Tuesday, April 29, 2008

ವರ್ಷದ ಹೊಸ್ತಿಲಿನಲ್ಲಿ..

ಹೆಚ್ಚು ಕಮ್ಮಿ ಒಂದು ವರ್ಷ ಆಯ್ತು ಈ ಬ್ಲಾಗು ಶುರು ಮಾಡಿ, ತೀರಾ ಸರಿಯಾಗಿ ವಾರ, ತಿಥಿ, ನಕ್ಷತ್ರ ನೆನಪಿಲ್ಲಾ. ಇದೇನು ಘನ ಸಾಧನೆಯಲ್ಲ ಎಂಬ ಅರಿವಿದ್ದರೂ; ಎಲ್ಲಾ ಕುರಿಗಳಂತೆ ನಂಗೂ ಬ್ಯಾ ಅನ್ನುವ ಚಪಲ. ಮೊದಮೊದಲು ನಾನೊಬ್ಬ ಬ್ಲಾಗಿಗ ಮತ್ತು ನನ್ನ ಬರಹಗಳಿಗೋಸ್ಕರ ಅನೇಕರು ಕಾದಿರುತ್ತಾರೆ, ನಾನೋಬ್ಬ ಅನಾಹುತ ಬರಹಗಾರ ಎಂಬ ಭ್ರಮೆಯಲ್ಲಿ ಹುಡುಕಾಡಿ, ಹುಡಿಕಾಡಿ ಹೊಸ ಬರಹ ಸೇರಿಸುತ್ತಿದ್ದೆ. ನನ್ನ ಈ ಪಡಿಪಾಟಲನ್ನು ನೋಡಿ ಮಿತ್ರ ಫಿನಿಕ್ಸು ’ನೀನೊಬ್ಬ ಟೈಟಲ್ ಬರಹಗಾರ, ಅಸಲಿಗೆ ನಿನ್ನಲ್ಲಿ ಸರಕೆ ಇಲ್ಲಾ,ಹೆಡ್ಡಿಂಗ್ ಹುಡುಕಿ ಎನನ್ನೋ ತುರುಕುವ ಸಾಹಸ ಬೇಡ’ ಎಂದೆಲ್ಲಾ ಬೈದಾಡಿದ್ದ.ಆದರೆ ತಾನು ಮಾತ್ರ ಒಂದೇ ಒಂದು ಪೋಸ್ಟ ಮಾಡಿ " ಬರೀಲೇ ಸೂ... ಮಗನೇ" ಅಂತಾ ಹೊಡಕೊಂಡ್ರು , ಮೊನ್ನೆ ಮೊನ್ನೆ ನಾನೋಬ್ಬ ಬರಹಗಾರನೇ ಅಲ್ಲ್ಲಾ, ಉತ್ತಮ ಓದುಗ ಮಾತ್ರ ತಡವಾಗಿ ಅರ್ಥ ಮಾಡಿಕೊಂಡು ನನ್ನೆಡೆಗೂ ಆಸೆಯಿಂದ ಯಾವಾಗ ನಾನು ಬರೆಯುವದು ನಿಲ್ಲಿಸಿ ಉಪಕಾರ ಮಾಡುತ್ತೇನೋ ಅಂತಾ ಕಾದು ಕುಳಿತಿದ್ದಾನೆ.

ಇದೆಲ್ಲಾ ಬಿಟ್ಟು ಒಂದು ವರುಷದಲ್ಲಿ ಕಡಿದು ಕಟ್ಟೆ ಹಾಕಿದ್ದಾದರೂ ಏನು ಅಂತ ಕುಳಿತರೇ, ಯಥಾ ಪ್ರಕಾರ ನನ್ನ ಲಘು ದಾಟಿಯ ಬರಹಗಳು ಮತ್ತು ಯದ್ವ ತದ್ವಾ ಫೀಲಾಗಿ ಬರೆದ ಕೆಲ ಹುಚ್ಚಪ್ಯಾಲಿ ಬರಹಗಳು ಮತ್ತು ಕೊನೆಯಲ್ಲಿ ಸುಮ್ಮನಿರಲಾರದೇ ಇರುವೆ ಬಿಟ್ಟುಕೊಂಡ್ರು ಅಂತಾ ಬರೆದ ವರದಿ ಮಾದರಿಯ ಬರಹ.ಆಗ ಕೆಲವರಂತೂ ವಿಷ ಅಂದ್ರು, ಹಾಲಾಹಲ ಅಂದ್ರು. ಇನ್ನೂ ಕೆಲವರು ಶುರುವಿನಲ್ಲಿ ಇಂದ್ರ, ಚಂದ್ರ ಎಂದು ಹೊಗಳುತ್ತಿದ್ದವರು ಒಂದೇ ಒಂದು ಖಂಡನಾತ್ಮಕ ಬರಹಕ್ಕೆ ಪ್ರತಿಕ್ರಿಯೆಯಾಗಿ ದುಬು ದುಬು ತಮ್ಮ ಬ್ಲಾಗ್ ರೋಲಿನಿಂದ ನನ್ನ ಬ್ಲಾಗು ಕಿತ್ತು ಹಾಕಿ ದೊಡ್ಡ ನಿಟ್ಟಿಸುರು ಬಿಟ್ಟರು. ಹರಿಯೋ ನೀರಿಗೆ ದೊಣ್ಣೆ ನಾಯಕನ ಅಪ್ಪಣೆ ಬೇಕೆ?. ನನ್ನ ಅಭಿಪ್ರಾಯ ಸರಿಯಲ್ಲ ಅಂದರೆ ನೇರವಾಗಿ ಚರ್ಚೆಗಿಳಿಯಿಬಹುದಿತ್ತು ಅಥವಾ ಅದನ್ನು ಖಂಡಿಸುವ ಹಕ್ಕು ಎಲ್ಲರಿಗೂ ಇತ್ತು, ಅದು ಬಿಟ್ಟು ಈ ತರದ ಸಣ್ಣತನ ತೋರಿಸಿ ಕಡೆದು ಕಟ್ಟೆ ಹಾಕಿದ ಸಾಧನೆಯಾದ್ರು ಏಂಥದು ಅಂತಾ ಇಲ್ಲಿವರೆಗೂ ತಿಳಿದಿಲ್ಲಾ..

ಈ ಮದ್ಯೆ ಎಲ್ಲರ ಬ್ಲಾಗುಗಳಲ್ಲಿ ಗಂಭೀರವಾಗಿ ಬ್ಲಾಗಿಸುವ ಬಗ್ಗೆ ಚರ್ಚೆಗಳಾಗುತ್ತೀವೆ. ಮೊದಲೇ ಗಂಭೀರತೆಗೂ ನನಗೂ ಎಣ್ಣೆ ಸೀಗೆಕಾಯಿ ಸಂಬಂಧ, ಅಂತಹುದರಲ್ಲಿ ಈ ಬೆಳವಣೆಗೆಗಳು ನನ್ನ ಕೇಡುಗಾಲವನ್ನು ನೆನಪಿಸುತ್ತಿವೆ. ನನ್ನಲ್ಲಿ ಸರಕು ಇದ್ದಷ್ಟು ದಿನ ಬರೆಯುವದು ಅಮೇಲಂತೂ " ಉತ್ತಮ ಓದುಗ" ಎಂದು ಆರೋಪಿಸುಕೊಂಡು ಕಂಡೊರ ಬರಹಗಳನ್ನು ಹಿಗ್ಗಾ ಮುಗ್ಗಾ ವಿಮರ್ಶಿಸುವದಂತೂ ಇದ್ದೇ ಇದೆ. ಇಲ್ಲಿವರೆಗೂ ನನ್ನ ಬರಹಗಳನ್ನು, ತಲೆಹರಟೆಯನ್ನು ಸಹಿಸಿಕೊಂಡು ಬೆನ್ನು ತಟ್ಟಿದ ಮತ್ತು ಬೆನ್ನಿಗೆ ಗುದ್ದಿದ ಎಲ್ಲರಿಗೂ ನನ್ನ ನಮನಗಳು, ಈ ಬಂಧ ನಿರಂತರವಾಗಿರಲಿ..

Thursday, April 3, 2008

ದೇವರಾಣೆಗೂ ಇದು ಸತ್ಯ!

ನಿಮಗೆಲ್ಲಾ ದೇವರ ಒಡವೆಗಳು ಕಳವಾಗುವ ಸುದ್ದಿ ಹೊಸದಾಗಿರಲಿಕ್ಕಿಲ್ಲ, ಆದ್ರೆ ಮೂಲ ವಿಗ್ರಹವನ್ನೇ ಕದ್ದುಕೊಂಡು ಹೋಗಿದ್ದನ್ನು ಕೇಳಿದ್ದೀರಾ? ಅದು ಯಾವುದೇ ಆಭರಣಗಳನ್ನು ಮುಟ್ಟದೇ!. ಹಿಂತಹ ಒಂದು ಕಳ್ಳತನ ನಮ್ಮೂರ ಪ್ರಸಿದ್ದ ಕಂಠಿ ಬಸವಣ್ಣನ ದೇವಸ್ಥಾನದಲ್ಲಿ ಸುಮಾರು ವರ್ಷಗಳ ಹಿಂದೆ ನಡಿದಿತ್ತು, ಆಗ ಪೂಜಾರಪ್ಪನನ್ನು ’ಎನೀದು ಹಕೀಕತ್ತು? ದೇವರನ್ನೇ ಊರು ಬಿಡಿಸಿಬಿಟ್ರಲ್ಲ್ಲಾ" ಎಂದು ದೇಶಾವರಿಯಾಗಿ ಕೇಳಿದ್ರೆ ಆ ಯಪ್ಪಾ " ಬಸವಣ್ಣನಿಗೆ ನಮ್ಮೂರು ಬೇಜಾರಾಗಿತ್ತಂತೂ, ಹೀಗಾಗಿ ಆ ಕಳ್ಳನ ಕನಸಿನಲ್ಲಿ ಹೋಗಿ ನನ್ನನ ಈ ಊರು ಬಿಟ್ಟು ಕರ್ಕೋಂಡು ಹೋಗು ಅಂತಾ ಬಸವಣ್ಣ ಕೇಳಿದ್ನಂತೆ;ದೇವರೆ ಬಂದು ಹೇಳೀದ ಮೇಲೆ ಆ ಕಳ್ಳ ನಮ್ಮ ಬಸವಣ್ಣನ ಎತ್ಕೊಂಡು ಹೋಗಿದ್ದಾನೆ"ಅಂತಾ ಕಥೆ ಕಟ್ಟಿ ಎಲ್ಲಾ ಭಕ್ತಾದಿಗಳಿಗೂ ಹೇಳತೊಡಗಿದರು. ನಮ್ಮೂರ ಹಿರಿಯರು ದೇವರನ್ನು ಹುಡುಕಲು ಎಲ್ಲಾ ರೀತಿಯ ಪ್ರಯತ್ನ ಪಟ್ಟರು, ಪ್ರತಿಫಲ ಮಾತ್ರ ಶೂನ್ಯವಾಯಿತು..

ನಮ್ಮ ಮನೆತನದಲ್ಲಂತೂ ಒಂಥರಾ ದಿಗಿಲು;ಊರ ದೇವರೇ ಊರು ಬಿಟ್ರೆ ಹ್ಯಾಗೆ ಅನ್ನೊದರ ಜೊತೆಗೆ ಇನ್ನೊಂದು ಕಾರಣವೂ ಇದೆ. ಈ ಕಂಠಿ ಬಸವಣ್ಣ ಅಬ್ಬಿಗೇರಿಗೆ ಹೇಗೆ ಬಂದ ಅನ್ನೊದಕ್ಕೆ ನಮ್ಮ ಮನೆಯ ಹಳೆ ತಲೆಗಳು ಒಂದು ಕಥೆಯನ್ನೇ ಹೇಳುತ್ತವೆ. ಅದೆನಪ್ಪಾ ಅಂದ್ರೆ ನಮ್ಮ ಮನೆತನದ ಮೂಲಪುರುಷ ಹೊಲದಿಂದ ಮನೆಗೆ ಬರುವಾಗ ಒಂದು ಜಾಗದಲ್ಲಿ ಚಕ್ಕಡಿ ಮುಂದೆ ಹೋಗಲೇ ಇಲ್ಲವಂತ್, ಅಲ್ಲೇ ನಿಂತು ಬಿಟ್ಟಿತಂತೆ. ಏನಿದು ವಿಚಿತ್ರ ?ಎಂದು ಆ ಮಾರಾಯ ನೋಡಿದ್ರೆ ಚಕ್ಕಡಿಯಲ್ಲಿ ಬಸವಣ್ಣನನ್ನು ಹೋಲುವ ಕಲ್ಲಿತ್ತಂತೆ, ಯುರೇಕಾ ಅಂದುಕೊಂದು ಅಲ್ಲೆ ಪಕ್ಕದಲ್ಲಿಯ ಕಂಠಿಯಲ್ಲಿ ಅದನ್ನು ಎಸೆದು ಮನೆಗೆ ಬಂದು ಮಲಗಿದರೆ, ರಾತ್ರಿ ಕನಸಿನಲ್ಲಿ ದೇವರು ಬಂದು " ನಾನು ನಿನ್ನ ಚಕ್ಕಡಿಯಲ್ಲಿ ಬಂದರೆ ನೀನು ನನ್ನ ಕಂಠಿಯಲ್ಲಿ ಎಸೆಯುತ್ತೀಯಾ?" ಎಂದು ಆವಾಜ್ ಹಾಕಿದ್ನಂತೆ. ಮರುದಿನ ಬಂದು ಆ ಕಂಠಿ ಹುಡುಕಿ ಅಲ್ಲಿಯೇ ಗುಡಿ ಕಟ್ಟಿಸಿದರಂತೆ. ಹೀಗಾಗಿ ಕಂಠಿ ಬಸವಣ್ಣ ನಮ್ಮವನೆಂದೂ ನಮ್ಮ ಮನೆಯಲ್ಲಿ ಹಕ್ಕು ಸಾಧಿಸುತ್ತಾರೆ.[ಕಾಕತಾಳಿಯವೆಂಬಂತೆ ಅದೇ ದಾರಿಯಲ್ಲಿ ನಮ್ಮ ಹೊಲವಿದೆ.ಅಲ್ಲದೇ ಶ್ರಾವಣದ ಮೊದಲ ಪೂಜೆ ಸಲ್ಲುವದೂ ಗೌಡರ ಮನೆಯಿಂದಲೇ,ತೇರಿನ ಕಳಸ, ಹಗ್ಗ ಬರುವುದು ಗೌಡರ ಮನೆಯಿಂದಲೇ ಮತ್ತು ನನ್ನ ತಾಯಿಯ ತವರುಮನೆಯ ಮನೆದೆವ್ರು ಸಹ ಈ ಕಂಠಿ ಬಸವಣ್ನನೇ ಮತ್ತು ಬಸವಣ್ಣನಿಗೆ ತೇರು ಮಾಡಿಸಿದ್ದು ಅವರೇ].ಇಷ್ಟೆಲ್ಲಾ ಇರಬೇಕಾದ್ರೆ ಚಿಂತೆ ಆಗದೇ ಇರುತ್ಯೆ?. ಕೊನೆಗೂ ಹಲವಾರು ದಿನ ಹುಡುಕಾಡಿ ಎಲ್ಲಿಂದಲೋ ಅದೇ ವಿಗ್ರಹವನ್ನು ಹೋಲುವ ವಿಗ್ರಹವನ್ನು ತಂದು ಗುಡಿಯಲ್ಲಿ " ಇದೇ ನಮ್ಮ ಬಸವಣ್ಣ" ಅಂತ ಸಮಾಧಾನ ಮಾಡ್ಕೋಂಡ್ರು. ಅದ್ರೂ ಎಲ್ಲರ ಮನದಲ್ಲಿ ಇದು ನಿಜವಾದ ಬಸವಣ್ಣಾನಾ ಅಂಥಾ ಡೌಟ್ ಇವತ್ತೀಗೂ ಇದ್ದೇ ಇದೆ..

ಅದ್ರೆ ಮೇನ್ ಪಾಯಿಂಟ ಇದಲ್ಲ್ಲಾ. ಪ್ರತಿ ಯುಗಾದಿಗೆ ನಮ್ಮ ಬಸವಣ್ಣನ ಗುಡಿಯಲ್ಲಿ ಒಂದು ಪವಾಡ(?) ನಡೆಯುತ್ತೆ. ಯುಗಾದಿಯ ಬೆಳಗ್ಗೆ ಸೂರ್ಯ ಹುಟ್ಟುವ ಮೊದಲೆ ಗುಡಿಯ ಮುಂದಿನ ಬಯಲಿನಲ್ಲ, ಕಲ್ಲು ಸಂಧಿಗಳಲ್ಲಿ ವಿವಿಧ ಧಾನ್ಯಗಳ ಸಸಿಗಳು ಏಕಾ ಎಕಿ ಉದ್ಬವವಾಗಿಬಿಟ್ಟುರುತ್ತವೆ. ಯಾವ ಧಾನ್ಯದ ಸಸಿ ಯಥೇಚ್ಚವಾಗಿ ಬೆಳೆಯುತ್ತೋ ಮುಂದಿನ ವರ್ಷ ಆ ಬೆಳೆ ಚೆನ್ನಾಗಿ ಬರುತ್ತಂತೆ.ಆದರೆ ಸೂರ್ಯನ ಬಿಸಿಲು ಬಿದ್ದ ಕೂಡಲೇ ಅವೆಲ್ಲಾ ಕರಗಿ ಬಿಡುತ್ತವಂತೆ;ಹೀಗಾಗಿ ನಚ್ಚ ನಸುಕಿನಲ್ಲೇ ನಮ್ಮೂರ ಜನತೆ ಗುಡಿ ಬಯಲಿನಲ್ಲಿ ಬ್ಯಾಟರಿ ಹಿಡಿದು, ಲಾಟೀನು ಹಿಡಿದು ಸಂಧು ಗೊಂದುಗಳಲ್ಲಿ ಸಸಿಯನ್ನು ಹುಡುಕುತ್ತಿರುತ್ತಾರೆ ಮತ್ತು ಕಷ್ಟ ಪಟ್ಟು ಸಸಿಯನ್ನು ಗುರುತಿಸುವ ಕಾರ್ಯದಲ್ಲಿ ಮಗ್ನರಾಗಿರುತ್ತಾರೆ. ಚಿಕ್ಕವನಾಗಿದ್ದಾಗ ನಾನೂ ಈ ಹುಡುಕಾಟದ ಸಕ್ರಿಯ ಸದಸ್ಯನಾಗಿದ್ದೆ. ಮತ್ತು ಸಿಕ್ಕ ಸಸಿಯನ್ನು ಮನೆಗೆ ತಂದು ದೊಡ್ದ ಗಿಡ ಮಾಡುವ ಭರದಲ್ಲಿ ಹಿತ್ತಲಿನಲ್ಲಿ ನೆಟ್ಟರೆ ಬಿಸಿಲು ಬಿದ್ದ ಮೇಲೆ ಬಂದು ನೋಡಿದ್ರೆ ಸಸಿ ಮಂಗಮಾಯ. ವಿಚಿತ್ರ ಎಂದರೆ ಬಸವಣ್ಣನನ್ನು ಕದ್ದ ವರ್ಷವೂ , ಅಂದ್ರೆ ಗುಡಿಯಲ್ಲಿ ಬಸವಣ್ಣ ಇಲ್ಲದಾಗ್ಲೂ ಸಸಿ ಹುಟ್ಟಿದ್ದುವು ಮತ್ತು ಒರಿಜನಲ್ ಬಸವಣ್ಣ ಇಲ್ಲದಿದ್ರೂ ಹುಟ್ಟುತ್ತಿವೆ. ಹೀಗಾಗಿ ಈ ಸಸಿಯ ಮರ್ಮ ನನಗೂ ತಿಳೀತಿಲ್ಲಾ. [ತಿಳಿದವರು ಹೇಳಿದರೆ ಮಹದುಪಕಾರವಾಗುತ್ತೇ]

ವೈಜ್ನಾನಿಕ ಕಾರಣಗಳೇನೆ ಇರಲಿ, ನಾನಂತೂ ಯುಗಾದಿಗೆ ಹೊರಟ್ಟಿದ್ದೇನೆ ಮತ್ತು ಅವತ್ತು ಸಸಿ ಹುಡುಕುವ ಕಾರ್ಯಕ್ರಮವೂ ಇದೆ. ಈ ತರದ ನಂಬಿಕೆಗಳಲ್ಲಿ, ಆಚರಣೆಗಳಲ್ಲಿ ಎನೋ ಒಂದು ಖುಷಿ.

ಮುಂಚಿತವಾಗಿಯೇ ಸರ್ವರಿಗೂ ಯುಗಾದಿಯ ಶುಭಾಶಯಗಳು