Wednesday, March 26, 2008

ಹೋಳಿಯ ಮೆಲುಕು...

ಶಿವರಾತ್ರಿ ಮುಗಿದ ಮರುದಿನದಿಂದಲೇ ನಮ್ಮೂರ ಹೈಕಳು ಮನೆಯ ಮಾಡು,ನ್ಯಾಗೊಂದಿ ಎಲ್ಲಾ ಕಡೆ ತಡಕಾಡಿ ಹಲಗೆಯನ್ನು ಬಡಿಯತೊಡಗಿದ ಕೂಡಲೇ ನಮಗೆ ಮೂಂದೊದಗಬಹುದಾದ ನಿದ್ರಾರಹಿತ ರಾತ್ರಿಗಳ ಸ್ಪಷ್ಟ ಸುಳಿವು ದೊರಕಿ ಬಿಡುತ್ತೆ ಮತ್ತು ಹೋಳಿ ಆಗಮನದ ಸ್ಪಷ್ಟ ಸೂಚನೆಯೂ ದೊರಕಿ ಬಿಡುತ್ತೆ.. ನಾಗರ ಪಂಚಮಿ ಹೆಂಗಸರಿಗಾದರೆ, ಹೋಳಿ ಗಂಡಸರಿಗೆ ಎಂದು ನಮ್ಮ ಹಿರಿಯರು ಫಿಕ್ಸ್ ಮಾಡಿದ "ಮೀಸಲಾತಿ"ಯ ಸಂಪೂರ್ಣ ಲಾಭವನ್ನು ನಮ್ಮ ಊರ ಗಂಡಸರು ಪಡೆಯದೇ ಬಿಡುವದಿಲ್ಲಾ.

ನಮ್ಮ ಹೈಕಳಿಗೆ ಉಳಿದ ಓಣಿಯವರಿಗಿಂತ ಕಾಮನನ್ನು ಸುಡಲು ಜಾಸ್ತಿ ಕಟ್ಟಿಗೆ ಸಂಗ್ರಹಿಸುವ ಹ್ಯಾವ.ಹೀಗಾಗಿ ಹೋಳಿ ಸಮೀಪಿಸುತ್ತಿದ್ದಂತೆ ಹುಡುಗ್ರು ಕುಳ್ಳು, ಕಟ್ಟಿಗೆ ಕಂಡೋರ ಹಿತ್ತಲಿನಿಂದ ಎಗರಿಸತೊಡಗುತ್ತಾರೆ. ಅಲ್ಲದೇ ವರ್ಷಪೂರ್ತಿ ಕಿರಿಕ್ಕ್ ಮಾಡಿದವರಿಗೆ ಒಂದು ಗತಿ ಕಾಣಿಸಲು ಇದು ಸುವರ್ಣಾವಕಾಶ;ಯಾವಗಲೋ ಕ್ರಿಕೆಟ್ ಬಾಲು ಕಸಿದುಕೊಂಡು ಗಾಂಚಾಲಿ ಮಾಡಿದ್ದ ಗೌಡರ ಮನೆಯ ಮುಂದಿನ ಹತ್ತಿ ಕಟಗಿ ರಾಶಿಯನ್ನು,ಯಾವಾಗ್ಲೂ ಪ್ರಾಣ ಹಿಂಡುವ ಗಣಿತ ಮಾಸ್ತರೀನ ಕುಳ್ಳುಗಳ ರಾಶಿಯನ್ನೂ ಮತ್ತು ಯಾವಾಗ್ಲೂ ಫಸ್ಟ್ ಬಂದು ಹೊಟ್ಟೆ ಉರಿಸುವ ಗಂಗಿಯ ಮನೆಯ ಒಡ್ದಗಟಿಕೆಗಳನ್ನು ರಾತ್ರೋ ರಾತ್ರಿ ಕದ್ದು ಕಾಮನ ಕಟ್ಟಿಗೆಗೆ ತರ್ಪಣ ನೀಡಿ ತಮ್ಮ ಹೊಟ್ಟೆಯ ಸಂಕಟವನ್ನು ತಣಿಸಿಕೊಳ್ಳುತ್ತಾರೆ. ಇನ್ನೂ ಇದ್ದುದರಲ್ಲಿಯೇ ಕೆಲ ಧೈರ್ಯವಂತ ಮುಂಡೆವು ಸಂಜೆಯೇ ಗುಂಪುಗೂಡಿ ಹಲಗೆ ಬಡಿಯುತ್ತಾ, ಲಬೊ ಲಬೊ ಹೊಯ್ಕೊಳ್ಳುತ್ತಾ " ಕಾಮಣ್ಣನ ಮಕ್ಕಳು ಕಳ್ಲ ಸೂ.. ಮಕ್ಕಳು " ಅನ್ನುತ್ತಾ ಮನೆಯವರ ಎದುರೆ ಅವರ ಕಟ್ಟಿಗೆ, ಕುಳ್ಳು ಎಗರಿಸಿಬಿಡುತ್ತಾರೆ. ಇವರ ಹಿಂದೆಯೇ " ರಾಡ್ಯಾ, ಜಿಟ್ಟ್ಯಾ, ಹಾಟ್ಯಾ,ಬಾಡಕೋ" ಇತ್ಯಾದಿ ಉ.ಕರ್ನಾಟಕದ "exclusive" ಬೈಗುಳಗಳ ಸಹಸ್ರನಾಮಾವಳಿ ಶುರುವಾಗಿಬಿಡುತ್ತೆ.ಕೊನೆಕೊನೆಗಂತೂ ಹುಡುಗರು ಯಾರದೋ ಮನೆಯ ಚಪ್ಪರದ ತೆಂಗಿನ ಗರಿ, ಮುರುಕು ಚಕ್ಕಡಿಯ ನೊಗ, ಬಡಿಗ್ಯಾರ ಮನೆಯ ಮುಂದಿನ ಮರದ ಮರಡು ಎಲ್ಲವನ್ನೂ ಕಾಮನ ಕಟ್ಟಿಗೆಗೆ ಸಮರ್ಪಿಸಿಬಿಡುತ್ತಾರೆ. ಒಮ್ಮೆ ಕಾಮನ ಕಟ್ಟಿಗೆಯ ರಾಶಿಗೆ ಸಮರ್ಪಣೆಯಾದರೆ ಮರಳಿ ಕಟ್ಟಿಗೆ ಮನೆಗೆ ತರಬಾರದು ಅನ್ನುವ ಪ್ರತೀತಿ ಇರುವದರಿಂದ ಕಟ್ಟಿಗೆ ಮಾಲಕರು ಹೊಟ್ಟೆ ಉರಿದುಕೊಂಡು ಹುಡುಗರನ್ನು ಶಪಿಸುತ್ತಿರುತ್ತಾರೆ.

ಇನ್ನೂ ಓಣಿಯ ಹಿರಿ ತಲೆಗಳು ಹಬ್ಬಕ್ಕಾಗಿ ಚಂದಾ ಸಂಗ್ರಹಿಸುವದರಲ್ಲಿ, ಮಜಲಿನ ಮೇಳದ ತಯಾರಿಯಲ್ಲಿ ಬ್ಯುಸಿಯಾಗಿರುತ್ತಾರೆ.ನಮ್ಮ ಓಣೆಯಲ್ಲಂತೂ ಹಬ್ಬಕ್ಕೆ ಐದು ದಿನ ಮುಂಚೆ ಎಲ್ಲಾ ಹಲಗೆಗಳನ್ನು ಗರಡಿ ಮನೆಯಿಂದ ಹೊರ ತಂದು ಒಪ್ಪವಾಗಿ ಜೋಡಿಸಿದ ನಂತರ ಓಣಿಯ ಹಿರಿಯರನ್ನು ಕರೆದು, ಗೌಡರಿಂದ ಎಲ್ಲಾ ಹಲಗೆ ಪೂಜೆ ಮಾಡಿಸಿ, ಖಾರ ಚುರುಮರಿ ಹಂಚಿ ಶಾಸ್ತ್ರೊಕ್ತವಾಗಿ ಮಜಲು ಹಚ್ಚಲು ಶುರು ಮಾಡುತ್ತಾರೆ. ಮಜಲು ಅಂದರೆ ಹುಡುಗರ ಹಾಗೆ ಕಂಡ ಕಂಡ ಹಾಗೆ ಹಲಗೆ ಬಡಿಯುವದಲ್ಲಾ,ಒಂದು ಲಯಬದ್ದವಾಗಿ, ರಾಗಬದ್ದವಾಗಿ ಹಲಗೆ ಬಾರಿಸುವದು. ಈ ಹಲಗೆಗಳಲ್ಲೂ ಕಣೀ, ದಿಮ್ಮಿ, ಜಗ್ಗಲಿಗೆ ಎಂಬ ಪ್ರಕಾರಗಳುಂಟು.ವೃತ್ತಾಕಾರವಾಗಿ ನಿಂತು ಮದ್ಯದದಲ್ಲಿ ಕಣಿ ಬಾರಿಸುವವನ ತಾಳಕ್ಕೆ ತಕ್ಕಂತೆ, ಸುತ್ತಲಿನ ಎಲ್ಲರೂ ದಿಮ್ಮಿ ಬಾರಿಸುತ್ತಾರೆ. ಕಣಿ ಬಾರಿಸುವದು ಒಂದು ಕಲೆ, ಮಣಿಕಟ್ಟನ್ನು ಲಯಬದ್ದವಾಗಿ ಆಡಿಸುತ್ತ, ಹಲಗೆಯ ನಿರ್ದಿಷ್ಟ ಮೂಲೆಗೆ ಬಡಿಯುವದು ಸುಲಭಸಾದ್ಯ ವಿದ್ಯೆಯಲ್ಲಾ.ಇನ್ನು ಜಗ್ಗಲಿಗೆ ಅಂದರೆ ಚಕ್ಕಡಿ ಗಾಲಿ ಗಾತ್ರದ ಹಲಗೆಗಳು.ಹಬ್ಬದ ದಿನ ಇವರ ಮಜಲಿನ ಜೊತೆಗೆ ಕೊರವರ ಶಹನಾಯ್ ಸಾಥಿಯೂ ಸೇರಿರುತ್ತದೆ.ಇವರ ಹಲಗೆ ಕಾಯಿಸಲು ಮಜಲಿನ ಪಕ್ಕದಲ್ಲಿ ಒಂದು ಕಡೆ ಬೆಂಕಿ ಹಾಕಿರುತ್ತಾರೆ. ಇವರ ವಾದ್ಯಗೋಷ್ಟಿ ಬೆಳತನಕ ಸಾಗುತ್ತದೆ.

ಇನ್ನು ಹಬ್ಬದ ಹಿಂದಿನ ದಿನ ದ್ಯಾಮವ್ವನ ಗುಡಿಯಲ್ಲಿನ ದೊಡ್ಡ ಮರದ ಕಪಾಟಿನಿಂದ ಭವ್ಯ ಕಾಮ,ರತಿಯರ ವಿಗ್ರಹಗಳನ್ನು ಹೊರತೆಗೆಯುತ್ತಾರೆ, ಓನಿಯ ಚಿಲ್ಟಾರಿಗಳು ಮೂರ್ತಿಗಳ ಸ್ಪರ್ಶಕ್ಕಾಗಿ ಕಿತ್ತಾಡುತ್ತಿರುತ್ತಾರೆ.ಅವತ್ತೀಡಿ ರಾತ್ರಿ ಕಾಮಣ್ಣನನ್ನು ಸಿಂಗರಿಸುವದರಲ್ಲೇ ಎಲ್ಲಾ ಹಿರಿತಲೆಗಳು ಮಗ್ನರಾಗುತ್ತಾರೆ.ಮೊದಲು ಗೌಡರ ಮನೆಯಿಂದ ಹಳೆಯ ಗಟ್ಟಿಮುಟ್ಟಾದ ಮಂಚ ತಂದು, ಅದನ್ನು ಚಕ್ಕಡಿಗೆ ಅಡ್ದಲಾಗಿ ಬಿಗಿದು, ಮೇಲೆ ಜಮಖಾನೆ ಹಾಸುತ್ತಾರೆ. ನಂತರ ಸೀರೆಗಳಿಂದ ಮಂಟಪ ಮಾಡಿ, ಮಂಟಪದ ಏರಡು ಬದಿಗೆ ಬಾಳೆ ಕಂಬ, ಕಬ್ಬು ಕಟ್ಟಿ, ಜಮಖಾನೆಯ ಮೇಲೆ ಅಕ್ಕಿ ಹಾಕಿ ಕಾಮನನ್ನೂ, ರತಿದೇವಿಯನ್ನು ಕೂರಿಸಲು ಅಣಿ ಮಾಡುತ್ತಾರೆ.ಇದರ ಮದ್ಯೆಯೇ ಕಾಮಣ್ಣನಿಗೆ ಸುಂದರವಾಗಿ ದೋತರ ಉಡಿಸಿ, ಶಲ್ಯ ಹೊದ್ದಿಸಿ,ಭರ್ಜರಿ ರೇಶಿಮೆ ಪಟಗಾ ಸುತ್ತಿ, ಕುರಿಯ ಉಣ್ಣೆಯ ಹುರಿ ಮೀಸೆ ಅಂಟಿಸಿದರೆ ಕಾಮಣ್ಣನ ಮೇಕಪ್ ಮುಗೀತು. ಇನ್ನು ರತಿದೇವಿಗೆ ಚೆಂದದ ಇಳಕಲ್ಲ್ ಸೀರೆ ಸುತ್ತೆ, ಮೂಗಿಗೆ ದೊಡ್ದ ಮೂಗುತಿ ಹಾಕಿ, ಬಳೆ ತೊಡಿಸಿ ದಂಡೆ ಹಾಕುತ್ತಾರೆ.ಇಬ್ಬರ ಕೈಯಲ್ಲೂ ಗುಲಾಬಿ ಕೊಟ್ಟರೆ ಅವರ ತಯಾರಿಯೆಲ್ಲಾ ಮುಗೀತು.ಅಮೇಲೆ ಇಡೀ ಚಕ್ಕಡಿಯನ್ನು ಹೂ ಗಳಿಂದ ಅಲಂಕರಿಸಿ, ಚಕ್ಕಡಿಯ ಒಂದು ಬದಿಗೆ ಹಾಳೆಯಲ್ಲಿ ಬರೆದ ಬಾಣ ಹೂಡಿದ ಕಾಮನ ಚಿತ್ರವನ್ನು ಸಾಂಕೇತಿಕ ’ಕಾಮದಹನ’ಕ್ಕಾಗೆ ಸಿಕ್ಕಿಸಿರುತ್ತಾರೆ.ನಂತರ ಮಜಲಿನ ಜೊತೆಗೆ ಮೆರವಣಿಗೆ ದ್ಯಾಮವ್ವನ ಗುಡಿಯಿಂದ ಶುರುವಾಗಿ ಮೊದಲು ಗೌಡರ ಮನೆಗೆ ಬಂದು, ಸಾಂಪ್ರಾದಾಯಿಕ ಪೂಜೆಯಿಂದ ಶುರುವಾಗುತ್ತದೆ. ಗೌಡರ ಮನೆಯಲ್ಲಿ ರತಿಗೆ ಉಡಿ ತುಂಬುತ್ತಾರೆ. ನಮ್ಮ ತಂದೆಯ ಕಾಲದಲ್ಲಿ ಹೆಣ್ಣಿನ ಕಡೆ, ಗಂಡಿನ ಕಡೆ ಇನ್ನೂ ಅನೇಕ ಆಚರಣೆಗಳಿದ್ದವಂತೆ, ನಾನಂತೂ ಅವನ್ನು ನೋಡಿಲ್ಲಾ. ಇದೆಲ್ಲಾ ಆದ ನಂತರ ಮೆರವಣೆಗೆ ಊರಿನ ಪ್ರಮುಖ ಬೀದಿಗಳಲ್ಲಿ ಸಾಗುತ್ತದೆ..

ನಿಜವಾದ ಹೋಳಿಯ ಗಮ್ಮತ್ತು ಇದಲ್ಲಾ; ಅವತ್ತು ಜಿಲ್ಲಾಡಳಿತ ಮದ್ಯ ಮಾರಾಟ ನೀಷೆದಿಸಿದ್ದರೂ, ಮೊದಲೇ ಎಲ್ಲಾ ಸ್ಟಾಕ್ ಮಾಡಿಟ್ಟುಕೊಂಡ ನಮ್ಮೂರ ಗಂಡಸರು ಆ ದಿನ ಬೆಳಬೆಳಗ್ಗೆಯೇ ಫುಲ್ ಟೈಟಾಗಿ ಬಿಡುತ್ತಾರೆ, ಹೋಳಿಯ ದಿನ ಒಂಥರಾ ಸ್ವೆಚ್ಚಾಚಾರಕ್ಕೆ ಊರು ಬಿದ್ದಿರುತ್ತದೆ, ಅವತ್ತೂ ಎನೂ ಮಾಡಿದರೂ ಯಾರೂ ಎನೂ ಕೇಳಕೂಡದು ಎಂಬ ಪ್ರತೀತಿ, ಹೀಗಾಗಿ ಎಂದು ಕುಡಿಯದವರೂ ಸಹ ಅವತ್ತು " ಗುಬ್ಬಿ ಪಾಕೀಟು" ಹರಿದು ಸಾರಾಯಿ ಗಂಟಲಿಗಿಳಿಸದೆ ಬಿಡುವದಿಲ್ಲಾ.ಊರಿನ ಬಹುತೇಕ ಗಂಡಸರು ಅವತ್ತು ನಶೆಯಲ್ಲಿರುತ್ತಾರೆ.ಹೀಗಾಗಿ ಕಂಡ ಕಂಡಲ್ಲಿ ಕುಡಿದು ಬಿದ್ದವರು ಒಂದು ಕಡೆ, ಕಿರುಕ್ಕು ಮಾಡುತ್ತಾ ಕೋಳಿ ಜಗಳ ಮಾಡುವ ತಾತ್ಕಾಲಿಕ ಕುಡುಕರು ಒಂದೆಡೆ, ಮಜಲಿನಲ್ಲಿ ದಿಮ್ಮಿ ಬಾರಿಸಲು ಪೈಪೋಟಿ ಮತ್ತೊಂದೆಡೆ. ಒಟ್ಟು ಇಡೀ ವಾತವರಣವೇ ಹುಳಿ ಹುಳಿ ವಾಸನೆಯಿಂದ ಗಬ್ಬೆದ್ದು ಹೋಗಿರುತ್ತದೆ.

ಹೊತ್ತೇರಿದಂತೆ ಓಕುಳಿಯಾಟವೂ ಶುರುವಾಗುತ್ತೆ. ಪಿಚಕಾರಿಗಳಲ್ಲಿ, ಬಾಟಲ್ಲುಗಳಲ್ಲಿ ಬಣ್ಣ ತುಂಬಿಕೊಂಡು ಎಲ್ಲರ ಮೇಲೂ ಬಣ್ಣ ಅರಚಲು ಶುರುವಾಗುತ್ತಾರೆ. ಬಣ್ಣ ಖಾಲಿಯಾದಂತೆ ಚಕ್ಕಡಿಯ ಎರಿಬಂಡಿ, ಟ್ರ್ಯಾಕ್ಟರಿವ ಗ್ರೀಸು, ಕೊಚ್ಚೆಯ ಕರಿ ನೀರು ಎಲ್ಲವೂ ಸೈ, ಎನಾದರೂ ನಡೆದೀತು. ಲಬೋ ಲಬೋ ಎಂದು ಹೋಯ್ಕೋಳ್ಳುತ್ತಾ , ಕಂಡೊರಿಗೆ ಬಣ್ಣ ಎರಚುತ್ತಾ ಇಡೀ ಊರಿಗೆ ಊರೇ ಮೋಜಿನಲ್ಲಿ ಮುಳುಗಿರುತ್ತದೆ. ನಡು ನಡುವೆ ಅಶ್ಲೀಲ ಬೈಗುಳಗಳು, ಕಾಮಣ್ಣನ ಮಕ್ಕಳು ಕಳ್ಳ ಸೂ... ಮಕ್ಕಳೂ ಅನ್ನುವ ಕೇಕೆ ಹೊಳಿ ಹಬ್ಬಕ್ಕೆ ವಿಶೇಷ ಹಿನ್ನೆಲೆ ಆಗಿರುತ್ತದೆ.ರಸ್ತೆಯ ಎರಡೂ ಬದಿ ತಲೆ ತುಂಬ ಸೆರಗು ಹೊತ್ತು, ಬಾಯಿಗೆ ಸೆರಗು ಆಡ್ದ ಇಟ್ಟುಕೊಂಡು ನಗುತ್ತಿರುವ ನಾರಿ ಮಣಿಗಳು, ತಮ್ಮ ತಮ್ಮ ಮನೆಯ ಗಂಡಸರ ಮಂಗನಾಟಗಳನ್ನು ಮೂಕಪ್ರೇಕ್ಷಕರಂತೆ ಅಸಹಾಯಕರಾಗಿ ನಿಂತು ನೋಡುತ್ತಿರುತ್ತಾರೆ.

ಸರಿಯಾಗಿ ಪಂಚಾಯಿತಿ ದಾಟುವ ವೇಳೆಗೆ ಎಲ್ಲಾ ಓಣೆಯ ಕಾಮನ ಮೆರವಣೆಗೆಗಳೂ ಸೇರುತ್ತವೆ,ಇದರಲ್ಲಿ ಗೌಡರ ಕಾಮ ಕೊನೆಯವನು.ಸಾಲು ಸಾಲಾಗಿ ಮೆರೆವಣಿಗೆ ಸಾಗುತ್ತಿದ್ದಂತೆ ಬೇರೆ ಓಣಿಯವರೊಂದೆಗೆ ಪೈಪೋಟಿಗೆ ಬಿದ್ದ ಮಜಲಿನ ಮೇಳಗಳು ಇನ್ನೂ ಜೋರಾಗಿ ಹಲಗೆ ಬಡಿಯತೊಡಗುತ್ತಾರೆ, ಇವರನ್ನು ಶಿಳ್ಳೇ ಹಾಕಿ, ಕೊರಳಲ್ಲಿ ಮಾಲೆ ಹಾಕಿ, ಅವರ ಅಂಗಿಗೆ ನೋಟು ಸಿಕ್ಕಿಸಿ ಪ್ರೊತ್ಸಾಹಿಸುತ್ತಾರೆ. ಮದ್ಯೆ ಮದ್ಯೆ ಚುರುಮರಿ, ಕುಸುಬಿ ಇವರ ಮೇಲೆ ಹಾಕುತ್ತಾರೆ.ಮೊದಲೇ ಕುಡಿದ ಅಮಲೀನಲ್ಲಿರುವರು,ವಿಚಿತ್ರವಾಗಿ ಅಂಗಚೇಷ್ಟೆ ಮಾಡುತ್ತಾ, ಕುಣಿಯುತ್ತಾ ಹಲಗೆ ಬಡಿಯತೊಡಗುತ್ತಾರೆ. ಈ ಮದ್ಯೆ ಕಣಿ ಬಾರಿಸುವವರು ಹಲಗೆ ಬಾರಿಸುತ್ತ, ತಾಳ ತಪ್ಪದೆ ನೆಲದಲ್ಲಿ ಇಟ್ಟಿರುವ ನಾಣ್ಯವನ್ನು ಹಣೆಯಿಂದ ತೆಗೆಯುವದು,ನಾಲಿಗೆಯಿಂದ ನೋಟನ್ನು ತೆಗೆಯುವದು ಇತ್ಯಾದಿ ಸರ್ಕಸ್ಸುಗಳು ಅಮಲೇರಿದಂತೆ ಜೋರಾಗುತ್ತವೆ.ಹುಡುಗರಂತೂ ತಮ್ಮ ತಮ್ಮ ಡವ್ ಗಳ ಮನೆಮುಂದೆ ಇನ್ನೂ ಒವರ್ ಆಕ್ಟಿಂಗ್ ಮಾಡಿ Show off ನೀಡತೊಡಗುತ್ತಾರೆ.ಶಿಳ್ಳೇ, ಕೇಕೆ,ಕುಡುಕರ ಹಾರಾಟ, ಲಬೋ ಲಬೋ ಅಂತ ಹೊಯ್ಕೊಳ್ಳುವದು,ಮಜಲಿನ ನಾದ, ಓಕುಳಿಯಾಟ, ಅಶ್ಲೀಲ ಬೈಗುಳಗಳು ಎಲ್ಲಾ ಸೇರಿ ಒಂದು ವಿಕ್ಷಿಪ್ತ ಲೋಕವೇ ನಿರ್ಮಾಣವಾಗಿಬಿಟ್ಟುರುತ್ತದೆ.

ಊರ ಅಗಸೆಯಲ್ಲಿ ಒಟ್ಟು ಎರಡು ಕಟ್ಟಿಗೆಯ ರಾಶಿಯಿರುತ್ತವೆ, ಒಂದು ಗೌಡರ ಕಾಮನನ್ನು ಸುಡಲು, ಇನ್ನೊಂದು ಉಳಿದ ಓಣಿಯ ಕಾಮಣ್ಣಗಳ ಸಾಮೂಹಿಕ ದಹನಕ್ಕೆ.ಮೆರವಣಿಗೆ ಅಗಸೆ ಮುಟ್ಟಿದ ಕೂಡಲೇ ಕಾಮಣ್ಣನ ಮೂರ್ತಿಗಳನ್ನು ಮರೆ ಮಾಚುತ್ತಾರೆ. ಹಾಳೆಯ ಕಾಮನ ಚಿತ್ರವನ್ನು ಪೂಜಿಸಿ ಮೊದಲು ಗೌಡರ ಓಣಿಯ ಕಾಮನನ್ನುಸುಡುತ್ತಾರೆ. ನಂತರ ಗೌಡರ ಕಾಮನ ಬೆಂಕಿಯಿಂದ ಉಳಿದ ಓಣಿಯ ಕಾಮಣ್ಣರನ್ನು ಸುಡುತ್ತಾರೆ.ಆಗ ಎಲ್ಲಾ ಮಜಲು ಮೇಳಗಳು ಕಾಮನ ಬೆಂಕಿಯ ಸುತ್ತಲೂ ಹಲಗೆ ಬರಿಸುತ್ತಾ ಕುಣಿಯುತ್ತಾರೆ. ಎಲ್ಲರೂ ಲಬೋ ಲಬೋ ಎಂದು ಹೊಯ್ಕೋಳ್ಳುತ್ತಾ " ಉಂಡಿ ತಿನ್ನು ಅಂದ್ರ ... ತಿಂದು ಸತ್ತ್ಯಲ್ಲೋ" " ಚಾ ಕುಡಿ ಅಂದ್ರ ... ಕುಡಿದು ಸತ್ತ್ಯಲ್ಲೋ" ಅಂದು ನಾಟಕೀಯವಾಗಿ ಅಳುತ್ತ್ತಾ, ತಮ್ಮ ಅಂಗಿ ಕಳೆದು ಬೆಂಕಿಗೆ ಆಹುತಿ ನೀಡುತ್ತಾರೆ.ನಂತರ ಮೋದಲೆ ಮನೆಯಿಂದ ತಂದ ಕುಳ್ಳೀನಲ್ಲೋ, ಚಿಪ್ಪಿನಲ್ಲೋ ಕಾಮನನ್ನು ಸುಟ್ಟ ಬೆಂಕಿಯನ್ನು ಮನೆಗೆ ಒಯ್ದು,ಸ್ವಲ್ಪ ಬೆಂಕಿಯನ್ನು ಒಲೆಗೆ ಹಾಕುತ್ತಾರೆ ಮತ್ತು ಉಳಿದುದರಿಂದ ಆ ಹಿಂಗಾರಿನ ಹೊಸ ಕಡಲೆಕಾಯಿ ಗಿಡಗಳನ್ನು ಮನೆ ಮುಂದೆ ಸುಟ್ಟು ಕಡಲೆ ಕಾಯಿ ತಿನ್ನುತ್ತಾರೆ.

ಕಾಮನನ್ನು ಸುಟ್ಟ ಮೇಲೆ ಓಕುಳಿ ಆಡುವುದು ಬಂದ್.ಮುಂದೆ ಶುರುವಾಗುವದೇ ಹೋಳಿ ಹಬ್ಬದ ವಿಶಿಷ್ಟ ಆಚರಣೆಯಾದ ’ಸೋಗ’.. ಸೋಗು ಅಂದ್ರೆ ಪೂರ್ತಿ ಟೈಟಾದವನೊಭ್ಬನನ್ನು ನಿಜವಾದ ಹೆಣದಂತೆ ಶೃಂಗರಿಸಿ, ಒಂದು ಏಣಿಯ ಮೇಳೆ ಕೂರಿಸುತ್ತಾರೆ, ಗಂಡಸರೆ ಹೆಂಗಸರ ಹಳೆಯ ಸೀರೆ, ನೈಟಿ, ಚೂಡಿದಾರು ತೊಟ್ಟು ಸತ್ತವನ ಹೆಂಡತಿ, ಮಗಳ ವೇಷ ಧರಿಸಿ ಗೋಳಾಡೀ ಅಳುತ್ತಾರೆ,ಸಬ್ಯರು ಇವರ ಸಂಭಾಷಣೆ ಕೇಳಿದರೆ ಮುಗೀತು. ತೀರಾ ಅಶ್ಲೀಲ ಭಾಷೆಯಲ್ಲಿ ಹಾಸ್ಯ ಮಾಡುತ್ತ್ತ ನೆರೆದವರಿಗೆ ಭರ್ಜರಿ ಮನೋರಂಜನೆ ನೀಡುತ್ತಾರೆ. ಹೆಂಗಸರೂ ಸಹ ಈ ವೇಷದವರನ್ನು ಮಾತಾಡಿಸಿ ಹೊಟ್ಟ ತುಂಬಾ ನಗುತ್ತಾರೆ.ಇದೆಲ್ಲಾ ಮುಗಿದ ಮೇಲೆ ಮನೆಗೆ ಹೋಗಿ ಬಣ್ಣ ಹೋಗುವಂತೆ ತಲೆ ಸ್ನಾನ ಮಾಡಿ , ಅವತ್ತಿನ ಸ್ಪೇಶಲ್ ಅಡಿಗೆ ಹೋಳಿಗೆಯನ್ನು ತಿಂದರೆ ಸ್ವರ್ಗ ಸುಖ. ಆ ದಿನ ಹೊಯ್ಕೊಂಡ ಬಾಯಿಗೆ ಹೋಳಿಗೆ ಬೀಳಲೇ ಬೇಕಂತೆ.ರಾತ್ರಿ ಮತ್ತೊಮ್ಮೆ ಮಜಲು ಬಾರಿಸಿ ಮಂಗಳ ಮಾಡಿದರೆ ಆ ವರ್ಷದ ಹೋಳಿ ಆಚರಣೆ ಅಲ್ಲಿಗೆ ಮುಗಿದಂತೆ.

8 comments:

Vijendra ( ವಿಜೇಂದ್ರ ರಾವ್ ) said...

Chennagide nimma holiya aacharane... tamasheyaagide...

Neevu yara mane eduru Show off needta idri?

sp said...

Very nicely written. Holi is indeed a special festival for North Karnataka people.
Also one more important thing we used to do growing up is to plan ahead to color our friends very early in the morning before they can even start.
We used to get a strange satisfaction to color our friends first... :) infront of their family. :)
Your article brought back all those good old memories....

Thanks
SP

Anonymous said...

ಚೊಲೋ ಬರದಿರಿ. ಧಾರವಾಡ ಕಡೆ ಲೇಡೀಸ್ ಹಾಸ್ಟೆಲ್ ಮುಂದೆ ಹುಡುಗುರ್ ಮಾಡು ಮಂಗ್ಯತನ ನೋಡುದ ಒಂದ ಮಜಾ. ಪ್ರತಿ ವರ್ಷ ಒಬ್ಬವರ ಪೂರ್ತಿ ವಸ್ತ್ರ ಕಳದು ಡ್ಯಾನ್ಸ್ ಮಾಡೇ ಮಾಡ್ತಿದ್ದ ನೋಡ್ರಿ. ವಸ್ತ್ರ ಕಳಿಯಕ ರೆಡಿ ಇಲ್ಲ ಅಂದ್ರ ಯಾವದಾರ ಬಡಪಾಯಿನ್ನ ನಾಕ್ ಕಟದು ನಂಗಾ ಮಾಡ್ಸಿ ಡ್ಯಾನ್ಸ್ ಹೊಡಸುದು. ಇದೆಲ್ಲ normally ರಾತ್ರಿ. ಹಗಲ ಹೊತ್ತಿನ್ಯಾಗೆ ಮಾಮಾಗಳಿಂದ (ಪೊಲೀಸರಿಂದ) ತಪ್ಪಿಸ್ಕೊಂಡು ನಂಗಾ ನಾಚ್ ಮಾಡಿದ್ದರೆ ಅವ ಆ ವರ್ಷದ್ದ ಹೀರೋ.

-ಮಠ

ಡಿ ಆರ್ ಮಧುಸೂದನ್ said...

he he he.. thumba chennagide nimma hattiya holi aacharane..
neenu yaryaara mane guri ittidde ee sala?

ಸಂತೋಷಕುಮಾರ said...

ವಿಜಿ ಮತ್ತು ಮಧು.

ಪರಿಚಯಸ್ತರ ಮುಂದೆ ಮಂಗನಾಟ ಸಾದ್ಯವಿಲ್ಲಾ! ಅದಕ್ಕೆ ಎಲ್ಲಾ ಬರವನ್ನೂ ಇಲ್ಲಿಯೇ ತೀರಿಸಿಕೊಂಡುಬಿದುತ್ತೇನೆ. ಈ ಬಾರಿ ಮಳೆ ಬೇರೆ ಹಿಡಿದಿತ್ತು,ಕೊನೆಗೆ ಸೀಮೆ ಎಣ್ಣೆ ಹಾಕಿ ಕಾಮನನ್ನು ಸುಡಬೇಕಾಯ್ತು. ಎಲ್ಲ್ಲಾ ಉತ್ಸಾಹಕ್ಕೂ ಮಳೆರಾಯ ಬ್ರೇಕ್ ಹಾಕಿ ಬಿಟ್ಟಿದ್ದ.

ಎಸ್. ಪಿ
ನಿಮ್ಮ ಮಾತು ಖರೇ, ಕೆಲ ಸಂಪನ್ನ ನನ್ ಮಕ್ಳು ಹಬ್ಬದ ದಿನವೂ ಹೊರಗ ಬಾರದ, ಓಲಿ ಮುಂದ ಕೊಂದ್ರೊರನ್ನ ಹಿಡ್ಕೊಂಡು ಬಣ್ಣ ಹಾಕಿದ್ರ ಅವತ್ತು ಕಿಕ್ಕು. ಬಣ್ಣ ಆಡಲಾದವರಿಗೆ ಮುದ್ದಾಂ ಬಣ್ಣ ಹಾಕೋದ ಮಜಾ !

ಮಠ ಸಾಹೇಬ್ರ,
ನಾವೂ ಧಾರವಾಡ, ಹುಬ್ಬಳ್ಳಿ ಎರಡೂ ಕಡೆ ಬಣ್ಣ ಆಡಿದ ಮಕ್ಳು. ಬರೇ ಮೈಲೆ, ಹಲಗೆ ಬಡ್ಕೋತ, ಹೊಯ್ಕೊತ ಇಡಿ ವಿದ್ಯಾಗಿರಿ ತಿರುಗಿದ್ವಿ. ನಮ್ಮ ಹಾಸ್ಟೆಲ್ ವಾರ್ಡನ್ ಗಾಂಚಾಲಿ ನನ್ ಮಗನನ್ನು ಹಿಡಿದು ಬಣ್ಣ ಹಾಕಿದ್ವಿ. ಜನ ಏಗ ಭಾಳ ಸೂಕ್ಶ್ಮ ಆಗ್ಯಾರ. ಅದ್ವಾಣಿ, ವಾಜಪೇಯಿ ಆಡಿದಂಗ ಗಲ್ಲಕ್ಕಶ್ಟೆ ಬಣ್ನ ಹಚ್ಚಿ ಬಣ್ಣ ಆಡಿದ್ವಿ ಅಂತ ಸಮಾಧಾನ ಮಾಡ್ಕೊತಾರ..

ವಿ.ರಾ.ಹೆ. said...

ಯಪ್ಪಾ! ಅದೇನೇನ್ ಮಾಡ್ತೀರ್ರೀ ನಿಮ್ ಕಡಿ?! ನೀವು ಮತ್ತು ಆ ಶೆಟ್ಟರು ಬರ್ದಿದ್ದು ಹೋಳಿ ವಿವರ ಓದಿ ದಂಗಾಗಿ ಹೋದೆ ನಾನಂತೂ ! ;)

NilGiri said...

ಚೆನ್ನಾಗಿದೆ ನಿಮ್ ಹೋಳಿ!

Anonymous said...

nenapugale hage kanri....... dina kaledante yalla nenapugalu madhura.....:).hinde nadedanna nenp madkondu khushi padbeku aste......:). channagide.....