April 18, 2007

ಲಹರಿಯಲ್ಲಿದ್ದಾಗ ಬರೆದದ್ದು...
ಇವುಗಳಿಗೆ ಪ್ರೇಮಪತ್ರಗಳಂತಿರೊ,ಹುಚ್ಹು ಬರಹಗಳಂತಿರೋ ನಿಮಗೆ ಬಿಟ್ಟಿದ್ದು.. ಈ ಬರಹಗಳಂತೂ ನಂಗೆ ತುಂಬ ಖುಶಿ ಕೊಟ್ಟಿವೆ,ಆ ಕ್ಷಣದ ಮಟ್ಟಿಗೆ ಅನಿವಾರ್ಯವಾದ Relief ಕೊಟ್ಟಿವೆ,ಆ ಮಟ್ಟಿಗೆ ನಾನು ಈ ಬರಹಗಳಿಗೆ ಚಿರಋಣಿ. ನಾನು 'ಭಯಂಕರ' ಲಹರಿಯಲ್ಲಿದ್ದಾಗ ಉಕ್ಕಿದ ಭಾವನೆಗಳಿವು, ಅವುಗಳನ್ನು ಅಕ್ಷರರೂಪಕ್ಕೆ ತರಲು ಯತ್ನಿಸಿದ್ದೇನೆ. ಓದಿ ನೋಡಿ..
******************************************************************
ಏನೇ ಆಗಲಿ, ಅವಳಿಗೆ ಸರಿಸಾಟೀ ಅವಳೇ.ಅವಳಿಗೆ ಹೋಲಿಕೆಯೇ ಇಲ್ಲಾ.. ಅವಳದು ಸ್ನಿಗ್ದ ಸೌಂದರ್ಯ,ಮುಗ್ದ ಚೆಲುವು..
ನಿಮಗೊತ್ತಾ! ಅವಳದು ಅಚ್ಚ ಹಾಲುಬಿಳುಪಿನ ವರ್ಣ, ನಸುಗುಲಾಬಿ ಬಣ್ಣದ ನುಣುಪು ಕೆನ್ನೆ,ಸುಳೀಗಾಳಿಗೆ ಜೀಕುವ ಆಗಿನ ಬಾಬ್ ಕಟ್ ಮಾಡಿಸಿದ ಕೂದಲುಗಳು,ಚಿಲಿಪಿಲಿಗುಟ್ಟುವ ಪಿಸುಮಾತಿನಷ್ಟು ಹಗುರವಾದ ಮಾತುಗಳು, ಮೌನಝರಿಯಂತಹ ನಗು,ತುಸು ಮಾಡ್ ಎನ್ನಬಹುದಾದಂತಹ ಅವಳ ಹಿತಮಿತ ವರ್ತನೆ,ಅವಳ ಉಚ್ಚಾರ ಶೈಲಿ, ತಿಂಡಿಪೊತತನದ ಕೆಟ್ಟ ಗುಣ, ತುಸು ಜಾಸ್ತಿನೆ ಇದ್ದ ಬಿಂಕ, ಚಿಕ್ಕದಕ್ಕು ಕಣ್ಣೀನಲ್ಲಿ ಸುಜಲ ಧಾರೆ.ಯಾಕೊ ಗೊತ್ತಿಲ್ಲಾ ಅವಳು ಹುಚ್ಚು ಹಿಡಿಸಿಬಿಟ್ಟದ್ದಳು.
ಅವಳಲ್ಲಿ ಎನೋ ಒಂದು ಸೆಳೆತವಿತ್ತು,ಬರಸೆಳೆದುಕೊಳ್ಳುವ ಉತ್ಸುಕತೆಯಿತ್ತು(?),ನಮ್ಮ ಸಣ್ಣತನಗಳನ್ನು ಮೀರಿದ ಔದಾರ್ಯತೆಯಿತ್ತು, ಸಹೋದರಿಯಲ್ಲಿರಬಹುದಾಗಿದ್ದ ಅಂತರ್ಯವಿತ್ತು, ಮಾತೃ ಮಮತೆಯಿತ್ತು, ಕೆಟ್ಟ ಕೂತುಹಲವಿತ್ತು, ವಯೋಸಹಜ ತುಂಟತನಗಳಿದ್ದವು, ಎಲ್ಲವು ನನ್ನದಾಗಬೇಕೆಂಬ ಮಹತ್ವಾಕಾಂಕ್ಷೆಯಿತ್ತು, ಮುಖ್ಯವಾಗಿ ಸೋಲನ್ನು ಗೌರವಿಸುವ ಹಿರಿತನವಿತ್ತು, ತುಸು ದುಬಾರಿಯಾದ ಹವ್ಯಾಸಗಳಿದ್ದವು. ನಂಗಿನ್ನೂ ನೆನಪಿದೆ ಅವಳು ಬರೀ ’ಪ್ರತಿಸ್ಪರ್ದಿ’ಯಾಗಿರಲಿಲ್ಲಾ, ಸಣ್ಣದಕ್ಕು ರಚ್ಚೆ ಹಿಡಿಯುವ ಮಗುವಾಗಿದ್ದಳು,ಸ್ಪರ್ಧೆಯ ಗುಟ್ಟು ಬಿಟ್ಟು ಕೊಡುವ ಪೆದ್ದಿಯಾಗಿದ್ದಳು.ನಮ್ಮುರಿನ ಶಿಷ್ಟಾಚಾರವನ್ನು ಮೀರಿ ನನ್ನನ್ನು ಮನೆಗೆ ಕರೆದೊಯ್ಯುವ ಆರೋಗ್ಯಕರ ಮನಸ್ಸಿನವಳಾಗಿದ್ದಳು. ಅವಳಲ್ಲಿನ ಕ್ಷುಲ್ಲಕತೆಯನ್ನು ಅವಳ ಔದಾರ್ಯ ಮೀರಿ ನಿಂತಿತ್ತು. ಅದಕ್ಕೆ ಅವಳು ನಂಗೆ ಇಷ್ಟ! ಅವಳು ಬರೀ ನೆನಪಲ್ಲಾ, ಅವಳು ನನ್ನ ಸ್ಪೂರ್ತಿ,ಪ್ರೇರಣಾ ಶಕ್ತಿ.
ನಂಗೆ ಅವಳು ಇಡಿ ಇಡಿಯಾಗಿ ಇಷ್ಟ!ಎಷ್ಟೆಂದರೆ ಈ ವಿಶ್ವದಷ್ಟು.. ಹೌದು, ನಾನವಳನ್ನು ಪ್ರೀತಿಸ್ತಿನಿ,ಮೋಹಿಸ್ತಿನಿ,ಧ್ಯಾನಿಸ್ತಿನಿ,ಆರಾಧಿಸ್ತಿನಿ.ಅವಳಿಲ್ಲದೆ ನಾನು ಇರೆನು,ನಂಗವಳು ಅನಿವಾರ್ಯ.
ನನ್ನ ಹುಂಬತನಗಳು,ಏಕಪಕ್ಷೀಯತೆ,ಸರ್ವಾಧಿಕಾರಿ ಧೋರಣೆ ಎಲ್ಲವನ್ನೂ ಮರೆಯುತ್ತೇನೆ.ಅವಳ ಸನ್ನಿಧಿಯಲ್ಲಿ ನಾನು ಧ್ಯಾನತಪ್ತ ಯೋಗಿಯಂತೆ! ಮೌನ ಋಷಿಯಂತೆ!
ಅವಳೆಂದೂ ಸಿಗಳು ಅಂತ ಗೊತ್ತಿದ್ದರೂ ಸಹ ಮತ್ತೆ ಮತ್ತೆ ಹುಡುಕುತ್ತೇನೆ, ಅವಳೀಗಾಗಿ ಅಲೆಯುತ್ತೇನೆ.ಮೊದಲೆ ನಿರಾಶೆ ಖಂಡಿತ ಅಂತ ಗೊತ್ತಿದ್ದರೂ ಸಿಗಲಿಲ್ಲವಲ್ಲಾ! ಅಂತಾ ಚಡಪಡಿಸುತ್ತೆನೆ, ಸುಮ್ಮನೆ ದುಃಖವನ್ನೆಳೆದುಕೊಂಡು ಕೊರಗುತ್ತೇನೆ.ಉಂಟಾಗುವ ಬಹುಶಃ ಯಶಸ್ಸೆ ಆಗಿರದ ’ಹುಸಿಯಶಸ್ಸಿಗೆ’ ಮನಸೊ ಇಚ್ಚೆ ನಲಿಯುತ್ತೆನೆ,ತಕ್ಷಣ ಮೌನವಾಗುತ್ತೆನೆ.ಮನಸ್ಸು ಮುದುಡಿಕೊಳ್ಳುತ್ತೆ,ಮೌನಮಾತಾಗುತ್ತೆ,ದಾರಿದೀಪವಾಗುತ್ತೆ.
ಇತಿ ಚಿರವಿರಹಿ,

ಒಂಚೂರು ನನ್ನ ಬಗ್ಗೆ,ನಾನು ಸಂತೋಷಕುಮಾರ ಪಾಟೀಲ ಅಂತ, ಬರೀ ಪಾಟೀಲ ಅಂದ್ರೂ ಸಾಕು. Engineering ಪದವಿ ಮುಗಿಸುವಷ್ಟರಲ್ಲಿ ಸುಸ್ತಾಗಿ ಹೋಯಿತು.ಕಲಿತದ್ದು(?) ಬಿ.ಎಂ.ಎಸ್ ತಾಂತ್ರಿಕ ವಿದ್ಯಾಲಯದಲ್ಲಿ.ಚಿಕ್ಕವನಿದ್ದಾಗ "ಭಾಳಾ ಶಾಣ್ಯಾ" ಎಂಬ ಆರೋಪಗಳಿದ್ದವು,ಅದರೆ ಈಗಂತೂ ಆರೋಪಮುಕ್ತ. ಹೊಟ್ಟೆಪಾಡಿಗಾಗಿ Software Engineer ಎಂಬ ಸುಂದರ ಹೆಸರಿನ ಚಾಕರಿಕೆ ಮಾಡಿಕೊಂಡಿದ್ದೀನಿ.ಬದುಕಲ್ಲಿ ದೊಡ್ಡ ಮಹತ್ವಾಕಾಂಕ್ಷೆಗಳಿಲ್ಲಾ, ಹೊಸ ಸಾದ್ಯತೆಗಳನ್ನು ಅನ್ವೇಷಿಸುವದು ಮತ್ತು ಹೊಸ riskಗಳನ್ನು chase ಮಾಡುವದು ನನ್ನ passion.
ನಾನು ತುಂಬಾ ಅಹಂಕಾರಿ ಎಂಬುದು ನನ್ನ ಬಗೆಗಿನ ಕಂಪ್ಲೈಂಟ, ಮತ್ತು ನಾನು ತುಂಬ ಸ್ವಾಭಿಮಾನಿ ಎಂಬುದು ನನ್ನ ಬಗೆಗಿನ ಕಾಂಪ್ಲಿಮೆಂಟು(ತುಂಬಾ confusing ಅಲ್ವಾ). ಓದುವದನ್ನು ಹೊರತುಪಡಿಸಿ ಬೇರೆ ಯಾವುದೇ ಹವ್ಯಾಸಗಳಿಲ್ಲ. ಭೈರಪ್ಪಾ ಅಂದ್ರೆ ಪಂಚಪ್ರಾಣ, ಬೆಳಗೆರೆಯ ಶೈಲಿ ಇಷ್ಟ. ಜಯಂತರು ಚಿಕ್ಕ ಸಂಗತಿಗಳನ್ನೂ ದಾಖಲಿಸುವ ಪರಿ ಇಷ್ಟ. ತೇಜಸ್ವೀಯವರ ಇಡೀ ಜಗತ್ತನ್ನು ಬೆರಗುಗಣ್ಣೀನಿಂದ ನೋಡುವ ಮಗು ಮನಸ್ಸು ಇಷ್ಟ,ಇಷ್ಟ.
ಕೊನೆಯದಾಗಿ, ಬರವಣಿಗೆ ಎಂಬುದು ನನ್ನ passion ಎಂಬುದು ನಿಜವಾದರೂ, ಅದು identityಗಾಗಿ ಮತ್ತು ಒಂದು ಚಿಕ್ಕ ಇಮೇಜಗಾಗಿನ ನನ್ನ ಅನಿವಾರ್ಯ ಚಡಪಡಿಕೆ ಎಂಬುದನ್ನು ಪ್ರಾಮಾಣಿಕವಾಗಿ ಒಪ್ಪಿಕೊಳ್ಳುತ್ತೇನೆ.ಸಾಫ್ಟವೇರ ಶರಧಿಯಲ್ಲಿ ಕಳೆದುಹೋಗುತ್ತಿರುವ ನನ್ನತನವನ್ನು ಹುಡುಕುವ ಅರಣ್ಯರೋಧನ,ಬರೀ Human Resource ಆಗೀ ಉಳಿಯಲು ಒಲ್ಲದ ಮನಸ್ಸು ಹೂಡುತ್ತಿರುವ ಹಟದ ಫಲವೇ ಈ ಬ್ಲಾಗು..
ಹಲ್ಲು ಉಜ್ಜಿದ್ದು,ಚಡ್ಡಿ ಹಾಕ್ಕೊಂಡಿದ್ದು,ಗೆಳೆಯರೊಂದಿಗೆ ಮಾತಾಡಿದ್ದು,ನಕ್ಕಿದ್ದು,ಅತ್ತಿದ್ದು,ಇತ್ಯಾದಿ ವೈಯಕ್ತಿಕ ವಿವರಗಳನ್ನು ಬರೆದು ಕಿರಿಕಿರಿ ಮಾಡುವದಿಲ್ಲಾ ಅಂತ promise ಮಾಡುತ್ತೆನೆ.ನಾ ಬರೆದಿದ್ದು ನಿಮಗೆ ಇಷ್ಟವಾದರೆ, ನಾಲ್ಕು ಸಾಲುಗಳನ್ನು ಕುಟ್ಟಿ ಉತ್ತರಿಸುವ ಮೂಲಕ ಬೆನ್ನು ತಟ್ಟಿ, ಕಷ್ಟ ಎನಿಸಿದರೆ ನನ್ನ ಕಿವಿ ಹಿಂಡಿ (ಹುಡುಗಿಯರಾದರೆ ಕೆನ್ನೆ ಗಿಂಡಿ :-)) ಗದರಿಸುವ ಅತ್ಮಿಯತೆಯಂತೂ ನಿಮಗಿದೆ.
ಆಗಾಗ ಬಂದು ಹೋಗುತ್ತಿರಿ....
ಇತಿ ನಿಮ್ಮ ಚಿರವಿರಹಿ,
ಸಂತೋಷಕುಮಾರ ಪಾಟೀಲ