Wednesday, March 26, 2008

ಹೋಳಿಯ ಮೆಲುಕು...

ಶಿವರಾತ್ರಿ ಮುಗಿದ ಮರುದಿನದಿಂದಲೇ ನಮ್ಮೂರ ಹೈಕಳು ಮನೆಯ ಮಾಡು,ನ್ಯಾಗೊಂದಿ ಎಲ್ಲಾ ಕಡೆ ತಡಕಾಡಿ ಹಲಗೆಯನ್ನು ಬಡಿಯತೊಡಗಿದ ಕೂಡಲೇ ನಮಗೆ ಮೂಂದೊದಗಬಹುದಾದ ನಿದ್ರಾರಹಿತ ರಾತ್ರಿಗಳ ಸ್ಪಷ್ಟ ಸುಳಿವು ದೊರಕಿ ಬಿಡುತ್ತೆ ಮತ್ತು ಹೋಳಿ ಆಗಮನದ ಸ್ಪಷ್ಟ ಸೂಚನೆಯೂ ದೊರಕಿ ಬಿಡುತ್ತೆ.. ನಾಗರ ಪಂಚಮಿ ಹೆಂಗಸರಿಗಾದರೆ, ಹೋಳಿ ಗಂಡಸರಿಗೆ ಎಂದು ನಮ್ಮ ಹಿರಿಯರು ಫಿಕ್ಸ್ ಮಾಡಿದ "ಮೀಸಲಾತಿ"ಯ ಸಂಪೂರ್ಣ ಲಾಭವನ್ನು ನಮ್ಮ ಊರ ಗಂಡಸರು ಪಡೆಯದೇ ಬಿಡುವದಿಲ್ಲಾ.

ನಮ್ಮ ಹೈಕಳಿಗೆ ಉಳಿದ ಓಣಿಯವರಿಗಿಂತ ಕಾಮನನ್ನು ಸುಡಲು ಜಾಸ್ತಿ ಕಟ್ಟಿಗೆ ಸಂಗ್ರಹಿಸುವ ಹ್ಯಾವ.ಹೀಗಾಗಿ ಹೋಳಿ ಸಮೀಪಿಸುತ್ತಿದ್ದಂತೆ ಹುಡುಗ್ರು ಕುಳ್ಳು, ಕಟ್ಟಿಗೆ ಕಂಡೋರ ಹಿತ್ತಲಿನಿಂದ ಎಗರಿಸತೊಡಗುತ್ತಾರೆ. ಅಲ್ಲದೇ ವರ್ಷಪೂರ್ತಿ ಕಿರಿಕ್ಕ್ ಮಾಡಿದವರಿಗೆ ಒಂದು ಗತಿ ಕಾಣಿಸಲು ಇದು ಸುವರ್ಣಾವಕಾಶ;ಯಾವಗಲೋ ಕ್ರಿಕೆಟ್ ಬಾಲು ಕಸಿದುಕೊಂಡು ಗಾಂಚಾಲಿ ಮಾಡಿದ್ದ ಗೌಡರ ಮನೆಯ ಮುಂದಿನ ಹತ್ತಿ ಕಟಗಿ ರಾಶಿಯನ್ನು,ಯಾವಾಗ್ಲೂ ಪ್ರಾಣ ಹಿಂಡುವ ಗಣಿತ ಮಾಸ್ತರೀನ ಕುಳ್ಳುಗಳ ರಾಶಿಯನ್ನೂ ಮತ್ತು ಯಾವಾಗ್ಲೂ ಫಸ್ಟ್ ಬಂದು ಹೊಟ್ಟೆ ಉರಿಸುವ ಗಂಗಿಯ ಮನೆಯ ಒಡ್ದಗಟಿಕೆಗಳನ್ನು ರಾತ್ರೋ ರಾತ್ರಿ ಕದ್ದು ಕಾಮನ ಕಟ್ಟಿಗೆಗೆ ತರ್ಪಣ ನೀಡಿ ತಮ್ಮ ಹೊಟ್ಟೆಯ ಸಂಕಟವನ್ನು ತಣಿಸಿಕೊಳ್ಳುತ್ತಾರೆ. ಇನ್ನೂ ಇದ್ದುದರಲ್ಲಿಯೇ ಕೆಲ ಧೈರ್ಯವಂತ ಮುಂಡೆವು ಸಂಜೆಯೇ ಗುಂಪುಗೂಡಿ ಹಲಗೆ ಬಡಿಯುತ್ತಾ, ಲಬೊ ಲಬೊ ಹೊಯ್ಕೊಳ್ಳುತ್ತಾ " ಕಾಮಣ್ಣನ ಮಕ್ಕಳು ಕಳ್ಲ ಸೂ.. ಮಕ್ಕಳು " ಅನ್ನುತ್ತಾ ಮನೆಯವರ ಎದುರೆ ಅವರ ಕಟ್ಟಿಗೆ, ಕುಳ್ಳು ಎಗರಿಸಿಬಿಡುತ್ತಾರೆ. ಇವರ ಹಿಂದೆಯೇ " ರಾಡ್ಯಾ, ಜಿಟ್ಟ್ಯಾ, ಹಾಟ್ಯಾ,ಬಾಡಕೋ" ಇತ್ಯಾದಿ ಉ.ಕರ್ನಾಟಕದ "exclusive" ಬೈಗುಳಗಳ ಸಹಸ್ರನಾಮಾವಳಿ ಶುರುವಾಗಿಬಿಡುತ್ತೆ.ಕೊನೆಕೊನೆಗಂತೂ ಹುಡುಗರು ಯಾರದೋ ಮನೆಯ ಚಪ್ಪರದ ತೆಂಗಿನ ಗರಿ, ಮುರುಕು ಚಕ್ಕಡಿಯ ನೊಗ, ಬಡಿಗ್ಯಾರ ಮನೆಯ ಮುಂದಿನ ಮರದ ಮರಡು ಎಲ್ಲವನ್ನೂ ಕಾಮನ ಕಟ್ಟಿಗೆಗೆ ಸಮರ್ಪಿಸಿಬಿಡುತ್ತಾರೆ. ಒಮ್ಮೆ ಕಾಮನ ಕಟ್ಟಿಗೆಯ ರಾಶಿಗೆ ಸಮರ್ಪಣೆಯಾದರೆ ಮರಳಿ ಕಟ್ಟಿಗೆ ಮನೆಗೆ ತರಬಾರದು ಅನ್ನುವ ಪ್ರತೀತಿ ಇರುವದರಿಂದ ಕಟ್ಟಿಗೆ ಮಾಲಕರು ಹೊಟ್ಟೆ ಉರಿದುಕೊಂಡು ಹುಡುಗರನ್ನು ಶಪಿಸುತ್ತಿರುತ್ತಾರೆ.

ಇನ್ನೂ ಓಣಿಯ ಹಿರಿ ತಲೆಗಳು ಹಬ್ಬಕ್ಕಾಗಿ ಚಂದಾ ಸಂಗ್ರಹಿಸುವದರಲ್ಲಿ, ಮಜಲಿನ ಮೇಳದ ತಯಾರಿಯಲ್ಲಿ ಬ್ಯುಸಿಯಾಗಿರುತ್ತಾರೆ.ನಮ್ಮ ಓಣೆಯಲ್ಲಂತೂ ಹಬ್ಬಕ್ಕೆ ಐದು ದಿನ ಮುಂಚೆ ಎಲ್ಲಾ ಹಲಗೆಗಳನ್ನು ಗರಡಿ ಮನೆಯಿಂದ ಹೊರ ತಂದು ಒಪ್ಪವಾಗಿ ಜೋಡಿಸಿದ ನಂತರ ಓಣಿಯ ಹಿರಿಯರನ್ನು ಕರೆದು, ಗೌಡರಿಂದ ಎಲ್ಲಾ ಹಲಗೆ ಪೂಜೆ ಮಾಡಿಸಿ, ಖಾರ ಚುರುಮರಿ ಹಂಚಿ ಶಾಸ್ತ್ರೊಕ್ತವಾಗಿ ಮಜಲು ಹಚ್ಚಲು ಶುರು ಮಾಡುತ್ತಾರೆ. ಮಜಲು ಅಂದರೆ ಹುಡುಗರ ಹಾಗೆ ಕಂಡ ಕಂಡ ಹಾಗೆ ಹಲಗೆ ಬಡಿಯುವದಲ್ಲಾ,ಒಂದು ಲಯಬದ್ದವಾಗಿ, ರಾಗಬದ್ದವಾಗಿ ಹಲಗೆ ಬಾರಿಸುವದು. ಈ ಹಲಗೆಗಳಲ್ಲೂ ಕಣೀ, ದಿಮ್ಮಿ, ಜಗ್ಗಲಿಗೆ ಎಂಬ ಪ್ರಕಾರಗಳುಂಟು.ವೃತ್ತಾಕಾರವಾಗಿ ನಿಂತು ಮದ್ಯದದಲ್ಲಿ ಕಣಿ ಬಾರಿಸುವವನ ತಾಳಕ್ಕೆ ತಕ್ಕಂತೆ, ಸುತ್ತಲಿನ ಎಲ್ಲರೂ ದಿಮ್ಮಿ ಬಾರಿಸುತ್ತಾರೆ. ಕಣಿ ಬಾರಿಸುವದು ಒಂದು ಕಲೆ, ಮಣಿಕಟ್ಟನ್ನು ಲಯಬದ್ದವಾಗಿ ಆಡಿಸುತ್ತ, ಹಲಗೆಯ ನಿರ್ದಿಷ್ಟ ಮೂಲೆಗೆ ಬಡಿಯುವದು ಸುಲಭಸಾದ್ಯ ವಿದ್ಯೆಯಲ್ಲಾ.ಇನ್ನು ಜಗ್ಗಲಿಗೆ ಅಂದರೆ ಚಕ್ಕಡಿ ಗಾಲಿ ಗಾತ್ರದ ಹಲಗೆಗಳು.ಹಬ್ಬದ ದಿನ ಇವರ ಮಜಲಿನ ಜೊತೆಗೆ ಕೊರವರ ಶಹನಾಯ್ ಸಾಥಿಯೂ ಸೇರಿರುತ್ತದೆ.ಇವರ ಹಲಗೆ ಕಾಯಿಸಲು ಮಜಲಿನ ಪಕ್ಕದಲ್ಲಿ ಒಂದು ಕಡೆ ಬೆಂಕಿ ಹಾಕಿರುತ್ತಾರೆ. ಇವರ ವಾದ್ಯಗೋಷ್ಟಿ ಬೆಳತನಕ ಸಾಗುತ್ತದೆ.

ಇನ್ನು ಹಬ್ಬದ ಹಿಂದಿನ ದಿನ ದ್ಯಾಮವ್ವನ ಗುಡಿಯಲ್ಲಿನ ದೊಡ್ಡ ಮರದ ಕಪಾಟಿನಿಂದ ಭವ್ಯ ಕಾಮ,ರತಿಯರ ವಿಗ್ರಹಗಳನ್ನು ಹೊರತೆಗೆಯುತ್ತಾರೆ, ಓನಿಯ ಚಿಲ್ಟಾರಿಗಳು ಮೂರ್ತಿಗಳ ಸ್ಪರ್ಶಕ್ಕಾಗಿ ಕಿತ್ತಾಡುತ್ತಿರುತ್ತಾರೆ.ಅವತ್ತೀಡಿ ರಾತ್ರಿ ಕಾಮಣ್ಣನನ್ನು ಸಿಂಗರಿಸುವದರಲ್ಲೇ ಎಲ್ಲಾ ಹಿರಿತಲೆಗಳು ಮಗ್ನರಾಗುತ್ತಾರೆ.ಮೊದಲು ಗೌಡರ ಮನೆಯಿಂದ ಹಳೆಯ ಗಟ್ಟಿಮುಟ್ಟಾದ ಮಂಚ ತಂದು, ಅದನ್ನು ಚಕ್ಕಡಿಗೆ ಅಡ್ದಲಾಗಿ ಬಿಗಿದು, ಮೇಲೆ ಜಮಖಾನೆ ಹಾಸುತ್ತಾರೆ. ನಂತರ ಸೀರೆಗಳಿಂದ ಮಂಟಪ ಮಾಡಿ, ಮಂಟಪದ ಏರಡು ಬದಿಗೆ ಬಾಳೆ ಕಂಬ, ಕಬ್ಬು ಕಟ್ಟಿ, ಜಮಖಾನೆಯ ಮೇಲೆ ಅಕ್ಕಿ ಹಾಕಿ ಕಾಮನನ್ನೂ, ರತಿದೇವಿಯನ್ನು ಕೂರಿಸಲು ಅಣಿ ಮಾಡುತ್ತಾರೆ.ಇದರ ಮದ್ಯೆಯೇ ಕಾಮಣ್ಣನಿಗೆ ಸುಂದರವಾಗಿ ದೋತರ ಉಡಿಸಿ, ಶಲ್ಯ ಹೊದ್ದಿಸಿ,ಭರ್ಜರಿ ರೇಶಿಮೆ ಪಟಗಾ ಸುತ್ತಿ, ಕುರಿಯ ಉಣ್ಣೆಯ ಹುರಿ ಮೀಸೆ ಅಂಟಿಸಿದರೆ ಕಾಮಣ್ಣನ ಮೇಕಪ್ ಮುಗೀತು. ಇನ್ನು ರತಿದೇವಿಗೆ ಚೆಂದದ ಇಳಕಲ್ಲ್ ಸೀರೆ ಸುತ್ತೆ, ಮೂಗಿಗೆ ದೊಡ್ದ ಮೂಗುತಿ ಹಾಕಿ, ಬಳೆ ತೊಡಿಸಿ ದಂಡೆ ಹಾಕುತ್ತಾರೆ.ಇಬ್ಬರ ಕೈಯಲ್ಲೂ ಗುಲಾಬಿ ಕೊಟ್ಟರೆ ಅವರ ತಯಾರಿಯೆಲ್ಲಾ ಮುಗೀತು.ಅಮೇಲೆ ಇಡೀ ಚಕ್ಕಡಿಯನ್ನು ಹೂ ಗಳಿಂದ ಅಲಂಕರಿಸಿ, ಚಕ್ಕಡಿಯ ಒಂದು ಬದಿಗೆ ಹಾಳೆಯಲ್ಲಿ ಬರೆದ ಬಾಣ ಹೂಡಿದ ಕಾಮನ ಚಿತ್ರವನ್ನು ಸಾಂಕೇತಿಕ ’ಕಾಮದಹನ’ಕ್ಕಾಗೆ ಸಿಕ್ಕಿಸಿರುತ್ತಾರೆ.ನಂತರ ಮಜಲಿನ ಜೊತೆಗೆ ಮೆರವಣಿಗೆ ದ್ಯಾಮವ್ವನ ಗುಡಿಯಿಂದ ಶುರುವಾಗಿ ಮೊದಲು ಗೌಡರ ಮನೆಗೆ ಬಂದು, ಸಾಂಪ್ರಾದಾಯಿಕ ಪೂಜೆಯಿಂದ ಶುರುವಾಗುತ್ತದೆ. ಗೌಡರ ಮನೆಯಲ್ಲಿ ರತಿಗೆ ಉಡಿ ತುಂಬುತ್ತಾರೆ. ನಮ್ಮ ತಂದೆಯ ಕಾಲದಲ್ಲಿ ಹೆಣ್ಣಿನ ಕಡೆ, ಗಂಡಿನ ಕಡೆ ಇನ್ನೂ ಅನೇಕ ಆಚರಣೆಗಳಿದ್ದವಂತೆ, ನಾನಂತೂ ಅವನ್ನು ನೋಡಿಲ್ಲಾ. ಇದೆಲ್ಲಾ ಆದ ನಂತರ ಮೆರವಣೆಗೆ ಊರಿನ ಪ್ರಮುಖ ಬೀದಿಗಳಲ್ಲಿ ಸಾಗುತ್ತದೆ..

ನಿಜವಾದ ಹೋಳಿಯ ಗಮ್ಮತ್ತು ಇದಲ್ಲಾ; ಅವತ್ತು ಜಿಲ್ಲಾಡಳಿತ ಮದ್ಯ ಮಾರಾಟ ನೀಷೆದಿಸಿದ್ದರೂ, ಮೊದಲೇ ಎಲ್ಲಾ ಸ್ಟಾಕ್ ಮಾಡಿಟ್ಟುಕೊಂಡ ನಮ್ಮೂರ ಗಂಡಸರು ಆ ದಿನ ಬೆಳಬೆಳಗ್ಗೆಯೇ ಫುಲ್ ಟೈಟಾಗಿ ಬಿಡುತ್ತಾರೆ, ಹೋಳಿಯ ದಿನ ಒಂಥರಾ ಸ್ವೆಚ್ಚಾಚಾರಕ್ಕೆ ಊರು ಬಿದ್ದಿರುತ್ತದೆ, ಅವತ್ತೂ ಎನೂ ಮಾಡಿದರೂ ಯಾರೂ ಎನೂ ಕೇಳಕೂಡದು ಎಂಬ ಪ್ರತೀತಿ, ಹೀಗಾಗಿ ಎಂದು ಕುಡಿಯದವರೂ ಸಹ ಅವತ್ತು " ಗುಬ್ಬಿ ಪಾಕೀಟು" ಹರಿದು ಸಾರಾಯಿ ಗಂಟಲಿಗಿಳಿಸದೆ ಬಿಡುವದಿಲ್ಲಾ.ಊರಿನ ಬಹುತೇಕ ಗಂಡಸರು ಅವತ್ತು ನಶೆಯಲ್ಲಿರುತ್ತಾರೆ.ಹೀಗಾಗಿ ಕಂಡ ಕಂಡಲ್ಲಿ ಕುಡಿದು ಬಿದ್ದವರು ಒಂದು ಕಡೆ, ಕಿರುಕ್ಕು ಮಾಡುತ್ತಾ ಕೋಳಿ ಜಗಳ ಮಾಡುವ ತಾತ್ಕಾಲಿಕ ಕುಡುಕರು ಒಂದೆಡೆ, ಮಜಲಿನಲ್ಲಿ ದಿಮ್ಮಿ ಬಾರಿಸಲು ಪೈಪೋಟಿ ಮತ್ತೊಂದೆಡೆ. ಒಟ್ಟು ಇಡೀ ವಾತವರಣವೇ ಹುಳಿ ಹುಳಿ ವಾಸನೆಯಿಂದ ಗಬ್ಬೆದ್ದು ಹೋಗಿರುತ್ತದೆ.

ಹೊತ್ತೇರಿದಂತೆ ಓಕುಳಿಯಾಟವೂ ಶುರುವಾಗುತ್ತೆ. ಪಿಚಕಾರಿಗಳಲ್ಲಿ, ಬಾಟಲ್ಲುಗಳಲ್ಲಿ ಬಣ್ಣ ತುಂಬಿಕೊಂಡು ಎಲ್ಲರ ಮೇಲೂ ಬಣ್ಣ ಅರಚಲು ಶುರುವಾಗುತ್ತಾರೆ. ಬಣ್ಣ ಖಾಲಿಯಾದಂತೆ ಚಕ್ಕಡಿಯ ಎರಿಬಂಡಿ, ಟ್ರ್ಯಾಕ್ಟರಿವ ಗ್ರೀಸು, ಕೊಚ್ಚೆಯ ಕರಿ ನೀರು ಎಲ್ಲವೂ ಸೈ, ಎನಾದರೂ ನಡೆದೀತು. ಲಬೋ ಲಬೋ ಎಂದು ಹೋಯ್ಕೋಳ್ಳುತ್ತಾ , ಕಂಡೊರಿಗೆ ಬಣ್ಣ ಎರಚುತ್ತಾ ಇಡೀ ಊರಿಗೆ ಊರೇ ಮೋಜಿನಲ್ಲಿ ಮುಳುಗಿರುತ್ತದೆ. ನಡು ನಡುವೆ ಅಶ್ಲೀಲ ಬೈಗುಳಗಳು, ಕಾಮಣ್ಣನ ಮಕ್ಕಳು ಕಳ್ಳ ಸೂ... ಮಕ್ಕಳೂ ಅನ್ನುವ ಕೇಕೆ ಹೊಳಿ ಹಬ್ಬಕ್ಕೆ ವಿಶೇಷ ಹಿನ್ನೆಲೆ ಆಗಿರುತ್ತದೆ.ರಸ್ತೆಯ ಎರಡೂ ಬದಿ ತಲೆ ತುಂಬ ಸೆರಗು ಹೊತ್ತು, ಬಾಯಿಗೆ ಸೆರಗು ಆಡ್ದ ಇಟ್ಟುಕೊಂಡು ನಗುತ್ತಿರುವ ನಾರಿ ಮಣಿಗಳು, ತಮ್ಮ ತಮ್ಮ ಮನೆಯ ಗಂಡಸರ ಮಂಗನಾಟಗಳನ್ನು ಮೂಕಪ್ರೇಕ್ಷಕರಂತೆ ಅಸಹಾಯಕರಾಗಿ ನಿಂತು ನೋಡುತ್ತಿರುತ್ತಾರೆ.

ಸರಿಯಾಗಿ ಪಂಚಾಯಿತಿ ದಾಟುವ ವೇಳೆಗೆ ಎಲ್ಲಾ ಓಣೆಯ ಕಾಮನ ಮೆರವಣೆಗೆಗಳೂ ಸೇರುತ್ತವೆ,ಇದರಲ್ಲಿ ಗೌಡರ ಕಾಮ ಕೊನೆಯವನು.ಸಾಲು ಸಾಲಾಗಿ ಮೆರೆವಣಿಗೆ ಸಾಗುತ್ತಿದ್ದಂತೆ ಬೇರೆ ಓಣಿಯವರೊಂದೆಗೆ ಪೈಪೋಟಿಗೆ ಬಿದ್ದ ಮಜಲಿನ ಮೇಳಗಳು ಇನ್ನೂ ಜೋರಾಗಿ ಹಲಗೆ ಬಡಿಯತೊಡಗುತ್ತಾರೆ, ಇವರನ್ನು ಶಿಳ್ಳೇ ಹಾಕಿ, ಕೊರಳಲ್ಲಿ ಮಾಲೆ ಹಾಕಿ, ಅವರ ಅಂಗಿಗೆ ನೋಟು ಸಿಕ್ಕಿಸಿ ಪ್ರೊತ್ಸಾಹಿಸುತ್ತಾರೆ. ಮದ್ಯೆ ಮದ್ಯೆ ಚುರುಮರಿ, ಕುಸುಬಿ ಇವರ ಮೇಲೆ ಹಾಕುತ್ತಾರೆ.ಮೊದಲೇ ಕುಡಿದ ಅಮಲೀನಲ್ಲಿರುವರು,ವಿಚಿತ್ರವಾಗಿ ಅಂಗಚೇಷ್ಟೆ ಮಾಡುತ್ತಾ, ಕುಣಿಯುತ್ತಾ ಹಲಗೆ ಬಡಿಯತೊಡಗುತ್ತಾರೆ. ಈ ಮದ್ಯೆ ಕಣಿ ಬಾರಿಸುವವರು ಹಲಗೆ ಬಾರಿಸುತ್ತ, ತಾಳ ತಪ್ಪದೆ ನೆಲದಲ್ಲಿ ಇಟ್ಟಿರುವ ನಾಣ್ಯವನ್ನು ಹಣೆಯಿಂದ ತೆಗೆಯುವದು,ನಾಲಿಗೆಯಿಂದ ನೋಟನ್ನು ತೆಗೆಯುವದು ಇತ್ಯಾದಿ ಸರ್ಕಸ್ಸುಗಳು ಅಮಲೇರಿದಂತೆ ಜೋರಾಗುತ್ತವೆ.ಹುಡುಗರಂತೂ ತಮ್ಮ ತಮ್ಮ ಡವ್ ಗಳ ಮನೆಮುಂದೆ ಇನ್ನೂ ಒವರ್ ಆಕ್ಟಿಂಗ್ ಮಾಡಿ Show off ನೀಡತೊಡಗುತ್ತಾರೆ.ಶಿಳ್ಳೇ, ಕೇಕೆ,ಕುಡುಕರ ಹಾರಾಟ, ಲಬೋ ಲಬೋ ಅಂತ ಹೊಯ್ಕೊಳ್ಳುವದು,ಮಜಲಿನ ನಾದ, ಓಕುಳಿಯಾಟ, ಅಶ್ಲೀಲ ಬೈಗುಳಗಳು ಎಲ್ಲಾ ಸೇರಿ ಒಂದು ವಿಕ್ಷಿಪ್ತ ಲೋಕವೇ ನಿರ್ಮಾಣವಾಗಿಬಿಟ್ಟುರುತ್ತದೆ.

ಊರ ಅಗಸೆಯಲ್ಲಿ ಒಟ್ಟು ಎರಡು ಕಟ್ಟಿಗೆಯ ರಾಶಿಯಿರುತ್ತವೆ, ಒಂದು ಗೌಡರ ಕಾಮನನ್ನು ಸುಡಲು, ಇನ್ನೊಂದು ಉಳಿದ ಓಣಿಯ ಕಾಮಣ್ಣಗಳ ಸಾಮೂಹಿಕ ದಹನಕ್ಕೆ.ಮೆರವಣಿಗೆ ಅಗಸೆ ಮುಟ್ಟಿದ ಕೂಡಲೇ ಕಾಮಣ್ಣನ ಮೂರ್ತಿಗಳನ್ನು ಮರೆ ಮಾಚುತ್ತಾರೆ. ಹಾಳೆಯ ಕಾಮನ ಚಿತ್ರವನ್ನು ಪೂಜಿಸಿ ಮೊದಲು ಗೌಡರ ಓಣಿಯ ಕಾಮನನ್ನುಸುಡುತ್ತಾರೆ. ನಂತರ ಗೌಡರ ಕಾಮನ ಬೆಂಕಿಯಿಂದ ಉಳಿದ ಓಣಿಯ ಕಾಮಣ್ಣರನ್ನು ಸುಡುತ್ತಾರೆ.ಆಗ ಎಲ್ಲಾ ಮಜಲು ಮೇಳಗಳು ಕಾಮನ ಬೆಂಕಿಯ ಸುತ್ತಲೂ ಹಲಗೆ ಬರಿಸುತ್ತಾ ಕುಣಿಯುತ್ತಾರೆ. ಎಲ್ಲರೂ ಲಬೋ ಲಬೋ ಎಂದು ಹೊಯ್ಕೋಳ್ಳುತ್ತಾ " ಉಂಡಿ ತಿನ್ನು ಅಂದ್ರ ... ತಿಂದು ಸತ್ತ್ಯಲ್ಲೋ" " ಚಾ ಕುಡಿ ಅಂದ್ರ ... ಕುಡಿದು ಸತ್ತ್ಯಲ್ಲೋ" ಅಂದು ನಾಟಕೀಯವಾಗಿ ಅಳುತ್ತ್ತಾ, ತಮ್ಮ ಅಂಗಿ ಕಳೆದು ಬೆಂಕಿಗೆ ಆಹುತಿ ನೀಡುತ್ತಾರೆ.ನಂತರ ಮೋದಲೆ ಮನೆಯಿಂದ ತಂದ ಕುಳ್ಳೀನಲ್ಲೋ, ಚಿಪ್ಪಿನಲ್ಲೋ ಕಾಮನನ್ನು ಸುಟ್ಟ ಬೆಂಕಿಯನ್ನು ಮನೆಗೆ ಒಯ್ದು,ಸ್ವಲ್ಪ ಬೆಂಕಿಯನ್ನು ಒಲೆಗೆ ಹಾಕುತ್ತಾರೆ ಮತ್ತು ಉಳಿದುದರಿಂದ ಆ ಹಿಂಗಾರಿನ ಹೊಸ ಕಡಲೆಕಾಯಿ ಗಿಡಗಳನ್ನು ಮನೆ ಮುಂದೆ ಸುಟ್ಟು ಕಡಲೆ ಕಾಯಿ ತಿನ್ನುತ್ತಾರೆ.

ಕಾಮನನ್ನು ಸುಟ್ಟ ಮೇಲೆ ಓಕುಳಿ ಆಡುವುದು ಬಂದ್.ಮುಂದೆ ಶುರುವಾಗುವದೇ ಹೋಳಿ ಹಬ್ಬದ ವಿಶಿಷ್ಟ ಆಚರಣೆಯಾದ ’ಸೋಗ’.. ಸೋಗು ಅಂದ್ರೆ ಪೂರ್ತಿ ಟೈಟಾದವನೊಭ್ಬನನ್ನು ನಿಜವಾದ ಹೆಣದಂತೆ ಶೃಂಗರಿಸಿ, ಒಂದು ಏಣಿಯ ಮೇಳೆ ಕೂರಿಸುತ್ತಾರೆ, ಗಂಡಸರೆ ಹೆಂಗಸರ ಹಳೆಯ ಸೀರೆ, ನೈಟಿ, ಚೂಡಿದಾರು ತೊಟ್ಟು ಸತ್ತವನ ಹೆಂಡತಿ, ಮಗಳ ವೇಷ ಧರಿಸಿ ಗೋಳಾಡೀ ಅಳುತ್ತಾರೆ,ಸಬ್ಯರು ಇವರ ಸಂಭಾಷಣೆ ಕೇಳಿದರೆ ಮುಗೀತು. ತೀರಾ ಅಶ್ಲೀಲ ಭಾಷೆಯಲ್ಲಿ ಹಾಸ್ಯ ಮಾಡುತ್ತ್ತ ನೆರೆದವರಿಗೆ ಭರ್ಜರಿ ಮನೋರಂಜನೆ ನೀಡುತ್ತಾರೆ. ಹೆಂಗಸರೂ ಸಹ ಈ ವೇಷದವರನ್ನು ಮಾತಾಡಿಸಿ ಹೊಟ್ಟ ತುಂಬಾ ನಗುತ್ತಾರೆ.ಇದೆಲ್ಲಾ ಮುಗಿದ ಮೇಲೆ ಮನೆಗೆ ಹೋಗಿ ಬಣ್ಣ ಹೋಗುವಂತೆ ತಲೆ ಸ್ನಾನ ಮಾಡಿ , ಅವತ್ತಿನ ಸ್ಪೇಶಲ್ ಅಡಿಗೆ ಹೋಳಿಗೆಯನ್ನು ತಿಂದರೆ ಸ್ವರ್ಗ ಸುಖ. ಆ ದಿನ ಹೊಯ್ಕೊಂಡ ಬಾಯಿಗೆ ಹೋಳಿಗೆ ಬೀಳಲೇ ಬೇಕಂತೆ.ರಾತ್ರಿ ಮತ್ತೊಮ್ಮೆ ಮಜಲು ಬಾರಿಸಿ ಮಂಗಳ ಮಾಡಿದರೆ ಆ ವರ್ಷದ ಹೋಳಿ ಆಚರಣೆ ಅಲ್ಲಿಗೆ ಮುಗಿದಂತೆ.

Tuesday, March 18, 2008

ಮತ್ತದೇ ಹಾಡು..

ಒಂದು ಹಳೆಯ ವಿಷಯದ ಮೇಲೆ "for a wrong reason" ಬರೆಯುತ್ತಿರುವುದು ಮುಜುಗುರದ ಮತ್ತು ಅಷ್ಟೇ ಬೇಜಾರಿನ ಸಂಗತಿಯೂ ಹೌದು.ಒಂದು ಲಘು ಬರಹದ ದಾಟಿಯ ವೈಯಕ್ತಿಕ ಅಭಿಪ್ರಾಯಕ್ಕೆ ಬಂದ ಪ್ರತಿಕ್ರಿಯೆಗಳು ನಿಜಕ್ಕೂ ಅನಿರಿಕ್ಷೀತ ಮತ್ತು ಅನಪೇಕ್ಷಣಿಯವೂ ಹೌದು.ಈ ಬರಹದ ಮೂಲಕ ನನ್ನ ನಾ ಸಮರ್ಥಿಸಿಕೊಳ್ಳುವುದಾಗಲಿ ಅಥವಾ "ಹೀಗಾಗಬಾರದಿತ್ತು" ಅಂತಾ ಗಲ್ಲ ಗಲ್ಲ ಬಡಿದುಕೊಳ್ಳುವುದಾಗಲಿ ಮಾಡಿವುದಿಲ್ಲ. ಕೆಲ ವಿಷಯಗಳಿಗೆ ನಾನು ಸ್ಪಷ್ಟೀಕರಣ ನೀಡುವುದು ನನ್ನ ಕರ್ತವ್ಯ ಎಂದು ಬರೆಯುತ್ತಿದ್ದೇನೆ..

ಘಟನೆಯೊಂದರ ಅಥವಾ ವಸ್ತುವೊಂದರ ವಸ್ತುಸ್ಥಿತಿಯನ್ನು ಗ್ರಹಿಸುವ ಮನೋಭಾವ ವ್ಯಕ್ತಿಯಿಂದ ವ್ಯಕ್ತಿಗೇ ವಿಭಿನ್ನವಾಗಿರಲೇಬೇಕು.ನನಗೆ ಮೊಸರನ್ನ ಇಷ್ಟವಾಗಿದೆ, ಎಲ್ಲರಿಗೂ ಮೊಸರನ್ನವೇ ಇಷ್ಟವಾಗಬೇಕೂ ಅಂತಲೋ, ಶಾರುಕಖಾನನ್ನು ಎಲ್ಲರೂ ಮೆಚ್ಚಲೇಬೇಕೆಂದು ಗೋಳಾಡುವುದು ದಡ್ದತನ. ತೀರಾ ನಿನ್ನ ಬೆನ್ನು ನಾನು ಚಪ್ಪರಿಸುತ್ತೇನೆ, ನನ್ನ ಬೆನ್ನು ನೀನು ಚಪ್ಪರಿಸು ಅನ್ನುವುದು ನೈಜಸ್ಥಿತಿಯ ವಿಮರ್ಶೆಯಾಗದೇ ಅದು ಬಟ್ಟಂಗಿತನವಾಗುತ್ತದೆ. ನಾನೇನು ಸಂಘಟಕರ ಆಶಯದ ಬಗ್ಗೆ,ಸಮಾವೇಶದ ಓಚಿತ್ಯದ ಬಗ್ಗೆ ಪ್ರಶ್ನಿಸಿಲ್ಲ. ಅಲ್ಲಿ ನಾನು ಗಮನಿಸಿದ ಅಥವಾ ನಾನು ಅಂದುಕೊಂಡದ್ದನ್ನು ದಾಖಲಿಸಿದ್ದೇನೆ ಮತ್ತು ನಾನು ಗಮನಿಸಿದ್ದೇ ಸರಿ ಅನ್ನುವ ಹುಂಬತನವೂ ನನ್ನಲಿಲ್ಲ. ನಿಮಗೆಲ್ಲರಿಗೂ ಅವತ್ತು ಖುಷಿಯಾಗಿದ್ದರೆ ಅದಕ್ಕಿಂತ ಸಮಾಧಾನದ ವಿಷಯ ಇನ್ನೇನಿದೆ? ಆದರೆ ನಾವು ಖುಷಿಯಾಗಿದೀವಿ ನಿನಗೇನು ಕಷ್ಟ? ಅನ್ನುವ ದಾಟಿ ಯಾಕೋ ಅಂತ ತಿಳಿತಿಲ್ಲ.

ಒಂದು ಹೊಸ ಯೋಜನೆಯ ಬೆನ್ನು ಬಿದ್ದವನಿಗೆ ಆಗಬಹುದಾದ ಸಣ್ಣ ಪ್ರಮಾದದ ಬೆಲೆಯ ಬಗ್ಗೆಯೂ ಅರಿವಿರಬೇಕಾಗುತ್ತೆ.ಹೌದು ಮೊದಲ ಸಾರಿಯ ಪ್ರಯತ್ನದಲ್ಲಿ ಕೆಲ ಅಭಾಸಗಳಿರೋದು ಸಹಜ ಮತ್ತು ನಾವದನ್ನೂ ಕಂಡೂ ಕಾಣದಂತೆ ಇದ್ದು ಬಿಡಬೇಕು ಅನ್ನುವುದು ಸಹ ಒಪ್ಪತಕ್ಕ ಮಾತೇ.ಆದರೇ ಒಂದು ಇ -ಮೇಲ್ ಗೋ ಅಥವಾ ಕಮೆಂಟಿಗೋ ಸ್ಪಂದಿಸಿ ಒಂದು ಹೊಸ ಪ್ರಯತ್ನಕ್ಕೆ ಸಾಕ್ಷೀಯಾಗುವ ಭರವಸೆಯಲ್ಲಿ ಬಂದವರಿಗೆ ಕಾರ್ಯಕ್ರಮದ ಬಗ್ಗೆ ತಮ್ಮದೇ ಆದ ನೀರಿಕ್ಷೇಗಳಿರುತ್ತವೆ ಮತ್ತು ಆ ನೀರಿಕ್ಷೆಗಳೆಲ್ಲಾ ಹುಸಿಯಾದಾಗ ನಿರಾಶೆಯಾಗುವುದು ಸಹಜ.ಯಾವುದೋ ಒಂದು ಕಡೆ ಪ್ರಕಟಣೆ ನೀಡಿ ’ಬೇಕಾದವರೂ ಬರಲಿ, ಬ್ಯಾಡದವರು ಬಿಡ್ಲಿ’ ಅನ್ನೋವ ಧೋರಣೆಯಲ್ಲಿದ್ದರೇ ನಾನು ಆ ರೀತಿ ನಿರಿಕ್ಷಿಸಿದ್ದು ತಪ್ಪಾಗುತ್ತೆ.ನೀವೆ ಬೇಕಾದರೆ ಪರಿಚಯಿಸಿಕೊಳ್ಳಿ , ಬ್ಯಾಡಾದರೆ ಸುಮ್ನಿರಿ ಅನ್ನುವದಕ್ಕೋ ಅದೇನು ರಾಮನವಮಿ ಪಾನಕದ ತರ ಅಲ್ಲಾ, ಬೇಕಾದವರು ತಗೋಂಡು ಬ್ಯಾಡಾದವರು ಬಿಡೋದಕ್ಕೆ.ಇನ್ನೋಬ್ಬರು ಯಾರೋ ರಶೀದ್ ಬಟ್ಟೆಯ ಬಗ್ಗೆ ಮಾತಾಡಿದ್ದಾರೆ, ನಾನೇನು ಯಕ್ಶಗಾನದ ವೇಷ ಹಾಕಿ ಅಂತಾ ಎಲ್ಲೂ ಹೇಳಿಲ್ಲವಲ್ಲ. ಅವರ ಸೀದಾ ಸಾದಾ ಉಡುಪು ಕಂಡು ಖುಷಿಯಾಗಿ ಅದನ್ನೂ ಪ್ರಸ್ತಾಪಿಸಿದ್ದೆ ಅಷ್ಟೆ.ಎಲ್ಲರನ್ನು ಅನವಶ್ಯಕವಾಗಿ ಎಳೆದು ತಂದು ಕೆಸರು ಎರಚುವುದು ಬ್ಯಾಡಿತ್ತೆನೋ.ಇನ್ನು ಚಡ್ಡಿ ಹಾಕಿದವರಿಗೆ ಬ್ಲಾಗು ಬರಿಯಬಾರದು, ಓದಬಾರದು ಅಂತ ಎಲ್ಲೂ ಹೇಳಿಲ್ಲವಲ್ಲ ಮತ್ತು ಕಾರ್ಯಕ್ರಮ ಮುಗಿಯುವವರೆಗೂ ನಾನಿದ್ದೆ ಮತ್ತು ಎಷ್ಟು ಜನ ಮುಗಿಯುವವರೆಗೂ ಇದ್ದರು ಅನ್ನುವುದೂ ಗೊತ್ತು.

ಇದೆಲ್ಲ ಸಾಯ್ಲಿ, ಉಳಿದ ಸಂಘಟಕರ ಬಗ್ಗೆ ನನಗೆ ಗೊತ್ತಿರಲಿಕ್ಕಿಲ್ಲ ಆದರೆ ಶ್ರೀನಿಧಿ ವೈಯಕ್ತಿಕವಾಗೆ ಗೊತ್ತು(ಯಥಾಪ್ರಕಾರ ಇ-ಮೇಲ್ ನಲ್ಲಿ). ಶ್ರೀ ಪ್ರಣತಿಯ ಪರವಾಗಿ ಆಹ್ವಾನ ಕಳಿಸಿದಾಗ, ನಾನಿದನ್ನೂ ಪ್ರಣತಿಯ ಪರವಾಗಿ ನನ್ನ ಸ್ನೇಹಿತರೀಗೂ ಕಳಿಸಬಹುದಾ ಅಂತಲೂ ಕೇಳಿದ್ದ ಮತ್ತು ನನಗೆ ವೈಯಕ್ತಿಕವಾಗಿ ಪರಚಯವಿದ್ದ ಕನ್ನಡ ಬ್ಲಾಗಿಗರನ್ನು ಅಹ್ವಾನಿಸಿಯೂ ಇದ್ದೆ. ಸಮಾವೇಶದ ಉದ್ದೇಶದ ಬಗ್ಗೆ, ಅದರ ಸಫಲತೆ ನಿಮಗಿರುವಷ್ಟೇ ಕಾಳಜಿ ನನಗೂ ಇದೆ ಮತ್ತು ನಾನೇನು ಮಾಡುತ್ತಿದ್ಡೇನೆ ಅನ್ನೋದರ ಅರಿವೂ ಇದೆ. ಅನವಶ್ಯಕವಾಗಿ ಎಲ್ಲವನ್ನೂ ಗುತ್ತಿಗೆ ತಗೋಂಡವರ ತರಹ ಪ್ರತಿಕ್ರಿಯುಸುವದನ್ನು ಬಿಟ್ಟು, ಸರಿ ತಪ್ಪುಗಳನ್ನು ವಿಮರ್ಶಿಸುವ ಮತ್ತು ಆಗಿರಬಹುದಾದ ಅಚಾತುರ್ಯಗಳು ಮುಂದೆ ಆಗದಂತೆ ಜವಾಬ್ದಾರಿ ವಹಿಸಬೇಕು. ಅದು ಬಿಟ್ಟು ನಾನು ಮಾಡಿದ್ದೆ ಸರಿ,ಫಸ್ಟ್ ಟೈಮು ಅಂತಲ್ಲ ಸಮಜಾಯಿಸಿ ನಮಗೆ ನಾವೇ ಕೊಟ್ಟುಕೊಂಡು ಸಮಾಧಾನಿಸಿಕೊಂಡರೆ ಎನೂ ಮಾಡಲೂ ಆಗುವುದಿಲ್ಲ. ಎಲ್ಲವನ್ನೂ ಮತ್ತು ಎಲ್ಲರನ್ನೂ ಸರಿತೂಗಿಸಿಕೊಂಡು ಹೋಗುವುದೆ ನಿಜವಾದ ಸವಾಲು, ಬರಿ ಹೊಗಳು ಭಟ್ಟರು ಹೇಳಿದ್ದೇ ನಂಬಿದರೆ ಯಥಾಸ್ಥಿತಿಯ ಅರಿವಾಗುವಿದಿಲ್ಲ್ಲಾ.ಮುಂದಿನ ಕಾರ್ಯಕ್ರಮಗಳು ಇದಕ್ಕೂ ಯಶಸ್ವಿಯಾದರೆ ಅದಕ್ಕಿಂತ ಸಂತೋಷದ ವಿಷಯ ಇನ್ನೇನಿದೆ?

ಇಷ್ಟರ ಹೊರತಾಗಿಯೂ ಸಂಘಟಕರ ಮನಸ್ಸಿಗೆ ನೋವಾಗಿದ್ದರೆ, ನಾನವರನ್ನು ಕ್ಷಮೆ ಕೇಳುತ್ತೇನೆ, ವಿಶೇಷವಾಗಿ ಶ್ರೀನಿಧಿ.. ಪ್ರತಿಕ್ರಿಯಿಸಿದ ಉಳಿದ "ಗುತ್ತಿಗೆದಾರ"ರ ಬಗ್ಗೆ ನಾನು ಏನು ಹೇಳಲಾರೆ.ಇನ್ನೂ ಚರ್ಚಿಸುವ ಇರಾದೆ ಯಾರಿಗಾದರೂ ಇದ್ದರೆ ನನ್ನ ಮೇಲ್ ಮುಖಾಂತರ ಸಂಪರ್ಕಿಸಬಹುದು,ಹೀಗೆ ಕೆಸರು ಎರಚಿಕೊಂಡು ಕಂಡೋರ ಮನರಂಜನೆಗೆ ಆಹಾರವಾಗುವ ಇಷ್ಟ ನನಗಂತೂ ಇಲ್ಲ.ಇನ್ನೂ ತವಡು ಕುಟ್ಟಲು ನನಗಿಷ್ಟವಿಲ್ಲ, ಅದಕ್ಕೆ ಇದನ್ನು ಇಲ್ಲಿಗೆ ಬಿಡುತ್ತಿದ್ದೇನೆ, ಇಲ್ಲಾ ನಂಗೆ ಇದನ್ನು ಇಲ್ಲಿಗೆ ಬಿಟ್ಟರೆ ನಂಗೆ ಅಜೀರ್ಣವಾಗುತ್ತೆ ಅನ್ನೋರ ಮೂಲವ್ಯಾಧಿ ತೊಂದರೆಗೆ ನಾನೇನು ಮಾಡಲಾಗುವುದಿಲ್ಲ..

Sunday, March 16, 2008

ನಿರಾಶೆ ಮೂಡಿಸಿದ ಕೂಟ

ಯಾಕೆ ಅಂತ ತಿಳಿತಿಲ್ಲಾ, ನಂಗೆ ಮಾತ್ರ ಬಹು ನಿರೀಕ್ಷಿತ ಭಾನುವಾರದ ಆನಲೈನ ಕನ್ನಡಿಗರ ಸಮಾವೇಶ ತುಂಬಾ ತುಂಬಾ ನಿರಾಶೆ ಮೂಡಿಸಿತು.. ವಾರದ ಮೂಂಚೆಯೇ ಎಲ್ಲಾ ಬ್ಲಾಗುಗಳಲ್ಲಿ ಓಡಾಡುತ್ತಿದ್ದ ಆಹ್ವಾನ ಕಂಡು ಎನೋ ಹೊಸ ಕ್ರಾಂತಿಯೇ ಆಗಿ ಬಿಡುತ್ತೆ ಅನ್ಕೋಂಡಿದ್ದೆ.ಆದರೆ ನನಗಂತೂ ಆಲ್ಲಿ ಆದ ಸಾಧನೆ ಮಾತ್ರ ದೊಡ್ದ ಶೂನ್ಯ.

ಭಾನುವಾರದ ಮಧ್ಯಾಹ್ನದ ನಿದ್ದೆ ತ್ಯಾಗ ಮಾಡಿ, ಪುಣ್ಯಾತ್ಮ ಮನೋಜನನ್ನು ಇನ್ನಿಲ್ಲದ ಆಮಿಷ ತೋರಿಸಿ ಕರೆದುಕೊಂಡು ಹೋಗುತ್ತಲೆ ಸುಶ್ರುತನ ಆಶಯ ಭಾಷಣ ಮುಗಿದಿತ್ತಂತೆ. ಇಲ್ಲಿಗೆ ಬಂದರೂ ನಮಗೆ ಕೊನೆಯ ಕುರ್ಚಿಯೇ ಮೀಸಲಾಗಿರುವುದು ಕಂಡು ಭಲೆ ಪ್ರೀತಿ ಉಕ್ಕಿ ಬಂತು. ಆಗ್ಲೆ ’ಪವನಜ’ ವೇದಿಕೆ ಏರಿ ಚಚ್ಚತೋಡಗಿದ್ದರು. ಎಲ್ಲಿ ರಶೀದು ಅಂತಾ ಅತ್ತಿತ್ತ ಹುಡುಕುವಷ್ಟರಲ್ಲಿ ತೀರಾ ಸೀದಾ ಸಾದಾ ಇದ್ದ ಅವರು ಕಣ್ಣಿಗೆ ಬಿದ್ದರು.ಆಗ್ಲೆ ನಾನು ಬ್ಲಾಗಿಗರನ್ನು ಹುಡುಕುವ ಯತ್ನದಲ್ಲಿ ತೊಡಗಿದ್ದೆ, ಎಲ್ಲಾ ತಮ್ಮ ಪಾಡಿಗೆ ತಾವೂ ತಮ್ಮ ಲೋಕದಲ್ಲಿ ಮಗ್ನರಾಗಿದ್ದರು,ಒಬ್ಬ ಚಡ್ಡಿ ಹಾಕ್ಕೋಂಡು ಬಂದಿದ್ದ, ಭಲೇ ಆನಲೈನ ಕನ್ನಡಿಗ ಎಂದುಕೊಂಡೆ.ಮತ್ತೋಬ್ಬ ತನ್ನ ಬೋಡು ತಲೆಗೆ ಚಸ್ಮಾ ಏರಿಸಿ ಕೂತಿದ್ದು ಕಂಡು ನಗು ಬಂತು . ನಾನು ಬೇಜಾರಾಗಿ ಮನೋಜನ ಜೊತೆ ಪಿಸುಮಾತಿನಲ್ಲಿ ಹರಟೆಗಿಳಿಯಬೇಕು ಅನ್ನುವಾಗ, ಮದ್ಯವಯಸ್ಕ ಬ್ಲಾಗಿಗರೋಬ್ಬರು ಗುರಾಯಿಸಿ ರಸಭಂಗ ಮಾಡಿದರು. ಇವರೆಲ್ಲಾ ಹಾಳಾಗ್ಲಿ ಸಂಘಟಕರು ಎಲ್ಲಿ ಹಾಳಾಗಿ ಹೋದರು ಎಂದು ನೋಡಿದ್ರೆ, ಅವರಲ್ಲೊಬ್ಬ ಮೌನವಾಗಿ ಮೊಬೈಲಿನಲ್ಲಿ ಗಾಳ ಹಾಕುತ್ತಿದ್ದ, ಮೀನಾದರೂ ಯಾವುದು ಅಂತಾ ಗಮನಿಸಿ ನೋಡಿದಾಗ ಅಲ್ಲೆ ಪ್ರೇಕ್ಷಕರ ಗುಂಪಿನಲ್ಲಿ ಕುಳಿತು ತಿರುಗಿ ತಿರುಗಿ ನೋಡುತ್ತಿತ್ತು ಒಂದು ಹೆಣ್ಣು ಮೀನು. ನಮ್ಮ ಮನೋಜ್ "ಭಾರೀ ಮೀನಿಗೆ ಗಾಳ ಹಾಕ್ಯಾನಲ್ರೀ" ಅಂತಾ ಭಲೇ ನೋವಿನಿಂದ ಗೋಳಾಡಿದ. ಹರಿಪ್ರಸಾದ ಚೀಟಿಯಲ್ಲಿ ಬರೆದದ್ದನ್ನು ಚೆನ್ನಾಗಿ ಹೇಳಿ ಹೋದರು. ರಶೀದು ಬಂದರು ಹೋದರು.ಅಷ್ಟರಲ್ಲಿ ನಿರೂಪಕ ’ಸಂಜೆ,ಚಾ’ ಅಂತೆಲ್ಲಾ ನಾಟಕೀಯವಾಗಿ ಹೇಳಿ ಹೋದ.ಇಲ್ಲಿವರೆಗೂ ಬಂದಿದ್ದಕ್ಕೆ ಚಹಾಕ್ಕಾದರೂ ದಾರಿಯಾಯ್ತು ಎಂದು ಎರಡೆರಡು ಭಾರಿ ಚಾ ಬಗ್ಗಿಸಿ ಕುಡಿದೆವೆ. ಇಷ್ಟೋತಾದರೂ ಯಾರಾದರೂ ಸಂಘಟಕರೂ ಎನು ಎತ್ತ ವಿಚಾರಿಸಿಯೇ ಇರಲ್ಲಿಲ್ಲ. ನಮಗಂತೂ ನಾವೂ ಸಂಬಂದವೇ ಇಲ್ಲದ ಜಗತ್ತಿಗೆ ಬಂದಿದ್ದೇವೇನೋ ಎಂಬ ಅನಾಥ ಭಾವ ಕಾಡತೊಡಗಿತು. ವಾಪಸು ಹೋದ ಮೇಲಾದರೂ ಎನಾದ್ರು ಭಯಂಕರ ಮಿರಾಕಲ್ ನಡೆಯುತ್ತೆ ಎಂಬ ಹುಸಿ ಆಸೆಯಿಂದ ಅದೇ ಕೊನೆ ಜಾಗಕ್ಕೆ ಬಂದು ಕುಳಿತೆವು. ಶ್ರೀನಿಧಿ ಬಂದು ಇನ್ನು ಮೇಲೆ ಸಂವಾದ ಇದೆಯಂತೂ , ಎನಾದ್ರೂ ಕೇಳುವುದಿದ್ದರೆ ಕೇಳಿ ಎಂದಾಗ, ನಮ್ಮ ಹಿಂದಿದ್ದ ಸಂಘಟಕನೊಬ್ಬ " ಯಾರದೋ ಗೋತ್ರ ಅಂತ್ದಿದ್ಯಲ್ಲ ಕೇಳು" ಅಂತಾ ಯಾರಿಗೋ ಚುಡಾಯಿಸುತ್ತಿದ್ದ. ಎಲಾ ಇವರ! ಕಂಡೋರ ಗೊತ್ರ ಕೇಳಲು ನಮ್ಮನ್ನು ಇಲ್ಲಿ ಕೂಡಿ ಹಾಕಿದ್ದಾರಾ? ಅಂತ ಸಂಶಯ ಬಂತು.

ಚೇತನಾ ತೀರ್ಥಹಳ್ಳಿ ನೋಡ್ತಿನಿ, ಜೋಗಿ ನೋಡ್ತಿನಿ, ಟೀನಾರನ್ನು ನೋಡ್ತಿನಿ ಅಂತೆಲ್ಲಾ ಬಂದಿದ್ದ ನನಗೆ ಯಾರು ಬಂದಿದ್ರು, ಯಾರು ಬಂದಿದಿಲ್ಲ ಎಂಬುದೇ ಕೊನೆವರೆಗೂ ತಿಳಿಲಿಲ್ಲಾ. ಕಡೆ ಪಕ್ಷ ಬಂದವರನ್ನು ಉಳಿದವರಿಗೆ ಪರಿಚಯಸುವ ಪ್ರಯತ್ನವೂ ನಡೆಯಲಿಲ್ಲ. ಎನೋ ಜವಾಬ್ದಾರಿ ಹಾಳು, ಮೂಳು ಅಂತೆಲ್ಲಾ ಇದುವರೆಗೂ ಬ್ಲಾಗುಗಳಲ್ಲಿ ಕೊರೆದಿದ್ದನ್ನೆ ಅಲ್ಲೂ ಕೊರೆಯಲು ಎಲ್ಲರನ್ನೂ ಕರೆಸಬೇಕಿತ್ತಾ? ಕೊನೆಕೊನೆಗೆ ಶ್ಯಾಮಾ ಮಾತಾನಾಡುವಾಗಲಂತೂ ಹೊರಗಡೆ ಸಂಘಟಕರ ಗಲಾಟೆಯಿಂದ ಮೊದಲೇ ಹಿಂದಿದ್ದ ನಮಗೆ ಎನೂ ಕೇಳಿಸದಂತಾಗತೊಡಗಿತ್ತು. ರಶೀದ್ ಆಗಾಗ ಹಿಂದೆ ತಿರುಗಿ ಇವರನ್ನು ನೋಡತೊಡಗಿದರು.ಆದರೂ ಛಲ ಬಿಡದ ಸಂಘಟಕರು ಮದ್ಯೆ ಮದ್ಯೆ ಕೆಲವರನ್ನು ಹೊರ ಎಳೆದೊಯ್ಯುವುದು, ಸ್ವಲ್ಪ ಸಮಯವಾದ ಮೇಲೆ ತಿರುಗಿ ಕಳುಸಿವುದು ನಡೆದೇ ಇತ್ತು.

ಎನೋ ಮೊದಲ ಬಾರಿ ನಡೆದ ಕಾರ್ಯಕ್ರಮವೆಂದು ನಿರೀಕ್ಷೆ ಜಾಸ್ತಿ ಇದ್ದುದಕ್ಕೆ ಹೀಗನಿಸಿತಾ? ಅಥವಾ ನನಗೋಬ್ಬನಿಗೆ ಮಾತ್ರ ಹೀಗೆ ಅನಿಸಿತಾ? ಅಂತಲೂ ಗೊತ್ತಿಲ್ಲ್ಲಾ. ನನಗಂತೂ ನಂದ ಲವ್ಸ್ ನಂದಿತ ಬಿಟ್ಟು ಇಲ್ಲಿಗೆ ಬಂದಿದ್ದಕ್ಕೆ ತುಂಬಾ ನಿರಾಶೆ ಅಯ್ತು. ಉಳಿದವರ ವಿಚಾರ ಅವರವರ ಭಾವಕ್ಕೆ , ಅವರವರ ಭಕುತಿಗೆ ಬಿಟ್ಟಿದ್ದು..

Sunday, March 9, 2008

ಮಹಾಪ್ರಳಯ

"ಸರಿಯಾಗಿ 1999ನೇ ಇಸವಿ, ಒಂಬತ್ತನೇ ತಿಂಗ್ಳು,ಒಂಬತ್ತನೇ ತಾರೀಕು,ಒಂಬತ್ತು ಗಂಟೆ ಒಂಬತ್ತು ನಿಮಿಷ ಒಂಬತ್ತು ಸೆಕೆಂಡ್ ಗೆ ಪ್ರಳಯ ಆಗೀಯೇ ಅಗುತ್ತಂತೆ" ಎಂದು ಒಂದೇ ಉಸಿರಿನಲ್ಲಿ ’ಎಲ್ಲಾ ನನಗೇಯೇ ಗೊತ್ತು’ ಎಂಬ ಧಿಮಾಕಿನ ದಾಟಿಯಲ್ಲಿ ಆಕೆ ಎರಡು ಪಿರಿಯಡ್ಡುಗಳ ಮಧ್ಯದ ವಿರಾಮದ ಸಮಯದಲ್ಲಿ ಖಚಿತವಾಗಿ ಸಾರಿ ಬಿಟ್ಟಿಳು. ಚಡ್ಡಿಯ ಗುಂಡಿ ಕಿತ್ತರೂ ಪಿನ್ನು ಹಾಕಿಕೊಂಡು ಓಡಾಡುತ್ತಿದ್ದ ಪ್ರೈಮರಿ ದಿನಗಳಲ್ಲಿ ನಮಗೆ ಇಂತಹ ಪದವೂ ಮತ್ತದರ ಸಾದ್ಯತೆಯ ಅರಿವೂ ಇರದುದರಿಂದ ಹೆದರಿಕೆಯ ಬದಲು, ವಿಷಯ ಭಲೇ ಮೋಜಿದನೆಸಿತು..

ಆದರೂ ಬಾಲ್ಯದಿಂದಲೇ ಹುಡುಗಿಯರ ಬಗ್ಗೆ ಸಿಕ್ಕಾಪಟ್ಟೆ ಅಕ್ಕರೆ, ಅಭಿಮಾನ ಇಟ್ಟುಕೊಂಡ ನನಗೇ ಅವಳನ್ನು ನೋಯಿಸಿ ಘನ ಘೋರ ನರಕಕ್ಕೆ ಹೋಗುವ ಮನಸ್ಸಾದರೂ ಬಂದೀತೇ? ಹೀಗಾಗಿ " ಹೌದಾ?" ಎಂದು ರಾಗ ಎಳೆದು " ಪ್ರಳಯ ಅಂದ್ರೆ ಎನಾಗುತ್ತೆ?" ಅಂತ ನನ್ನ ಪೆದ್ದುತನದ ವಿಶ್ವರೂಪ ದರ್ಶನ ಮಾಡಿಸಿದೆ.

ನಮ್ಮ ಪ್ರತಿಕ್ರಿಯೆ ಕಂಡು ಭಲೇ ಉತ್ಸಾಹಿತಳಾಗಿ ಆಕೆ, ಪ್ರಳಯದ ಬಗ್ಗೆಯೂ, ಆಗಬಹುದಾದ ಬೆಂಕಿ ಮಳೆಯ ಬಗ್ಗೆಯೂ, ಉಕ್ಕಿ ಬರಬಹುದಾದ ಸಮುದ್ರದ ಬಗ್ಗೆಯೂ ಭಲೇ ರಸವತ್ತಾಗಿ ಹೇಳಿ, ಹಂಪೆಯಲ್ಲಿ ಒಂದು ಕಲ್ಲಿನ ಕೋಳಿಯಿದೆಯಂದೂ, ಅದು ಪ್ರಳಯದ ಮುನ್ಸೂಚನೆ ಬಂದಾಗ ಜೀವ ಬಂದು ಕೂಗುತ್ತದೆಯೆಂದೂ ಹೇಳಿ ನಮ್ಮಲ್ಲಿ ಭಾರೀ ಪುಳಕವನ್ನುಂಟು ಮಾಡಿದಳು, ಕೊನೆಗೆ ಪ್ರಳಯದ ಬಗ್ಗೆ ಯಾರೋ ಒಬ್ಬ ಜೋತಿಷಿ ಮೊದಲೇ ಬರೆದಿಟ್ಟಿದಾನೆ ಎಂದೂ ಸಹ ಸೇರಿಸಿದಳು ( ಆ ಪುಣ್ಯಾತ್ಮ ’ನಾಸ್ಟ್ರಡಾಮಸ್’ ಇರಬೇಕೆಂದು ನನ್ನ ಇತ್ತೀಚಿನ ಸಂಶೋದನೆ).

ಇವಳು ಈ ರೀತಿ ಪುಂಕಾನುಪುಂಕವಾಗಿ ಪುಂಗತೊಡಗಿದರೇ ನಮಗೆ ನಂಬುವುದೋ, ಬಿಡುವುದೋ ಎಂಬ ಸಂದಿಗ್ದ ಪರಿಸ್ಥಿತಿ.ಸ್ವಲ್ಪ ನಾವೇ ಧೈರ್ಯ ತಂದುಕೊಂಡು " ನಿಂಗ್ಯಾರೆ ಇದನ್ನು ಹೇಳಿದ್ದು? " ಅಂತಲೂ ಕೇಳಿ ಬಿಟ್ಟೆ.ಇದನ್ನು ಮೊದಲೇ ಊಹಿಸಿದ್ದಳು ಎಂಬಂತೆ ಪಟ್ಟನೆ " ಪ್ರಳಯದ ಬಗ್ಗೆ ’ತರಂಗ’ದಲ್ಲಿ ಬಂದಿದೆಯೆಂದೂ, ಅವರ ಚಿಕ್ಕಮ್ಮ್ಮ ಅದನ್ನು ಓದಿ ಈ ಮಹತಾಯಿಗೆ ಹೇಳಿದಾರೆಂದು ಹೇಳಿ, ಯಾವುದಕ್ಕೂ ಇರ್ಲಿ ಅಂತ "ನಾನು ಅದನ್ನು ಓದಿದ್ದೀನಿ" ಅಂತಾ ಕೊನೆಗೆ ಸೇರಿಸಿ ಪ್ರಳಯದ ಬಗ್ಗೆ ಅದಿಕೃತ ಸೂಚನೆ ಕೊಟ್ಟುಬಿಟ್ಟಳು. ಪೇಪರು ಓದಲೂ ಸಹಾ ಪಂಚಾಯಿತಿ ಆಶ್ರಯಿಸಿದ್ದ ನಮಗೆ ’ತರಂಗ’ ಪತ್ರಿಕೆ ಅಬ್ಬಿಗೇರಿಯಲ್ಲಿ ಓದಲು ಸಿಗುವುದು ದುರ್ಲಭ ಅನಿಸಿದಾಗ ಅವಳನ್ನೆ ಆ ಸಂಚಿಕೆಯನ್ನು ಶಾಲೆಗೆ ತರಲು ಮನವಿ ಕೊಟ್ಟು ಬಿಟ್ಟೆವೂ.

ಅಪರೂಪಕ್ಕೆ ಸಿಕ್ಕ ಇಂತಹ ರುಚಿಕಟ್ಟಾದ ವಿಷಯವನ್ನೂ ನನ್ನ ತಮ್ಮನೊದಿಗೆ ಹಂಚಿಕೊಳ್ಳದಿರಲು ಸಾದ್ಯವೇ?. ಅವತ್ತು ರಾತ್ರಿ ಅಪ್ಪಾಜಿ ಎಲ್ಲಾ ಲೈಟು ಆರಿಸಿ,ಹೊರಗಿನ ಅಗುಳಿ ಹಾಕಿ " ಇನ್ನೂ ಸುಮ್ನ ಮಕ್ಕೋರಿ, ಹೊತ್ತಾತು" ಅಂತ ತಮ್ಮದೇ ಆದ ಶೈಲಿಯಲ್ಲಿ ’ಗುಡ್ ನೈಟ್’ ಹೇಳುವುದನ್ನೆ ಕಾದಿದ್ದ ನಾನು , ಕೂಡಲೇ ತಾಜಾ ’ಪ್ರಳಯ’ದ ರಸಾಯನಕ್ಕೆ ಇನ್ನಷ್ಟು ರುಚಿಗೆ ತಕ್ಕಷ್ಟು ಉಪ್ಪು, ಹುಳಿ, ಖಾರ ಬೆರೆಸಿ ನನ್ನ ತಮ್ಮನ ಮೇಲೆ ಪ್ರಯೋಗಿಸಿದೆ.
ನನ್ನ ತಮ್ಮ ಮೊದಲೇ " ತಾರೆ ಜಮೀನ್ ಪರ್" ಕೇಸಿನ ಹುಡುಗ ಅವ, ಪ್ರಳಯದ ಬಗ್ಗೆ ಗಾಬರಿಯಾಗುವುದು ಬಿಟ್ಟು , ಎನೋ ಒಂತರಾ ನಿರಾಳಗೊಂಡವನಂತೆ ಭಲೇ ಉಮ್ಮೇದಿಯಿಂದ " ಯಣ್ಣಾ! ಇನ್ನು ನಾವೂ ಸಾಲಿಗೆ ಹೋಗುವುದೂ ಮತ್ತು ಮುಂಜೇಲೇ ಎದ್ದು ಓದೋದು ವೇಸ್ಟು, ಎಲ್ಲಾರೂ ಹೆಂಗಿದ್ರು ಸಾಯ್ತಿವೀ" ಅಂತಾ ನಂಗೆ ಅದುವರೆಗೂ ಹೊಳೆಯದ್ದನ್ನ ಹೊಳೆಸಿ,ನನ್ನ ತಲೆಯಲ್ಲೂ ಹೊಸ ಆಸೆ ಬಿತ್ತಿ , ಮುಂಡೆದು ಮಲಗಿಯೇ ಬಿಟ್ಟಿತ್ತು..

ಅ ಇಸವಿಯೂ ಬಂತು ,ಆಕೆ ಹೇಳಿದ ಸಮಯವೂ ಬಂದು ಹೋಯ್ತು, ಪ್ರಳಯ ಮಾತ್ರ ಆಗಲೇ ಇಲ್ಲಾ. ಪ್ರಳಯದ ಬಗ್ಗೆ ಎನೇನೋ ಉಹಿಸಿದ್ದ ನಮಗೆ ಭಾರೀ ನಿರಾಸೆ ಆಗಿತ್ತು. ಹಂಪೆಗೆ ಹೋದಾಗ ಅಲ್ಲಿನ ಗೈಡಿಗೆ ಕಲ್ಲಿನ ಕೋಳಿಯ ಬಗ್ಗೆ ಕೇಳಿದ್ದೆ, ಅವಾ ನನ್ನ ಮುಖ ನೋಡಿ ಒಂಥರಾ ನಕ್ಕಿದ್ದ..