Wednesday, April 25, 2007

ನೆನಪುಗಳ ಮಾತು ಮಧುರ!




ಈ ಮೊದಲು ಇದು ನೆನಪೆ ಆಗ್ತಿರಲಿಲ್ಲಾ, ಆದರೀಗ ಯಾಕೋ ಗೊತ್ತಿಲ್ಲಾ,ಇತ್ತೀಚೆಗೆ ಬರೀ ಅವಳದೇ ಧ್ಯಾನ..
ನಂಗೆ ಇನ್ನೂ ನಿನ್ನೆ ಮೊನ್ನೆ ನಡೆದ ಹಾಗೆ ಸ್ಪಷ್ಟವಾಗಿ ನೆನೆಪಿದೆ,ಬಹುಶಃ ನಾವಾಗ ೫ ನೇ ವರ್ಗದಲ್ಲಿರಬೇಕು. ಒಂದು ದಿನದ ಪ್ರವಾಸಕ್ಕೆ ಅಂತ ಹೊಗಿದ್ದ ನೆನಪು.ಬದಾಮಿ ಹತ್ತಿರದ ’ಮಹಾಕೂಟ’ ಕ್ಷೇತ್ರದ ಚಿಕ್ಕಹೊಂಡದಲ್ಲಿ ಕಾಲುಗಳನ್ನು ಚಾಚಿ ಮೇಲೆದ್ದು ಬಂದವಳ ಕಾಲುಗಳೆಲ್ಲಾ ಹಳದಿ ಹಳದಿ,ಬರೀ ಶ್ವೇತವಸ್ತ್ರಧಾರಿಣಿಯಾಗಿದ್ದ ( ಬಿಳಿ Uniform )ಅವಳ ಕಾಲಗೆಜ್ಜೆಯಿಂದ ಹಿಡಿದು ಅವಳ ಕಣ್ಣ ಬೆರಗು ಇನ್ನೂ ಹಸಿರಾಗಿ ನಿಂತಿದೆ. ಅವಳ ಸಂಭ್ರಮ ಮುಗಿಯಲೆ ಇಲ್ಲಾ! ಕಡಿಮೆ ಅಂದ್ರೂ ಐದಾರೂ ಬಾರಿಯಾದರು ಹೊಂಡಕ್ಕಿಳಿದು ಅರಿಶಿಣ ಬಣ್ಣದ ತನ್ನ ಪಾದಗಳನ್ನು ತೊರಿಸಿ ತೊರಿಸಿ ಸಂಭ್ರಮಿಸಿದ್ದಳಾಕೆ.ಯಾಕೊ ಗೊತ್ತಿಲ್ಲಾ!ಇದನ್ನು ಹೇಳದಿರಲಾಗಲಿಲ್ಲ.
ಈಗ ನನ್ನೊಂದಿಗಿರಿರುವದು ಅವಳ ಕಂಗಳ ಬೆರಗು, ಬೆಳ್ಳಿ ಕಾಲಗೆಜ್ಜೆ,ಅರಿಶಿಣ ಬಣ್ಣದ ಅವಳ ಮುದ್ದು ಪಾದಗಳ ಸ್ಪುಟವಾದ, ಅಳಿಸಲಾಗದ ಮಧುರ ನೆನಪುಗಳು ಮಾತ್ರ.ಬದುಕೇ ನಿನಗೆ ಎನೆಲ್ಲಾ ಲಂಚ ಕೊಟ್ಟರೆ ಮರಳಿ ಅವಳನ್ನು ಮತ್ತು ಅವಳೊಂದಿಗೆ ಕಳೆದ ದಿನಗಳನ್ನು ಮತ್ತು ಚಿಕ್ಕದಕ್ಕು ಆಶ್ಚರ್ಯ ಪಡಿತ್ತಿದ್ದ ಅವಳ ಮಗು ಮನಸ್ಸನ್ನು, ಅವಳ ಕಂಗಳ ಬೆರಗನ್ನು ಮರಳಿಸುವೆ?

Thursday, April 19, 2007

ಹೀಗೊಂದು ಕವನ!



ಇದು ನಾನೂ ಸಹ ಸಾಹಿತ್ಯದ ಎಲ್ಲಾ ಪ್ರಾಕಾರಗಳಲ್ಲೂ ಕೈಯಾಡಿಸಬೇಕೆಂಬ ಚಪಲಕ್ಕೆ ಬಿದ್ದು ಬರೆದು,ಬರೆದದ್ದನ್ನೆ ’ಕವನ’ಎಂದುಕೊಂಡು ನಾನೇ ಬೆನ್ನು ಚಪ್ಪರಿಸಿಕೊಂಡದ್ದು.ಬ್ಲಾಗಿಗೆ ಭೇಟಿ ನೀಡಿದ ಕರ್ಮಕ್ಕಾಗಿ ಇದನ್ನೂ ಓದುವ ಅನಿವಾರ್ಯ ಕರ್ಮ ನಿಮಗೆ.ನಿಮಗಾಗಬಹುದಾದ ಬೌದ್ದಿಕ ಶೋಷಣೆಗೆ ನಾನು ಹೊಣೆಯಲ್ಲ! :-)
*******************************************************************

ನನ್ನ ಕವನವೆಂದರೆ,
ಸತ್ತ ಶವದ ಹಣೆಯ ಮೇಲಿನ ಸಿಂಧೂರದಂತೆ|
ಘೋರ ಸಮಾಧಿಯ ಮೇಲೆ ನೆಟ್ಟ ತುಳಸಿಯಂತೆ|
ಘಟಸರ್ಪದ ಹೆಡೆಯ ಮೇಲಣ ಮುಕುಟದ ಮಣಿಯಂತೆ|
ವಸುಂಧರೆಯ ಒಡಲಲಿ ಕುದಿವ ಲಾವರಸದಂತೆ|
ಅಘೋರ ಕತ್ತಲಲಿ ಒಡಮೂಡಿದ ಕೊಲ್ಮೀಂಚಿನಂತೆ|
ರುಧ್ರರುಧಿರ ಸ್ನಾನಗೈದ ಉಗ್ರದುರ್ಗಿಯ ಖಡ್ಗದಂತೆ|
ಶೀತಲ ಹಿಮಾಲಯದ ತುದಿಯಲಿ ಸಿಡಿವ ಜ್ವಾಲಾಮುಖಿಯಂತೆ|
ಹಾದಿ ತಪ್ಪಿದ ಸೂಳೆಯ ಕೊರಳ ದೇದಿಪ್ಯಮಾನ ಮಾಂಗಲ್ಯದಂತೆ|
ನನ್ನ ಕವನವೆಂದರೆ,
ತಾಯಹಾಲ ಕುಡಿವ ಹಸೂಗೂಸಿನಂತಲ್ಲಾ,
ಅದು ಹಾಲಾಹಲವನೇ ಕುಡಿದು ಜಯಿಸಿದ ವಿಷಕಂಠನಂತೆ|

*******************************************************************
ಪೂರ್ತಿ ಕವನ(?)ಓದಿದ್ದರೆ Congrats..ನಿಮ್ಮ ತಾಳ್ಮೆಗೆ ಜಯವಿರಲಿ.

Wednesday, April 18, 2007

ಲಹರಿಯಲ್ಲಿದ್ದಾಗ ಬರೆದದ್ದು...




ಇವುಗಳಿಗೆ ಪ್ರೇಮಪತ್ರಗಳಂತಿರೊ,ಹುಚ್ಹು ಬರಹಗಳಂತಿರೋ ನಿಮಗೆ ಬಿಟ್ಟಿದ್ದು.. ಈ ಬರಹಗಳಂತೂ ನಂಗೆ ತುಂಬ ಖುಶಿ ಕೊಟ್ಟಿವೆ,ಆ ಕ್ಷಣದ ಮಟ್ಟಿಗೆ ಅನಿವಾರ್ಯವಾದ Relief ಕೊಟ್ಟಿವೆ,ಆ ಮಟ್ಟಿಗೆ ನಾನು ಈ ಬರಹಗಳಿಗೆ ಚಿರಋಣಿ. ನಾನು 'ಭಯಂಕರ' ಲಹರಿಯಲ್ಲಿದ್ದಾಗ ಉಕ್ಕಿದ ಭಾವನೆಗಳಿವು, ಅವುಗಳನ್ನು ಅಕ್ಷರರೂಪಕ್ಕೆ ತರಲು ಯತ್ನಿಸಿದ್ದೇನೆ. ಓದಿ ನೋಡಿ..
******************************************************************
ಏನೇ ಆಗಲಿ, ಅವಳಿಗೆ ಸರಿಸಾಟೀ ಅವಳೇ.ಅವಳಿಗೆ ಹೋಲಿಕೆಯೇ ಇಲ್ಲಾ.. ಅವಳದು ಸ್ನಿಗ್ದ ಸೌಂದರ್ಯ,ಮುಗ್ದ ಚೆಲುವು..
ನಿಮಗೊತ್ತಾ! ಅವಳದು ಅಚ್ಚ ಹಾಲುಬಿಳುಪಿನ ವರ್ಣ, ನಸುಗುಲಾಬಿ ಬಣ್ಣದ ನುಣುಪು ಕೆನ್ನೆ,ಸುಳೀಗಾಳಿಗೆ ಜೀಕುವ ಆಗಿನ ಬಾಬ್ ಕಟ್ ಮಾಡಿಸಿದ ಕೂದಲುಗಳು,ಚಿಲಿಪಿಲಿಗುಟ್ಟುವ ಪಿಸುಮಾತಿನಷ್ಟು ಹಗುರವಾದ ಮಾತುಗಳು, ಮೌನಝರಿಯಂತಹ ನಗು,ತುಸು ಮಾಡ್ ಎನ್ನಬಹುದಾದಂತಹ ಅವಳ ಹಿತಮಿತ ವರ್ತನೆ,ಅವಳ ಉಚ್ಚಾರ ಶೈಲಿ, ತಿಂಡಿಪೊತತನದ ಕೆಟ್ಟ ಗುಣ, ತುಸು ಜಾಸ್ತಿನೆ ಇದ್ದ ಬಿಂಕ, ಚಿಕ್ಕದಕ್ಕು ಕಣ್ಣೀನಲ್ಲಿ ಸುಜಲ ಧಾರೆ.ಯಾಕೊ ಗೊತ್ತಿಲ್ಲಾ ಅವಳು ಹುಚ್ಚು ಹಿಡಿಸಿಬಿಟ್ಟದ್ದಳು.
ಅವಳಲ್ಲಿ ಎನೋ ಒಂದು ಸೆಳೆತವಿತ್ತು,ಬರಸೆಳೆದುಕೊಳ್ಳುವ ಉತ್ಸುಕತೆಯಿತ್ತು(?),ನಮ್ಮ ಸಣ್ಣತನಗಳನ್ನು ಮೀರಿದ ಔದಾರ್ಯತೆಯಿತ್ತು, ಸಹೋದರಿಯಲ್ಲಿರಬಹುದಾಗಿದ್ದ ಅಂತರ್ಯವಿತ್ತು, ಮಾತೃ ಮಮತೆಯಿತ್ತು, ಕೆಟ್ಟ ಕೂತುಹಲವಿತ್ತು, ವಯೋಸಹಜ ತುಂಟತನಗಳಿದ್ದವು, ಎಲ್ಲವು ನನ್ನದಾಗಬೇಕೆಂಬ ಮಹತ್ವಾಕಾಂಕ್ಷೆಯಿತ್ತು, ಮುಖ್ಯವಾಗಿ ಸೋಲನ್ನು ಗೌರವಿಸುವ ಹಿರಿತನವಿತ್ತು, ತುಸು ದುಬಾರಿಯಾದ ಹವ್ಯಾಸಗಳಿದ್ದವು. ನಂಗಿನ್ನೂ ನೆನಪಿದೆ ಅವಳು ಬರೀ ’ಪ್ರತಿಸ್ಪರ್ದಿ’ಯಾಗಿರಲಿಲ್ಲಾ, ಸಣ್ಣದಕ್ಕು ರಚ್ಚೆ ಹಿಡಿಯುವ ಮಗುವಾಗಿದ್ದಳು,ಸ್ಪರ್ಧೆಯ ಗುಟ್ಟು ಬಿಟ್ಟು ಕೊಡುವ ಪೆದ್ದಿಯಾಗಿದ್ದಳು.ನಮ್ಮುರಿನ ಶಿಷ್ಟಾಚಾರವನ್ನು ಮೀರಿ ನನ್ನನ್ನು ಮನೆಗೆ ಕರೆದೊಯ್ಯುವ ಆರೋಗ್ಯಕರ ಮನಸ್ಸಿನವಳಾಗಿದ್ದಳು. ಅವಳಲ್ಲಿನ ಕ್ಷುಲ್ಲಕತೆಯನ್ನು ಅವಳ ಔದಾರ್ಯ ಮೀರಿ ನಿಂತಿತ್ತು. ಅದಕ್ಕೆ ಅವಳು ನಂಗೆ ಇಷ್ಟ! ಅವಳು ಬರೀ ನೆನಪಲ್ಲಾ, ಅವಳು ನನ್ನ ಸ್ಪೂರ್ತಿ,ಪ್ರೇರಣಾ ಶಕ್ತಿ.
ನಂಗೆ ಅವಳು ಇಡಿ ಇಡಿಯಾಗಿ ಇಷ್ಟ!ಎಷ್ಟೆಂದರೆ ಈ ವಿಶ್ವದಷ್ಟು.. ಹೌದು, ನಾನವಳನ್ನು ಪ್ರೀತಿಸ್ತಿನಿ,ಮೋಹಿಸ್ತಿನಿ,ಧ್ಯಾನಿಸ್ತಿನಿ,ಆರಾಧಿಸ್ತಿನಿ.ಅವಳಿಲ್ಲದೆ ನಾನು ಇರೆನು,ನಂಗವಳು ಅನಿವಾರ್ಯ.
ನನ್ನ ಹುಂಬತನಗಳು,ಏಕಪಕ್ಷೀಯತೆ,ಸರ್ವಾಧಿಕಾರಿ ಧೋರಣೆ ಎಲ್ಲವನ್ನೂ ಮರೆಯುತ್ತೇನೆ.ಅವಳ ಸನ್ನಿಧಿಯಲ್ಲಿ ನಾನು ಧ್ಯಾನತಪ್ತ ಯೋಗಿಯಂತೆ! ಮೌನ ಋಷಿಯಂತೆ!
ಅವಳೆಂದೂ ಸಿಗಳು ಅಂತ ಗೊತ್ತಿದ್ದರೂ ಸಹ ಮತ್ತೆ ಮತ್ತೆ ಹುಡುಕುತ್ತೇನೆ, ಅವಳೀಗಾಗಿ ಅಲೆಯುತ್ತೇನೆ.ಮೊದಲೆ ನಿರಾಶೆ ಖಂಡಿತ ಅಂತ ಗೊತ್ತಿದ್ದರೂ ಸಿಗಲಿಲ್ಲವಲ್ಲಾ! ಅಂತಾ ಚಡಪಡಿಸುತ್ತೆನೆ, ಸುಮ್ಮನೆ ದುಃಖವನ್ನೆಳೆದುಕೊಂಡು ಕೊರಗುತ್ತೇನೆ.ಉಂಟಾಗುವ ಬಹುಶಃ ಯಶಸ್ಸೆ ಆಗಿರದ ’ಹುಸಿಯಶಸ್ಸಿಗೆ’ ಮನಸೊ ಇಚ್ಚೆ ನಲಿಯುತ್ತೆನೆ,ತಕ್ಷಣ ಮೌನವಾಗುತ್ತೆನೆ.ಮನಸ್ಸು ಮುದುಡಿಕೊಳ್ಳುತ್ತೆ,ಮೌನಮಾತಾಗುತ್ತೆ,ದಾರಿದೀಪವಾಗುತ್ತೆ.
ಇತಿ ಚಿರವಿರಹಿ,

ಒಂಚೂರು ನನ್ನ ಬಗ್ಗೆ,



ನಾನು ಸಂತೋಷಕುಮಾರ ಪಾಟೀಲ ಅಂತ, ಬರೀ ಪಾಟೀಲ ಅಂದ್ರೂ ಸಾಕು. Engineering ಪದವಿ ಮುಗಿಸುವಷ್ಟರಲ್ಲಿ ಸುಸ್ತಾಗಿ ಹೋಯಿತು.ಕಲಿತದ್ದು(?) ಬಿ.ಎಂ.ಎಸ್ ತಾಂತ್ರಿಕ ವಿದ್ಯಾಲಯದಲ್ಲಿ.ಚಿಕ್ಕವನಿದ್ದಾಗ "ಭಾಳಾ ಶಾಣ್ಯಾ" ಎಂಬ ಆರೋಪಗಳಿದ್ದವು,ಅದರೆ ಈಗಂತೂ ಆರೋಪಮುಕ್ತ. ಹೊಟ್ಟೆಪಾಡಿಗಾಗಿ Software Engineer ಎಂಬ ಸುಂದರ ಹೆಸರಿನ ಚಾಕರಿಕೆ ಮಾಡಿಕೊಂಡಿದ್ದೀನಿ.ಬದುಕಲ್ಲಿ ದೊಡ್ಡ ಮಹತ್ವಾಕಾಂಕ್ಷೆಗಳಿಲ್ಲಾ, ಹೊಸ ಸಾದ್ಯತೆಗಳನ್ನು ಅನ್ವೇಷಿಸುವದು ಮತ್ತು ಹೊಸ riskಗಳನ್ನು chase ಮಾಡುವದು ನನ್ನ passion.
ನಾನು ತುಂಬಾ ಅಹಂಕಾರಿ ಎಂಬುದು ನನ್ನ ಬಗೆಗಿನ ಕಂಪ್ಲೈಂಟ, ಮತ್ತು ನಾನು ತುಂಬ ಸ್ವಾಭಿಮಾನಿ ಎಂಬುದು ನನ್ನ ಬಗೆಗಿನ ಕಾಂಪ್ಲಿಮೆಂಟು(ತುಂಬಾ confusing ಅಲ್ವಾ). ಓದುವದನ್ನು ಹೊರತುಪಡಿಸಿ ಬೇರೆ ಯಾವುದೇ ಹವ್ಯಾಸಗಳಿಲ್ಲ. ಭೈರಪ್ಪಾ ಅಂದ್ರೆ ಪಂಚಪ್ರಾಣ, ಬೆಳಗೆರೆಯ ಶೈಲಿ ಇಷ್ಟ. ಜಯಂತರು ಚಿಕ್ಕ ಸಂಗತಿಗಳನ್ನೂ ದಾಖಲಿಸುವ ಪರಿ ಇಷ್ಟ. ತೇಜಸ್ವೀಯವರ ಇಡೀ ಜಗತ್ತನ್ನು ಬೆರಗುಗಣ್ಣೀನಿಂದ ನೋಡುವ ಮಗು ಮನಸ್ಸು ಇಷ್ಟ,ಇಷ್ಟ.
ಕೊನೆಯದಾಗಿ, ಬರವಣಿಗೆ ಎಂಬುದು ನನ್ನ passion ಎಂಬುದು ನಿಜವಾದರೂ, ಅದು identityಗಾಗಿ ಮತ್ತು ಒಂದು ಚಿಕ್ಕ ಇಮೇಜಗಾಗಿನ ನನ್ನ ಅನಿವಾರ್ಯ ಚಡಪಡಿಕೆ ಎಂಬುದನ್ನು ಪ್ರಾಮಾಣಿಕವಾಗಿ ಒಪ್ಪಿಕೊಳ್ಳುತ್ತೇನೆ.ಸಾಫ್ಟವೇರ ಶರಧಿಯಲ್ಲಿ ಕಳೆದುಹೋಗುತ್ತಿರುವ ನನ್ನತನವನ್ನು ಹುಡುಕುವ ಅರಣ್ಯರೋಧನ,ಬರೀ Human Resource ಆಗೀ ಉಳಿಯಲು ಒಲ್ಲದ ಮನಸ್ಸು ಹೂಡುತ್ತಿರುವ ಹಟದ ಫಲವೇ ಈ ಬ್ಲಾಗು..
ಹಲ್ಲು ಉಜ್ಜಿದ್ದು,ಚಡ್ಡಿ ಹಾಕ್ಕೊಂಡಿದ್ದು,ಗೆಳೆಯರೊಂದಿಗೆ ಮಾತಾಡಿದ್ದು,ನಕ್ಕಿದ್ದು,ಅತ್ತಿದ್ದು,ಇತ್ಯಾದಿ ವೈಯಕ್ತಿಕ ವಿವರಗಳನ್ನು ಬರೆದು ಕಿರಿಕಿರಿ ಮಾಡುವದಿಲ್ಲಾ ಅಂತ promise ಮಾಡುತ್ತೆನೆ.ನಾ ಬರೆದಿದ್ದು ನಿಮಗೆ ಇಷ್ಟವಾದರೆ, ನಾಲ್ಕು ಸಾಲುಗಳನ್ನು ಕುಟ್ಟಿ ಉತ್ತರಿಸುವ ಮೂಲಕ ಬೆನ್ನು ತಟ್ಟಿ, ಕಷ್ಟ ಎನಿಸಿದರೆ ನನ್ನ ಕಿವಿ ಹಿಂಡಿ (ಹುಡುಗಿಯರಾದರೆ ಕೆನ್ನೆ ಗಿಂಡಿ :-)) ಗದರಿಸುವ ಅತ್ಮಿಯತೆಯಂತೂ ನಿಮಗಿದೆ.
ಆಗಾಗ ಬಂದು ಹೋಗುತ್ತಿರಿ....
ಇತಿ ನಿಮ್ಮ ಚಿರವಿರಹಿ,
ಸಂತೋಷಕುಮಾರ ಪಾಟೀಲ