ಚಳಿ ಚಳಿ ತಾಳೆನು ಈ ಚಳಿಯ..
ನಮ್ಮೂರಿನಲ್ಲಿ ಆಯಾ ಕಾಲಗಳನ್ನು ಕೆಲ ’ಸ್ಪೆಶಲ್’ ಲಕ್ಷಣಗಳಿಂದ ಗುರುತಿಸಿಬಿಡುತ್ತಾರೆ. ದೀಪಾವಳಿ ಆಸು ಪಾಸಿನಲ್ಲಿ ಉಳ್ಳಾಗಡ್ಡಿ ಜೋರು ಶುರುವಾಗಿಬಿಡುತ್ತೆ,ಜೊತೆಗೆ ಥಂಡಿ ಗಾಳಿಯ ಆಗಮನವೂ ಶುರುವಾಗಿಬಿಡುತ್ತೆ.ಊರ ನಾಯಿಗಳಿಗಿದು ಪ್ರಸ್ಥದ ಕಾಲ.ಅಂತೆಯೇ ಹೆಣ್ಣುನಾಯಿಗಳನ್ನು ಹುಡುಕಿಕೊಂಡು ಗಂಡುನಾಯಿಗಳು ಅಲೆಯುತ್ತಿರುತ್ತವೆ ಮತ್ತು ಅನುಕೂಲವದೆಡೆಯೆಲ್ಲಾ ತಮ್ಮ ರಾಸಲೀಲೆ ಆರಂಭಿಸಿ ನೋಡುಗರಿಗೆ ಮುಜುಗರ ತಂದಿಕುತ್ತವೆ. ಅದೇಕೋ ನಾ ಅರಿಯೆ ಒಮ್ಮಿದೋಮ್ಮೆಲೆ ಹೆಣ್ಣುನಾಯಿಗಳ ಸಂಖ್ಯೆ ಕಡಿಮೆಯಾಗಿ, ಅಳಿದುಳಿದ ’ಪ್ರೇಯಸಿ’ರಿಗಾಗಿ ಗಂಡುನಾಯಿಳ ನಡುವೆ ಪೈಪೋಟಿ ಶುರುವಾಗಿರುತ್ತೆ.ಕೆಲ ಪ್ರಾಣಿವಾದಿಗಳು ಹೆಣ್ಣುನಾಯಿಗಳ ಕಷ್ಟ ನೋಡಲಾಗದೆ ಚಡ್ಡಿ ತೊಡಿಸಿ ಅವುಗಳನ್ನು ಶೋಷಣೆ ಮುಕ್ತರನ್ನಾಗಿಸುವದರ ಜೊತೆಗೆ, ತಮ್ಮ ಈ ಸಾಧನೆಯಿಂದ ಲಭಿಸಬಹುದಾದ ಪುಣ್ಯದ ಲೆಕ್ಕಾಚಾರದಲ್ಲಿ ತೊಡಗಿರುತ್ತಾರೆ.ಮೂಡಗಾಳಿಯ ದೆಸಿಯಿಂದಾಗಿ ಎಲ್ಲರ ಮುಖ ಒಡೆದು, ತುಟಿ ಬಾತು ’ವೆಸ್ಟ ಇಂಡಿಸಿನ’ ಮಾಜಿ ಬೌಲರ್ ’ಕಟ್ನಿ ಆಂಬ್ರೋಸ’ನನ್ನು ನೆನೆಪಿಸತೊಡಗುತ್ತಾರೆ.ನಮ್ಮೂರ ಮನ್ಮಥರು ಹಾಳಾಗುತ್ತಿರುವ ತಮ್ಮ ಡವ್ ಗಳ ತ್ವಚೆಯನ್ನು ಕಂಡು ಮಮ್ಮಲ ಮರುಗುತ್ತಿರುತ್ತಾರೆ.ನಮ್ಮೂರ ವಿಶ್ವಸುಂದರಿಯಾದ ಗೌಡ್ರ ಮಗಳು ಗಂಗಿ ತನ್ನ ಸೌಂದರ್ಯ ಹಾಳಗಿದ್ದಕ್ಕೆ ಕಾಲೇಜಿಗೆ ರಜೆ ಹಾಕಿ ತಮ್ಮ "ದರ್ಶನ ಸೇವೆ" ವನ್ನು ನಿಲ್ಲಿಸಿ ಬಿಡುತ್ತಾಳೆ. ಊರ ಮದ್ಯದ ಶೆಟ್ಟಿ ಅಂಗಡಿಯಲ್ಲಿ ಆಗಲೇ ಎರಡು ಡಬ್ಬಿ "ವ್ಯಾಸಲಿನ" ಖರ್ಚಾಗಿ, ಈ ಶನಿವಾರ ಗದಗಿಗೆ ಹೋದಾಗ ಇನ್ನೆರಡು ಡಬ್ಬಿ ಆರ್ಡರು ಮಾಡಬೇಕೇಂದು ಶೆಟ್ಟಿ ನೆನೆಪಿಟ್ಟುಕೊಳ್ಳುತ್ತಾನೆ.
ಬೇಸಿಗೆಯಲ್ಲಿ ಎಷ್ಟೇ ಬಿಸಿಲಾದರೂ ಡೊಂಟ್ ಕೇರ್ ಮಾಡದೆ ’ಸೂರ್ಯ’ನಿಗೆ ಚಾಲೇಂಜ್ ಮಾಡುವ ನಮ್ಮೂರ ಜನತೆ, ಚಳಿ ಅಂದ್ರೆ ಸಾಕು ಸತ್ತ ಕೀಡಿ ಹುಳುವಂತಾಗುತ್ತಾರೆ. ಅಟ್ಟ ಸೇರಿದ ಸ್ವೇಟರು, ಮಂಕಿ ಕ್ಯಾಪು, ಶಾಲು, ಬೇಸಿಗೆಯಲ್ಲಿ ಹೊಲಿಸಿದ ಕೌದಿ ಎಲ್ಲಾ ಒಮ್ಮೆಲೆ ನೆನಪಾಗತೊಡಗುತ್ತವೆ. ಇಷ್ಟೆಲ್ಲಾ ಇದ್ದರೂ ಚಳಿ ತಡೆಯಲಾಗದ್ದಕ್ಕೆ ಜನ ಬೆಂಗಲೂರಿಗೆ ಉಳ್ಳಾಗಡ್ಡಿ ಮಾರಲು ಹೋದವರ ಹತ್ತಿರ ಮತ್ತು ಗದಗಿಗೆ ನೌಕರಿಗೆ ಹೋಗುವ ’ಗೊರ್ಮೆಂಟು ಮಂದಿ’ಗೆ ಹೊಸ ರಗ್ಗು ತರಲು ಆರ್ಡರು ಮಾಡತೊಡಗುತ್ತಾರೆ.ಲಿಂಗಭೇಧವಿಲ್ಲದೆ ಸ್ವೇಟರು, ಮಂಕಿ ಕ್ಯಾಪು ಧರಿಸಿದ ನಮ್ಮುರಿನ ಜನತೆ ’ಇಂಗ್ಲೀಷು ಸಿನಿಮಾ’ದಲ್ಲಿನ ಅನ್ಯ ಗ್ರಹ ಜೀವಿಗಳಂತೆ ಭಾಸವಾಗುತ್ತಾರೆ.ಅಸ್ತಮಾ ಇರುವವರ ಪಜೀತಿಯಂತೂ ಯಾರಿಗೂ ಬೇಡ, ಕಂಡಲ್ಲಿ ಕ್ಯಾಕರಿಸಿ ಉಗುಳಿ ಉಳಿದವರ ಕೆಂಗಣ್ಣಿಗೆ ಗುರಿಯಾಗುತ್ತಾರೆ.ಲಕ್ಷ್ಮೆಶ್ವರದಲ್ಲಿ ಮೀನಿನಲ್ಲಿ ಕೊಡುವ ನಾಟಿ ಔಷಧಿಯನ್ನು ನುಂಗಿ ಬಂದು ಮೊದಲಿಗಿಂತ ಈಗ ಕಡಿಮೆ ಎಂದು ತಮ್ಮನ್ನೆ ತಾವು ಸಮಾಧಾನಿಸಿಕೊಳ್ಳುತ್ತಾರೆ.ಇವರ ಲಿಸ್ಟಿಗೆ ಹೊಸ ಸೇರ್ಪಡೆ ಎಂದರೆ "ಚಿಕೂನ ಗುನ್ಯ" ಪೀಡಿತರು. ಇವರ ಕೃಪೆಯಿಂದಾಗಿ ಊರ ಮಧ್ಯದ "ಸಂಜೀವೀನಿ ಕ್ಲಿನಿಕ"ನ ಡಾಕ್ಟ್ರು ಚಳಿಗಾಲದಲ್ಲಿ ಬ್ಯುಸಿಯೋ ಬ್ಯುಸಿ.
ಚಳಿಗಾಲ ನಮ್ಮೂರ ದೇವರನ್ನೂ ತಾಗದೆ ಬಿಡುವುದಿಲ್ಲಾ. ದ್ಯಾಮವ್ವನ ಗುಡಿಯ ಪೂಜಾರಪ್ಪನಿಗೆ ಅಸ್ತಮಾ ಇರುವುದರಿಂದ ಗ್ರಾಮದೇವತೆಗೆ ಪೂಜೆಯಾಗುವುದು ಬಿಸಿಲು ಬಿದ್ದ ಮೇಲೆಯೆ.ಅಲ್ಲದೆ ಐದು ಗಂಟೆಗೆ ಎದ್ದು ಗಂಟಲು ಕಿತ್ತು ಹೋಗುವಂತೆ " ಅಲ್ಲ್ಲಾ ಹು ಅಕ್ಬರ" ಅಂತ ಅರಚುವ ಮುಲ್ಲಾನ ನೆಗಡಿ ಚಳಿಗಾಲ ಮುಗಿಯುವ ತನಕ ಬಿಡುವುದೇ ಇಲ್ಲಾ.ಅಲ್ಲಿಯವರೆಗೂ ಅವನ ಮೈಕಿಗೂ ರಜೆ, ಜೊತೆಗೆ ಅಲ್ಲಾನಿಗೂ ಲೇಟಾಗಿ ಏಳುವ ಭಾಗ್ಯ.ದೇವನು ದೇವತೆಗಳ ಪಾಡೇ ಹೀಗಾದರೆ ನಮ್ಮಂತಹ ನರ ಮನುಷ್ಯರ ಪಾಡೇನು?. ಮೊದಲೇ ಹುಟ್ಟು ಸೊಮಾರಿಗಳಾದ ನಮ್ಮಂತವರಿಗೆ ಚಳಿಗಾಲದ ನೆಪದಲ್ಲಿ ಇನ್ನೂ ಲೇಟಾಗಿ ಎಳುವ ಭಾಗ್ಯ ಮತ್ತು ಯಾವುದೋ ನೆಪ ಒಡ್ಡಿ ಜಳಕ ತಪ್ಪಿಸುವ ಸುವರ್ಣ ಅವಕಾಶಕ್ಕಾಗಿ ನಾವು ಕಾದು ಕುಳಿತ್ತಿರುತ್ತೇವೆ. ಅವರಿವರ ಹೊಲದಲ್ಲಿ ಕದ್ದು ಶೇಂಗಾ ಬಳ್ಳಿ ಕಿತ್ತು, ಬೀಡಿ ಜಗ್ಗುವವರಿಂದ ಬೆಂಕೆ ಪೊಟ್ಟಣ ಬೇಡಿ ತಂದು , ಶೇಂಗಾ ಸುಟ್ಟು ತಿಂದರಂತೂ ಪರಮಸುಖ.ಮನೆಯಲ್ಲಿ ಪದೆ ಪದೆ ಚಹಾ ಕೇಳಿ ಕ್ಯಾಕರಿಸಿ ಉಗುಳಿಸಿಕೊಳ್ಳುದಂತೂ ಮಾಮುಲಿನ ವಿಚಾರ.ಚಹದಂಗಡಿಯ ರಂಗನ ದುಕಾನಿನ ಚಹಾದ ಕಿತ್ತಲಿಯ ಕೆಳಗಿನ ಸ್ಟೋವಿನ ಫ್ಲೆಮು ದಿನವಿಡಿ ಆರುವುದೇ ಇಲ್ಲಾ.
ಇನ್ನೂ ಕಾಲೇಜಿಗೆ ಹೋಗುವ ನಮ್ಮ ಕುಲಭಾಂದವರಂತೂ ಮುಂಜಾನೆಯ ಕ್ಲಾಸಿಗೆ ಹೋದರೆ ದ್ಯಾಮವ್ವ ಶಾಪ ಕೊಟ್ಟಾಲೆಂದು ಹೆದರಿ ಆ ಕಡೆ ಹೋಗುವುದೇ ಇಲ್ಲ್ಲಾ. ಅದ್ರೂ ಕಾಲೇಜಿ ಕ್ಯಾಂಟಿನಿಗೆ ಬಂದು ದಮ್ಮು ಎಳೆಯುತ್ತಲೋ ಅಥವಾ ನಮ್ಮ "ಉತ್ತರ ಕರ್ನಾಟಕ"ದ ಹೆಮ್ಮೆಯಾದ ’ಗುಟಖಾ’ ಜಗಿಯುತ್ತಲೋ ತಮ್ಮ ಕಷ್ಟ ಸುಖ ಹಂಚಿಕೊಳ್ಳುವುದರೊಂದಿಗೆ ಕಾಲೇಜಿಗೆ ಬರದೇ ಇರುವ ಹುಡುಗಿಯರ ಗೈರು ಹಾಜರಾತಿಗೆ ಕಾರಣ ಹುಡುಕುವ ಸತ್ಕಾರ್ಯದಲ್ಲಿ ತೊಡಗಿರುತ್ತಾರೆ. ಈ ಕ್ಯಾಂಟಿನಿಗೆ ವಿಧ್ಯಾರ್ಥಿನಿಯರಿಗೆ ಮಾತ್ರ ಅಘೋಷಿತ ನಿರ್ಬಂಧ.ಇದನ್ನು ಮೀರುವ ’ಎದೆಗಾರಿಕೆ’ಯ ಹುಡುಗಿ ಇನ್ನೂ ಕಾಲೇಜಿಗೆ ಬಂದಿಲ್ಲಾ ಎಂದುದೆ ನಮ್ಮ ಹುಡುಗರ ಚಿಂತೆಗೆ ಕಾರಣ.ಸಿನಿಮಾದಲ್ಲಿ ತೋರಿಸುವ ಕಾಲೇಜು ಕ್ಯಾಂಟಿನನ್ನು ನೆನೆದು ತಮ್ಮ ದುರ್ವಿಧಿಯನ್ನು ಶಪಿಸುತ್ತಿರುತ್ತಾರೆ. ಇನ್ನು ಹೈಸ್ಕೂಲು, ಪ್ರೈಮರಿ ಹುಡುಗರಿಗೆ ಚಳಿಗಾಲದ ಶನಿವಾರವೆಂದರೆ ಸಾಕು ಭಯ ಬೀಳುತ್ತಾರೆ.ಪಿಟಿ ಮಾಸ್ತರಿನ ಡ್ರಿಲ್ ನ ಕಿರಿಕಿರಿಯ ಜೊತೆಗೆ, ಚಳಿಯಲ್ಲಿ ಬೀಳುವ ಏಟಿನ ಚುರುಕು ಇನ್ನೂ ಜಾಸ್ತಿ ಎಂಬುದು ಅವರ ಸಂಕಟ.ಇವರಲ್ಲೂ ಕೆಲ ಚಾಲಾಕು ಮುಂಡೆವು ಅಲ್ಲಲ್ಲಿ ಬಿದ್ದಿರುವ ಚಿಂದಿ ಹಾಳೆಗಳನ್ನೂ ಮತ್ತು ಕಚ್ಚ್ಸಾದಲ್ಲಿನ ಶುದ್ಧ ಬರಹದ ಹಾಳೆಗಳನ್ನೂ ಒಟ್ಟುಗೂಡಿಸಿ ಬೆಂಕಿ ಹಚ್ಚಿ ಚಳಿಯನನ್ನು ಒಡಿಸುವದರ ಜೊತೆಗೆ ತಮ್ಮ ಡವ್ ಗಳನ್ನೂ ಇಂಪ್ರೆಸ್ ಮಾಡುತ್ತಾರೆ.
ಬೆಂಗಳೂರಿಗೆ ಬಂದು ವರ್ಷಗಳೇ ಅದರೂ ಇಲ್ಲಿಯ ಚಳಿಗೆ ಹೊಂದಿಕೊಳ್ಳಲಾಗುತ್ತಿಲ್ಲ್ಲಾ ಮತ್ತು ಆ ನೆಪದಲ್ಲಿ ನಮ್ಮೂರಿನ ಹ್ಯಾಂಗೋವರಿನಿಂದ ಹೊರಬರಲೂ ಅಗುತ್ತಿಲ್ಲಾ. ಕಳೆದ ವಾರದ ಮೂರುದಿನಗಳ ಚಳಿಯಲ್ಲಿ ತಲೆಬಿಸಿ ಮಾಡಿಕೊಂಡಿದ್ದಕ್ಕೆ ಇದೆಲ್ಲಾ ನೆನಪಾಯ್ತು.