Wednesday, May 23, 2007

ಲವ್ ಪ್ರವರನನ್ನ ರೂಮ ಮೇಟ ಮನೋಜ ರಾತ್ರಿ ಲೈಟ ಆರಿಸಿ ಹಾಸಿಗೆಗೆ ಒರಗಿ "ಸಂತೋಷರ ನಿದ್ದೆ ಬಂದಿಲ್ವಾ? ಎಂದು ಮಾತಿಗೆಳೆದರೆ ಮುಂದೇನೊ ಅನಾಹುತ ಕಾದಿದೆ ಅಂತಾನೇ ಅರ್ಥ,ಮೊನ್ನೆನೂ ಹಿಂಗೇ ಅಯ್ತು ಅವತ್ತೂ ಸಹ ಯಥಾಪ್ರಕಾರ ತನ್ನೆಲ್ಲಾ ಪ್ರಯೋಗಗಳಿಗೆ ಮೊದಲ ಬಲಿಪಶುವಾದ ನನ್ನನ್ನು ಹಾಸಿಗೆಯಲ್ಲಿ ಕೆಡವಿ, ನನ್ನ ಮೆದುಳು ಬಗೆಯುವ ಸತ್ಕಾರ್ಯವನ್ನು ಸಾಂಗೋಪಾಂಗವಾಗಿ ಶುರು ಮಾಡೇ ಬಿಟ್ಟ.
ಪೀಠಿಕೇಯಾಗಿ" ನಿಮ್ಮ 'True love' ಎಲ್ಲಿಗೆ ಬಂತು ಎಂದು ಪ್ರಶ್ನೆ ಎಸೆದು ಕುಂತ. ಅವನು ಯಾವಾಗ ರಾತ್ರಿಯ ಹೊತ್ತಿನಲ್ಲಿ 'Love' ವಿಷಯ ಆರಂಭಿಸಿದನೋ ನನ್ನ ಹಿಂದಿನ ಭೀಕರ ಅನುಭವಗಳಿಂದ ಇವತ್ತು ರಾತ್ರಿ ಜಾಗರಣೆ ಅಂತ ಖಾತ್ರಿಯಾಯ್ತು.ಪ್ರತ್ಯುತ್ತರವಾಗಿ ನಾನು "Work out ಆಗ್ಲಿಲ್ಲಾ "ಎಂದು ಚುಟುಕಾಗಿ ಹೇಳಿ ಇನ್ನು ನನ್ನ ಮಲಗಲು ಬಿಡು ಅಂತ ಸೂಕ್ಷ್ಮವಾಗಿ ಅರುಹಿದೆ.ಊಹುಂ! ಕೈಗೆ ಸಿಕ್ಕಿದ ಬಲಿಯನ್ನು ಹಂಗೆ ಬಿಟ್ಟಾನಯೇ ಧೀರ
,ಅದುವರೆಗೂ Love ಬಗ್ಗೆ ಮಾಡಿದ ತನ್ನೆಲ್ಲಾ ಕರಾಳ ಸಂಶೋಧನೆಗಳನ್ನು ಒಂದೋದಾಗಿ ಹೋರಗೆಡವತೋಡಗಿದ.ಆ ಬ್ರಹ್ಮಾಂಡ ಸಿದ್ದಾಂತಗಳನ್ನು ಸೋದಾಹರಣವಾಗಿ ವಿವರಿಸಿ, ಮದ್ಯೆ ತಿವಿದು ನನ್ನ ಎಚ್ಹರಿಸಿ ಇದುವರೆಗಿನ ತನ್ನೆಲ್ಲಾ ಹಳೆಯ ಸೇಡುಗಳನ್ನು ತೀರೀಸಿಕೊಂಡಾ.ಮಹಾಭಾರತದ ಶ್ರೀಕೃಷ್ಣ ಅರ್ಜುನನಿಗೆ ಗೀತೋಪದೇಶ ಮಾಡಿದಂತೆ, ನನಗೆ "ಲವ್ವೋಪದೇಶ" ಮಾಡಿದ.
" ನೋಡ್ರಿ ಸಂತೋಷರಾ. ನಿಮ್ದು ಸಾಮಾನ್ಯ ಲವ್ ಅಲ್ಲಾ , ಅದು ’ಟ್ರೂ ಲವ್’,ಹಂಗೆಲ್ಲಾ ಮದ್ಯಕ್ಕೆ ನಿಲ್ಲಿಸಬಾರದು, ಪ್ರಯತ್ನ ಪಡೂತ್ತಾ ಇರಬೇಕು" ಅಂದ ಲವ್ ಗುರು.ಅದ್ಕೆ ನಾನು "ಅಲ್ವೋ! ಲವ್ ನಲ್ಲೂ ಆರ್ಡಿನರಿ ಲವ್ ಮತ್ತು ಟ್ರೂ ಲವ ಇರ್ತಾವೇನೋ? ಹ್ಹ ಹ್ಹ ಹ.." ಎಂದು ನನ್ನ ಪಾಂಡಿತ್ಯ ತೋರಲೆತ್ನಿಸಿದೆ.
’ಹುಲುಮಾನವ’ ಎಂಬಂತೆ ನನ್ನೆಡೆಗೆ ನೋಡಿ ಟ್ರೂ ಲವ್ , ಆರ್ಡಿನರಿ ಲವ್ ,ಮತ್ತು ಪ್ಯೂರ ಲವ್ ಬಗ್ಗೆ ತನ್ನ ಪುರಾಣವನ್ನು ಆರಂಭಿಸಿ, ಹುಡುಗಿಯರಲ್ಲೂ ಸಹ ಪ್ರಕಾರಗಳುಂಟು ಅಂತಾ ಸಾರಿ ನನ್ನ ತಬ್ಬಿಬ್ಬು ಮಾಡಿದ.ಅವನ ಬಾಯಿಂದ ಹೊರಬಂದ ಅನುಭವದ ಮಾಣಿಕ್ಯಗಳಿವು ನೋಡಿ.
"ಅಲ್ರಿ ಟ್ರೂ ಲವ್ ಅಂದ್ರೆ ಡೀಪ್ ಆಗಿ ,ಸಿನ್ಸಿಯರ್ ಆಗಿ ಲವ್ ಮಾಡೊದು, ಆರ್ಡಿನರಿ ಲವ್ ಅಂದ್ರ ಸುಮ್ನ ಲೈನ್ ಹೊಡೆಯೋದು,ಪ್ಯೂರ್ ಲವ್ ಅಂದ್ರೆ
ಪೂರ್ತಿ ಪ್ಯೂರ್, ಇವನಿಲ್ಲಿ,ಅವಳಲ್ಲಿ. ಆದರೂ ಫುಲ್ ಲವ್.ಬೆಳದಿಂಗಳ ಬಾಲೆ, ಯಾರೇ ನೀನು ಚೆಲುವೆ ಸ್ಟೈಲು.ನೋಡ್ರಿ ಹುಡುಗಿಯರಲ್ಲೂ ವೆರೈಟಿ ಇರ್ತಾವು, ಮೊದಲನೆಯದಾಗಿ ನಿಜವಾಗ್ಲೂ ಚಂದ ಇರ್ತಾರ ಮತ್ತು ಫುಲ್ ಡೀಸೇಂಟ್ ಇರ್ತಾರ, ಹಿಂತವರು ಟ್ರೂ ಲವ್ ಮಾಡೊಕೆ ಯೋಗ್ಯ. ಇವರು ಲೈನು ಕೊಡೋದಿರಲಿ, ತಿರುಗಿ ಸಹ ನೋಡಲ್ಲ.ಆದ್ರೂ ಪ್ರಯತ್ನ ಬಿಡಬಾರದು.ಮೊದಲನೆ ಸಲ ಪ್ರಪೋಸ್ ಮಾಡಿದ್ರೆ ಖಂಡಿತ ’ನೋ’ ಅಂತಾರೆ,ಕೆಲವು ಸಲ ನಸೀಬು ಗಾಂಡು ಇದ್ರ ಮಂಗಳಾರುತಿನೂ ತೆಗಿತಾರ, ಅದಕ್ಕೆಲ್ಲಾ ನೀವು ತಲಿ ಕೆಡಿಸ್ಕೊಬಾರದು, ಅಲ್ಲದೆ " ನನ್ನ ಎನಂತ ಅನ್ಕೊಂಡೀರಿ? ನಾನು ಅಂತಾ ಹುಡುಗಿ ಅಲ್ಲಾ" ಅಂತೆಲ್ಲಾ ಡೈಲಾಗ್ ಹೊಡಿತಾರೆ, ಅದಕ್ಕೆಲ್ಲಾ ನಾವು ಕ್ಯಾರೆ ಅನ್ನಬಾರದು ಮತ್ತು ಪ್ರಯತ್ನ ನಿಲ್ಲಿಸಬಾರದು.ಯಾರೇನೆ ಅಂದ್ರು ಕೇರ್ ಮಾಡದೆ ಇರೊದು ಭಾಳ ಮುಖ್ಯ.’ಹುಚ್ಚ’ ಪಿಚ್ಚರ್ ನೋಡಿರಲ್ರಿ ಅ ಟೈಪು ಅಂದ ನಮ್ ಲವ್ ಗುರು.ಮತ್ತೆ ಮುಂದುವರೆಸಿ ಹೇಳಿದ " ಎರಡನೆ ವೆರೈಟಿ ಹುಡುಗಿಯರು ದೇವರಾಣೆಗೂ ಚಂದ ಇರೋದಿಲ್ಲಾ,ಅದ್ರೆ ನಾವು ಅವರನ್ನು ಚಂದ ಅದೀರಿ ಅಂತ ನಂಬಿಸಬೇಕು. ಇಂತವರು ಲೈನ್ ಹೊಡಿಯೋಕೆ ಪರಫೆಕ್ಟ ನೋಡ್ರಿ.ಇವರನ್ನು ಬೀಳಿಸೊಕೆ ಸ್ವಲ್ಪ ಟೈಮು ಮತ್ತು ಇನವೆಸ್ಟಮೆಂಟ್ ಬೇಕು. ಭಾಳ ಏನು ಬ್ಯಾಡ್ರಿ, ಸುಮ್ನ ಅವರ ಹಿಂದ ಬೀಳಬೆಕು, ನೋಡಿ ಸ್ಮೈಲ್ ಕೊಡಬೇಕು, ಸುಮ್ ಸುಮ್ನ ಮತಾಡಿಸಬೇಕು,ನಿಮ್ಮ ಡ್ರೆಸ್ಸು ಸುಪರ್ ಅಂತ ಪುಸಲಾಯಿಸಬೇಕು ಇತ್ಯಾದಿ ಇತ್ಯಾದಿ.ಹಾಂ! ಆಮೇಲೆ ಸ್ವಲ್ಪ ಹುಡುಗಿ ದಾರಿಗೆ ಬಂದಿದಾಳೆ ಅಂದಮೇಲೆ ಮೊದಲು ಕಾಫಿಗೆ, ನಂತರ ಪಿಚ್ಚರಿಗೆ,ಲಾಲಭಾಗಿಗೆ ಕರಿಬೇಕು .ಒಂದು ವೇಳೆ ನೀವು ಲವ್ವು ಗಿವ್ವು ಅಂತೇನಾದ್ರು ಪ್ರಪೋಸ್ ಮಾಡಿದ್ರೆ ನಿಮ್ಮ್ ಖೇಲ್ ಖತಂ.ಅದೊಂತರ ಮುಚ್ಯುವಲ್ ಅಂಡರ್ ಸ್ಟಾಂಡಿಂಗ್.ಈ ವೆರೈಟಿ ಹುಡುಗಿಯರು ಭಾರಿ ಚಾಲೂ ಇರ್ತಾರ, ನೀವು ನೋಡಿ ಖರ್ಚು ಮಾಡಬೇಕು ಮತ್ತು ಎಷ್ಟು ಸಾದ್ಯನೊ ಅಷ್ಟು "ದುಡುಕೊಂಡು"ಬಿಡಬೇಕು.ಇದಕ್ಕ ಹಂಗ ಸುಮ್ನ ಲವ್ (?) ಅಂತರ ಕರೀರಿ ಅಥವಾ ಡವ್ ಅಂತರ ಕರೀರಿ. ಕೊನೆಯ ವೆರೈಟಿ ಬಗ್ಗೆ ಹೇಳುದಾ ಬ್ಯಾಡ, ಯಾಕಂದ್ರ " ನೋ ಯುಸ್", ಬರೀ ಸ್ಚ್ರಾಪ್ ಫಿಗರ್ ಗಳು, ನಿಮಗ ಅಷ್ಟ ’ಬರಗಾಲ’ ಅಂದ್ರ ಇವನ್ನೂ ಟ್ರೈ ಮಾಡಿ ನಿಮ್ಮ ಕರ್ಮ" ಅಂತೆಲ್ಲಾ ರಾತ್ರಿ ಮೂರರವರೆಗೂ ಸಾದ್ಯಂತ ಶೊಷಿಸಿ " ಇನ್ನು ಹೊತ್ತಾತು ಮಲಗ್ರಿ, ನಾಳೆ ಮುಂದ ಹೇಳ್ತಿನಿ", ಅಂತೆಳಿ ’ನಿನಗಿದೆ ಗ್ರಹಚಾರ ನಾಳೆ” ಎಂಬಂತೆ ನೋಡಿ, ಎದ್ದು ಉಚ್ಚೆ ಹೋಯ್ದು ಮಲಗೇ ಬಿಟ್ಟ.
ನಾಳೆ ಎನು ಕಾದಿದೆಯೊ ಅಂತ ಹಾಸಿಗೆಯಲ್ಲಿ ಉರುಳಾಡಿದ್ದೆ ಬಂತು ನಿದ್ದೆಯಂತೂ ದೇವರಾಣೆಗೂ ಬರಲಿಲ್ಲಾ..

Tuesday, May 8, 2007

ಪ್ರತಿದಿನದ ನರಕ
ಸರಿಯಾಗಿ ಒಂದು ವಾರದ ಮೇಲಾಯ್ತು ಆಫೀಸಿಗೆ ಬಂದು ಮತ್ತು ಮಾನಿಟರಿನ ಮುಖ ನೋಡಿ, ಮೌಸ್ ಮೈದಡವಿ, ಕೀ ಬೋರ್ಡಿನ ಕೀಲಿ ಕುಟ್ಟಿ.ಇಲ್ಲಿನ ಬದುಕೆ ವಿಚಿತ್ರ, ಗೋಡೆಯ ಮೇಲಿನ ಕ್ಯಾಲೆಂಡರಿನ ದಿನಗಳು ಬದಲಾಗುತ್ತವೆಯೆ ವಿನಾಃ ಬದುಕಲ್ಲಾ! ಪ್ರತಿದಿನವು ಅದೇ ರಾಗ, ಅದೇ ಎಕತಾನತೆ, ಮತ್ತದೆ ಚಕ್ರ..
ನನ್ನ ಬೆಳಗು ಆರಂಭವಾಗುವದೇ ನನ್ನ ಆಜನ್ಮ ಶತ್ರು ಅಲಾರ್ಮ್ ಬಡಿದುಕೊಳ್ಳುವದರೊಂದಿಗೆ, ಆಗ್ಲೆ FM ನಲ್ಲಿ " ಸುಪ್ರಭಾತ ವಿಥ್ ರಚನಾ" ಅಂತ ಆಯಮ್ಮ ಬಡಿದುಕೊಳ್ಳುವದಕ್ಕೆ ಶುರು ಮಾಡಿರುತ್ತೆ.ಅವಳಿಗೆ ನನ್ನ ಸಂತಾಪಸೂಚಕ ನಿಟ್ಟುಸಿರುಗಳು.ಸ್ನಾನ,ಪೂಜೆ(?),ಮತ್ತೊಂದು ಅಂತ ಅನಿವಾರ್ಯ ಕರ್ಮಗಳನ್ನು ಮುಗಿಸುವಷ್ಟರಲ್ಲೆ ಗಂಟೆ ೭ ರ ಆಸುಪಾಸಿನಲ್ಲಿರುತ್ತೆ.ಕೈಗೆ ಸಿಕ್ಕಿದ( ಅಂದ್ರೆ ಅಪರೂಪಕ್ಕೆ ತೊಳೆದ ಎಂದರ್ಥ)ಪ್ಯಾಂಟು ಸಿಕ್ಕಿಸಿಕೊಂಡೂ ,ಅದ್ಕ್ಕೆ ಸರಿಯಾಗುವ ಅಂಗಿ ಸಿಕ್ಕಿಸಿಕೊಂಡು " ನೀ ಇನ್ ಶರ್ಟ ಮಾಡಿದ್ರೆ ಚಂದ ಕಾಣೀಸ್ತಿಯ" ಅಂತ ಯಾರೊ ನನ್ನ ಕಷ್ಟ ನೋಡಲಾಗದೆ ಹೇಳಿದ್ದನ್ನ ಮನಸ್ಸಿಗೆ ತಂದುಕೊಂಡು, ಅಂಗಿಯನ್ನು ಒಳ ತುರುಕುತ್ತೆನೆ( ಚಂದ ಕಾಣಿಸ್ತಿಯಾ ಮತ್ತು ಚಂದ ಇದ್ದಿಯಾ ಎರಡು ಒಂದೇ ಅಂತ ಊಹಿಸತಕ್ಕದ್ದು :-) ).ಆಗ ಸುರ್ಯೋದಯವನ್ನು ನೋಡಿದರೆ ಪಾಪ ಅಂತ ನಂಬಿರುವ ಸುರ್ಯವಂಶದ ಕುಡಿಯಾದ ನನ್ನ ರೂಮ್ ಮೇಟ್ ಮನೋಜ " ಪಾಪಿ ಇನ್ನೂ ಹೋಗಿಲ್ವಾ?" ಎಂಬಂತೆ ನೋಡಿ ಮುಸುಕೆಳೆದುಕೊಳ್ಳುತ್ತೆ ಪ್ರಾಣಿ. ನಾ ಹೇಳುವ ’ಬೈ’ಗೆ ಮುಸುಕಿನಿಂದಲೆ ’ಕಳಚಿಕೋ ಮಾರಾಯ’ ಎಂಬಂತೆ ’ಬೈ’ ಎಂದು "ಪೇಪರು ಒಳಗೆ ಎಸೀರೀ" ಅಂತ ಮನವಿ ಮಾಡ್ಕೊಳ್ಳುತ್ತೆ ಸೂರ್ಯವಂಶಿ.
ಏಳುತ್ತಾ, ಬಿಳುತ್ತಾ ಸೋಮಾರಿ ಬೆಂಗಳೂರು ಹೆಂಗಸರು ರಾತ್ರಿಯೇ ಹಾಕಿದ ರಂಗೋಲಿಗಳನ್ನು ದಾಟುತ್ತ,ಇನ್ನು ಹಾಳು ಮುಖದಲ್ಲೇ ಕಸ ಹೊಡೆಯುತ್ತಿರುವ ಆಂಟಿಯರನ್ನು ನೊಡುತ್ತ,ದಾರಿಯಲ್ಲಿ ಸಿಗುವ "ಸೊಪ್ಪು ಸೊಪ್ಪು" ಅನ್ನುವವನನ್ನು ಇದಿರುಗೊಳ್ಳುತ್ತ,ಪೇಪರಿನ ಹುಡುಗನೆಡೆಗೆ ಪರಿಚಯದ ನಗೆ ಬೀರುತ್ತಾ ಕಂಪನಿ ಬಸ್ ಸ್ಟಾಪಿನತ್ತ ದೌಡಾಯಿಸುತ್ತೆನೆ.ಅಲ್ಲಿ ಮತ್ತದೇ ಬಸ್ ಸ್ಟಾಪು, ಇನ್ನೂ ತೂಕಡಿಸುತ್ತಾ ನನಗಾಗಿ ಕಾದಿದೆಯೇನೋ ಎಂಬಂತೆ ಭಾಸವಾಗುತ್ತೆ. ಯಾವಾಗಲೂ ನನಗಿಂತ ಮುಂಚೆ ಬಂದಿರುವ ಇಬ್ಬರು ಅಂಟಿಯರನ್ನು ಸೇರಿಕೊಳ್ಳುತ್ತೆನೆ.ಆಗ ಅವಸರದಿಂದ ಬರುತ್ತಾರೆ ತಮ್ಮೆಡೆಗಿನ ನಿಗೂಡತೆಯನ್ನು,ಕೌತುಕವನ್ನು ದಿನದಿಂದ ದಿನಕ್ಕೆ ಹೆಚ್ಚಿಸುತ್ತಾ ಸಾಗಿರುವ ಹುಡುಗಿಯರು( ಅವಳಲ್ಲಿ ಒಬ್ಬಳನ್ನು ನಾನು ಕೆಲದಿನಗಳು True love ಮಾಡಿದ್ದೆ ಮತ್ತು ಇನ್ನು ಗಿಟ್ಟುವದಿಲ್ಲಾ :-)ಅಂತ ಖಚಿತವಾದ ಮೇಲೆಯೇ ಆ ಯತ್ನವನ್ನು ನಿಲ್ಲಿಸಿದ್ದೇನೆ(?)), ನಮ್ಮೊಂದಿಗೆ ಘನಗಂಭೀರ ಇನ್ನೊಬ್ಬ ಇರುತ್ತಾನೆ.ನಮ್ಮೆದುರು ಹಾದು ಹೋಗುವ ಬಸ್ಸುಗಳಲ್ಲಿ ನಮ್ಮಂತೆಯೆ ಬೇರೆ ನಾಮಧೇಯದ ಕಂಪನಿಗೆ ಮಣ್ಣು ಹೊರುತ್ತಿರುವ ಇನ್ನೊಂದಿಷ್ಟು "ಬಿಳಿಕಾಲರ್ ಕಾರ್ಮಿಕರು" ಹುಸಿ ಜಂಭದಿಂದ ಸಾಗುತ್ತಾರೆ. ನನ್ನ ವಾಚಿನ ಮುಳ್ಳು ಸರಿಯಾಗಿ ೭-೧೦ ನ್ನು ದಾಟುತ್ತಿದ್ದಂತೆ ಹಣೆಗೆ 'National' ಅಂತ ಬರೆಸಿಕೊಂಡ, ಇಕ್ಕೆಲಗಳಲ್ಲೂ ಮಾಸಿದ ಸಂತೂರ್ ಸೋಪಿನ ಜಾಹಿರಾತುಗಳನ್ನು ಅಂಟಿಸಿಕೊಂಡ ಸಂಪೂರ್ಣ ನೆರೆತ ಗಡ್ಡದ ಸಾಬಿಯ ಕಪ್ಪುಸುಂದರಿ ಬಸ್ಸು ಬಂದು ನಿಲ್ಲುತ್ತೆ, ಹುಡುಗಿಯರಿಬ್ಬರು ಹೋಗಿ ಯಾರಿಗೂ ಅವರ ದರ್ಶನಬಾಗ್ಯ ಲಭಿಸದಂತೆ ಮೊದಲ ಸೀಟ್ನಲ್ಲೆ ಹೋಗಿ ಕುಳಿತುಕೊಳ್ಳುತ್ತಾರೆ,ಆಂಟಿಯರ ಜಾಗ ಮಾತ್ರ ಬಸ್ಸಿನ ದ್ವಾರದ ಹತ್ತಿರದ ಸೀಟು,ದ್ವಾರಕ್ಕೆ ಅಭಿಮುಖವಾಗಿ ನಮ್ಮದೆ ಕಾಲೇಜಿನ ಪುಟ್ಟದೇಹದ ,ನೀಲಿ ಜೀನ್ಸಿನ ಬಿಹಾರಿ ಕುಳಿತಿರುತ್ತಾನೆ, ನಾನು ಮಾತ್ರ ಗಾಳಿ ತಾಗದ, ಒಬ್ಬನೆ ಕೂಡಬಹುದಾದ ಸೀಟಿಗಾಗಿ ಹುಡುಕಿ ಕುಳಿತುಕೊಳ್ಳುತ್ತೇನೆ. ಬಸ್ಸು ಆಶ್ರಮ ಸರ್ಕಲ್ಲಿನಲ್ಲಿ ತಿರುವಿ ಗಾಂಧಿಬಜಾರಿನ ಎದೆಯ ಮದ್ಯೆ ಹಾದು ಹೋಗುತ್ತಿದ್ದರೆ ಆಗಷ್ಟೆ ಕುಯ್ದ ಹೂಗಳ ದಂಡೆಗಳ ಘಮ ಮೂಗಿಗೆ ಅಡರುತ್ತೆ,Fab Mallನ ಮುಂದೆ ಕುಳಿತ ಕೆಂಪು ಟೀ ಶರ್ಟಿನ ಸೇಲ್ಸ ಹುಡುಗಿಯರ ಮೂಖದಲ್ಲಿ ಎಂದಿನ ಭವಿಷ್ಯದ ಚಿಂತೆಯ ಗೆರೆಗಳು, ಹಗಲೆಲ್ಲ ಕಂಡವರಿಂದ ಮೈತಡವಿಸಿಕೊಂಡ ಅಂಕಿತ ಪುಸ್ತಕ ಮಳಿಗೆಯಲ್ಲಿನ ಪುಸ್ತಕಗಳು ಬೆಚ್ಚಗೆ ಕುಳಿತಿರುತ್ತವೆ.ಮುಂದಿನ ಸ್ಟಾಪಿನಲ್ಲಿ ನಮ್ಮಂತವೆ ಹೊಸ ಮಿಕಗಳು ಬಸ್ಸೆರುತ್ತವೆ, ಆದ್ರೆ ಈ ಮಿಕಗಳದ್ದು ಸ್ವಲ್ಪ ಸದ್ದು ಜಾಸ್ತಿ.ಕೊನೆಗೆ ಹತ್ತುವ ಚೂಡಿದಾರದ ಆಂಟಿಗೆ ಮಾತ್ರ ಹಿಂದಿನ ಸೀಟೆ ಆಗಬೇಕು.
ಎಲ್ಲಾ ಮಿಕಗಳು ಹತ್ತಿದ ಮೇಲೆ ಬಸ್ಸು ತುಂಬಿದ ಬಸುರಿಯಂತೆ ಚಲಿಸಲಾರಂಭಿಸುತ್ತೆ,ಜಯನಗರದ ಉದ್ಯಾನ ಹಾಯುವಾಗ ಕಾಣುವದೆ ಒಂದು ಪ್ರತಿದಿನದ ವಿಚಿತ್ರ ಜಾತ್ರೆ.ವಿವಿಧ ಸೈಜಿನ ಹೊಟ್ಟೆಯ ಅಂಕಲ್ಲುಗಳು ಮತ್ತು ಡ್ರಮ್ಮಿನಾಕಾರದ ಆಂಟಿಗಳನ್ನು ನೋಡುವದೇ ಒಂದು ವಿಸ್ಮಯ.ಮಹಾತ್ಕಾರ್ಯವನ್ನು ಮಡುತ್ತಿರುವೆವೇನೊ ಎಂಬ ಗತ್ತಿನಲ್ಲಿ ಕೈಕಾಲುಗಳನ್ನು ವಿಚಿತ್ರವಾಗಿ ಆಡಿಸುತ್ತಾ , ಎದೆಯುಬ್ಬಿಸಿ ಸಾಗುತ್ತಿರುವದನ್ನು ನೋಡುವುದೇ ಒಂದು ಪರಮಾನಂದ.ಸೊಂಟದ ಮೇಲೆ ಬಿದ್ದ ನೆರಿಗೆ ನೋಡಿ ಹೌಹಾರಿ ಫಿಗರ್ ಮೆಂಟೈನ್ ಮಾಡಲು ತನ್ನ ಪೆಟ್ ನೊಂದಿಗೆ ಬಂದ ಹಾಟ್ ಹಾಟ್ ಹುಡುಗಿ, ಆಯುಷ್ಯದ ಪೂರ್ವಾರ್ಧವನ್ನು ತಿನ್ನುವದರಲ್ಲೆ ಕಳೆದು, ಉಳಿದಿದ್ದನ್ನು ತಿಂದಿದನ್ನು ಜೀರ್ಣಿಸಲು ಪರದಾಡುವ ರಿಟೈರ್ಡ ಆಫೀಸರ್,ನಿನ್ನೆ ಕೊಂಡ ರೀಬಾಕ್ ಶೂಗಳ ಗತ್ತಿನಲ್ಲಿ ಮೈಯಲ್ಲಿ ನೀರಿಳಿಯುತ್ತಿದ್ದರೂ ಗಮನಿಸದೆ ಹುರುಪಿನಲ್ಲಿ ಓಡುತ್ತಿರುವ ಹೊಸಬ,೪೫ರ ಕಿರಿಕಿಗಳನ್ನು ತಾಳಿಕೊಳ್ಳಲೋ ಎಂಬಂತೆ ಬಿರಬಿರನೆ ನಡೆಯುತ್ತಿರುವ ಮದ್ಯವಯಸ್ಕ ಆಂಟಿ,ಕೊನೆಗೆ ಮೈತುಂಬ ಸ್ವೆಟರ್ ಹೊದ್ದು, ತಲೆಗೆ ಸ್ಕಾರ್ಪ್ ಸುತ್ತಿದ ಹಣ್ಣು ಹಣ್ಣು ದಂಪತಿಗಳು ಜೀವನದ ಉಳಿದ ಹೆಜ್ಜೆಗಳನ್ನೆಣಿಸುತ್ತಿದ್ದಾರೆನೋ ಎಂಬಂತೆ ನಿಧಾನಕ್ಕೆ ಸಾಗುತ್ತಿದ್ದಾರೆ,ಅಜ್ಜಿಗೆ ಬೆನ್ನು ನೋವಂತೆ, ಅಜ್ಜಗೆ ಹಿಡಿದೊಕೊಂಡ ಮೊಣಕಾಲುಗಳ ಚಿಂತೆ.ಪಾರ್ಕಿನ ಇನ್ನೊಂದು ಮೂಲೆಯಲ್ಲಿ ಕ್ರಿಕೆಟ್ಟು, ಬ್ಯಾಟ್ಮಿಟನ ಆಡುವ ಪಡ್ಡೆಗಳ ಇನ್ನೊಂದು ಗುಂಪು, ಆಟವೂ ಆಯ್ತು, ಮತ್ತೊಂದು ಅಯ್ತು :-) ಅನ್ನೊದು ಇವರ ಲೆಕ್ಕ.ಮುಂದೆ ಹಾದು ಹೊಗುವವರ ಮೇಲೆ ಇವರ ಆಟದ ಮೇಲಿನ ಗಮನ ನಿರ್ಧರಿತವಾಗುತ್ತೆ.ಇನ್ನೊಂದು ಮೂಲೆಯಲ್ಲಿ "ಹೀ ಹೀ ಹೀ" ಎನ್ನುತ್ತ ಬಾರದ ನಗುವಿನಲ್ಲೂ ಹಲ್ಲು ಕಿರಿಯುತ್ತಾ, ಕೈ ಕಾಲು ಬಡಿಯುವ ಲಾಫಿಂಗ್ ಕ್ಲಬ್ ನ ಸದಸ್ಯರು.ಗೇಟಿನ ಹೊರಗೆ ಇವರ ಬರುವಿಕೆಗೆ ಕಾದು ಕುಳಿತ ಇವರ ಟೂ ವೀಲ್ಹರ್ ಗಳು ಮತ್ತು ವಿವಿಧ ಕಾರುಗಳು, ಜೊತೆಗೆ ಗೇಣು ಹೊಟ್ಟೆಗಾಗಿ ಬೆಳ್ಳಂಬೆಳಗ್ಗೆ ಗಾಡಿಯಲ್ಲಿ ತರಕಾರಿ,ಹಣ್ಣು, ಮಾರುವವರ ನೀರೀಕ್ಷೆಭರಿತ ಕಂಗಳು.ಪಾರ್ಕಿನೊಳಗಡೆ "ಹೊಟ್ಟೆ ಕರಗಿಸುವದರ" ಚಿಂತೆಯಾದರೆ, ಹೊರಗಿನವರದು "ಹೊಟ್ಟೆ ತುಂಬಿಸುವ" ಚಿಂತೆ.ಇದೇ ಅಲ್ಲವೇ ಬದುಕಿನ "Irony".
ಹಾಂ ಉದ್ಯಾನದ ತುದಿಯಲ್ಲೇ ನಿಂತಿರುತ್ತಾನೆ ಒಬ್ಬ ಸಾಬಿ, ಅವನ ಕೈಯಲ್ಲಿ ಮಾತ್ರ ಯಾತ್ರೀ ಹೊರಟು ನಿಂತವರ ಕೈಯಲ್ಲಿರುವಶ್ಟು ಚೀಲಗಳು ಮತ್ತು ಒಂದು ದೊಡ್ಡ ಊಟದ ಡಬ್ಬ, ಅಲ್ಲಿ ಸ್ಟಾಪ್ ಇದೆಯೋ ಅಥವಾ ನಮ್ಮ ಡ್ರೈವರನ ಸ್ವಜಾತಿಪ್ರೆಮವೋ ಅಂತ ಗೊತ್ತಿಲ್ಲ, ಬಸ್ಸಂತು ನಿಲ್ಲುತ್ತೆ. ನನ್ನ ಕಣ್ಣುಗಳು ಆಗ್ಲೆ ಎಳೆಯತೊಡಗುತ್ತವೆ, ಅದರೆ ಸಾಬಿ ಡ್ರೈವರು ಮಾತ್ರ ಹಾರ್ನ ಹೊಡೆಯುವದು ನಿಲ್ಲಿಸುವದಿಲ್ಲಾ, ಅಂತೂ ಇಂತೂ ಜೋಂಪು ಹತ್ತುವ ವೇಳೆಗೆ ಬಸ್ಸು ಇಲೆಕ್ಟ್ರಾನಿಕ್ಸ್ ಸಿಟಿಯಲ್ಲಿ ನಮ್ಮಂತವೆ ನೂರಾರು ಬಸ್ಸುಗಳಲ್ಲಿ ಒಂದಾಗಿಬಿಟ್ಟಿರುತ್ತೆ.
ಈಗ ಮತ್ತೆ ಬಸ್ಸಿನಲ್ಲಿ ಗಡಿಬಿಡಿ ಶುರು, ಮಲಗಿದ ಒಬ್ಬೊಬ್ಬರೇ ಎಚ್ಚರವಾಗತೊಡಗುತ್ತಾರೆ, ಕೆಲವರು ಕಣ್ಣು ತಿಕ್ಕಿದರೆ, ಇನ್ನೂ ಕೆಲವರು "ಆಗ್ಲೆ ಬಂತಾ ಆಫೀಸು?" ಎಂಬಂತೆ ಕಿಟಕಿಯೆಡೆಗೆ ಕಣ್ಣು ಹಾಯಿಸುತ್ತಾರ್.ಹುಡುಗಿಯರಿಗೆ ತಮ್ಮ ಪಾಡಿಗೆ ತಾವಿದ್ದ ಕೂದಲುಗಳನ್ನು ಎಡಗೈಯಿಂದ ಹಿಡಿದು ಬಲಗೈಯಿಂದ ಕ್ಲಿಪ್ಪೋ,ರಬ್ಬರ್ ಬ್ಯಾಂಡೋ ಸಿಕ್ಕಿಸುವ ಆತುರ.ಮತ್ತೆ ಐಡಿ ಕಾರ್ಡ ಹುಡುಕಿ ಕೊರಳಿಗೆ ನೇತು ಹಾಕಿಕೊಳ್ಳುವ ಕಿರಿಕಿರಿ ಬೇರೆ.ಆಫೀಸು ಬಂತು ಎನ್ನುವದಕ್ಕೆ ಪುರಾವೆ ಎಂಬಂತೆ ಹಾರ್ನುಗಳ ಸದ್ದು ತಾರಕಕ್ಕೆರುತ್ತದೆ, ಸೆಕ್ಯುರಿಟಿಗಳ " ಪೀ ಪೀ ಪೀ" ಸದ್ದು ಅದರಲ್ಲಿ ಲೀನವಾಗುತ್ತೆ.
ಕೆಟ್ಟಮನಸ್ಸಿನಿಂದ ಬಸ್ಸಿಳಿದ ನಾನು ಭಾರವಾದ ಒಂದೊಂದು ಹೆಜ್ಜೆಯನ್ನಿಕ್ಕಿ ನನ್ನೊಂತೆಯೇ ಇರುವ ನೂರಾರು,ಸಾವಿರಾರು Resourceಗಳ ಮದ್ಯೆ ಒಬ್ಬನಾಗುತ್ತೇನೆ. ನನ್ನ Identity ಹೆಸರಿನಿಂದ Extn No ಮತ್ತು Emp IDಗೆ ಬದಲಾಗುತ್ತೆ.ಯಂತ್ರದ ಮುಂದಿನ ಇನ್ನೊಂದು ಜೀವಂತ ಯಂತ್ರವಾಗಲು ನಾನು ಅಣಿಗೊಳ್ಳುತ್ತೇನೆ.ಎದೆಯ ಮೂಲೆಯಲ್ಲೋ ಏನೋ ಕಳೆದುಕೊಂಡಂತಹ ಭಾವ, ಮನದ ಮೂಲೆಯಲ್ಲಿ ಎಂತದೋ ನೋವಿನ ಸೆಳವು ಮಿಂಚಿ ಮರೆಯಾಗುತ್ತೆ... ಆಗ ನಾನು ನಾನಾಗಿರುವದಿಲ್ಲಾ!!!!!