Monday, June 18, 2007

ಮುಂಗಾರು ಮಳೆ ಮತ್ತು ನಿರರ್ಥಕ ಭಾನುವಾರ..



ಪ್ರತಿ ಭಾನುವಾರದಂತೆ ಈ ಭಾನುವಾರವು ಹೊತ್ತೆರುವವರೆಗೂ ಹಾಸಿಗೆಯಲ್ಲಿ ಹೊರಳಾಡಿ ಪ್ರತಿಬಾರಿಯೂ ನಮ್ಮ ಹಿಂದಿನ " ಲೇಟಾಗಿ ಎದ್ದ" ಧಾಖಲೆಗಳನ್ನುಉತ್ತಮಪಡಿಸುತ್ತಾ ಸಾಗಿರುವ ನಂಗೆ, ರೂಮಿಗೆ ಹೊಸದಾಗಿ ಬಂದು ವಕ್ಕರಿಸಿರುವ ಅನಿವಾರ್ಯ ಮಿತ್ರ ರಾಜು ಗೊಳಸಂಗಿ ಅಲಿಯಾಸ್ ಫಿನಿಕ್ಸನ್ನು ಎಬ್ಬಿಸಿ, ಮಾಮೂಲಿನಂತೆ ಮೋಬೈಲಿನಲ್ಲಿ ಕಣ್ಣಾಡಿಸಿದಾಗ, ತನ್ನ ಕ್ರಿಕೆಟ್ಟ್ ತಾಲಿಮಿಗಾಗಿ ಬೇಗ ಎದ್ದು(ದೇವರಾಣೆಗೂ ಪರೀಕ್ಷೆಗೂ ಬೇಗ ಏಳದ ಸೂರ್ಯವಂಶಿ)ಕ್ರಿಕೆಟ್ಟು ಆಡಲು ಹೋಗಿದ್ದ ನಮ್ಮ ಮನೋಜನ ಮೇಸೆಜು ನೊಡಿದ ತಕ್ಷಣ ನಂಗೆ ಎನೋ ಘಾತ ಕಾದಿದೆ ಅನಿಸ್ತು. ಹೀಗಿತ್ತು ಅವನ ಮೇಸೆಜು "Lets go to mungaaru male, get tickets for me too, I ll come n join " ಎಂಬ ಹೊಸ ಠರಾವನ್ನು ಪಾಸು ಮಾಡಿ, ಮೊದಲೇ ಲೇಟಾಗಿ ಎದ್ದ ನಮಗೆ ಇನ್ನಷ್ಟು ಗೊಂದಲ ಮೂಡಿಸಿ ಧನ್ಯನಾದ. ಹಾಂ! ನಮ್ಮ ಮನೋಜ ಬಿ ಎಮ್ ಎಸ್ ನಲ್ಲಿ ನಡೆದ ’ಉತ್ಸವ’ ನ ಕನ್ನಡ ಚಿತ್ರವಿಮರ್ಶೆ ಸ್ಪರ್ದೆಯಲ್ಲಿ " ಮುಂಗಾರು ಮಳೆಯನ್ನು" ಹಿಗ್ಗಾ ಮುಗ್ಗಾ ವಿಮರ್ಶಿಸಿ ಪ್ರಥಮ ಸ್ಥಾನ ಪಡೆದ ಮೇಲೆಯಂತೂ ಆ ಚಿತ್ರದ ಮೇಲಿನ ಗೌರವ,ಭಕ್ತಿ ಇನ್ನೂ ಹೆಚ್ಚಾಗಿದೆ, ಆ ಪಾಪಿ ಮುಂಡೆದಕ್ಕೆ..

ವಾಚು ನೋಡಿದವನೇ ನಾನು ಫಿನಿಕ್ಸನ್ನು ಉದ್ದೆಶಿಸಿ " ಲೇ ನಂಗಂತೂ ರೆಡಿಯಾಗಲೂ ಹತ್ತು ನಿಮಿಷ ಸಾಕು,ಸೂ... ಮಗನ ಹುಡುಗ್ಯಾರ ತರಾ ತಾಸುಗಟ್ಲೆ ತೊಗೋಬ್ಯಾಡ, ಲಗೂ ನಡಿ ಮಗನ ಪಿಚ್ಚರಿಗೆ ಹೋಗುನು" ಅಂದೆ. ಮುಂಗಾರು ಮಳೆಯನ್ನು ನನ್ನೊಂದಿಗೆ ನೋಡಿ ತನ್ನೆಲ್ಲಾ ಸುಖ ದುಃಖಗಳನ್ನು ಆ ಚಿತ್ರದೊಂದಿಗೆ ಸಮೀಕರಿಸಿ, ಒಂದು ವಾರ ಕಾಲ ರಾತ್ರಿಯೆಲ್ಲಾ "ಬ್ಲೇಡಾಯಣ"ಕ್ಕೆ ಸಾಕಾಗುವಷ್ಟು ಸರಕು ಹೊಂದಿಸಲು ನಮ್ಮ ಫಿನಿಕ್ಸಿಗೆ ಸುವರ್ಣಾವಕಾಶವಾಯಿತು. ತಟಕ್ಕನೆ " ನೋಡ ಮಗನ ೧೦ ನ್ನುವಳಗ ರೆಡಿ ಆಕ್ಕೇನಿ" ಎಂದವನೆ ನಮ್ಮ ರಾಜೀವ ದಿಕ್ಷಿತರ ಭಾಷಣದ ಪ್ರೇರಣೆಯಿಂದ ಜಾಗೃತವಾದ ನಮ್ಮ ಸ್ವದೇಶ ಪ್ರೇಮಕ್ಕೆ ಕುರುಹಾಗಿರುವ "ಮಿಸ್ವಾಕ್" ಟೂತ್ ಪೇಸ್ಟನಿಂದ ಹಲ್ಲುಜ್ಜತೊಡಗಿದ.ಹಾಗೂ ಹೀಗೂ ಮಾಡಿ ರೆಡಿಯಾಗುವಷ್ಟರಲ್ಲಿ ನಾನು ಬಾತ್ ರೂಮಿನಿಂದ "ರೋಕ್ಕ ತಗೋಳ್ಲೆ ಫಿನಿಕ್ಸು" ಅಂದೆ, ಎಲ್ಲರ ಪ್ಯಾಂಟು ತಡಕಾಡಿ ಮೂರು ಜನಕಾಗುವಷ್ಟು ದುಡ್ದು ಹೋಂದಿಸುಷ್ಟರಲ್ಲಿ ಫಿನಿಕ್ಸು ಗುರ್ರೆನತೊಡಗಿತ್ತು " ಈ ಮಗಗ ಸಾವಿರ ಸರ್ತಿ ಹೇಳೆನಿ, ಜಾಸ್ತಿ ರೊಕ್ಕ ಇಟ್ಕೊಲೆ ಮಗನ ಅಂತ,ಮ್ಯಾಲಿಂದ ಮ್ಯಾಲೆ ಎ ಟಿ ಎಮ್ ಗೆ ಹೋಗಿ ಅವರಮ್ಮ ತರ್ತಾಳೇನು?" ಎಂದು ತನ್ನ ಶುಧ್ದ ಗಾವಟಿ ಭಾಷೆಯಲ್ಲಿ ಗೊಣಗತೊಡಗಿ ನನ್ನ ಮತ್ತು ನಾನು ಕೆಲಸ(?) ಮಾಡುವ ಕಂಪನಿಯ ಮರ್ಯಾದೆಯನ್ನು ಸಿನಿಮಾ ಟಿಕೇಟ್ಟಿಗಾಗಿ ಹರಾಜು ಹಾಕತೊಡಗಿದ . ಸೂಟ್ ಕೇಸಿನಿಂದ ಇಸ್ತ್ರಿ ಮಾಡಿದ ಬಟ್ಟೆ ತೆಗೆಯಲು ಹೋದ ನಂಗೆ " ಲೇ ಪ್ಯಾಲಿ, ನಿಂಗೆನರ ಹೆಣ್ಣ ನೊಡಾಕ ಹೋಂಟೆವಿ ಅನ್ಕೊಂಡಿಯನ? ಸುಮ್ನ ಇದ್ದಿದ್ದ ಹಾಕ್ಕೊಂಡ್ ಬಾರಲೇ" ಎಂದು ಎಚ್ಚರಿಸಿ ನನ್ನಲ್ಲಿನ ಸಾಫ್ಟವೇರ್ ಇಂಜಿನಿಯರ್ ಪ್ರಜ್ಞೆಗೆ ಅವಮಾನ ಮಾಡಿ ಅಂತು ಇಂತೂ ’ಸೂರಿ ದುನಿಯಾ’ದ ಸ್ಟೈಲಿನಲ್ಲಿ ತಯಾರಾಗಿ ಹೋರಟೆವು .( ಸ್ನಾನ, ಪೂಜೆಗಳೆಲ್ಲವನ್ನು ಬೆಳಗ್ಗೆ ಮಾಡಿದರೆ ಬ್ಯಾಚುಲರ ಜೀವನಕ್ಕೆ ಅವಮಾನ ಎಂದು ಭಾವಿಸಿರುವ ನಾವು ಅದರ ಯೋಚನೆಯನ್ನೂ ಸಹ ಮಾಡುವದಿಲ್ಲಾ, ನಮ್ಮದೆನಿದ್ದರೂ " ನೀರು ಬಚಾವೋ ಆಂದೋಲನ")

ನಮ್ಮ ಮೆಚ್ಚಿನ ಪೂರಿ ತಿನ್ನುವಾಗಲೆ ನಮ್ಮ ಮನೋಜನ ಕಾಲ್ ಬಂತು " ರೀ ನಾನು ಗಣೇಶ ಭವನದಲ್ಲೆದಿನಿ, ಬೇಗ ಬರ್ರಿ" ಎಂದ. " ಅಲ್ಲೆ ನಿಂತಿರೋ, ನಾವು ಬರ್ತೆವಿ " ಅಂತ ಭಿನ್ನವಿಸಿಕೊಂಡು ಬಸ್ಸೇರಿ ಅವನನ್ನು ಸೇರಿಕೋಂಡು, ಮೂರು ಜನರ ಸವಾರಿ ಉಮಾ ಥೆಟರಿನತ್ತ ಸಾಗತೊಡಗಿತು. ಬಸ್ಸಲ್ಲಿ ಟಿಕೇಟ್ಟು ಕೊಡದೆ ಚಿಲ್ಲರೆ ಹಿಂದಿರುಗಿಸಿದ ಕಂಡಕ್ಟರ್ ಮೇಲೆ ಗುರಾಯಿಸಿ ಫಿನಿಕ್ಸು ತನ್ನ ದೇಶಭಕ್ತಿಯನ್ನು ಖಾತ್ರಿ ಮಾಡಿಕೊಳ್ಳುವದರೊಂದಿಗೆ ಉಳಿದವರಿಗೂ ಅದರ ಸ್ಯಾಂಪಲ್ಲು ತೋರಿಸಿ ಸಮಾಧಾನದ ನಿಟ್ಟುಸಿರು ಬಿಟ್ಟ.ಟಾಕೀಸಿನ ಮುಂದೆ ಚಲಿಸುತ್ತಿರುವ ಬಸ್ಸಿನಿಂದ ಹಾರಿಕೊಂಡು ನಮ್ಮ ಪೂರ್ವಜರಿಗೆ, ನಮ್ಮ ಶಕ್ತಾನುಸಾರ ಮರ್ಯಾದೆ ಸಲ್ಲಿಸಿದೆವು (ತಮ್ಮ ಅವಗಾಹನೆಗಾಗಿ ’ಮಂಗನಿಂದ ಮಾನವ”).ಉತ್ತರ ಕರ್ನಾಟಕದ ನಮಗೆ ಇಂತಹ ಸರ್ಕಸ್ಸುಗಳೆಲ್ಲಾ ಮಾಮೂಲಿಯಾಗಿಬಿಟ್ಟಿರುತ್ತವೆ. ನಮ್ಮ ವಿದ್ಯೆಗೆ ನಾವೇ ಬೆನ್ನು ಚಪ್ಪರಿಸಿಕೊಂಡು ’ಉಮಾ’ಥೇಟರ್ ಹೋಕ್ಕೆವು.

ಕಡೆಗೂ ಮಾರ್ನಿಂಗ್ ಶೋ ದ ಸರಿಯಾದ ವೇಳೆಗೆ ಬಂದ ನಮ್ಮ ಸಮಯಪ್ರಜ್ಞೆಯನ್ನು ನಾವೇ ಕೊಂಡಾಡಿಕೋಂಡೆವು.ಮತ್ತೆ ಶುರುವಾಯ್ತು ಇನ್ನೊಂದು ಜಟಾಪಟಿ " ಸಂತೋಷರ, ಮೂರು ಬಾಲ್ಕನಿ ತಗೋರಿ" ಅಂದ ನಮ್ಮ ಮನೋಜ, ಅವನಿಗೋ ಪಾಪ, ಹುಡುಗಿಯರು ಬಾಲ್ಕನಿಯಲ್ಲಿ ಮಾತ್ರ ಇರುತ್ತಾರೆ ಎಂಬುದು ಅವನ ಹಳೆಯ ಅನುಭವಗಳಿಂದ ಖಾತ್ರಿಯಾಗಿತ್ತು.ತಕ್ಷಣ ಜಾಗ್ರತನಾದ ಫಿನಿಕ್ಸು " ಬಾಲ್ಕನ್ಯಾಗ ಕುಂತ ನೊಡಿದ್ರ ಐಶ್ವರ್ಯ ಬಂದು ಕುಣಿತಾಳೆನ? ಎಲ್ಲಿ ನೊಡಿದ್ರು ಅದ ಸ್ಕ್ರೀನು, ಕೆಳಗ ತಗೊಳೊನು, ರೊಕ್ಕಕ ಕಿಮ್ಮತ ಇಲ್ಲೇನು?" ಎಂದು ನಮ್ಮ ಮನೋಜನಿಗೆ ಸವಾಲೆಸೆದ. ಅಷ್ಟರಲ್ಲಿ ನನ್ನಲ್ಲಿನ ಸಾಫ್ಟವೇರ್ ಇಂಜಿನಿಯರ್ ಜಾಗ್ರತನಾಗಿ " ಇಲ್ಲಾ ಇಲ್ಲ! ಬಾಲ್ಕನಿಗೇ ಹೋಗೊದು ಯಾರಾದ್ರು ಫ್ರೆಂಡ್ಸು ನನ್ನ ಕೆಳಗ ಕೂಂತಿದ್ದು ನೋಡಿದ್ರ ನನ್ನ ’ಜಿಪುಣ ನನ ಮಗ’ ಅಂತ ಜೋಕ್ ಮಾಡ್ತಾರೆ" ಎಂದು ಅಲವತ್ತುಕೊಂಡೆ. ತನ್ನ ಬಣಕ್ಕೆ ಮತ್ತೊಂದು ಸೇರ್ಪಡೆಯಾಗಿದ್ದನ್ನು ಕಂಡು ಮನೋಜ್ ಹಿರಿ ಹಿರಿ ಹಿಗ್ಗಿದ. ಅಷ್ಟಕ್ಕೆ ಬಿಟ್ಟಾನೆಯೆ ಫಿನಿಕ್ಸು, ದುಡ್ಡಿನ ಬಗ್ಗೆ, ಮದ್ಯಮ ವರ್ಗದ ಬವಣೆ ಬಗ್ಗೆ ಮನಮುಟ್ಟುವಂತೆ ರಜನಿ ಸ್ಟೈಲಲ್ಲಿ ಡೈಲಾಗ್ ಬಿಟ್ಟು ನಮ್ಮಲ್ಲಿ ಅಪರಾಧಿ ಪ್ರಜ್ಞೆ ಮೂಡುವಂತೆ ಮಾಡಿ, ಕೊನೆಗೂ ಡ್ರೆಸ್ ಸರ್ಕಲ್ಲಿನಲ್ಲಿಯೇ ಕುಳಿತುಕೊಳ್ಳುವಂತೆ ಮಾಡಿ ವಿಜಯದ ನಗೆ ಬೀರಿದ. ಮನೋಜನ ಮುಖದಲ್ಲಿ ಮಾತ್ರ ನಿರಾಶೆಭರಿತ ಆಕ್ರೋಶ ಎದ್ದು ಕಾಣುತ್ತಿತ್ತು.

ಈ ಮೊದಲು ಹಲವಾರು ಭಾರಿ ನೊಡಿದ್ದರಿಂದಲೊ ಎನೋ ಮೊದಲಾರ್ದ ಬೋರ್ ಆಗತೊಡಗಿತು. ಮನೋಜನ ಭಾಷೆಯಲ್ಲಿ ಸ್ವಲ್ಪವು ಫೀಲ್ ಆಗಲಿಲ್ಲಾ.ಇಂಟರವೆಲ್ಲಿನಲ್ಲಿ ಕಂಪೌಂಡ ಹಾರಿ "2 by 3 " ಚಹಾ ಕುಡಿದು ಬಂದು, ಉಳಿದ ಭಾಗವನ್ನು ನೋಡತೋಡಗಿದೆವು.ಮೂವರೂ ನಮ್ಮ ನಮ್ಮ ಮಾಜಿ ಲವ್ವರುಗಳನ್ನು ಮನದಲ್ಲಿ ನೆನೆಸಿಕೊಂಡು ಫೀಲ್ ಆದದ್ದೆ ಆದದ್ದು. ಗಣೇಶನ ಪ್ರತಿ ಡೈಲಾಗು ನಮ್ಮ ಜೀವನದಲ್ಲಿ ನಡೆದದ್ದೆನೋ ಎಂಬಂತೆ ಭಾಸವಾಗತೊಡಗಿ, ಅವನ ಕಷ್ಟದಲ್ಲಿ ನಾವೂ ಭಾಗಿಯಾಗತೊಡಗಿದೆವು. ಅಂತು ಇಂತೂ ಯದ್ವಾ ತದ್ವಾ ಫೀಲ್ ಆಗಿ " ಕೊಟ್ಟ ರೊಕ್ಕಕಂತೂ ಮೋಸ ಇಲ್ಲಾ" ಅಂತ ನಮ್ಮನ್ನು ನಾವೇ ಸಮಾಧಾನಿಸಿಕೊಂಡು ಚಿತ್ರ ಕ್ಲೈಮಾಕ್ಸ್ ತಲುಪಿದಾಗ ನಾವು ನಮ್ ಫೀಲಿಂಗಿನ ತಾರಕಕ್ಕೆರಿದೆವು.ಗಣೇಶ " ಅವಳ ಹೆಸರು ಆ ಪುಣ್ಯಾತ್ಮನ ಹಣೇಲಿ ಬರೆದಿದೆ" ಅಂತ ವಿಲನ್ ಜಾಲಿಯನ್ನುದ್ದೇಶಿಸಿ ಹೇಳಿದ ಮಾತಿಗೆ ಮನೋಜ " ತೂ ಅವನವ್ವನ ನಮ್ ಡವ್ ಹೆಸರು ಯಾವ ನನ್ ಮಗನ್ನ್ ಹಣೆಲಿ ಬರೆದಿದೆಯೋ " ಅಂತ ಆವೇಶಭರಿತನಾಗಿ ಹೇಳಿದ ಮಾತಿಗೆ " ಇನ್ನೂ ಚಾನ್ಸಿದೆ ಮನೋಜಾ, ಟ್ರೈ ಮಾಡುವಿಯಂತೆ" ಅಂತ ನಾವಿಬ್ಬರು ಅವನನ್ನು ಸಂತೈಸಬೇಕಾಯ್ತು. ಅಂತು ಇಂತೂ ಒಬ್ಬರನ್ನೋಬ್ಬರು ಸಮಾಧಾನಿಸಿಕೊಂಡು ’ದೇವದಾಸ್’ ಸತ್ತಾಗ ನಾವು ಕಣ್ತುಂಬಿಕೊಂಡೆವು.ಚಿತ್ರ ಮುಗಿದಾಗ ’ಮುಂಗಾರು ಮಳೆ’ಯನ್ನು ನಾಲ್ಕನೇ ಬಾರಿಗೆ ನೋಡಿದ ಸಾಧಕರ ಲಿಸ್ಟಿಗೆ ಸೇರ್ಪಡೆಯಾದೆವು( ಎಲ್ಲಾ ಮನೋಜನ ಕೃಪೆ)" ಅನಿಸುತಿದೆ ಯಾಕೋ ಇಂದು" ಎಂದು ತಾರಕ ಸ್ವರದಲ್ಲಿ ಹಾಡುತ್ತಾ(?) ಎಲ್ಲರೂ ಹೊರಬಿದ್ದೆವು..

ಸುದೀಪ್ ನ "ಹುಚ್ಚ" ಚಿತ್ರ ನೋಡಿ ಭಗ್ನಪ್ರೇಮಿಯ ಕಲ್ಪನೆಯನ್ನು ಮನದಲ್ಲೇ ಮಾಡಿಕೊಂಡಿದ್ದ ನಾವು ಮತ್ತೋಮ್ಮೆ ಕುರುಚಲು ಗಡ್ಡ ಬಿಡುವ ಪ್ರತಿಜ್ಞೆ ಮಾಡಿ, " ಉಸಿರೆ ಉಸಿರೆ" ಎನ್ನುತ್ತಾ ಧಮ್ ಹೊಡೆಯುವ ಧೈರ್ಯವಿಲ್ಲದ ನಾವು ಚಹಾವನ್ನಾದರೂ ವಿಸ್ಕಿ ಎಂದುಕೊಂಡು ಗುಟುಕರಿಸದಿದ್ದರೆ ಇಡೀ "ಭಗ್ನಪ್ರೇಮಿ"ಗಳಿಗೆ ಅವಮಾನ ಮಾಡಿದಂತೆ ಎಂದು ’ಹಳ್ಳಿತಿಂಡಿ’ಗೆ ಚಹಾ ಕುಡಿಯಲು ಹೆಜ್ಜೆ ಹಾಕಿದೆವು..

7 comments:

ಮನಸ್ವಿನಿ said...

ಶರಣ್ರಿ ಪಾಟೀಲ್ರೆ

" ಲೇ ಪ್ಯಾಲಿ, ನಿಂಗೆನರ ಹೆಣ್ಣ ನೊಡಾಕ ಹೋಂಟೆವಿ ಅನ್ಕೊಂಡಿಯನ? ಸುಮ್ನ ಇದ್ದಿದ್ದ ಹಾಕ್ಕೊಂಡ್ ಬಾರಲೇ" :))

ನೀರು ಬಚಾವೋ ಆಂದೋಲನ- ಎಷ್ಟು ದಿನ/ ತಿಂಗಳು/ ವರ್ಷ?

"ಬಾಲ್ಕನ್ಯಾಗ ಕುಂತ ನೊಡಿದ್ರ ಐಶ್ವರ್ಯ ಬಂದು ಕುಣಿತಾಳೆನ? ಎಲ್ಲಿ ನೊಡಿದ್ರು ಅದ ಸ್ಕ್ರೀನು, ಕೆಳಗ ತಗೊಳೊನು, ರೊಕ್ಕಕ ಕಿಮ್ಮತ ಇಲ್ಲೇನು?" :))

ಶೈಲಿ ಮಸ್ತ್ ಅದ :)

ಸಂತೋಷಕುಮಾರ said...

ಶರಣು ಶರಣಾರ್ಥಿ!
ನನ್ನ ಭಾಷಾ ಶೈಲಿ ಅರ್ಥವಾಗುವದಿಲ್ಲವೋ ಅಂತ ಭಾವಿಸಿದ್ದೆ.ಅರ್ಥವಾದದ್ದು ಮತ್ತು ನಿಮಗೆ ಖುಶಿ ಕೊಟ್ಟದ್ದು ತುಂಬ ಸಂತೋಷ.
ನೀರು ಬಚಾವೋ ಆಂದೊಲನ - ಥೂ ಹೋಗೀಪಾ! ನಾಚಿಕೆ ಆಗುತ್ತೆ :-)

Anonymous said...

ಉತ್ತರ ಕನ್ನಡ ಭಾಷೆನಲ್ಲಿ ತುಂಬಾ ಚೆನ್ನಾಗಿ ಬರೆದಿದ್ದೀರಾ!!!!!
ನಿಮ್ಮ ಮುಂದಿನ ಆರ್ಟಿಕಲ್ಸ್ ಗಳನ್ನೂ ಇದೆ ಶೈಲಿನಲ್ಲಿ ಬರೀರಿ ನಮ್ಮಂಥವರಿಗೆ ಓದುವದಕ್ಕೆ ಖುಷಿಯಾಗುತ್ತೆ.
ಹಾ! ನಿಮ್ಮ್ ಆರ್ಟಿಕಲ್ ಭಾಳ್ ಛಲೋ ಐತ್ರಿ ಮತ್ತ ನಿಮ್ಮ್ ಮನೋಜರಿಗೆ ಚಿಂತಿ ಮಾಡ್ ಬ್ಯಾಡ ಅಂತ ಹೇಳ್ರಿ ..

Unknown said...

Mungaaru male adbhutavaada chitra

ಕನ್ನಡ-ಕನ್ನಡಿಗ-ಕರ್ನಾಟಕಗಳ ಏಳಿಗೆಗೆ ಬದ್ಧವಾದ ಬನವಾಸಿ ಬಳಗದ ಹೊಸ ಬ್ಲಾಗಿಗೊಮ್ಮೆ ಭೇಟಿಕೊಡಿ. ವಿಳಾಸ:
http://enguru.blogspot.com

ಸಂತೋಷಕುಮಾರ said...

ಹೇಳ್ತಿನಿ ಬಿಡಿ, ಎನೇ ಆದ್ರು ನಮ್ಮ ಮನೋಜನ ಬೆಂಬಲಕ್ಕೆ ತುಂಬಾ ಜನ ಇದ್ದೀರಾ ಎಂಬುದಂತೂ ಖಾತ್ರಿಯಾಯ್ತು.

MD said...

ಗೌಡ್ರ,
ನೀವು ಉತ್ತರ ಕರ್ನಾಟಕದ ಭಾಷಾ ಯಾರೂ ತಿಳ್ಕೊಳ್ಳಂಗಿಲ್ಲಾ ಅಂತ ಹೆದ್ರಕೊಬ್ಯಾಡ್ರಿ.
ಗಾಡಿ ಮುಂದ ಹೋಗ್ಲಿ, ಇವ್ನೌನ

ಸಂತೋಷಕುಮಾರ said...

@md

ಇಷ್ಟು ಹೇಳಿದ್ರ ಸಾಕು ಬಿಡ್ರಿ ಮಂಗ್ಯಾಕ ಶೆರೆ ಕುಡಿಸಿದಂಗ ಆತು.ನಮ್ ಕಡೆ ಬಳಸೋ ಕೆಲ ಅತ್ಯಮೂಲ್ಯ ಸಂಸ್ಕೃತ ಪದಗಳ ಪ್ರಯೋಗವನ್ನು ಮಾಡಿದರಾಯ್ತು..