ಅಬ್ಬಿಗೇರಿ ಎಕನಾಮಿಕ್ಸು ಮತ್ತು ಉಳ್ಳಾಗಡ್ಡಿ..
ನೀವೊಮ್ಮೆ ನವೆಂಬರ್,ಡಿಸೆಂಬರ್ ಗಳಲ್ಲಿ ಅಬ್ಬಿಗೇರಿಗೆ ಬಂದು ನೋಡಬೇಕು, ಎಲ್ಲೆಲ್ಲಿ ಬಯಲು ಜಾಗವಿರೊತ್ತೋ ಮತ್ತು ಎಲ್ಲೆಲ್ಲಿ ಸಾದ್ಯವೋ, ಅಲ್ಲೇಲ್ಲಾ ಉಳ್ಳಾಗಡ್ಡಿ ರಾಶಿ ಸುರುವಿರುತ್ತಾರೆ.ಗೌಡರ ಹತ್ತಿ ಜೀನಿನ ಖಾಲಿ ಜಾಗ, ಊರ ಮುಂದಿನ ಜಿಡ್ಡಿಯ ಬಳಿ, ಅದೂ ಹೋಗ್ಲಿ ದ್ಯಾಮವ್ವನ ಗುಡಿಯ ಮೂಂದಿನ ಕಿರುಜಾಗದಲ್ಲೂ ಬರೀ ಉಳ್ಳಾಗಡ್ಡಿಯ ಆರ್ಭಟವೇ ಅರ್ಭಟ.ಅದೋಂಥರ ವಿಚಿತ್ರ ಲೋಕವೇ ಉಳ್ಳಾಗಡ್ಡಿ ಸೀಜನ್ನಿನಲ್ಲಿ ನಮ್ಮೂರಿನಲ್ಲಿ ತೆರೆದುಕೊಂಡಿರುತ್ತದೆ.ಇಂತಿಪ್ಪ ಉಳ್ಳಾಗಡ್ಡಿಯ ರಾಶಿಯ ಸುತ್ತಲೂ ಗಡ್ದೆಯನ್ನು ಅದರ ತಪ್ಪಲಿನಿಂದ ಪ್ರತ್ಯೇಕಿಸಲು ಈಳಿಗೆಮಣೆ ಕೈಲಿ ಹಿಡಿದು ಕೂತ ಕೆಲಸದ ಹೆಂಗಸರು ಸೆನ್ಸಾರಿನ ಭಯವಿಲ್ಲದೆ ಧಾರಾಳವಾಗಿ ಸಂಸ್ಕ್ರತ ಪದಗಳನ್ನು ಬಳಸಿ ಹರಟತೊಡಗಿರುತ್ತಾರೆ.ಆದಷ್ಟು ಬೇಗ ಲೋಡ್ ಮಾಡಿ ಮಾರ್ಕೆಟ್ಟಿಗೆ ಕಳಿಸುವ ತರಾತುರಿಯಲ್ಲಿರುವ ಉಳ್ಳಾಗಡ್ಡಿ ಮಾಲೀಕರು ರಾತ್ರಿಯಾದರೂ ಎಲ್ಲಿಂದಲೋ ವೈರೆಳೆದು ತಾತ್ಕಾಲಿಕ ಬೆಳಕಿನ ವ್ಯವಸ್ಥೆ ಮಾಡಿ ಈ ಹೆಂಗಸರ ಕಾರ್ಯ ಮತ್ತು ಹರಟೆಗೆ ಭಂಗ ಬರದಂತೆ ನೋಡಿಕೊಳ್ಳುತ್ತಾರೆ. ಮಧ್ಯೆ ಮಧ್ಯೆ ನಿದ್ದೆ ಓಡಿಸಲು ಬೇಡಿಕೆ ಅನುಸಾರ ಎಲಿ,ಅಡಿಕೆ ,ತಂಬಾಕು ಅಥವಾ ಚಹಾದ ಪೂರೈಕೆಯೂ ಇರುತ್ತದೆ. ಇವರೊಂದಿಗೆ ಉಳ್ಳಾಗಡ್ಡಿಗಳನ್ನು ಗಾತ್ರಾನುಸಾರ ಪ್ರತ್ಯೇಕಿಸಿ ಚೀಲಕ್ಕೆ ತುಂಬಲು ಚಿಣ್ಣರ ಪಡೆ ಸನ್ನದ್ಧವಾಗಿರುತ್ತದೆ ಮತ್ತು ಬಿಸಾಕಿದ ಉಳ್ಳಾಗಡ್ಡಿ ಸಿಪ್ಪೆಗಳಿಗಾಗೆ ಮತ್ತು ಅದರ ತಪ್ಪಲಿಗಾಗಿ ದನಗಳು ಅಲ್ಲೇ ಸುಳಿದಾಡುತ್ತಿರುತ್ತವೆ. ಅದರಿಂದಾಗಿ ಆ ಸೀಜನ್ನಿನಲ್ಲಿ ಎಲ್ಲರ ಮನೆಯ ಹಾಲು ಮತ್ತು ಅದರಿಂದ ಮಾಡಿದ ಚಹಾವು "ಉಳ್ಳಾಗಡ್ಡಿ ಫ್ಲೇವರ್" ಸೂಸುತ್ತಿರುತ್ತವೆ. ಹಗಲಿಗೂ ರಾತ್ರಿಗೂ ವ್ಯತ್ಯಾಸವೇ ತಿಳಿಯದಂತೆ ಈ ಎಲ್ಲಾ ಕಾರ್ಯಗಳು ನಡೆಯುತ್ತವೆ, ಹೀಗಾಗಿ ಕೆಲ " ಪತಿ, ಪತ್ನಿ ಔರ್ ವೋ" ಕಥೆಗಳಿಗೂ ಉಳ್ಳಾಗಡ್ಡಿ ಸೀಜನ್ನು ತಿಳಿಯದೆ ಕಾರಣವಾಗಿಬಿಟ್ಟಿರುತ್ತೆ.
ನಮ್ಮೂರಿನ ಜನರ ಬಾಯಲ್ಲಂತೂ ಬರೀ " ಗೌಡ್ರ, ನಿಮ್ಮವು ಎಷ್ಟು ಪಿ,ಸಿ ಆದ್ವು?" "ನಿಂಗಪ್ಪ ಈ ವರ್ಷ ಚಾನ್ಸು ಹೊಡೆದ ನೊಡಪಾ" "ಇವತ್ತು ಎಷ್ಟು ಲಾರಿ ಲೋಡಾಗಿವೆ?" " ರೇಟು ಇನ್ನೂ ಏರುತ್ತೆ ನೊಡ್ತಾ ಇರೀ" " ಥೂ ಈ ಆಳು ಸುಳೆಮಕ್ಳುದು ಹಡಿಬಿಟ್ಟಿ ವ್ಯವಹಾರ ಜಾಸ್ತಿ ಆಯ್ತು" ಇತ್ಯಾದಿ ಮಾತುಗಳು ಸರ್ವೇಸಾಮಾನ್ಯವಾಗಿರುತ್ತೆ.
ಆದ್ರೇ ಒಂದಂತೂ ನಿಜ, ಈ ಸೂಳೆಮಗನ ಉಳ್ಳಾಗಡ್ಡಿ ರೇಟು ಮಟಕಾ ನಂಬರಿದ್ದ ಹಾಗೇ, ಒಂದು ದಿನ ಇದ್ದುದು ಇನ್ನೊಂದು ದಿನ ಇರುವುದೇ ಇಲ್ಲಾ. ಭಲೇ ರಿಸ್ಕಿನ ಜೂಜನ್ನು ನಮ್ಮೂರಿನ ರೈತರು ಪ್ರತಿ ವರುಶವೂ ಆಡುತ್ತಲೇ ಇರುತ್ತಾರೆ.ಏನೇ ಆದರೂ ನಮ್ಮೂರಿನ ರೈತರಿಗೆ ಉಳ್ಳಾಗಡ್ಡಿ ಮೇಲಿನ ನಂಬಿಕೆ, ನಿಷ್ಠೆ, ಪ್ರೀತಿ ಕಡಿಮೆಯಾಗಿಲ್ಲಾ ಅನ್ನುವುದೇ ಸೋಜಿಗ.ನಿಮಗೆ ನೆನಪಿರಬೇಕು ಹಿಂದೊಮ್ಮೆ ವಾಜಪೇಯಿ ಪ್ರಧಾನಿಯಾಗಿದ್ದಾಗ ಉಳ್ಳಾಗಡ್ಡಿ ಬೆಲೆ ಗಗನಕ್ಕೇರಿ ಸರಕಾರವೇ ಉರುಳುವ ಮಟ್ಟಕ್ಕೆ ಬಂದಾಗ,ನಮ್ಮೂರಿನ ಜನತೆ ತಾವು ಬೆಳೆಯುವ ಉಳ್ಳಾಗಡ್ಡಿಗಿರುವ ಪವರ್ ಕಂಡು ಹಿರಿಹಿರಿ ಹಿಗ್ಗಿದ್ದರು. ಉಳ್ಳಾಗಡ್ಡಿಗೆ ಸರಕಾರ ಉರುಳಿಸುವ ಶಕ್ತಿ ಇದೆ ಎಂಬ ಭಾವವೇ ನಮ್ಮೂರಿನ ರೈತ ಸಮುದಾಯಕ್ಕೆ ಇನ್ನಷ್ಟು ಉಳ್ಳಾಗಡ್ಡಿ ಬೆಳೆಯುಲು ಪ್ರೇರಣೆ ನೀಡಿತ್ತು. ನಿಮಗೆ ಹೇಳ್ತಿನಿ ಆ ವರ್ಷ ನಮ್ಮುರಿನ ರೈತರು ಉಳ್ಳಾಗಡ್ಡಿ ರೇಟಿನೊಂದಿಗೆ ತಾವೂ ಆಕಾಶಕ್ಕೇರಿಬಿಟ್ಟಿದ್ದರು. ಪ್ರತಿಯೊಬ್ಬನ ಮನೆಯ ಮುಂದೆಯೂ "ಹಮಾರ ಬಜಾಜ", ಆ ವರುಶ ಮದುವೆ ಮಾಡಿಕೊಟ್ಟ ಹೆಣ್ಣುಮಕ್ಕಳ ಮೈತುಂಬ ಬಂಗಾರ, ಗಣೇಶ ಬೀಡಿ ಸೇದಲೂ ಉದ್ರಿ ಕೇಳುತ್ತಿದ್ದ ಚಪರಾಸಿಗಳ ತುಟಿಯ ಮೇಲೆ ಕಿಂಗು ಸೀಗರೇಟು, ಕಂಟ್ರಿ ಕುಡಿಯುತ್ತಿದ್ದವರೂ ಗದಗಿಗೆ ಹೋಗಿ "DSP" ಏರಿಸಿ ಬರತೊಡಗಿದರು, ಆಶ್ರಯ ಯೋಜನೆಗಳ ಮನೆಯಲ್ಲೂ ಕಲರ್ ಟಿವ್ಹಿ ಮತ್ತು ಟೇಪ್ ರೇಕಾರ್ಡರ್ರು ಮತ್ತು " ತಪ್ಪಾ? ಪ್ರೀತ್ಸೊದ್ ತಪ್ಪಾ?" ಅಂತ ಅರಚುವ ರವಿಚಂದ್ರನ್ ಹಾಡುಗಳು ಕೇಳಿಬರತೊಡ್ಗಿದ್ದವು. ಇನ್ನೊಂದೆಡೆ ದಲ್ಲಾಳಿಗಳು ನಮ್ಮೂರಿನ ರೈತರನ್ನು ಹುಡುಕಿಕೊಂಡು ಮನೆಬಾಗಿಲಿಗೆ ಬಂದು ವ್ಯವಹಾರ ಕುದುರಿಸತೊಡಗಿದರು. ಇನ್ನೂ ಬೇಂಗಳೂರಿಗೆ ಲಾರಿ ಒಯ್ದ ರೈತರಿಗಂತೂ ದಲ್ಲಾಳಿಗಳಿಂದ ರಾಜೋಪಚಾರ;ರೈತ ಭವನದ ಸೆಕ್ಯುರಿಟಿಯೂ ಭರ್ಜರಿ ಸೆಲ್ಯುಟು ಕುಟ್ಟತೊಡಗಿದ್ದ. ಇದೆಲ್ಲಾ ಕಂಡು,ಅನುಭವಿಸಿದ ನಮ್ಮೂರಿನ ರೈತ ಧಣಿಗಳ ಲೆವೆಲ್ಲ್ಲೆಬದಲಾಗತೊಡಗಿತ್ತು.ಉಳ್ಳಾಗಡ್ಡಿ ಬೆಳೆದವರೆಲ್ಲರೂ ತಮ್ಮ ನಸೀಬಿಗೆ ಬೀಗಿದ್ದೇ ಬೀಗಿದ್ದು.ಉಳ್ಳಾಗಡ್ಡಿ ಮಾರಲು ಬೆಂಗಳೂರಿಗೆ ಹೋಗೆ ಬಂದ ಜನ ತಮ್ಮ ಯಾತ್ರೆಯ ಜೊತೆಗೆ ಉಳ್ಳಾಗಡ್ಡಿ ಮಾರಿ ಬಂದ ಹಣವನ್ನು ತಮ್ಮ ಅಂಡರವೇರಿನಲ್ಲೋ, ಹಳೆಯ ಚಾದರದಲ್ಲೋ ಮುಚ್ಚಿಟ್ಟು ಜೋಪಾನವಾಗಿ ಕಳ್ಳರಿಂದ ಪಾರಾದ ರೋಚಕ ಕಥೆಯನ್ನು ಉಪ್ಪು ಖಾರ ಹಾಕಿ ಹೇಳುತ್ತಿದ್ದರೆ ಉಳಿದವರ ಮುಂದೆ ಹೇಳುತ್ತಿದ್ದವ ಸಲ್ಮಾನಖಾನ್ ಆಗಿಬಿಡುತ್ತಿದ್ದ.
ಮುಂದೆ ನಡೆದಿದ್ದೆ ನಮ್ಮೂರ ರೈತರ ಅರ್ಧ ರಾತ್ರೀಲಿ ಕೊಡೆ ಹಿಡಿಯುವ ಕಾಯಕ.ಯಾವುದೋ ಮಹಾಶಯ "ಬನಶಂಕರಿ"ಗೆ ಬಂಗಾರದ ಉಳ್ಳಾಗಡ್ಡಿ ದೇಣೆಗೆ ನೀಡಿದ ಪ್ರಹಸನವೂ ನಡೆದು ಹೋಯಿತು. ಅದು ಹಾಳಾಗ್ಲಿ ನಮ್ಮೂರಲ್ಲೆ ಉಳ್ಳಾಗಡ್ಡಿ ದೇವಸ್ಥಾನ ನಿರ್ಮಿಸುತ್ತ್ತಾರೆ ಎಂಬ ತಲೆಬುಡವಿಲ್ಲದ ಗಾಳಿಸುದ್ದಿಯೂ ಸೇರಿಕೊಂಡು ಉಳ್ಳಾಗಡ್ಡಿಗೆ ದೈವತ್ವವನ್ನು ಆರೋಪಿಸುವ ಸತ್ಕಾರ್ಯವೂ ನಡೆಯಿತು, ಹೀಗಾಗಿ ’ಉಳ್ಳಾಗಡ್ಡಿ’ ಅಂದ್ರೆ ನಮ್ಮೂರ ಜನಕ್ಕೆ ಭಯ ಭಕ್ತಿ ಉಕ್ಕತೊಡಗಿತ್ತು.ಆ ವರ್ಷ ನಡೆದ ಪಂಚಾಯಿತಿ ಚುಣಾವಣೆಯಲ್ಲಿ ಉಳ್ಳಾಗಡ್ಡಿ ಯನ್ನು ಚುನಾವಣಾ ಚಿಹ್ನೆಯಾಗಿ ಪಡೆಯಲು ನಮ್ಮೂರಿನ ರೈತರ ಧುರೀಣರ ನಡುವೆ ಪೈಪೋಟಿ ಶುರುವಾಗಿತ್ತು.ಕೊನೆಗೆ ನಮ್ಮೂರಿನ ರೈತರ ಶ್ರೀಮಂತಿಕೆ "ಮಲಪ್ರಭಾ ಗ್ರಾಮೀಣ ಬ್ಯಾಂಕಿ"ನವರ ಕಣ್ಣು ಕುಕ್ಕಿ ಒಂದು ಶಾಖೆಯನ್ನು ಅಗಸೆ ಬಾಗಿಲಿನಲ್ಲಿ ತೆರೆದೆ ಬಿಟ್ಟರು ಮತ್ತು ಕಳ್ಳರ ಭಯದಿಂದ ನಮ್ಮೂರಿಗೆ ರಾತ್ರಿ ಡ್ಯೂಟಿಗೆ ಇಬ್ಬರು ಪೋಲಿಸರೂ ಬರತೊಡಗಿದ ಮೇಲೆ ನಮ್ಮ ಊರಿನ ಖದರ್ರೆ ಬದಲಾಗತೊಡಗಿತ್ತು.
ಮುಂದೆ ಶುರುವಾಗಿದ್ದೆ ಕಹಾನಿ ಮೇ ಟ್ವಿಸ್ಟ. ಮುಂದಿನ ಹಂಗಾಮಿನಲ್ಲಿ ಎಲ್ಲಾ ಹಿರಿ ಕಿರಿ ರೈತರು ಉಳಿದ ಎಲ್ಲಾ ಬೆಳೆಗಳನ್ನು ಬಿಟ್ಟು ಉಳ್ಳಾಗಡ್ಡಿಯನ್ನು ಮಾತ್ರ ಬಿತ್ತತೊಡಗಿದ್ದರು.ತುಟ್ಟಿಯ ಯೂರಿಯಾ ತಂದು ಸುರಿದದ್ದೆ ಸುರಿದದ್ದು,ಮೇಲಿಂದ ಮೇಲೆ ಕಳೆ ಕಿತ್ತು ಮಕ್ಕಳಂತೆ ಉಳ್ಳಾಗಡ್ಡಿ ಸಸಿಗಳನ್ನು ಪೋಷಿಸಿದ್ದಕ್ಕೆ ಉಳ್ಳಾಗಡ್ಡಿ ಕೈ ಬಿಡಲಿಲ್ಲಾ. ಎಲ್ಲರ ಹೊಲದಲ್ಲೂ ಬಂಪರ್ ಬೆಳೆ. ಯಡವಟ್ಟು ಆಗಿದ್ದೆ ಇಲ್ಲಿ, ಅತಿ ಆದರೆ ಅಮೃತವೂ ವಿಷ ಅಂತೆ, ಹಾಗೇಯೇ ಆ ವರ್ಷ ಉಳ್ಳಾಗಡ್ಡಿ ರೇಟು ಪಾತಾಳ ಕಂಡಿತ್ತು. ಅದರೂ ದೀಪಾವಳಿ ಕಳೆದ ಮೇಲೆ ರೇಟು ಬಂದೇ ಬರುತ್ತೆ ಎಂಬ ನಂಬಿಕೆಯಲ್ಲಿ ಉಳ್ಳಾಗಡ್ಡಿ ಕಿತ್ತು ಗುಡ್ಡೆ ಹಾಕತೊಡಗಿದರು.ಮೊದಲೆಲ್ಲಾ ಮನೆ ಬಾಗಿಲಿಗೆ ಬಂದು ಚೌಕಾಸಿ ಆರಂಭಿಸುತ್ತಿದ್ದ ದಲ್ಲಾಳಿಗಳು ನಮ್ಮೂರಿನ ಕಡೆ ತಲೆ ಹಾಕಿ ಮಲಗುವದನ್ನೆ ಬಿಟ್ಟಿದ್ದರು. ಆಗಲೇ ನಮ್ಮೂರಿನ ರೈತರ ಪಸೆ ಆರತೊಡಗಿತ್ತು. ಎಕರೆಗೆ ಸಾವಿರಾರು ಖರ್ಚು ಮಾಡಿದ ಹೊಟ್ಟೆಯೊಳಗಿನ ಸಂಕಟ ಪ್ರತಿಭಟನೆ ರೂಪು ಪಡೆದು, ಉಳ್ಳಾಗಡ್ಡಿಯನ್ನು ರಸ್ತೆಯಲ್ಲೆ ಸುರುವಿ, ಸರಕಾರಿ ಬಸ್ಸು ನಿಲ್ಲಿಸಿ " ಅಬ್ಬಿಗೇರಿ ರೈತರಿಂದ ಉಳ್ಳಾಗಡ್ಡಿಗೆ ಬೆಂಬಲ ಬೆಲೆಗೆ ಆಗ್ರಹಿಸಿ ಉಗ್ರ ಹೋರಾಟ. ದಿ||......... " ಅಂತ ಬಸ್ಸಿನ ಏರಡೂ ಕಡೆ ಬರೆಸಿ "ಉಗ್ರ ಓರಾಟ" ಶುರು ಮಾಡಿದರೂ ಉಳ್ಳಾಗಡ್ಡಿ ಚಿಹ್ನೆಯಿಂದಲೇ ಅರಿಸಿ ಹೋದ ರೈತ ಧುರೀಣರು ಇತ್ತ ಕಡೆ ಹಾಯಲೇ ಇಲ್ಲಾ.ಕೆಲವರು ಧೈರ್ಯ ಮಾಡಿ ಲೋಡು ಮಾಡಿಸಿ ಬೆಂಗಳೂರಿಗೆ ಲಾರಿ ತಂದು ರೇಟು ವಿಚಾರಿಸಿದಾಗ ಲಾರಿಯ ಬಾಡಿಗೆಯೂ ಗಿಟ್ಟುವುದಿಲ್ಲಾ ಎಂಬ ಖಾತ್ರಿಯಾದಾಗ ತಂದ ಉಳ್ಳಾಗಡ್ಡಿಯನ್ನು ಲಾರಿಯಲ್ಲೇ ಬಿಟ್ಟು ರಾತ್ರೋ ರಾತ್ರಿ ಊರಿಗೆ ಮರಳಿ ಬಿಟ್ಟಿದ್ದರು, ಕೆಲ ಹತಾಶ ರೈತರು ಮಾರ್ಕೆಟ್ಟಿನಲ್ಲೇ ಉಳ್ಳಾಗಡ್ಡಿ ಸುರುವಿ ತಮ್ಮ ಆಕ್ರೋಶ ತೋರ್ಪಡಿಸತೋಡಗಿದ್ದರು.ಇಡಿ ಊರಲ್ಲಿ ಸೂತಕದ ಛಾಯೆ. ಎಲ್ಲರೂ ಸರಕಾರವನ್ನು, ತಮ್ಮ ಹಣೆಬರಹವನ್ನು ಜರೀಯುವವರೆ ಆದರು. ಕೆಲ ಅರ್ಧ ಕೊಡಗಳು ಎಕ್ಸಪೋರ್ಟ್ ಪರ್ಮಿಶನ್ನು, ಪಾಕಿಸ್ತಾನ ಮಾರ್ಕೇಟ್ಟು, ಆಂಧ್ರದ ಉಳ್ಳಾಗಡ್ಡಿ ಲಾಬಿ ಅಂತೆಲ್ಲಾ "ಅರ್ಥಶಾಸ್ತ್ರ"ದ ಕೊಲೆ ಮಾಡತೊಡಗಿದರು.ಎನೇ ಆದರೂ ನಮ್ಮೂರ ರೈತನ ಸ್ಥಿತಿ ಇಂಗು ತಿಂದ ಮಂಗನದಾಗಿತ್ತು..
ಮೊನ್ನೆ ರಿಲಾಯನ್ಸ್ ಪ್ರೆಶ್ ಗೆ ಹೋದಾಗ ಉಳ್ಳಾಗಡ್ಡಿ ಬೆಲೆ ಕೆಜಿಗೆ ಹದಿನೆಂಟು ಅಂತ ನೋಡಿ ಹೊಟ್ಟೆ ಉರಿಯಿತು. ಯಾಕೆಂದರೆ ಕಳೆದ ದಿನವಷ್ಟೆ ಉಳ್ಳಾಗಡ್ಡಿ ಮಾರಲು ಬಂದ್ ನಮ್ಮೂರ ರೈತನೊಬ್ಬ ಮೆಜೆಸ್ಟಿಕನಲ್ಲಿ ಸಿಕ್ಕಾಗ " ಎಷ್ಟಕ್ಕೆ ಮಾರಿದೆ?" ಅಂತ ಕೇಳಿದ್ರೆ " ಆರು ನೂರಕ್ಕಿಂತ ನಯಾ ಪೈಸೆನೂ ಮುಂದೆ ಜಗ್ಗಲಿಲ್ಲಾ ಗೌಡ್ರೆ " ಅಂತ ಬೇಸರದಿಂದ ಹೇಳಿ, ಕೊನೆಗೆ " ಈ ವರ್ಸಾನು ನಮ್ಮನ ಹಟ್ರು ನೊಡ್ರಿ ಗೌಡ್ರ" ಅಂದ.ಎಷ್ಟು ಯೋಚಿಸಿದರೂ ಅವರನ್ನೂ ಹಟ್ಟಿದ್ದೂ ಸರಕಾರವಾ? ದಲ್ಲಾಳಿಗಳಾ? ಅಥವಾ ಎಲ್ಲವನ್ನೂ ನುಂಗುತ್ತಿರುವ ಭಂಡವಾಳಶಾಯಿಗಳಾ? ಅಂತ ತಿಳಿಲೇ ಇಲ್ಲಾ.ಅದ್ಯಾಕೋ ಗೊತ್ತಿಲ್ಲಾ! ನಮ್ಮೂರಿನ ರೈತರ ದಡ್ದತನ, ಅವರ ದರಿದ್ರತನ, ಮುಂದಾಲೋಚನೆಯೇ ಇಲ್ಲದ ಪೆದ್ದುತನ,ಹುಸಿ ನಂಬಿಕೆಯಲ್ಲಿ ದೇವರ ಮೇಲೆ ಭಾರ ಹಾಕಿ ಪ್ರತಿವರ್ಷವೂ ಅವರು ಉಳ್ಳಾಗಡ್ಡಿ ರೇಟಿನೋಂದಿಗೆ ಆಡುವ ಜೂಜು ನೆನಪಿಗೆ ಬಂತು. ಯುಗಾದಿಯ ಹೊಸ ಬಟ್ಟೆ, ಹೆರಿಗೆಗೆ ಬಂದ ಅಕ್ಕನ ಬಾಣಂತನದ ಖರ್ಚು,ಅಜ್ಜನ ಕಣ್ಣಿನ ಪೊರೆಯ ಆಪರೇಶನ್ನು, ಅವ್ವನ ಧಡಿ ಸೀರೆಯ ಕನಸು, ಮಳೆಗಾಲಕ್ಕೆ ಬಿದದೆ ಸೋರುವ ಮಾಳಿಗೆಯ ರೀಪೆರಿಯ ಖರ್ಚು, ಅಣ್ಣನ ಓದಿನ ಖರ್ಚು ಇತ್ಯಾದಿ ಕನಸುಗಳು "ಉಳ್ಳಾಗಡ್ಡಿ ಧಾರಣಿ" ಎಂಬ ನಮ್ಮ ಎಣಿಕೆಗೆ ನಿಲುಕದ ಮಾಯೆಯೆ ಜೊತೆಗೆ ತಳಕು ಹಾಕಿಕೊಂಡಿರುವುದು ನಮ್ಮೂರಿನ ದುರ್ದೈವ.ಬೇಡ ಬೇಡವೆಂದರೂ ಬಿಸಿಲಿಗೆ ಬಾಡಿದ ಕಪ್ಪುಮೊಗದ,ಪ್ಯಾಲಿ ನಗೆಯ,ಹರಿದ ಬನೀನಿನ,ಹಳೆಯ ಎಕ್ಕಡದ, ಅದೆ ತುಂಬು ಭರವಸೆಗಣ್ಣಿನ ನಮ್ಮೂರಿನ ರೈತನ ಚಿತ್ರ ಕಣ್ಣಿಂದ ಕದಲುತ್ತಲೇ ಇಲ್ಲ್ಲ........
3 comments:
abbieri ullaagaddi bagge,raitar bagge chennagine yelidiyaa.chennagi sublect na collect maadidiyaa.yene aadru raitar paadu tumbaa ne kashta.
ಪಾಟೀಲ್ ಅವರೆ,
ತುಂಬಾ ಚನ್ನಾಗಿ ಬರೆದಿದ್ದಿರಾ. ನಮ್ಮೂರಿನ ಅಡಿಕೆ ಗತಿಯೂ ಹಿಂಗೆ ಆಗಿತ್ತು. ರೆಟ್ ಬಂದಾಗ ನಮ್ಮೂರಿನ ಹೆಗ್ಡೆ ಗಳೆಲ್ಲಾ ಓಮಿನಿಲಿ ಓಡಾಡುತ್ತಿದ್ದರು. ಆಮೇಲೆ ರೆಟ್ ಬಿದ್ದಾಗ ನೋಡಬೇಕಿತ್ತು ಮಜಾ. ಆದರೆ ತೀರ ನಿಮ್ಮೂರಿನ ಪರಿಸ್ಥಿತಿ ಆಗಲಿಲ್ಲ.
ಸಕತ್ ಆಗಿ ಬರೆದಿದ್ದಿರಾ.
@ಪೂರ್ಣಿಮಾ
ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು..
@ರಂಜನಾ
ಧನ್ಯವಾದಗಳು.. ಹುಂ ನಾನೂ ಕೇಳಿದ್ದೀನಿ. ಅಡಿಕೆ, ವೆನಿಲ್ಲಾ ಎಲ್ಲಾ ಕಥೆನೂ ಹೀಗೆನೆ.
Post a Comment