ಮಹಾಪ್ರಳಯ
"ಸರಿಯಾಗಿ 1999ನೇ ಇಸವಿ, ಒಂಬತ್ತನೇ ತಿಂಗ್ಳು,ಒಂಬತ್ತನೇ ತಾರೀಕು,ಒಂಬತ್ತು ಗಂಟೆ ಒಂಬತ್ತು ನಿಮಿಷ ಒಂಬತ್ತು ಸೆಕೆಂಡ್ ಗೆ ಪ್ರಳಯ ಆಗೀಯೇ ಅಗುತ್ತಂತೆ" ಎಂದು ಒಂದೇ ಉಸಿರಿನಲ್ಲಿ ’ಎಲ್ಲಾ ನನಗೇಯೇ ಗೊತ್ತು’ ಎಂಬ ಧಿಮಾಕಿನ ದಾಟಿಯಲ್ಲಿ ಆಕೆ ಎರಡು ಪಿರಿಯಡ್ಡುಗಳ ಮಧ್ಯದ ವಿರಾಮದ ಸಮಯದಲ್ಲಿ ಖಚಿತವಾಗಿ ಸಾರಿ ಬಿಟ್ಟಿಳು. ಚಡ್ಡಿಯ ಗುಂಡಿ ಕಿತ್ತರೂ ಪಿನ್ನು ಹಾಕಿಕೊಂಡು ಓಡಾಡುತ್ತಿದ್ದ ಪ್ರೈಮರಿ ದಿನಗಳಲ್ಲಿ ನಮಗೆ ಇಂತಹ ಪದವೂ ಮತ್ತದರ ಸಾದ್ಯತೆಯ ಅರಿವೂ ಇರದುದರಿಂದ ಹೆದರಿಕೆಯ ಬದಲು, ವಿಷಯ ಭಲೇ ಮೋಜಿದನೆಸಿತು..
ಆದರೂ ಬಾಲ್ಯದಿಂದಲೇ ಹುಡುಗಿಯರ ಬಗ್ಗೆ ಸಿಕ್ಕಾಪಟ್ಟೆ ಅಕ್ಕರೆ, ಅಭಿಮಾನ ಇಟ್ಟುಕೊಂಡ ನನಗೇ ಅವಳನ್ನು ನೋಯಿಸಿ ಘನ ಘೋರ ನರಕಕ್ಕೆ ಹೋಗುವ ಮನಸ್ಸಾದರೂ ಬಂದೀತೇ? ಹೀಗಾಗಿ " ಹೌದಾ?" ಎಂದು ರಾಗ ಎಳೆದು " ಪ್ರಳಯ ಅಂದ್ರೆ ಎನಾಗುತ್ತೆ?" ಅಂತ ನನ್ನ ಪೆದ್ದುತನದ ವಿಶ್ವರೂಪ ದರ್ಶನ ಮಾಡಿಸಿದೆ.
ನಮ್ಮ ಪ್ರತಿಕ್ರಿಯೆ ಕಂಡು ಭಲೇ ಉತ್ಸಾಹಿತಳಾಗಿ ಆಕೆ, ಪ್ರಳಯದ ಬಗ್ಗೆಯೂ, ಆಗಬಹುದಾದ ಬೆಂಕಿ ಮಳೆಯ ಬಗ್ಗೆಯೂ, ಉಕ್ಕಿ ಬರಬಹುದಾದ ಸಮುದ್ರದ ಬಗ್ಗೆಯೂ ಭಲೇ ರಸವತ್ತಾಗಿ ಹೇಳಿ, ಹಂಪೆಯಲ್ಲಿ ಒಂದು ಕಲ್ಲಿನ ಕೋಳಿಯಿದೆಯಂದೂ, ಅದು ಪ್ರಳಯದ ಮುನ್ಸೂಚನೆ ಬಂದಾಗ ಜೀವ ಬಂದು ಕೂಗುತ್ತದೆಯೆಂದೂ ಹೇಳಿ ನಮ್ಮಲ್ಲಿ ಭಾರೀ ಪುಳಕವನ್ನುಂಟು ಮಾಡಿದಳು, ಕೊನೆಗೆ ಪ್ರಳಯದ ಬಗ್ಗೆ ಯಾರೋ ಒಬ್ಬ ಜೋತಿಷಿ ಮೊದಲೇ ಬರೆದಿಟ್ಟಿದಾನೆ ಎಂದೂ ಸಹ ಸೇರಿಸಿದಳು ( ಆ ಪುಣ್ಯಾತ್ಮ ’ನಾಸ್ಟ್ರಡಾಮಸ್’ ಇರಬೇಕೆಂದು ನನ್ನ ಇತ್ತೀಚಿನ ಸಂಶೋದನೆ).
ಇವಳು ಈ ರೀತಿ ಪುಂಕಾನುಪುಂಕವಾಗಿ ಪುಂಗತೊಡಗಿದರೇ ನಮಗೆ ನಂಬುವುದೋ, ಬಿಡುವುದೋ ಎಂಬ ಸಂದಿಗ್ದ ಪರಿಸ್ಥಿತಿ.ಸ್ವಲ್ಪ ನಾವೇ ಧೈರ್ಯ ತಂದುಕೊಂಡು " ನಿಂಗ್ಯಾರೆ ಇದನ್ನು ಹೇಳಿದ್ದು? " ಅಂತಲೂ ಕೇಳಿ ಬಿಟ್ಟೆ.ಇದನ್ನು ಮೊದಲೇ ಊಹಿಸಿದ್ದಳು ಎಂಬಂತೆ ಪಟ್ಟನೆ " ಪ್ರಳಯದ ಬಗ್ಗೆ ’ತರಂಗ’ದಲ್ಲಿ ಬಂದಿದೆಯೆಂದೂ, ಅವರ ಚಿಕ್ಕಮ್ಮ್ಮ ಅದನ್ನು ಓದಿ ಈ ಮಹತಾಯಿಗೆ ಹೇಳಿದಾರೆಂದು ಹೇಳಿ, ಯಾವುದಕ್ಕೂ ಇರ್ಲಿ ಅಂತ "ನಾನು ಅದನ್ನು ಓದಿದ್ದೀನಿ" ಅಂತಾ ಕೊನೆಗೆ ಸೇರಿಸಿ ಪ್ರಳಯದ ಬಗ್ಗೆ ಅದಿಕೃತ ಸೂಚನೆ ಕೊಟ್ಟುಬಿಟ್ಟಳು. ಪೇಪರು ಓದಲೂ ಸಹಾ ಪಂಚಾಯಿತಿ ಆಶ್ರಯಿಸಿದ್ದ ನಮಗೆ ’ತರಂಗ’ ಪತ್ರಿಕೆ ಅಬ್ಬಿಗೇರಿಯಲ್ಲಿ ಓದಲು ಸಿಗುವುದು ದುರ್ಲಭ ಅನಿಸಿದಾಗ ಅವಳನ್ನೆ ಆ ಸಂಚಿಕೆಯನ್ನು ಶಾಲೆಗೆ ತರಲು ಮನವಿ ಕೊಟ್ಟು ಬಿಟ್ಟೆವೂ.
ಅಪರೂಪಕ್ಕೆ ಸಿಕ್ಕ ಇಂತಹ ರುಚಿಕಟ್ಟಾದ ವಿಷಯವನ್ನೂ ನನ್ನ ತಮ್ಮನೊದಿಗೆ ಹಂಚಿಕೊಳ್ಳದಿರಲು ಸಾದ್ಯವೇ?. ಅವತ್ತು ರಾತ್ರಿ ಅಪ್ಪಾಜಿ ಎಲ್ಲಾ ಲೈಟು ಆರಿಸಿ,ಹೊರಗಿನ ಅಗುಳಿ ಹಾಕಿ " ಇನ್ನೂ ಸುಮ್ನ ಮಕ್ಕೋರಿ, ಹೊತ್ತಾತು" ಅಂತ ತಮ್ಮದೇ ಆದ ಶೈಲಿಯಲ್ಲಿ ’ಗುಡ್ ನೈಟ್’ ಹೇಳುವುದನ್ನೆ ಕಾದಿದ್ದ ನಾನು , ಕೂಡಲೇ ತಾಜಾ ’ಪ್ರಳಯ’ದ ರಸಾಯನಕ್ಕೆ ಇನ್ನಷ್ಟು ರುಚಿಗೆ ತಕ್ಕಷ್ಟು ಉಪ್ಪು, ಹುಳಿ, ಖಾರ ಬೆರೆಸಿ ನನ್ನ ತಮ್ಮನ ಮೇಲೆ ಪ್ರಯೋಗಿಸಿದೆ.
ನನ್ನ ತಮ್ಮ ಮೊದಲೇ " ತಾರೆ ಜಮೀನ್ ಪರ್" ಕೇಸಿನ ಹುಡುಗ ಅವ, ಪ್ರಳಯದ ಬಗ್ಗೆ ಗಾಬರಿಯಾಗುವುದು ಬಿಟ್ಟು , ಎನೋ ಒಂತರಾ ನಿರಾಳಗೊಂಡವನಂತೆ ಭಲೇ ಉಮ್ಮೇದಿಯಿಂದ " ಯಣ್ಣಾ! ಇನ್ನು ನಾವೂ ಸಾಲಿಗೆ ಹೋಗುವುದೂ ಮತ್ತು ಮುಂಜೇಲೇ ಎದ್ದು ಓದೋದು ವೇಸ್ಟು, ಎಲ್ಲಾರೂ ಹೆಂಗಿದ್ರು ಸಾಯ್ತಿವೀ" ಅಂತಾ ನಂಗೆ ಅದುವರೆಗೂ ಹೊಳೆಯದ್ದನ್ನ ಹೊಳೆಸಿ,ನನ್ನ ತಲೆಯಲ್ಲೂ ಹೊಸ ಆಸೆ ಬಿತ್ತಿ , ಮುಂಡೆದು ಮಲಗಿಯೇ ಬಿಟ್ಟಿತ್ತು..
ಅ ಇಸವಿಯೂ ಬಂತು ,ಆಕೆ ಹೇಳಿದ ಸಮಯವೂ ಬಂದು ಹೋಯ್ತು, ಪ್ರಳಯ ಮಾತ್ರ ಆಗಲೇ ಇಲ್ಲಾ. ಪ್ರಳಯದ ಬಗ್ಗೆ ಎನೇನೋ ಉಹಿಸಿದ್ದ ನಮಗೆ ಭಾರೀ ನಿರಾಸೆ ಆಗಿತ್ತು. ಹಂಪೆಗೆ ಹೋದಾಗ ಅಲ್ಲಿನ ಗೈಡಿಗೆ ಕಲ್ಲಿನ ಕೋಳಿಯ ಬಗ್ಗೆ ಕೇಳಿದ್ದೆ, ಅವಾ ನನ್ನ ಮುಖ ನೋಡಿ ಒಂಥರಾ ನಕ್ಕಿದ್ದ..
10 comments:
ye santhoshanna,
ist interesting aagi swalpane baryoda! mosa!:(
ಚಡ್ಡಿಯ ಗುಂಡಿ ಕಿತ್ತರೂ ಪಿನ್ನು ಹಾಕಿಕೊಂಡು ಓಡಾಡುತ್ತಿದ್ದ ಪ್ರೈಮರಿ ದಿನಗಳಲ್ಲಿ ನಿಮಗೆ ಪ್ರಳಯದ ಭೀತಿ ಇರಲಿಲ್ಲವಾ? ಆ ದಿನಗಳ ಕುರಿತೊಮ್ಮೆ ಬರೆಯಿರಿ. ಚೆನ್ನಾಗಿರುತ್ತೆ.
ಮಹಾಪ್ರಳಯ ಎಂಬ ಶೀರ್ಷೆಕೆಯಲ್ಲಿನ ಭಯವನ್ನು ಲೇಖನ ಹುಟ್ಟಿಸಲಿಲ್ಲ. ಸರಾಗವಾಗಿ ಓದಿಸಿಕೊಂಡು ಹೋಯಿತು. ಒಳ್ಳೆಯ ಸೊಗಸಾದ ಲೇಖನ ಪಾಟೀಲರೆ.
ಧನ್ಯವಾದಗಳು.
ಜೋಮನ್.
sooooooooper agi bardidiya biDu geLeya.... Bhale.....mechchide!!
- Hakki
ಸಂತೋಷ ಅವರ:
ನಮ್ಮ ಸಾಲ್ಯಾಗ ಪ್ರಳಯದ ಸುದ್ದೀಕಿಂತ ಬಾಂಬಿನ ಸುದ್ದಿ ಹೆಚ್ಚು ಇದ್ದೂರೀ. ಮಾಸ್ತರುಗೋಳು ಸೈತ ಮಸ್ತ ಪೈಕಿ ಕಥಿ ಮಾಡಿ ಮಾಡಿ ಹೇಳವರು. "ಮಕ್ಕಳ್ರ್ಯಾ, ಅಮೇರಿಕಾದವರು ಒಂದು ಬಾಂಬು ಒಗದರಂದರ ಬಗೀಹರೀತು. ಉಣ್ಣಾಕ ಕುಂತವರು ಅಲ್ಲೆ, ಬಯಲ ಕಡೆ ಹೋದವರು ಹಂಗ ಕುಂತಲ್ಲೆ, ಮಲಕೊಂಡವರು ಮಲಕೊಂಡಲ್ಲೆ ಖಲಾಸ್!" ಹಿಂಗ ನಮನಮೂನಿ ಅಂಜಿಕಿ ಹುಟ್ಟಸತಿದ್ದರು.
ಲೇಖನ ರುಚಿಕರವಾಗಿದೆ. ಆದ್ರೆ ಹೊಟ್ಟೆ ತುಂಬುವುದಕ್ಕೆ ಮೊದಲೇ ಬಡಿಸುವುದನ್ನು ನಿಲ್ಲಿಸಿದ್ದೀರಿ ಅನಿಸಿತು.
ಇನ್ನೊಮ್ಮೆ ಹೀಗೆ ಅರೆಹೊಟ್ಟೆ ಊಟ ಆಗಲುಬಿಡಬೇಡಿ.
@ಶ್ರೀನಿಧಿ ,ಎಂ ಡಿ.
ಬರೆದ ಮೇಲೆ ನಂಗೂ ಹೇಗೆ ಅನಿಸ್ತು. ಮುಂದೆ ಎನು ತೋಚಲಿಲ್ಲಾ, ಅದಕ್ಕೆ ಸುಮ್ಮನಿದ್ದುಬಿಟ್ಟೆ..
@ಜೋಮನ್,
:-) ಧನ್ಯವಾದಗಳು , ಪ್ರೈಮರಿ ದಿನಗಳಿಗಿಂತ ಹೈಸ್ಕೂಲ್ ದಿನಗಳು ತುಂಬಾ ಮಜವಾಗಿದ್ದವು, ಕಾರಣ ಎಲ್ಲರಿಗೂ ಗೊತ್ತಿದ್ದುದೆ.
@ಹಕ್ಕಿ,
ಆಗಾಗ ಇಲ್ಲಿಗೆ ಹಾರಿ ಬರುತ್ತಿರು.. :)
@ಚಕೋರ,
ಖರೆ ಮಾತು, ನಮಗೂ ಸದ್ದಾಂ ಹುಸೇನ್ ಬಗ್ಗೆ ಹೇಳಿ ಹೇಳಿ ತುಂಬಾ ದಿಗಿಲು ಮೂಡಿಸುತ್ತಿದ್ದರು. ಇಡಿ ಭೂಮಿಯನ್ನೆ ಸುಡುವಾ ಬಾಂಬು ಅಂದ್ರೆ ನಮಗೆ ಭಾರಿ ಆಶ್ಚರ್ಯ ಆಗುತ್ತಿತ್ತು.
ಚಡ್ಡಿಯ ಗುಂಡಿ ಕಿತ್ತರೂ ಪಿನ್ನು ಹಾಕಿಕೊಂಡು ಓಡಾಡುತ್ತಿದ್ದ ಪ್ರೈಮರಿ ದಿನಗಳ memories ಇಲ್ಲಿ ವರೆಗೂ ನೆನಪಿಟಕೊಂಡು ಬರೆದಿದಿಯ...............
ಸಕತ್ ಆಗಿದಿಯಪ್ಪ
congrats
ರಮೇಶ್
ಪೇಪರು ಓದಲೂ ಸಹಾ ಪಂಚಾಯಿತಿ ಆಶ್ರಯಿಸಿದ್ದ ನಮಗೆ ’ತರಂಗ’ ಪತ್ರಿಕೆ ಅಬ್ಬಿಗೇರಿಯಲ್ಲಿ ಓದಲು ಸಿಗುವುದು ದುರ್ಲಭ ಅನಿಸಿದಾಗ ಅವಳನ್ನೆ ಆ ಸಂಚಿಕೆಯನ್ನು ಶಾಲೆಗೆ ತರಲು ಮನವಿ ಕೊಟ್ಟು ಬಿಟ್ಟೆವೂ. -- Sooper... naanna hesru santoshkumar naanoo kooda north karnatakadanva..... i also gone through this above mentioned situation.
hinga bariri....
Santoshadinda,
Santoshkumar.
ತುಂಬಾ ಮಜವಾದ ಬರಹ. ಸರಾಗವಾಗಿ ಓದಿಸಿಕೊಳ್ಳುವಂತೆ ಬರೆಯುತ್ತೀರಿ.
ನಾನೂ ಕೂಡ ಇಂಥದ್ದೇ ಅನುಭವ ಪಡೆದಿದ್ದೆ. ಒಂದು ದಿನ ಹಾಗೆ ಪ್ರಳಯ ಆಗಿಯೇ ಹೋಗುತ್ತದೆ ಎನ್ನುವುದಾದರೆ ಯಾಕೆ ಓದಿಕೊಳ್ಳಬೇಕು? ಪರೀಕ್ಷೇನೆ ನಡೆಯಲ್ಲ ಅಂದರೆ ಓದಿ ಏನು ಪ್ರಯೋಜನ? ಅಲ್ಲಿ ಅಂಗಡಿಯಲ್ಲಿ ಮಿಠಾಯಿ, ಚಾಕೊಲೇಟುಗಳನ್ನೇಕೆ ಹಾಗೇ ಇಟ್ಟುಕೊಂಡಿದ್ದಾರೆ? ಪ್ರಳಯ ಆದಾಗ ಅವೆಲ್ಲಾ ವೇಸ್ಟ್ ಆಗಿಬಿಡುತ್ತವಲ್ಲಾ? ಪ್ರಳಯಕ್ಕೆ ಹಿಂದಿನ ದಿನ ಎಲ್ಲಾ ಚಾಕೊಲೆಟುಗಳನ್ನು ನಮಗೆ ಕೊಟ್ಟುಬಿಟ್ಟರೆ ಎಷ್ಟು ಚೆನ್ನಾಗಿರುತ್ತೆ ಅಲ್ಲವಾ? ಅಕಸ್ಮಾತ್ ಆತ ಹಂಗೆ ಮಾಡಿ ಪ್ರಳಯ ಆಗದೇ ಇದ್ದರೆ ಮಾಡಿದ್ದೇಲ್ಲಾ ವೇಸ್ಟ್ ಆಗಿಬಿಡ್ತದಲ್ಲವಾ? ಎಂದೆಲ್ಲಾ ನಮ್ಮೊಳಗೇ ಯೋಚಿಸ್ತಿದ್ದೆವು.
ಹೀಗೇ ಬರೆಯುತ್ತಿರಿ...
ರಮೇಶ್,ಸುಪ್ರೀತ್
ಧನ್ಯವಾದಗಳು..
ಸಂತೋಷಕುಮಾರ
ಯಾವ ಊರು ಗುರುವೇ? ನಮ್ ಕಡೆ ಎಲ್ಲಾ ಹಳ್ಳಿಲಿ ಇದೆ ಕಥೆ.. ಆಗಾಗ ಬರುತ್ತೀರಿ
Post a Comment