Tuesday, August 26, 2008

ಕಡ್ಡಾಯವಾಗಿ ವಯಸ್ಕರಿಗೆ ಮಾತ್ರ !

ಪ್ರತಿವರ್ಷವೂ ಶಾಲೆಗೆ ಅಧಿಕೃತ ಚಕ್ಕರ್ ಹಾಕಿ ರೋಣಕ್ಕೆ ಹೋಗಿ "ಅಬ್ಬಿಗೇರಿ To ನರೇಗಲ್" ವಿದ್ಯಾರ್ಥಿ ಬಸ್ ಪಾಸ್ ಪಡೆಯುವದು ನಮ್ಮೂರ ವಿದ್ಯಾರ್ಥಿಗಳ ಸತ್ಸಂಪ್ರದಾಯ.ಪಾಸಿನ ನೆಪ ಹೇಳಿ ಶಾಲೆ ತಪ್ಪಿಸಿದರೆ ಯಾವ ಮಾಸ್ತರನೂ ಕೆಮ್ಮಂಗಿಲ್ಲಾ ಅನ್ನೊದು ಒಂದು ಕಾರಣವಾದರೆ, ಪಾಸಿನ ನೆಪದಲ್ಲಿ ಅಧಿಕೃತವಾಗಿಯೇ ರೋಣದ ಪ್ಯಾಟಿಯ ಚೈನಿ ಹೊಡೆಯುವದೂ ಇನ್ನೊಂದು ಕಾರಣವಾಗಿತ್ತು. ನಮ್ಮೂರ ಎಲ್ಲಾ ಸತ್ಸಂಪ್ರದಾಯಗಳನ್ನು ಬಲು ನಿಷ್ಠೆಯಿಂದ ಪಾಲಿಸುವ ನನಗೆ ಹಿಂತಹ ಅವಕಾಶವನ್ನು ತಪ್ಪಿಸಿಕೊಳ್ಳಲು ಬೇರೆ ಕಾರಣಗಳೇ ಇರುತ್ತಿರಲಿಲ್ಲ.ಹೀಗಾಗಿ ನಾನು, ಶೆಟ್ಟರ ಸಣ್ಯಾ,ಮೂಲಿಮನಿ ಚಂದ್ರ ಮತ್ತು ನಮ್ಮ ಕ್ಲಾಸಿನ ಹಿರಿ ವಿಧ್ಯಾರ್ಥಿಯಾದ ಮತ್ತು ನಮಗೆಲ್ಲಾ ಗುರು ಸಮಾನನಾದ ಜುಮ್ಮಿ ಎಲ್ಲರೂ ಸೇರಿ ನಮ್ಮ ಯೋಗ್ಯತಾನುಸಾರವಾಗಿ ಟಾಕು ಟೀಕಾಗಿ ರೋಣದ ಸವಾರಿಗೆ ಸಿದ್ದರಾಗಿ ಹೊರಡುತ್ತಿದ್ದೆವು.. ನನ್ನ ನೆನಪಿನಂತೆ ನಾವು ಆವಾಗ ಒಂಬತ್ತನೇ ಇಯತ್ತೆಯಲ್ಲಿ ಓದುತ್ತಿದ್ದೆವು(?) , ಆ ವರ್ಷವೂ ನಮ್ಮ ಪಟಾಲಂ ಮಾಮೂಲಿನಂತೆ ಬಸ್ಸಿನ ಟಾಪನ್ನೇರಿ ರೋಣಕ್ಕೆ ಹೊರಟು ನಿಂತೆವು.. ರೋಣದ ಬಸ ಸ್ಟ್ಯಾಂಡಿನಲ್ಲಿ ಆಗಲೇ ಬೇರೆ ಊರುಗಳ ವಿಧ್ಯಾರ್ಥಿಗಳು ಬಂದು ಠಳಾಯಿಸಿದ್ದರು..

ರೋಣದ ಬಸ ಸ್ಟ್ಯಾಂಡು ಅಂದರೆ ಬೆಂಗಳೂರಿನ ಕಲಾಸಿಪಾಳ್ಯಕ್ಕೆ ಕೊಳಕಿನಲ್ಲಿ ಯಾವುದಕ್ಕೂ ಕಮ್ಮಿಯಿಲ್ಲಾ. ಆದರೆ ರೋಣದ ಬಸ್ ಸ್ಟ್ಯಾಂಡಿನ ಹಿರಿಮೆಯಿರುವುದು ಅಲ್ಲಿನ ದೊಡ್ದ ಮೂತ್ರಾಲಯದಲ್ಲಿ. ಯಾಕೆಂದರೆ ಅದೊಂತರಾ ರೋಣ ತಾಲೂಕಿನ ಪ್ರೇಮಿಗಳ ನೋಂದಣಿ ಕಚೇರಿಯಿದ್ದಂತೆ. ಎಲ್ಲಾ ಮಜ್ನುಗಳು ತಮ್ಮ ಲೈಲಾಗಳ ಹೆಸರುಗಳನ್ನು ಆ ಪಾಯಖಾನೆಯ ಗೋಡೆಯ ಮೇಲೆ ಬರೆದು ’ಪ್ರೀತಿ ಮಾಡಬಾರದು, ಮಾಡಿದರೆ ಜಗಕೆ ಹೆದರಬಾರದು’ ಅಂತಾ ಹಾಡುತ್ತಾ ತಮ್ಮ ಪ್ರೇಮ ಚರಿತ್ರೆಯನ್ನು ಇಡಿ ತಾಲೂಕಿಗೆ ಸಾರಿಬಿಡುತ್ತಿದ್ದರು. ಆದರೆ ಇವರ ’ಎದೆಗಾರಿಕೆ’ ಅವರ ಮಜ್ನುಗಳಿಗೆ ಭಲು ಮುಜುಗುರ ತಂದಿಕ್ಕುತ್ತಿತ್ತು.. ಹೀಗಾಗಿ ಹುಡುಗಿಯರೂ ಸಹ ತಮ್ಮ ಹೆಸರೂ ಸಹ ’ನೋಂದಣಿ’ ಯಾಗಿದೆಯಾ ಅಂತಾ ಕದ್ದು ಕದ್ದು ಗಂಡಸರ ಪಾಯಖಾನೆ ಕಡೆಗೆ ನೋಡುವುದು ಸಾಮಾನ್ಯವಾಗಿತ್ತು..ಇವರ ಈ ದೆಶೆಯಿಂದ ಇಡಿ ಪಾಯಖಾನೆಯ ಗೋಡೆ ಹಲವಾರು ಹೆಸರುಗಳು, ಬಾಣ ಚುಚ್ಚಿರುವ ಹೃದಯದ ಚಿತ್ರಗಳಿಂದ ತುಂಬಿ ಹೋಗಿತ್ತು, ಜೊತೆಗೆ ಮೂಲೆಯಲ್ಲಿ ಇದು ಗಂಡಸರ ಮಾತ್ತು ಹೆಂಗಸರ ಪಾಯಖಾನೆ ಎಂದು ಪ್ರತ್ಯೇಕಿಸಲು ಒಂದೊಂದು ಗಂಡು- ಹೆಣ್ಣಿನ ಚಿತ್ರಗಳು ಕಾಣಬಹುದಾಗಿತ್ತು.

ಈ ಪಾಯಖಾನೆಗೆ ಅಭಿಮುಖವಾಗಿ ಇರುವ ಕಿಡಕಿ ಮೂಲಕವೇ ನಮಗೆಲ್ಲಾ ಪಾಸು ವಿತರಿಸುವ ಕಾರ್ಯಕ್ರಮ ಇರುತ್ತಿತ್ತು. ಯಥಾಪ್ರಕಾರ ಜುಮ್ಮಿ ಪಾಳಿಯಲ್ಲಿ ನಿಲ್ಲದೇ ಉಳಿದವರಿಗೆ ರೋಪ್ ಹಾಕಿ, ಕಾದಾಡಿ ಬಡಿದಾಡಿ ಬೇಗನೆ ನಮಗೆಲ್ಲರಿಗೂ ಬೇಗನೆ ಪಾಸು ತಂದು ಕೊಟ್ಟ. ನಮ್ಮ ಮುಂದಿನ ಕಾರ್ಯಕ್ರಮವನ್ನು ನಾನು ಜುಮ್ಮಿ ರಾತ್ರಿಯೇ ಫಿಕ್ಸ ಮಾಡಿ ಬಿಟ್ಟಿದ್ದೆವು.. ಪ್ಲಾನಿನಂತೆ ಜುಮ್ಮಿ " ಸುಮ್ನೆ ಅಡ್ದಾಡುವುದಕ್ಕಿಂತ ನಾವು ಪಿಚ್ಚರಿಗೆ ಹೋಗೊಣ" ಅಂತ ಅನೌನ್ಸ ಮಾಡಿದ.

ನಾನು ಮಳ್ಳನಂತೆ " ಯಾವ ಪಿಚ್ಚರೆಲೇ ಜುಮ್ಮಿ? ರಾಮಾಚಾರಿ ಪಿಚ್ಚರು ಮೊನ್ನೆ ಟಿವಿಲೇ ಬಂದಿತ್ತಲ್ಲಾ!" ಎಂದು ಜುಮ್ಮಿ ಹೇಳುತ್ತಿರುವದು "ಆ ತರದ" ಚಿತ್ರದ ಬಗ್ಗೆ ಅಂತ ಗೊತ್ತಿದ್ದರೂ ಮುಗ್ದನಂತೆ ನಟಿಸಿದೆ..

ಆಗ ಜುಮ್ಮಿ ಗತ್ತಿನಿಂದ" ಲೇ ಪ್ಯಾಲಿ ಗೌಡ! ರಾಮಾಚಾರಿ ನೋಡಾಕ ನೀವೆಲ್ಲಾ ಇನ್ನೂ ಪ್ರೈಮರಿ ಸಾಲಿ ಹುಡುಗ್ರಾ?, ಮಕ್ಳಾ ಲಗ್ನಾ ಮಾಡಿದ್ರ ಮೂರು ಮೂರು ಮಕ್ಳ ಹಡೀತಿರಿ, ರಾಮಾಚಾರಿ ಅಂತೆ ರಾಮಾಚಾರಿ" ಅಂತ ಹುಸಿಕೋಪದಿಂದ ನಾವೂ ನೋಡ ಹೊರಟಿರುವ ಚಿತ್ರದ ಬಗ್ಗೆ ಸುಳಿವು ಕೊಟ್ಟ.
ಆದರೂ ಸಣ್ಯಾ, ಚಂದ್ರರಿಗೆ ಇನ್ನು ಅರ್ಥವಾಗದ್ದನ್ನು( ಅಥವಾ ಅರ್ಥವಾಗದವರಂತೆ ನಟಿಸುತ್ತಿದ್ದರೋ ಗೊತ್ತಿಲ್ಲಾ) ಕಂಡು ಜುಮ್ಮಿಗೆ ಅವರ ’ಜನರಲ್ ನಾಲೇಜ್’ ಬಗ್ಗೆ ಕನಿಕರವೆನಿಸಿ " ಲೇ ಹುಚ್ಚಪ್ಯಾಲಿ ನನ್ ಮಕ್ಳ ನಾವೀಗ ಒಂದೂವರೆ ತಾಸಿನ ಪಿಚ್ಚರಿಗೆ ಹೋಗುಣು" ಅಂತ ತಿಳಿ ಹೇಳಿ ಪಿಚ್ಚರಿನ ಹೆಸರು " ಆಡಂ and ಈವ The first love story" ಅಂತಲೂ ವಿವರಿಸಿದ.

ನಾನು ಆಗಲೇ ತುಂಬಾ ದೊಡ್ದವನಾಗಿದ್ದೆ ಅಥವಾ ಹಾಗಂತ ಅಂದುಕೊಂಡಿದ್ದೆ, ಹೀಗಾಗಿ ಜುಮ್ಮಿಯ ಈ ಆಫರ್ರು ನಾನು ’ದೊಡ್ದವನು" ಅಂತಾ ಅದಿಕೃತವಾಗಿ ಸಾರಲು ಸಿಕ್ಕ ವೇದಿಕೆಯೇ ಸರಿ ಅಂದುಕೊಂಡು "ಒಂದೂವರೆ ತಾಸಿ"ನ ಚಿತ್ರ ನೋಡಲು ರಾತ್ರಿಯೇ ಸಮ್ಮತಿಸಿದ್ದೆ. ಶೆಟ್ಟರ ಸಣ್ಯಾ ಮೊದಮೊದಲು ಅನುಮಾನಿಸಿದ, ನಂತರ ಜುಮ್ಮಿ ಅವನಿಗೆ ನಾವೂ ನೋಡ ಹೊರಟಿರುವುದು ವೈಜ್ಣಾನಿಕ ಕಮ್ ಸಾಮಾಜಿಕ ಚಿತ್ರವೆಂದೂ, ಅದರಲ್ಲಿ ಮಾನವನ ಜನಾಂಗ ಹೇಗೆ ಬೆಳೆದುಬಂತು, ನಮ್ಮ ಪೂರ್ವಜರು ಯಾರು ಇತ್ಯಾದಿ ಇತಿಹಾಸದ ಅಂಶಗಳನ್ನು ಹೇಳಿದ್ದಾರೆಂದೂ, ಜೊತೆಗೆ ಬಯೋಲಾಜಿಯ ಅನೇಕ ವಿಷಯಗಳನ್ನು ’ನೋಡಿ’ ತಿಳಿಯಬಹುದು ಅಂತಲೂ, ಸಮಾಜ ಮತ್ತು ವಿಜ್ಣಾನ ಓದದೇ ಪಾಸಾಗಬಹುದೆಂದು ಆಸೆ ಹುಟ್ಟಿಸಿದ. ಮೊದಲೇ ಹುಟ್ಟಾ ಬೃಹಸ್ಪತಿಯಾದ ಸಣ್ಯಾನಿಗೆ "ಪಠ್ಯ ಮತ್ತು ಪಠ್ಯೇತರ" ಸಂಗಮವಾದ ಈ ಚಿತ್ರವನ್ನು ನೋಡದಿರುವುದು ತನ್ನ ವಿಧ್ಯಾರ್ಥಿ ಜೀವನದಲ್ಲಿ ತುಂಬಲಾರದ ನಷ್ಟ ಅನಿಸಿ ಚಿತ್ರ ನೋಡಲೂ ಸಣ್ಯಾನೂ ಸಮ್ಮತಿಸಿದ.

ಆದರೆ ಚಂದ್ರ ಮಾತ್ರ ತನ್ನ ಕ್ಯಾರೆಕ್ಟರ್ ಸರ್ಟಿಫೀಕೆಟ್ ತೆಗೆದು ತುಂಬಾ ಒಳ್ಳೆಯ ಹುಡುಗನಂತೆ ಆಡತೊಡಗಿದ. ಜುಮ್ಮಿ ನಾನಾ ತರದಲ್ಲಿ ಚಿತ್ರದ ವರ್ಣನೆ ಮಾಡಿ ಚಿತ್ರ ನೋಡುವದರಿಂದ ನಿನ್ನ ಕ್ಯಾರೆಕ್ಟರ್ರು ಹಾಳಾಗುವದಿಲ್ಲಾ, ಚಿನ್ನ ಎಲ್ಲಿಟ್ಟರೂ ಚಿನ್ನವೇ ಅಂತೆಲ್ಲಾ ಪುಸಲಾಯಿಸಿದರೂ ಜಪ್ಪೆನ್ನಲಿಲ್ಲ. ಕೊನೆಗೆ ನಾನು ನಮ್ಮ ಹುಡುಗರ ಮರ್ಮಕ್ಕೆ ತಾಗುವ ಅಸ್ತ್ರ ತೆಗೆಯಲೇಬೇಕಾಯ್ತು. " ಲೇ ಚಂದ್ರ್ಯಾ! ನೀ ನಿಜವಾಗ್ಲೂ ಗಂಡಸಾಗಿದ್ದರೆ ನಮ್ಮ ಜೊತೆ ಬಾ, ಇಲ್ಲಾಂದ್ರೆ ರೋಣದ ಸಂತ್ಯಾಗ ಬಳಿ ಇಟ್ಕೋಂಡು ಊರ ಕಡೆ ನಡಿ. ನೀ ಎಂಥ ಗಂಡಸಲೇ?" ಅಂತ ಅಂದುಬಿಟ್ಟೆ. ಅದು ತಾಕಬೇಕಾದ ಜಾಗಕ್ಕೆ ತಾಕಿ ತಾನೂ ಗಂಡಸು ಅಂತ ನಿರೂಪಿಸಲಾದರೂ ನಮ್ಮ ಜೊತೆ ಬರಬೇಕಾಯ್ತು.. ಅಂತೂ ಇಂತೂ ನಮ್ಮ ನಾಲ್ವರ ಸವಾರಿ ವಿ.ಎಫ್ ಪಾಟೀಲ್ ಹೈಸ್ಕೂಲಿನ ಪಕ್ಕದ ಹಳೆ ಥೇಟರಿನತ್ತ ಸಾಗಿತು. ದಾರಿಯಲ್ಲಿ ಜುಮ್ಮಿ ಮೊದಲ ಬಾರಿಗೆ ಆ ತರದ ಚಿತ್ರ ನೋಡಲು ಹೋಗುತ್ತಿರುವವರಿಗೆ "ಕೋಡ್ ಆಫ್ ಕಂಡಕ್ಟ್ಸ" ಹೇಳಿಕೊಡತೊಡಗಿದ, ಥೇಟರಿನಲ್ಲಿ ಚಿಕ್ಕವರನ್ನೂ ಬಿಡುವುದಿಲ್ಲವೆಂದೂ, ಅದು ದೊಡ್ದವರ ಚಿತ್ರವಾಗಿದ್ದರಿಂದ ನಮ್ಮ ವಯಸ್ಸು ಕೇಳಿದರೆ ಹದಿನೆಂಟು ಅಂತ ಹೇಳಬೇಕೆಂದೂ ಮತ್ತು ಯಾರಾದ್ರೂ ಕೇಳಿದ್ರೆ ಸುಳ್ಳು ಹೆಸರು ಹೇಳಬೇಕೆಂದೂ ತಾಕೀತು ಮಾಡಿದ. ನಾವೆಲ್ಲಾ ಗುರು ಭಕ್ತಿಯಿಂದ ಹೂಂಗುಟ್ಟಿದೆವು. ಕೊನೆಗೂ ಥೇಟರ್ ಬಳಿ ಬಂದಾಗ ಥೇಟರ್ ಖಾಲಿ ಹೊಡೆಯುತ್ತಿತ್ತು. ಅಲ್ಲಲ್ಲಿ ಚಿತ್ರದ ಪೊಸ್ಟರುಗಳನ್ನು ಅಂಟಿಸಿದ್ದರು ಮತ್ತು ಪೊಸ್ಟರಿನ ಕೆಲಬಾಗಗಳನ್ನು ನೀಲಿ ಬಣ್ಣದಿಂದ ಅಳಿಸಿದ್ದರು, ಜೊತೆಗೆ ಅಲ್ಲಿ ಗೋಡೆಯ ಮೇಲೆ ದೊಡ್ದದಾಗಿ "ವಯಸ್ಕರಿಗಾಗಿ ಮಾತ್ರ" ಎಂದು ಬರೆದಿದ್ದು ನೋಡಿ ನಾವೆಲ್ಲಾ ಒಮ್ಮೆ ಇಡೀ ಅಬ್ಬಿಗೇರಿಗೆ ಹಿರಿಯರಾದಂತೆ ಭಾಸವಾಯಿತು. ಒಳ ಹೊಕ್ಕು ಕೂತರೇ ಆಗಲೇ ಚಿತ್ರ ಶುರುವಾಗಿತ್ತು.

ಚಿತ್ರ ಇಂಗ್ಲೀಷನಲ್ಲಿದ್ದುದರಿಂದ ನಮಗಂತೂ ಅರ್ಥವಾಗುವ ಸಂಭವವೇ ಇರಲಿಲ್ಲಾ, ಆದರೂ ನಾನು ತಿಳಿದವನಂತೆ ಬಾಯಿಗೆ ಬಂದಂಗೆ ಅನುವಾದ ಮಾಡಿ ಉಳಿದವರ ಮುಂದೆ "ಶಾಣ್ಯಾ" ಅನ್ನಿಸಿಕೊಳ್ಲಲು ಯತ್ನಿಸಿದರೂ, ಆ ಮುಂಡೆವು ಕೇಳುವುದಕ್ಕಿಂತಲೂ "ನೋಡಲು" ತುಂಬಾ ಉತ್ಸುಕರಾದುದರಿಂದ ನನ್ನ ಪ್ರಯತ್ನಗಳು ಹುಸಿಯಾದವು. ಚಿತ್ರ ಸಾಗಿದಂತೆ ಆಡಂ ಆಪಲ್ ತಿನ್ನುವ ಅಮೋಘ ದೃಶ್ಯಕ್ಕಾಗಿ ಕಾಯತೊಡಗಿದೆ ( ಯಾಕೆಂದರೆ ಜುಮ್ಮಿ ಆಡಂ, ಆಪಲ್ ತಿಂದ ಕೂಡಲೇ ಅವನಿಗೆ ಎಮೋಶನ್ ಬಂದು ಒಂದು ಮಹತ್ವದ ಘಟನೆ ಸಂಭವಿಸುತ್ತದೆ ಎಂದು ಹೇಳಿದ್ದ) . ಆದರೆ ಜುಮ್ಮಿ ಹೇಳಿದಂತೆ ಯಾವ ರೋಚಕ ಸನ್ನಿವೇಶವೂ ಬರಲೇ ಇಲ್ಲ ಮತ್ತು ಮುಖ್ಯವಾಗಿ ಆಡಂ, ಈವ್ ಚಿತ್ರದುದ್ದಕ್ಕೂ ನಮಗೆ ಬೆನ್ನು ತೋರಿಸಿಯೇ ಇರುತ್ತಿದ್ದುರಿಂದ ನಮಗೆ ಯಾವ ಮಹಾನ ಸಾಧನೆಯೂ ಆಗಲಿಲ್ಲ. ಆದರೂ ಜುಮ್ಮಿ ನಮ್ಮನ್ನೂ ಸಮಾಧಾನಿಸಿ ಒಮ್ಮೇಲೇ ಚಿತ್ರದ ಮದ್ಯೆ ಬೇರೆ ಯಾವುದೋ ಮಲಯಾಳಿ ಚಿತ್ರದ ತುಣುಕು ತೋರಿಸಿಯೇ ತೊರಿಸುತ್ತಾರೆಂದು ಹೊಸ ಆಸೆ ಹುಟ್ಟಿಸಿ, ಪೂರ್ತಿ ಚಿತ್ರ ಕಣ್ನಲ್ಲಿ ಕಣ್ಣಿಟ್ಟು ನೋಡುವಂತೆ ಮಾಡಿದರೂ ಯಾವುದೋ ಅಂತಹ ಪವಾಡ ನಡೆಯಲೇ ಇಲ್ಲಾ ಮತ್ತು ಕೊನೆಗೂ ಆಡಂ ಆಪಲ್ ತಿನ್ನಲೇ ಇಲ್ಲಾ..

ಚಿತ್ರ ಮುಗಿದ ಮೇಲೆ ನಂಗೆ ಜುಮ್ಮಿಯ ಮೇಲೆ ಅಸಾದ್ಯ ಕೋಪ ಬಂದಿತ್ತು. ಆದರೆ ಚಂದ್ರ, ತನ್ನ ಗಂಡಸ್ತನ ನಿರೂಪಿಸಿದ ಸಾರ್ಥಕತೆ ಅನುಭವಿಸುತ್ತಿದ್ದ. ಸಣ್ಯಾ ಮಾತ್ರ ಸಮಾಜ ಮತ್ತು ಬಯಾಲಾಜಿಯ ಯಾವ ಯಾವ ಪಾಠಗಳನ್ನು ಚಿತ್ರ ಕವರ್ ಮಾಡಿತ್ತು ಅಂತ ಲೆಕ್ಕ ಹಾಕುತ್ತಿದ್ದ. ಜುಮ್ಮಿ ಕೊನೆಗೂ ಬಾಯಿ ಬಿಟ್ಟು " ಲೇ ಓರಿಜಿನಲ್ಲು ಫಿಲ್ಮಲ್ಲಿ ’ಎಲ್ಲಾ’ ಇರುತ್ತದೆ, ಈ ಥೇಟರು ಬೋ...ಮಕ್ಳು ಎಲ್ಲಾ ಕಟ್ ಮಾಡಿ ಬಿಸಾಕಿರುತ್ತಾರೆ" ಅಂತ ಗೋಳಾಡಿ, ನಮ್ಮೆಲ್ಲಾ ನಿರಾಶೆಗಳಿಗೆ ಥೇಟರಿನವರನ್ನು ಹೋಣೆಯಾಗಿಸಿ ನಿರಮ್ಮಳವಾದ. ನಾನು ಜುಮ್ಮಿಯನ್ನು ನಂಬಿದ್ದೆ ತಪ್ಪಾಯ್ತು ಅಂದುಕೊಂಡು ಉಳಿದವರನೆಲ್ಲಾ ಕರೆದುಕೊಂಡು ರೋಣದ ಸಂತೆ ಅಲೆಯಲು ನಡೆದೆ.

13 comments:

ವಿ.ರಾ.ಹೆ. said...

ಚಿತ್ರ ಸಾಗಿದಂತೆ ಆಡಂ ಆಪಲ್ ತಿನ್ನುವ ಅಮೋಘ ದೃಶ್ಯಕ್ಕಾಗಿ ಕಾಯತೊಡಗಿದೆ

;-) ;-)

ಪೋಲೀ ಮುಂಡೆವಾ,
ಅದೇನೇನು ಮಾಡಿದೀರೋ ಇನ್ನೂ.

Anonymous said...

ರೀ, ಮಲಯಾಳಂ ಚಿತ್ರ ಏನು ಬರೆ ಅಂತ ಚಿತ್ರ ಅಂದ್ಕೊಂಡ್ರ? ಕನ್ನಡ ಚಿತ್ರ ಏನು ಕಡಿಮೆ ಇಲ್ಲ.
ಅನಂತನ-ಅವಾಂತರ ಒಂದು ಸಾಕು.

-ನಾನು ನಾನೆ.

ಸಂತೋಷಕುಮಾರ said...

@ವಿಕಾಸ್
"ಅದೇನೇನು ಮಾಡಿದೀರೋ"
ಥೇಟರಿನಲ್ಲಿ ಏನು ಮಾಡಬಹುದಿತ್ತೋ ವಿಕಾಸ್. ಡಿಟೈಲ್ ಆಗಿ ತಿಳಿಸಿ ಹೇಳಿದ್ರೆ ತಿಳ್ಕೊಬಹುದಾಗಿತ್ತು.. :)

@ಅನಾಮಿಕ(ನೀನು ನೀನೆ),
ನಾನಲ್ಲಿ ಕನ್ನಡ ಚಿತ್ರಕ್ಕೂ ಮಲೆಯಾಳಂ ಚಿತ್ರಕ್ಕೂ ಹೋಲಿಕೆ ಮಾಡಿಲ್ಲ ಗುರು.
ಹೂಂ! ಅನಂತನ ಆವಾಂತರವೇ ಗ್ರೇಟು.. ಖುಷಿನಾ?

Anonymous said...

ಸಂತೋಷರ, ನಮ್ಮ ತಮ್ಮಗೋಳ್ಗೆ ಇದೆಲ್ಲಾ ಗೋಳಿಲ್ಲ ನೋಡ್ರಿ, ನಾವೆಲ್ಲಾ ಎಷ್ಟು ಕಷ್ಟಾ (?) ಪಟ್ಟು ಯಾರ ಕೈಗೂ ಸಿಗಲಾರದಂಗ ಇಂಥಾ(??) ಟಾಕೀಜನ್ಯಾಗ ಒಳಗ ಹೊಕ್ಕೊಳುದು ಹೇ ಕಡಿಮಿ ಕೆಲಸನ್ರಿ, ಇಗೆನಿಲ್ಲ..ಇಂಟರನೇಟನ್ಯಾಗ ಎನೈತಿ ಎನಿಲ್ಲಾ.

ಮತ್ತು ದುಖದ ಸಂಗತಿಯೆಂದರ ಇದಕ್ಕೆಲ್ಲಾ ಫೇಮಸ್ಸಾಗಿದ್ದು ಟಾಕೀಜಗೊಳೆಲ್ಲಾ "ಕಲ್ಯಾಣ ಮಂಟಪ" ಆಗಾಕತ್ತಾವು ;)

ಮತ್ತೊಮ್ಮೆ ಭಾರಿ ದಿನಗೋಳು ಅನ್ಕೋತ
ಶೆಟ್ಟರು

Anonymous said...

ಹೋಲಿಕೆ ನಾನು ಕೂಡ ಮಾಡಿಲ್ಲ. ಅನಂತನ-ಅವಾಂತರ ಏನು ಕಡಿಮೆ ಇಲ್ಲ ಅಂತ ಹೇಳಿದ್ದು ಋಣಾತ್ಮಕ ಅರ್ಥದಲ್ಲಿ. ಮಲಯಾಳಿ ಚಿತ್ರದ ಬಗ್ಗೆ ಯಾಕೆ ಆ ತಾತ್ಸಾರ ಮನೋಭಾವನೆ? ಬೇರೆ ಭಾಷೆಯ 'ಅಂತ' ಚಿತ್ರದಲ್ಲಿ ಕನ್ನಡದ ಅನಂತನ-ಅವಾಂತರದ ತುಣುಕು ಹಾಕುತ್ತಾರೆ ಎಂದು ಯಾರಾದರು ಬರೆದಿದ್ದರೆ... ಖನ್ನಡಕ್ಕಾಗಿ ಒಗ್ರ ಓರಾಟ ಮಾಡೊ ಖನ್ನಡದ ಮಂದಿ ಸುಮ್ಮಕ್ಕೆ ಕುತುಕೋತಾವರ್ರ?

-ನಾನು ನಾನೆ.

ದಿವಂಗತ said...

ಪಾಟೀಲರೆ ಬೇರೆಯ ತರಹದ ಪ್ರಯತ್ನ ಚೆನ್ನಾಗಿದೆ ಒಮ್ಮೆ ನಮ್ಮ ಆಸ್ಥಾನಕ್ಕೆ ಭೇಟಿ ಕೊಡಿ

Anonymous said...

ಯಾವುದೇ ರೀತಿಯ ಪೂರ್ವಾಗ್ರಹ ಇಟ್ಟುಕೊಳ್ಳದೇ ತಮಾಶೆಗಾಗಿ
ಓದಿಕೊಂಡರೆ ನಿಜಕ್ಕೂ ಇದೊಂದು ಸುಲಲಿತ ಪ್ರಬಂಧ.
ಓದಿ ಬಿದ್ದೂ ಬಿದ್ದೂ ನಕ್ಕೆ!
ಯಾಕೋ ಹುಬ್ಬಳ್ಳಿಯ ಗಣೇಶ್ ಟಾಕೀಸ್ ನೆನಪಾಯ್ತು..
ಹಾಗೆಯೇ ಗದುಗಿನ ಶಾಂತಿ ಟಾಕೀಸ್ ನಲ್ಲಿ ಇಂಥ ಮೆಡಿಕಲ್ ಪಿಕ್ಚರ್
ನೋಡುತ್ತಿರುವಾಗ ಇಂಟರವೆಲ್ಲಿನಲ್ಲಿ ಕರವಸ್ತ್ರದಿಂದ (ನೆಗಡಿಯಾದಂತೆ?!) ಮುಖಮುಚ್ಚಿಕೊಳ್ಳುತ್ತಿದ್ದುದು ನೆನಪಾಯಿತು..
ಹ್ಹಹ್ಹಹ್ಹ!

-ರಾಘವೇಂದ್ರ ಜೋಶಿ.

ದಿವಂಗತ said...

ಎಪ್ಪಾ ನಮಗೆ ಅಜಂತಾ ಟಾಕೀಸ್ ನೆನಪಾತ್ರಿ ಆದ್ರ ಅಲ್ಲಿ ಸೇಬು ಹಣ್ನ ತಿನ್ನೊದು ನೋಡೆವಿ ನಾವು ಆತು ಹತ್ರ ಹತ್ರ ಹತ್ತ ವರ್ಷ ಮತ್ತೊಮ್ಮೆ ನೆನಪಿಸಿದ್ದಕ್ಕ ಥ್ಯಾಂಕ್ಸರ್ರೀ ಗುರುಗಳ

sunaath said...

ಎಜುಕೇಶನ್ ಅಂದರ ಇದs ನೋಡ್ರಿ!

ಸಂತೋಷಕುಮಾರ said...

ಶೆಟ್ಟರೆ,
ನೀವು ಇನ್ನೂ ದೂರ ಹೊದ್ರಿ ಶೆಟ್ಟರ; ಮೊಬೈಲ್ ಇದ್ರ ಸಾಕಲ್ಲಾ :). ನಮ್ಮ ಪಾಡು ಏನು ಕೇಳ್ತಿರಾ ಬಿಡಿ.ಎಲ್ಲಾರೂ ಮಾಡೊದು ಅದೇ ಆದ್ರೂ ನಾ ಮಾಡಿದ್ದು ನಿಂಗ ಗೊತ್ತಾಗಬಾರದು, ನೀ ಮಾಡಿದ್ದು ನಂಗ ಗೊತ್ತಾಗಬಾರದು ಅನ್ನೋ ರೀತಿ. ಏನೆ ಅಂದ್ರು ನಾವೂ ಭಾಳ ಕಷ್ಟ ಪಟ್ಟು ’ಈ ಮಟ್ಟಕ್ಕೆ’ ಬಂದೀವಿ ನೊಡ್ರಿ..

ಜೋಶಿ,ದಿವಂಗತ
ಲಿಸ್ಟಿಗೆ ಧಾರವಾಡದ ಲಕ್ಶ್ಮಿ , ವಿದ್ಯಾಗಿರಿಯ ಮಾಡರ್ನ್ ಥೇಟರ್ ( ಈಗ ಇದು ಕಲ್ಯಾಣ ಮಂಟಪ ಅಗಿದೆ :))ಮರೆತೀರಿ ಅನಿಸುತ್ತೆ.. ಈಗ ಶಾಂತಿಯ ಬದಲು ಚಿತ್ರಾ ಆ ಕ್ರಾಂತಿಗೆ ಕೈ ಹಾಕಿದೆ..

ಸುನಾಥ್
ನಿಮ್ಮ ’ಎಜುಕೇಶನ್’ ಎಲ್ಲಿ ಆಗಿತ್ತು?:)

MD said...

ಹುಬ್ಬಳ್ಳಿಯ ಮೋಹನ ಟಾಕೀಜು ಶಾಲೆಯಲ್ಲೇ ಎಜುಕೇಷನ್ ಆರಂಭ ಆಗಿದ್ದು.

veeru said...

wonder ful story similar to mungarumali.

Rajshekhar Giraddi said...

didn't know you guys did this in Ron... good to hear though :)