Sunday, July 15, 2007

ಅಬ್ಬಿಗೇರಿಯ ಬಸ್ ಸ್ಟಾಂಡು

ಮೊದಲು ಅಬ್ಬಿಗೇರಿಗೆ ಬಸಸ್ಟಾಂಡು ಎಂದರೆ ಗಾಂಧಿಚೌಕವಾಗಿತ್ತು.ಕೂಡ್ರಲು ಹೋಗ್ಲಿ ನಿಲ್ಲಲೂ ಸಹ ಜಾಗವಿಲ್ಲದ ಜನ ಅಲ್ಲೆ ಹತ್ತಿರದ ಪರಿಚಯಸ್ತರ ಮನೆ ಹೊಕ್ಕು ಬಸ್ಸು ಬರುವರೆಗೂ ಅ ಮನೆಯವರ ಇತಿಹಾಸವನ್ನೆಲ್ಲಾ ಬಗೆದು, ಹೊಸದೊಂದನ್ನು ಸಂಶೋದಿಸಿದ ಖುಷಿಯಲ್ಲಿ ಬೀಗುತ್ತಿದ್ದರು.ತೀರ ಇತ್ತಿಚೆಗೆಷ್ಟೆ ನಮ್ಮೂರಿಗೆ ಹೊಸ ಬಸ್ ಸ್ಟಾಂಡು ಸ್ಯಾಂಕ್ಸನ್ ಆಗಿ ಈ ರೀತಿಯ ಇತಿಹಾಸಕಾರರು ನಿರುದ್ಯೊಗಿಗಳಾದರು.ನಮ್ಮೂರ ಬಸ್ ಸ್ಟಾಂಡು ಬರೀ ಬಸ್ ಹಿಡಿಯಲು ಮಾತ್ರ ಉಪಯೋಗವಾಗಿದ್ದರೆ ಇದನ್ನು ಬರೆಯುವ ಮಾತೆ ಬರುತ್ತಿರಲಿಲ್ಲಾ! ಅದು ನರೇಗಲ್ಲಿಗೆ "ಕಾಲ್ಮೆಂಟ್ ಸಾಲಿ" ಕಲಿಯಲು ಹೋಗುವವರು, ಗದಗಿಗೆ ಕದ್ದು ಚೈನಿ ಹೊಡೆಯಲು ಹೋಗುವವರು, ಅಷ್ಟೆ ಯಾಕೆ ರೋಣಕ್ಕೆ ಹೋಗಿ " ಒಂದು ಕ್ವಾರ್ಟರ" ಹಾಕ್ಕೊಂಡೆ ವಸತಿ ಬಸ್ಸಿಗೆ ಬರುವವರ ಅವಿಭಾಜ್ಯ ತಾಣವಾಗಿತ್ತು.ಮೊದಲೆಲ್ಲಾ ಬಯಲಾಗಿದ್ದ ಬಸ್ ಸ್ಟಾಂಡು ಕಾಲ ಕಳೆದಂತೆಲ್ಲಾ "ದಿಲ್ ರೂಬಾ ಪಾನ್ ಶಾಪ್" ನಿಂದ ಹಿಡಿದು, ಮೂಂದೆ ಗೋಣೆಚೀಲ ಮರೆ ಮಾಚಿ ಒಳಗೆ ಚಿಕ್ಕ ಬಾಕಿರಿಸಿ, ಐದಾರು ಗ್ಲಾಸುಗಳೊಂದಿಗೆ ಬರ್ಜರಿ ಕಂಟ್ರಿ ಸಾರಾಯಿ ಮಾರುವ ಹುಸೇನಿಗೂ ಮತ್ತು ಹೊಸದಾಗಿ ಆರಂಬಿಸಿದ " ಬಸವೇಶ್ವರ ಮಿಲಿಟ್ರಿ ಖಾನಾವಳಿ"ಗೂ ವ್ಯಾಪಾರಸ್ಥಾನವಾಯಿತು.

ಹೊಸ ಬಸ್ಟ್ಯಾಂದು ಎಲ್ಲರ ಖುಶಿಗೆ ಕಾರಣವಾದರೂ ನಮ್ಮುರ ಪ್ರಗತಿಪರ ಯುವಕರು ಉರ್ಫ ಪಡ್ಡೆ :-)ಗಳಿಗೆ ಮಾತ್ರ ಭಯಂಕರ ಸಿಟ್ಟು ಬಂದಿತ್ತು.ಯಾಕೆಂದರೆ ಸಂವಿಧಾನದಲ್ಲೆ ಸಮಾನತೆಯ ಬಗ್ಗೆ ಪ್ರಸ್ತಾಪವಿದ್ದರೂ, ಲೀಂಗಭೇಧ ಮಾಡಬಾರದು ಎಂದು ದಿನವೂ ಜಾಹೀರಾತು ಬರುತ್ತಿದ್ದರೂ ಅದನ್ನು ಅರ್ಥ ಮಾಡಿಕೊಳ್ಳದ ಪಂಚಾಯತಿ ಸೂ... ಮಕ್ಕಳು " ಗಂಡಸರಿಗೆ" ಮತ್ತು " ಹೆಂಗಸರಿಗೆ" ಎಂದು ಬರೆಸಿದ ಎರಡೆರಡು ಖೋಲಿ ಮಾಡಿಸಿ ನಮ್ಮೂರಿನ ಸಮಾನತೆಯ ಹರಿಕಾರರಿಗೆ ಈ ಜನ್ಮದಲ್ಲೆ ಮರೆಯಲಾಗದ ಅನ್ಯಾಯ ಮಾಡಿದ್ದರು.ಇಷ್ಟಕ್ಕೆ ಸೋಲೋಪ್ಪಿಕೊಳ್ಳದ ವಾನರಸೇನೆ ಹೆಂಗಸರ ಕೋಣೆಗೆ ರಾತ್ರಿ ನುಗ್ಗಿ " ಸುಮಾ ಐ ಲವ್ ಯೂ" " ಭಾಗ್ಯ ಪ್ರೀತ್ಸೆ" "ಬಸು ಜೊತೆ ವಾಣಿ" ಎಂದು ಬರೆದು ಬಸ್ ಸ್ಟಾಂಡಿನ ಗೋಡೆಗಳಲ್ಲೇ ಪ್ರೇಮ ನೀವೆದನೆ ಮಾಡಿಕೊಂಡು, ಮೇಘಧೂತ ರಚಿಸಿದ ಕಾಳಿದಾಸನಿಗೂ ಹೊಳೆಯದ ಸಾದ್ಯತೆಗಳನ್ನು ಅನ್ವೇಷಿಸಿದ್ದರು. ಇನ್ನೂ ಕೆಲ ಚಿತ್ರ ರಸಿಕರು ರವಿಚಂದ್ರ, ಪ್ರೇಮಲೋಕ,ರಸಿಕ, ಮಲ್ಲ ಇತ್ಯಾದಿ ಚಿತ್ರಗಳ ಹೆಸರನ್ನು ಬರೆದು ತಮ್ಮ ಅಭಿಮಾನವನ್ನು ತೋರುತ್ತಿದ್ದರು.ಆದರೆ ಉಪೇಂದ್ರನ ಅಭಿಮಾನಿಗಳು ಮಾತ್ರ ಸ್ವಲ್ಪ ಡಿಫರೆಂಟು. ಅವರು ಉಪೇಂದ್ರನ ರೇಖಾಚಿತ್ರವನ್ನು ಗೋಡೆಯ ಮೇಲೆ ಬಿಡಿಸಿ ಅದರ ಮೇಲೆ "ಮಾಂತೇಶ" ಅಂತ ಕಲಾವಿದನ ಹೆಸರನು ಸಹ ಬರೆದು ತಾಯಿ ಕಲಾ ಸರಸ್ವತಿಗೂ ಮುಜುಗರವನ್ನುಂಟು ಮಾಡುತ್ತಿದ್ದರು.

ಪ್ರತಿ ಹೊಸವರ್ಷಕ್ಕೂ "Wish you happy new year 200... " ಅಂತ ವಿಶ್ ಮಾಡದೆ ಇದ್ದರೆ ನಮ್ಮೂರ ಕ್ರಿಯಾಶೀಲ ಸಂಘಗಳಾದ "ವೀವೆಕಾನಂದ ಯುವಕ ಸಂಘ" "ಫ್ರೆಂಡ್ಸ ಸ್ಪೋರ್ಟ್ಸ ಕ್ಲಬ್" " ಫೈವ ಸ್ಟಾರ ಕ್ರಿಕೆಟ್ ಕ್ಲಬ್" ಗಳಿಗೆ ಹೊಸವರ್ಷ ಬಂದಂಗೆ ಅನಿಸುತ್ತಿರಲಿಲ್ಲಾ. ಇನ್ನೂ ಗಂಡಸರ ವಿಭಾಗದ ಬಗ್ಗೆ ಹೇಳದಿರುವದೇ ವಾಸಿ . ಅಲ್ಲಿ ಇಡೀ ಜಾಗತಿಕ ವಿದ್ಯಮಾನಗಳನ್ನು ವಿಶ್ಲೇಷಿಸುವ ಪ್ರಕಾಂಡ ಪಂಡಿತರು, ಗಣೇಶ ಬೀಡಿ ಜಗ್ಗುತ್ತಾ ಹಗಲಿರುಳು ಹರಟೆ ಹೋಡೆಯುತ್ತಿದ್ದರು,ಮದ್ಯ ಮದ್ಯ ಊರಿನ ಆ ಮನೆಯ ಹುಡುಗಿ ಓಡಿ ಹೋದಳು, ಇವರ ಮನೆಯ ಹುಡುಗ ಫೇಲಾದ, ಗೌಡರ ಹಿರಿಸೊಸೆ ಹಿಂತವನೋಂದಿಗೆ ಹೀಗೀಗೆ! ಅಂತೆಲ್ಲಾ ಎಲ್ಲಾ ಮನೆಗಳ ವರದಿಯನ್ನು ಸಲ್ಲಿಸುತ್ತಾ ತಮ್ಮದೆ ಆದ ಒಂದು ವಿಕ್ಷಿಪ್ತ ಜಗತ್ತನ್ನು ಸೃಷ್ಟಿಸಿಕೊಂಡಿದ್ದರು..

ಬಸ್ ಸ್ಟಾಂಡಿನ ಎದುರಿನ ಕಂಪೌಂಡಿನ ಮೇಲೆ ಮಾತ್ರ ನರೇಗಲ್ಲಿನಲ್ಲಿನ ಎಕೈಕ ಟಾಕೀಸಿನಲ್ಲಿ ಪ್ರದರ್ಶನವಾಗುತ್ತಿರುವ ಚಿತ್ರಗಳ ಪೋಸ್ಟರನ್ನು ಅಂಟಿಸಿರುತ್ತಿದ್ದರು.ಕೆಲ ಹುಟ್ಟಾ ಕಲಾವಿದರು ನಕ್ಕ ನಾಯಕನ ಹಲ್ಲಿಗೆ ಕಪ್ಪು ಬಳಿಯುವದು, ನಾಯಕಿಯ ಕಣ್ಣಿಗೆ,ಮತ್ತಿತರ ಅಂಗಾಗಳಿಗೆ ತೂತು ಕೊರೆಯುವದೋ, ಇಲ್ಲವೋ ಅವಳಿಗೆ ಮೀಸೆ ಬರೆಯುವದನ್ನು ಮಾಡಿ ತಮ್ಮ ಕ್ರಿಯಾಶೀಲತೆಗೆ ಮಾದ್ಯಮದ ಹಂಗಿಲ್ಲಾ ಎಂದು ನಿರೂಪಿಸಿ ಧನ್ಯರಾಗುತ್ತಿದ್ದರು.ಹೊಸ ಚಿತ್ರದ ಬಗ್ಗೆ ಮಾಹಿತಿ ನೀಡಲು ಈ ಪೋಸ್ಟರ್ರೆ ಕಾರಣವಾಗಿತ್ತು, ಅಪರೂಪಕ್ಕೆ ಪ್ರದರ್ಶನವಾಗುವ "ದೇವರ" ಚಿತ್ರಗಳ ಪೋಸ್ಟರನ್ನು ಕದ್ದು ಕದ್ದು ನೋಡಿಯೂ "ಡಿಸೆಂಟ್" ಆಗಿ ಉಳಿಯುವ ಕೆಲ ಮನಸ್ಸಿನಲ್ಲೆ ಮಂಡಿಗೆ ತಿನ್ನುವ ಗುಂಪಿನವರೂ ಇರುತ್ತಿದ್ದರು..

ಇದಲ್ಲದೆ ನಮ್ಮೂರಿನ ಅನೇಕ ಪ್ರೇಮ ಕಹಾನಿಗಳಿಗೆ ಮುಕ್ತ ವೇದಿಕೆಯಾಗಿತ್ತು.ಪದೇ ಪದೇ ಹುಡುಗನೊಬ್ಬ ಹೆಂಗಸರ ಕೋಣೆಯ ಮುಂದೆ ಓಡಾಡತೊಡಗಿದರೆ ಸಾಕು ನಮಗೆಲ್ಲಾ ಹೊಸ ಪ್ರೇಮಕಥೆಯ ವಾಸನೆ ಬಡಿಯತೊಡಗುತ್ತಿತ್ತು.ಹೆಂಗಸರ ವಿಭಾಗಕ್ಕೆ ಮುಕ್ತ ಪರವಾನಿಗೆ ಇದ್ದ ಬಸವೇಶ್ವರ ಸ್ಕೂಲಿನ ಚಿಲ್ಟಾರಿ ಹುಡುಗರಿಗೆ ಆಗ ಭಾರಿ ಬೇಡಿಕೆ ಇತ್ತು, ಆ ಚಿಂಟುಗಳಿಗೆ ಚಾಕಲೇಟು, ಐಸ್ ಕ್ಯಾಂಡಿ ಕೊಡಿಸಿ " ಅಲ್ಲಿ ಕೊನೆಗೆ ಗುಲಾಬಿ ಚೂಡಿಯ ಅಕ್ಕ ಕೂತಿದ್ದಾಳಲ್ಲಾ, ಆ ಅಕ್ಕನ ಕೈಗೆ ಇದನ್ನು ಕೊಡು, ನಾ ಕೊಟ್ಟೆ ಅಂತ ಮಾತ್ರ ಹೇಳಬಾರದು. ನೀ ಜಾಣಮರಿ ಅಲ್ವಾ? " ಅಂತೆಲ್ಲಾ ಆ ಹುಡುಗರನ್ನು ಪುಸಲಾಯಿಸಿ ಅವರ ಕೈಯಲ್ಲಿ ಪ್ರೇಮಪತ್ರಗಳ ಬಟವಾಡೆಯಾಗುತ್ತಿತ್ತು. ಕೆಲವೊಮ್ಮೆ ಹುಡುಗಿಯರು ಪತ್ರಗಳನ್ನು ಇಸಿದುಕೊಳ್ಳಲು ನಿರಾಕರಿಸಿದಾಗ, ಪತ್ರ ಕೊಟ್ಟವನನ್ನು ಈ ಚಿಲ್ಟಾರಿಗಳು ಹುಡುಕುವದು ಮತ್ತು ಅದು ಇನ್ಯಾರ ಕೈಗೋ ಸಿಕ್ಕಿ ಯಡವಟ್ಟಾಗುವದು ಮಾಮೂಲಿನ ಸಂಗತಿಗಳಾಗಿದ್ದವು.

ಬೆಳಗ್ಗೆ ಮತ್ತು ಸಾಯಂಕಾಲ ನರೇಗಲ್ಲಿನ ಕಾಲೇಜು ಬಿಡುವ ಹೊತ್ತಿಗೆ ಇಡಿ ಊರಿನ ಗಂಡು ಸಂತಾನವೇ ಕಾಲೇಜು ಕನ್ಯೆಯರ ದರುಶನ ಭಾಗ್ಯಕಾಗಿ ಹಾತೊರೆದು ಬಸ್ ಸ್ಟ್ಯಾಂಡಿನಲ್ಲಿ ಠಳಾಯಿಸುತ್ತಿದ್ದರು ಮತ್ತು ವಿವಿಧ ಅಂಗ ಚೇಷ್ಟೆಗಳನ್ನು ಮಾಡಿ ಹುಡುಗಿಯರ ಗಮನ ಸೆಳೆಯಲು ಮತ್ತು ಅವರ ಕೈಯಲ್ಲಿ "ಹೀರೊ" ಅನ್ನಿಸಿಕೊಳ್ಳುವ ಎಲ್ಲ ಬಗೆಯ ಸರ್ಕಸ್ಸುಗಳನ್ನು ಮಾಡುತ್ತಿದ್ದರು. ಕೆಲ ಕಿಲಾಡಿ ಹುಡುಗಿಯರು ಇವರ ಕಡೆ ನೋಡಿ ಕಿಸಕ್ಕೆಂದು ನಕ್ಕು ಇವರ ಕಾರ್ಯಕ್ಕೆ ಕೈಲಾದ ಪ್ರೋತ್ಸಾಹ ನೀಡುತ್ತಿದ್ದರು ಮತ್ತು " ನಮ್ಮಂಗ ಹುಡುಗ್ಯಾರು ಸಹ ಬರಿ ಹುಡುಗ್ರ ಬಗ್ಗೆನೆ ಮಾತಾಡ್ತಾ ಇರ್ತಾರೆ" ಎಂಬ ನಂಬಿಕೆಯಲ್ಲಿ ಇಡಿ ಅಬ್ಬಿಗೇರಿಯ ಯುವ ಸಂತತಿ ಕಾಲಹರಣ ಮಾಡುತ್ತಿತ್ತು.ತಾವು ಕಾಲೇಜಿಗೆ ಹೋಗದಿದ್ದರೂ ಬಸ್ ಸ್ಟಾಂಡಿಗೆ ಬಂದು ತಮ್ಮ "ಲವ್ವರು"ಗಳನ್ನು ಕಣ್ತುಂಬಿಕೊಂಡು ಮನೆಗೆ ಹೋಗುತ್ತಿದ್ದರು.


ಊರಿಗೆ ಹೊಸದಾಗಿ ಬರುವವರು, ಜಾತ್ರೆ ಹಬ್ಬ ಹರಿದಿನಗಳಿಗೆ ಮಾತ್ರ ಬರುವ ಪಾರ್ಟ ಟೈಮ್ ಫಿಗರುಗಳು,ವರ್ಗವಾಗಿ ಬರುವ ಕನ್ನಡ ಸಾಲಿ ಮಾಸ್ತರು, ಮತ್ತು ಯಾವ ಹುಡುಗಿಗೆ ಯಾವ ಹುಡುಗ ಲೈನ್ ಹೊಡೆಯುತ್ತಾನೆ, ಯಾವ ಹುಡುಗಿ ಯಾರಿಗೆ ಹಾರಿದ್ದಾಳೆ ಇತ್ಯಾದಿ ಮಾಹಿತಿಗಳು ಬಸ್ ಸ್ಟ್ಯಾಂಡಿನ ಪಕ್ಕದ "ದಿಲ್ ರೂಬಾ ಪಾನ್ ಶಾಪ್" ನ ಬಸುನ ಬಳಿ ಸದಾ ಲಬ್ಯ.ಕೆಲ ಪ್ರೇಮ ಪತ್ರಗಳ ಮಾದರಿಯನ್ನು ಇಟ್ಟುಕೊಂಡು ತನ್ನ ಅಂಗಡಿಯ ಘನತೆಯನ್ನು ಹೆಚ್ಚಿಸಿಕೊಂಡಿದ್ದ ಮತ್ತು ಅನನುಭವಿಗಳಿಗೆ ದಾರಿ ತೋರುವವನಾಗಿದ್ದ."ಕುಚ್ ಕುಚ್ ಹೋತಾ ಹೈ" ಚಿತ್ರದಲ್ಲಿನ "ಫ್ರೆಂಡ್ ಶಿಪ್" ಬೆಲ್ಟನ್ನು ಅಬ್ಬಿಗೇರಿಗೆ ಪರಿಚಯಿಸಿದ ಕೀರ್ತಿ ಇವನಿಗೆ ಸಲ್ಲಬೇಕು ಮತ್ತು ಕಂಡ ಕಂಡ ಹುಡುಗಿಗೆ ಹುಡುಗರು ಆ ಬೆಲ್ಟನ್ನು ಕೊಟ್ಟು ಇಡೀ ಅಬ್ಬಿಗೇರಿಯ ಹುಡುಗಿಯರನ್ನು ಗೊಂದಲಕ್ಕೆ ತಳ್ಳುವದರಲ್ಲಿ ಪ್ರಮುಖ ಪಾತ್ರ ವಹಿಸಿದ ಕೀರ್ತಿಯೂ ಈ ಮಹಾಶಯನಿಗೆ ಸಲ್ಲಬೇಕು. ಕದ್ದು ಸ್ಮಾಲ್,ಕಿಂಗು ಹೊಡೆಯುವ ಲೋಕಲ್ ಸುದೀಪರಿಗೆ ಇವನ ಅಂಗಡಿಯೇ ಅಡ್ಡಾ ಆಗಿತ್ತು.

ಇದರ ಜೊತೆಗೆ ಬಸ್ ಸ್ಟ್ಯಾಂಡು ಎಂಬುದು ನಮ್ಮೂರ ಹಿರಿ ಕಿರಿ ಪುಂಡರ ಕದನ ಅಖಾಡವಾಗಿತ್ತು.ವಿಶೇಷವಾಗಿ ಈ "ಸ್ವಯಂಸೇವಕರು" ನಮ್ಮೂರ ವಿಧ್ಯಾರ್ಥಿನಿಯರ ಹಿತ ಕಾಯುವ ಸ್ವಯಂ ಘೋಷಿತ ಸಮಾಜ ಕಾರ್ಯ ಮಾಡುತ್ತಿದ್ದರು. ನಮ್ಮುರಿನ ಹುಡುಗಿಯರನ್ನು ಹಾರಿಸುವ ವಿಶೇಷ ಅಧಿಕಾರ ನಮ್ಮೂರ ಪಡ್ಡೆಗಳಿಗೆ ಮಾತ್ರ ಇತ್ತು.ಬೇರೆ ಊರವರೇನಾದರು ನಮ್ಮೂರ ಹುಡುಗಿಯರ ವಿಷಯಕ್ಕೆ ಬಂದರೆ ಇವರು ಹೋರಾಡಿ ನಮ್ಮೂರ ಹುಡುಗರ ಹಕ್ಕುಗಳನ್ನು ಕಾಯುತ್ತಿದ್ದರು.ಆದರೆ ನಾವು ಮಾತ್ರ ಈ ವಿಷಯದಲ್ಲಿ " ವಿಶ್ವ ಮಾನವ " ತತ್ವಕ್ಕೆ ಬದ್ದರಾಗಿದ್ದೆವು..


ಅಖಂಡ ಹತ್ತು ವರ್ಷಗಳ ಕಾಲ ಈ ಬಸ್ ಸ್ಟ್ಯಾಂಡಿನಲ್ಲಿ ನರೇಗಲ್ಲಿನ ಬಸ್ಸುಗಳನ್ನ(?) ಕಾದ ನನಗೆ ಇದು ನನ್ನ ಜೀವನದ ಒಂದು ಭಾಗವೇ ಆಗಿ ಹೋಗಿತ್ತು. ಈಗಲೂ ಅಬ್ಬಿಗೇರಿಗೆ ಹೋದರೆ " ದಿಲ್ ರೂಬಾ ಪಾನ್ ಶಾಪ್" ಗೆ ಭೇಟಿಯಾಗಿ, ಹರಟೆಯ ನೆಪದಲ್ಲಿ ನಾವೂ ಸಹಾ ಯಾವುದಕ್ಕು ಇರಲಿ ಎಂದು "ನಾಲ್ಕು ಕಾಳು" ಹಾಕಿಯೇ ಬರುತ್ತೇವೆ, ಅಂದಾಗಲೆ ನಮ್ಮ ಹತ್ತು ವರ್ಷಗಳ ಅನುಭವಕ್ಕೆ ಒಂದು ದಿವ್ಯ ಸಾರ್ಥಕ್ಯ.

9 comments:

Sangamesh said...

ಪಾಟೀಲಾ, ಒಂದು ಬಸ್ ಸ್ಟ್ಯಾಂಡ್ ಕೂಡ ಲೇಖಕನ ಕೈಯಲ್ಲಿ ಹೇಗೆ ಜೀವ ಪಡೆದುಕೊಳ್ಳುತ್ತೆ ಅಂತ ತುಂಬಾ ಚೆನ್ನಾಗಿ ವ್ಯಕ್ತಪಡಿಸಿ. ಬಸ್ ಸ್ಟ್ಯಾಂಡ್ ನಲ್ಲಿನ ಹುಡುಗ ಮತ್ತು ಹುಡುಗಿಯರ ಕಳ್ಳ ನೋಟದ ಬಗೆಗಿನ ಒಳನೋಟ ಕಣ್ಣಿಗೆ ಕಟ್ಟುವಂತಿದೆ.

ಆದ್ರೆ ಇದನ್ನ ನಮ್ಮ ಸೂ...... ಮಗನ ಭಾಷೆ ಯಲ್ಲಿ ಬರ್ದಿದ್ರ ಇನ್ನೂ ಖಡಕ್ ಆಗಿ ಬರ್ತಿತ್ತು ಅಂತ ಅನ್ನಸ್ತದ. :-)

ಸಂತೋಷಕುಮಾರ said...

ಸ್ವಲ್ಪ ವಿಭಿನ್ನತೆ ಇರಲಿ ಅಂತ ನಮ್ಮ ಭಾಷೆ ಬಳಸಲಿಲ್ಲಾ,ಬರೀ ಎಕತಾನತೆ ಅನಿಸಬಾರದಲ್ಲಾ?

ರಾತ್ರಿ ಹೊತ್ತಿನಲ್ಲಿ ಬಸ್ ಸ್ಟ್ಯಾಂಡಿನಲ್ಲಿ ನಡೆಯುವ ಕೆಲ ವಿಷಯಗಳನ್ನು ಓದುಗರ ಒಳ್ಳೆಯದಕ್ಕಾಗಿ ಪ್ರಸ್ತಾಪಿಸಿಲ್ಲಾ. :-)

dinesh said...

ಪಾಟೀಲ್ರೇ ಬ್ಲಾಗ್ ಮತ್ತು ಬರಹಗಳೆರಡೂ ತುಂಬಾ ಚೆನ್ನಾಗದಾವ್ರೀ...

Sushrutha Dodderi said...

ಚನಾಗ್ ಬರದೀರ್ರೀ ಪಾಟೀಲ್ರೇ!

ನಂಗೂ ನಮ್ಮೂರ್ ಬಸ್‍ಸ್ಟ್ಯಾಂಡ್ ನೆನಪಾಯ್ತು. ನಮ್ಮೂರ್ ಬಸ್‍ಸ್ಟ್ಯಾಂಡ್‍ನಲ್ಲೂ ಈ ಪೋಲಿ ಹುಡುಗರ ಪಾಂಡಿತ್ಯ ಪ್ರದರ್ಶನ ಅವ್ಯಾಹತವಾಗಿ ನಡೆಯುತ್ತಿತ್ತು. ಪ್ರತೀ ವರ್ಷ ಪೇಯಿಂಟ್ ಮಾಡಿಸ್ದೇ ಇದ್ರೆ ಊರಿಗೇ ಅವಮಾನ ಆಗೋಷ್ಟು ಕೆಟ್ಟದಾಗಿರ್ತಿತ್ತು ಬಸ್‍ಸ್ಟ್ಯಾಂಡ್ ಬರಹಗಳು. ಇದನ್ನ ನೋಡಲಾಗದೇ ನಮ್ಮೂರ್ ಜನ ಒಂದು ಪ್ಲಾನ್ ಮಾಡಿದ್ರು. ಮುಂದಿನ ವರ್ಷ ಪೇಯಿಂಟ್ ಮಾಡ್ಸಿ ಆದ್ಮೇಲೆ, 'ಈ ಕಟ್ಟಡಕ್ಕೆ ಸಿಗಂದೂರು ಶ್ರೀದೇವಿಯಕಾವಲಿದೆ, ಎಚ್ಚರಿಕೆ!!' ಎಂದು ಒಂದು ಕೆಂಪು ಬೋರ್ಡು ಬರೆಸಿ ಹಾಕಿದ್ದರು. ಆದ್ರೆ ಊರ ಹುಡುಗ್ರು ಅದೆಷ್ಟು ಪೋಲಿ ಮತ್ತು ಬುದ್ವಂತ್ರು ಅಂದ್ರೆ ಅವರು ಮೊದಲಿಗೆ ಒಂದು ಗಣಪತಿಯ ಚಿತ್ರ ಬಿಡಿಸಿ, ಕೆಳಗೆ 'ಓಂ ಗಣೇಶಾಯ ನಮಃ' ಎಂದು ಬರೆದು ಆ ನಂತರತಮ್ಮ ಬರವಣಿಗೆ ಮುಂದುವರೆಸಿದ್ದರು! :)

ನಿಮ್ಮ ಬರಹ ಓದಿ ಇನ್ನೂ ಏನೇನೋ ನೆನಪಾಯ್ತು. :-)

ಸಂತೋಷಕುಮಾರ said...

ದಿನೇಶ್ ಮತ್ತು ಸುಶ್ರುತರಿಗೆ ನನ್ನ ಬ್ಲಾಗಿಗೆ ಹಾರ್ಧಿಕ

ಸ್ವಾಗತ..
ದನ್ಯವಾದಗಳು ದಿನೇಶ

, ಅಗಾಗ ಬರುತ್ತಿರಿ..
ಸುಶ್ರುತರೆ

, ನಿಮ್ಮೂರಿನ ಹಿರಿಯರು ಚಾಪೆ ಕೆಳಗೆ ತೂರಲೆತ್ನಿಸಿದರೆ, ಪಡ್ಡೆಗಳು ರಂಗೋಲಿ ಕೆಳಗೆ ತೂರಿದ್ದಾರೆ.. ಅವರಿಗೆನಾದರೂ ತಾವೇ ಸಲಹೆ-ಸೂಚನೆ ಅಂತೆನಾದ್ರು ..................... :-)

Unknown said...

i've no words to describe your talent. i could picturise each and evry scene as the paragraph went on! it is an amazing work. keep it up!!! i wish i could be a writer

MD said...

ಪಾಟೀಲ್ರೇ,
"ಆದರೆ ನಾವು ಮಾತ್ರ ಈ ವಿಷಯದಲ್ಲಿ 'ವಿಶ್ವ ಮಾನವ' ತತ್ವಕ್ಕೆ ಬದ್ದರಾಗಿದ್ದೆವು.." ಸೂಪರ್ರು :-)
ಅಬ್ಬಿಗೇರಿ ಅಬ್ಯಾ ಓಡಿ ಹೋದ್ನೆನೂ? ಹ ಹ ಹ
ಓದಿದ್ರ ನಮ್ಮೂರ ಕಡೆ ಹೋದಂಗಾಗುತ್ರಿ

ಸಂತೋಷಕುಮಾರ said...

@ರಾಜು,
ತುಂಬಾ ಧನ್ಯವಾದಗಳು..

@md
ನಾವು ಕೆಲ ವಿಷಯಗಳಲ್ಲಿ ತುಂಬಾ ಲಿಬರಲ್ಲು ಸಾರ್ :). ಸಿಕ್ಕಿದ್ದು ಶಿವಾ ಅನ್ಕೋಂಡು ತೃಪ್ತಿ ಪಡೊವಂತ ಒಳ್ಳೆಯ ಹುಡುಗರು ನಾವು..

ಸ್ವಗತ.... said...

ನಮ್ಮೂರು ರೋಣ್ ತಲೂಕ್, ಮುಶಿಗೆರಿ ಪಾ, ಅಲ್ಲೇ ಬಸ್ ಸ್ಟ್ಯಾಂಡ್ ಹತ್ರನ ಎರಡು ಯುವಕ ಸಂಘ ಅದಾವು...ಆ ಬಸ್ ನಿಲ್ದಾಣ ನೂ ಹೊಸಾದ ಆದಾಗ್ ನಾ ಹೊಕ್ಕಿದ್ದ್ಯಾ ಅಲ್ಲೇ..(ಮಟ್ಟ ನಮಗ ಬೆಕದಂತ ಪಾನ್ ಶಾಪ್ ಫಾರ್ ಲೋಕಲ್ ಸುದೀಪ್ ಅಲ್ಲೇ ಇತ್ತು ..ಏನ್ ಮಾಡುದು )...ಅಲ್ಲೋ ಎಲ್ಲ ಹಿಂಗ ಇತ್ತ ನೋಡ್...ಎಲ್ಲ ನೆನಪಾತು. ವಟ್ಟ ನೀ ಬರಿಯುದ ಮಾತ್ರ ಬಿದಬ್ಯಾದ ಮತ್ತ...