Monday, May 12, 2008

ಚುನಾವಣೆ ಎಂಬ ಪರ್ವಕಾಲ

ಚುನಾವಣೆಗೂ ನಮ್ಮೂರಿಗೂ ಭಲೇ ಅವಿನಾಭಾವ ಸಂಬಂಧ, ಹುಟ್ಟಾ ಸೋಮಾರಿಗಳಾದ ನಮ್ಮೂರ ಪ್ರಜಾ ಪ್ರಭುಗಳಿಗೆ ಚುನಾವಣೆ ಸೀಜನ್ನು ಬಂತೆಂದರೆ ಭಲೇ ಖುಷಿ. ಅಬಾಲ ವೃದ್ದರಾಗಿ ಎಲ್ಲರೂ ತಮ್ಮದೇ ಆದ ಕಾರಣಗಳಿಗಾಗಿ ಈ ಖುಷಿಯಲ್ಲಿ ಪಾಲ್ಗೋಳ್ಳುತ್ತಾರೆ. ಊರ ಚಿಳ್ಳೆಗಳಿಗೆ ಓಡಾಡಿ ಎಲ್ಲಾ ಪಕ್ಷದವರ ಪಾಂಪ್ಲೆಟು ಮತ್ತು ಸ್ಟಿಕರು ಸಂಗ್ರಹಿಸುವ ಚಪಲ ಮತ್ತು ಹಿರಿಯರಿಗೆ ಕಟ್ಟೆಗೆ ಕೂತು ತಿಳಿದದ್ದು ತಿಳೆಗೆಟ್ಟದ್ದು ಎಲ್ಲವನ್ನೂ ಚರ್ಚಿಸುವ ವಿಕ್ಷಿಪ್ತ ಚಪಲ, ಇನ್ನೂ ಕಾರ್ಯಕರ್ತರೊಂಬ ಪರ್ಮನೆಂಟು ಪುಡಾರಿಗಳಿಗಂತೂ ಇದು ದುಡಿಮೆಯ ಕಾಲ,ನಮ್ಮೂರ ಪಡ್ಡೆಗಳಿಗೆ ಪ್ರಚಾರದ ನೆಪದಲ್ಲಿ ಯಾವಾಗ ಬೇಕಾದರೂ, ಬೇಕಾದವರ ಮನೆ ನುಗ್ಗಿ ಅವರ ಡವ್ ಗಳ ದರ್ಶನ ಭಾಗ್ಯವನ್ನೂ ಸವಿಯುವ ಪುಣ್ಯಕಾಲ. ಹೀಗಾಗಿ ಚುನಾವಣೆ ಘೋಷಣೆಯಾದದ್ದೆ ನಮ್ಮೂರ ಸಕಲ ಜನಸ್ತೋಮವೂ ಒಂದಲ್ಲಾ ಒಂದು ಕಾರಣಗಳಿಗಾಗಿ ಬ್ಯುಸಿಯಾಗಿ ಬಿಡುತ್ತಾರೆ.

ನನ್ನ ಮಟ್ಟಿಗೆ ಹೇಳುವುದಾರೆ, ಚಿಕ್ಕಂದಿನಲ್ಲಿ ಎಲ್ಲಾ ಪಕ್ಷಗಳಿಗೂ ಅವರು ಕೊಡುತ್ತಿದ್ದ ದ್ವಜ,ಟೋಪಿ,ಟೀ ಶರ್ಟುಗಳ ಕಾರಣ ಪಕ್ಷಾತೀತನಾಗಿ ನಾನು ದುಡಿದೆದ್ದೇನೆ; ಯಾವ ಪಕ್ಷದವರು ಪ್ರಚಾರಕ್ಕೆ ಸಿನಿಮಾ ನಟರನ್ನು ಕರೆ ತರುತ್ತಾರೋ ಆ ಸಭೆಗಳಿಗೆ ನಿಷ್ಠೆಯಿಂದ ಪಾಲ್ಗೋಂಡಿದ್ದೇನೆ. ಚಿತ್ರನಟರಾದ ಸುಧೀರ್,ಅನಂತ್ ನಾಗ, ಉಮಾಶ್ರೀಯವರ ಧರ್ಶನ ಭಾಗ್ಯ ನಮಗೆ ದೊರೆತದ್ದೆ ಚುನಾವಣೆ ದೆಶೆಯಿಂದ. ನನ್ನ ಪಕ್ಷಾತೀತ ಮನೋಭಾವನೆಯಿಂದ ಯಾವುದೋ ಒಂದು ಪಕ್ಷವನ್ನು ಬೆಂಬಲಿಸುತ್ತಿದ್ದ ನನ್ನ ಅಪ್ಪನಿಗೆ ಮುಜುಗುರ ತಂದಿಕ್ಕುತ್ತಿದ್ದೆ. ಆಗ ತೆರೆದ ಜೀಪುಗಳಲ್ಲಿ ಕರಪತ್ರ ಎಸೆಯುತ್ತಾ " ಕಾಂಗ್ರೆಸ್ಸಿಗೆ ಮತ, ದೇಶಕ್ಕೆ ಹಿತ" "ಚಕ್ರ, ಚಕ್ರ, ಚಕ್ರ" " ಕಮಲಕ್ಕೆ ನಿಮ್ಮ ಓಟು" ಇತ್ಯಾದಿಯಾಗಿ ಲೌಡ ಸ್ಪೀಕರುಗಳಲ್ಲಿ ಅರಚುತ್ತಾ ಬಂದರೆ ನಮಗೆ ದೇವಲೋಕದ ಪುಷ್ಪಕ ವಿಮಾನ ಕಂಡಷ್ಟು ಖುಷಿ.

ಸ್ವಲ್ಪ ದೊಡ್ದವನಾದ ಮೇಲೆ, ಕಾಂಗ್ರೆಸ್ಸೆಂದರೆ, ನೆಹರೂ ಎಂದರೆ ಒಂತರಾ ತಿರಸ್ಕಾರ ಶುರುವಾಗಿತ್ತು ಮತ್ತು ಆಗಲೇ ಕೆಲ ಆರ್, ಎಸ್ ,ಎಸ್ ಕಾರ್ಯಕರ್ತರು ನಮ್ಮ ಮೆದುಳಿಗೆ ಕೈ ಹಾಕಿ ಬೇಕಾದುದನ್ನು ತುರುಕಿ, ಬ್ಯಾಡದುದುನ್ನು ಕಿತ್ತೆಸೆದು ನಮ್ಮನ್ನೂ ಸಹ ಬಿಜೆಪಿ ಬೆಂಬಲಿಗರನ್ನಾಗಿಸಿದ್ದರು. ಆಗಿನ್ನೂ ನಮಗೆ "ಕೋಮುವಾದಿ, ಜಾತ್ಯಾತೀತ" ಇತ್ಯಾದಿ ರಾಜಕಾರಣಿಗಳ ಪವಿತ್ರ ಪದಗಳ ಪರಿಚಯ ಇರಲಿಲ್ಲಾ ಅಥವಾ ಬುದ್ದಿಜೀವಿಗಳಾಗ ಬೇಕಾದರೆ ಬಿಜಿಪಿಯನ್ನು ವಿರೋಧಿಸಬೇಕು ಎಂಬ ಕಾಮನ್ ಸೆನ್ಸು ಇರದ ಕಾರಣ ಚಿಕ್ಕಂದಿನಿಂದಲೇ ಬುದ್ದಿಜೀವಿಯಾಗುವ ಚಾನ್ಸು ಮಿಸ್ಸಾಗಿ ಹೋಯಿತು. ಹೀಗಾಗಿ ಭಲೇ ಹುಮ್ಮಸ್ಸಿನಲ್ಲಿ , ಭಕ್ತಿಯಲ್ಲಿ ನಮ್ಮ ಪಕ್ಷದ ಪ್ರಚಾರ ಕಾರ್ಯ ನಡೆಯುತ್ತಿತ್ತು. ಆಗಲೇ ನಾವು ಒಂದೊದಾಗಿ ಚುನಾವಣಾ ತಂತ್ರಗಳನ್ನು ಕಲಿಯತೊಡಗಿದ್ದೆವು. ಕೆಲ ಏರಿಯಾಗಳಲ್ಲಿ ದುಡ್ಡು ಹಂಚುವದರಿಂದ ಹಿಡಿದು ಚುನಾವಣೆ ದಿನ ಇನ್ನೊಬ್ಬರ ಹೆಸರಿನಲ್ಲಿ ಓಟು ಗುದ್ದುವವರೆಗೂ ನಮ್ಮ ಕೌಶಲಗಳು ಬೆಳೆದಿದ್ದುವು, ಈ ಓಣಿಲಿ ಇಷ್ಟೆ ಹಸ್ತ, ಇಷ್ಟೆ ದಳ, ಇಷ್ಟೆ ಕಮಲ ಎಂದು ಹೇಳಬಲ್ಲವರಾಗಿದ್ದೆವು. ಆಸಾಮಿಯನ್ನು ನೋಡಿದ ಕೂಡ್ಲೆ ಆತನ ಓಟಿನ ರೇಟನ್ನು ಊಹಿಸಬಲ್ಲವರಾಗಿದ್ದೇವು. ಮತ್ತು ಕಮರೀಪೇಟೆಯಿಂದ ದೋ ನಂಬರಿನ ಲಿಕ್ಕರನ್ನು ಅಲ್ಲಲ್ಲಿ ಮಾಮೂಲಿ ಕೊಟ್ಟು ಸಾಗಿಸುವ ರೇಂಜು ನಮ್ಮದಾಯಿತು. ಪಾದಯಾತ್ರೆಯಲ್ಲಂತೂ ಹೆಗಲಿಗೆ ಕೇಸರಿ ಶಾಲು ಹೊದ್ದು ಅಬ್ಯರ್ಥಿಯ ಆಚೀಚೆ ಓಡಾಡಿ ಶೋ ಆಫ್ ನೀಡಿದ್ದೆ ನೀಡಿದ್ದು. ಇನ್ನು ಚುನಾವಣೆ ಇನ್ನೆರಡು ದಿನಗಳಿರುವಾಗಲೇ ಎದುರು ಪಾರ್ಟಿಯ ಮತಗಟ್ಟೆ ಏಜಂಟರನ್ನು ಹುಡುಕಿ ಅವರನ್ನೂ ಮತ್ತು ಚುನಾವಣೆ ಕೆಲಸಕ್ಕೆ ಬರುವ ಸರಕಾರಿ ನೌಕರರನ್ನು ಪತ್ತೆ ಹಚ್ಚಿ ಖರೀದಿಸುವ ಮಹತ್ಕಾರ್ಯ ನಡೆಯುತ್ತಿತ್ತು ಮತ್ತು ಚುನಾವಣೆ ಹಿಂದಿನ ದಿನ ರಾತ್ರಿಯೆಲ್ಲ ಗುಬ್ಬಿ ಪಾಕೀಟು ಹಂಚುವ ಮತ್ತು ಚುನಾವಣೆ ದಿನ ಉಪ್ಪಿಟ್ಟು ಚಹಾ ಮಾಡಿಸುವ ವ್ಯವಸ್ಥೆಯೂ ಇರುತ್ತಿತ್ತು. ಎಲ್ಲಾ ಓಣಿಯವರನ್ನೂ ಜೀಪಿನಲ್ಲಿ ತುಂಬಿಸಿ ಮತಗಟ್ಟೆ ಬರುವರೆಗೂ ಅವರಿಗೆ ನಮ್ಮ ಪಕ್ಷದ ಚಿಹ್ನೆಯನ್ನು ತೋರಿಸಿ, ಕೊನೆ ಕ್ಷಣದ ಪ್ರಚಾರವನ್ನು ಮಾಡಿ, ಅಂಗವಿಕಲರು, ವೃದ್ಧರಿಗೆ ಸಹಾಯ ಮಾಡುವ ನೆಪದಲ್ಲಿ ಅವರೊಂದಿಗೆ ಹೋಗಿ ಅವರ ಓಟನ್ನೂ ನಾವೇ ಗುದ್ದಿ ನಮ್ಮ ಪಕ್ಷದ ಗೆಲುವನ್ನು ಖಾತ್ರಿ ಮಾಡುತ್ತೆದ್ದೆವು.ಈ ಮದ್ಯೆ ಕೆಲ ಅಕ್ಷರ ಗುರುತಿಸುವ ಸಾಕ್ಷರ ಕಾರ್ಯಕರ್ತರನ್ನು ಹಿಡಿದು ಎಲ್ಲರ ಹೆಸರು ಮತ್ತು ಮತಗಟ್ಟೆ ಸಂಖ್ಯೆಯನ್ನೂ ಬರೆಸುವ ಹೊಣೆಯೂ ಇರುತ್ತಿತ್ತು. ನಮಗೆ ಖಾತ್ರಿ ಇರದ ಜನರನ್ನು ಶತಾಯಗತಾಯ ಓಟು ಮಾಡದಂತೆ ತಡೆಯುತ್ತಿದ್ದೇವು. ಅವತ್ತು ಮುಗಿದರೆ, ಫಲಿತಾಂಶದ ದಿನದವರೆಗೂ ನಮಗೆ ವಿಶ್ರಾಂತಿ. ಫಲಿತಾಂಶದ ದಿನ ಮತ್ತೆ ಜನರನ್ನು ಕರೆದುಕೊಂಡು ಕೈಯಲ್ಲಿ ಯಾವುದಕ್ಕೂ ಇರಲಿ ಅಂತಾ ಒಂದು ಮಾಲೆ ತಗೊಂಡು ಹೋಗಿ , ನಮ್ಮ ಅಭ್ಯರ್ಥಿ ಗೆದ್ದರೆ ಸೈ ಡಂಕ ನಕ ಅಂತ ಕುಣಿದು, ಗುಲಾಲು ಅರಚಿ, ತೆರೆದ ಜೀಪಿನಲ್ಲಿ ಮತ್ತೆ ಮೆರವಣಿಗೆ ಮಾಡುವುದರೊಂದಿಗೆ ರಾತ್ರಿ ಸುರಾಪಾನದ ವ್ಯವಸ್ಥೆಯೂ ಮಾಡಬೇಕಾಗುತ್ತಿತ್ತು. ನಮ್ಮ ಅಭ್ಯರ್ಥಿ ಸೋತರಂತೂ ಯಾರಿಗೂ ತಿಳಿಯದಂತೆ ಊರ ದಾರಿ ಹಿಡುಯುವದಂತೂ ಇದ್ದೆ ಇತ್ತು.

ಇನ್ನೂ ಚುನಾವಣೆ ಎಂದರೆ ಕೆಲ ಗಾಸಿಪ್ಪು ವೀರರಿಗೆ ಪರ್ವಕಾಲ. ವಿಜಯ ಮಲ್ಯ ನ ಬಗ್ಗೆಯಂತೂ ನಮ್ಮೂರಲ್ಲಿ ರಸವತ್ತಾದ ಕಥೆಗಳಿದ್ದವು. ನಮ್ಮೂರ ಯುವಕರಿಗೆ ಮಲ್ಯ ಆದರ್ಶವಾಗಿ ಬಿಟ್ಟಿದ್ದ. ಮಲ್ಯನ ಸ್ವಿಮ್ಮಿಂಗ್ ಪೂಲಿನಲ್ಲಿ ಶಿಲ್ಪಾ ಶೆಟ್ಟಿಯ ನಗ್ನ ಪ್ರತಿಮೆ ಇದೆ ಅನ್ನುವದರಿಂದ ಹಿಡಿದು ಮಲ್ಯನ ಪಾರ್ಟಿ ಸೇರಿದರೆ ಯಾವಗಲೂ ಉಚಿತವಾಗಿ ಕಿಂಗ್ ಫಿಶರ್ ಕುಡಿಯಲು ಕೂಪನ್ ಕೊಡ್ತಾರಂತೆ ಅನ್ನೊವರೆಗೂ ರಂಗು ರಂಗಿನ ಕಥೆಗಳಿದ್ದವು. ಪಟೇಲರ ರಸಿಕತನ ನಮ್ಮ್ಮೂರ ಗೌಡರಿಗೆ ಆದರ್ಶಪ್ರಾಯವಾಗಿತ್ತು. ಇನ್ನೂ ವಿಜಯ ಸಂಕೇಶ್ವರ ಕನ್ನಡನಾಡು ಪಾರ್ಟಿ ಮಾಡಿದಾಗ, ಸಂಕೇಶ್ವರರು ಆಗ ಕೇಂದ್ರ ಮಂತ್ರಿಯಾಗಿದ್ದ ಅನಂತಕುಮಾರರು ಕೊಟ್ಟಿದ್ದ ಮೂರು ನೂರು ಕೋಟಿ ತಿಂದಿದ್ದಕ್ಕೆ ಅವರಿಗೆ ಜಗಳ ಆಗಿ ಹೊಸ ಪಾರ್ಟಿ ಮಾಡಿದ್ರು ಅಂತ ನಮ್ಮ ಜನ ನಿಷ್ಟೆಯಿಂದ ನಂಬಿದ್ದರು.ಆದರೆ ಈ ಭಾರಿಯ ಐಕಾನುಗಳು ಮಾತ್ರ ರಾಮುಲು ಮತ್ತು ಗಣಿ ಧಣಿಗಳಾದ ರೆಡ್ಡಿ ಬ್ರದರ್ಸ. ಈ ಭಾರಿ ಚುನಾವಣೆ ಘೋಷಣೆಯಾದ ಕೂಡಲೇ ರೆಡ್ಡಿಗಳು ಪ್ರಚಾರಕ್ಕಾಗಿ ಐನೂರು ಸ್ಕಾರ್ಪ್ಯಿಯೋ , ಸಾವಿರ ಪಲ್ಸರ್ರು ಆರ್ಡರು ಮಾಡಿದ್ರು ಮತ್ತು ಚುನಾವಣೆ ಆಯೋಗದ ದೆಶೆಯಿಂದ ಆರ್ಡರು ಕ್ಯಾನ್ಸಲ್ಲ ಮಾಡಬೇಕಾಯ್ತು, ಇಲ್ಲವಾದರೇ ನಮಗೂ ಪಲ್ಸರ್ ಸಿಗುತ್ತಿತ್ತು ಎಂಬ ನಂಬಿಕೆಯಲ್ಲಿಯೇ ನಮ್ಮೂರ ಬಿಜೆಪಿ ಕಾರ್ಯಕರ್ತರಿದ್ದಾರೆ.

ಬೆಂಗಳೂರಿನಲ್ಲಿ ಚುನಾವಣೆ ಬಂತು ಹೋಯ್ತು, ನನಗಂತೂ ಆ ಚುನಾವಣೆಯ ಫೀಲ್ ಆಗಲೇ ಇಲ್ಲಾ. ಊರಲ್ಲಿಯೂ ಚುನಾವಣೆ ಹೀಗೆ ಇದೆಯಂತೆ ನನ್ನ ತಮ್ಮನೂ ಭಲೇ ಬೇಜಾರಾಗಿದ್ದ, ಅವನೂ ಸಹ ಪಲ್ಸರ್ ಗಿರಾಕಿಯೇ ಮತ್ತು ಅಬ್ಬೀಗೇರಿಗೆ ರಾಮುಲು ಬಂದು ಪ್ರಚಾರ ಮಾಡಿದ್ರೆ ನಮ್ಮೂರ ಓಟುಗಳೆಲ್ಲಾ ಬಿಜೆಪಿಗೆ ಅನ್ನೋದು ಅವನ ಅಭಿಮತ. "ಬಿಜೆಪಿ ಡೌಟು ಬಿಡ್ಲೆ ಈ ಸರ್ತಿ" ಅಂದ್ರೆ ಅವನು ನಿಮ್ಮನ್ನು ದೇಶದ್ರೋಹಿಯಂತೆ ಅಥವಾ ಸಿಮಿ ಸಂಘಟನೆಯ ಸದಸ್ಯನಂತೆ ನೋಡುತ್ತಾನೆ . ಒಟ್ಟಿನಲ್ಲಿ ನಮ್ಮೂರ ಜನತೆ ಮಾತ್ರ ತಮ್ಮದೇ ಆದ ಕಾರಣಗಳಿಗಾಗಿ ಆಯೋಗಕ್ಕೆ ಹಿಡಿ ಶಾಪ ಹಾಕುತ್ತಿದ್ದಾರೆ. ದಿನಾ ಪೇಪರ್ ಓದುವ ನನಗೂ ಸಹಿತ ಅನೇಕ ಕ್ಷೇತ್ರಗಳ ಅಭ್ಯರ್ತಿಗಳೇ ಗೊತ್ತಿಲ್ಲ್ಲಾ, ಇನ್ನೂ ಓದೇ ಬಾರದಿವರ ಕಥೆ ಏನು?. ಕೆಲವರಿಗಂತೂ ಚುನಾವಣೆ ಬಂದಿರುವುದು ಗೊತ್ತಿಲ್ಲಾ. ಈಗಲೇ ಹೀಗಾದ್ರೆ ಮುಂದಿನ ಚುನಾವಣೆಗಳು ಹೇಗಿರುತ್ತವೋ ಗೊತ್ತಿಲ್ಲಾ. ನಾನಂತೂ " ಆ ದಿನಗಳನ್ನು" ಭಾಳ ಮಿಸ್ ಮಾಡ್ಕೋತೀದಿನಿ..

9 comments:

Anonymous said...

"ಬುದ್ದಿಜೀವಿಗಳಾಗ ಬೇಕಾದರೆ ಬಿಜಿಪಿಯನ್ನು ವಿರೋಧಿಸಬೇಕು ಎಂಬ ಕಾಮನ್ ಸೆನ್ಸು ಇರದ ಕಾರಣ ಚಿಕ್ಕಂದಿನಿಂದಲೇ ಬುದ್ದಿಜೀವಿಯಾಗುವ ಚಾನ್ಸು ಮಿಸ್ಸಾಗಿ ಹೋಯಿತು."

ಛೆ, ನನಗೂ ಕೂಡಾ ಆ ಛಾನ್ಸ ಮಿಸ್ಸಾಯ್ತಲ್ಲಾ, ಆದ್ರೆ ರಾಮಕೃಷ್ಣ ಹೆಗಡೆಯವರು ಬಾಗಲಕೋಟೆಯಿಂದ ಲೋಕಸಭೆಗೆ ಎಲೇಕ್ಷನ್ ನಿಂತಾಗಿಂದ (ನಾನೂ ೪-೫ನೇ ಇಯತ್ತೆ ಇರಬೇಕು) "ಸಮಾಜವಾದಿ"ಯಾಗಿದ್ದಂತೂ ನಿಜ.

"ಚಕ್ರ, ಚಕ್ರ, ಚಕ್ರ" ಹೋದ ಮೇಲೆ ಬಲಪಂಥಿಯನಾಗಿ ದಳದಲ್ಲೆ ಊಳಿದ ನನ್ನ ಅಜ್ಜನ ಕೆಂಗಣ್ಣಿಗೆ ಗುರಿಯಾಗಿದ್ದು ನೆನಪಿದೆ, ಇಗೊಂದು ೫-೬ ವರ್ಷಗಳ ಕೆಳಗಿದ್ದ "ಚುನಾವಣೆ" ಜಾತ್ರೆ ಇಗಿಲ್ಲ ಎಂದು ತಿಳಿದು ನಮ್ಮ ಮತ್ತೊಂದು ಸಂಸ್ಕೃತಿ-ಪರಂಪರೆ ಕಳಚಿದಂತಾಗಿದೆ ಎಂಬುದು ನನ್ನಜ್ಜನ ಕಳಕಳಿ, ನನ್ನ ತಮ್ಮನದೂ ಕೂಡಾ. ಆದರೆ ನನ್ನಪ್ಪ-ನನ್ನವ್ವನಿಗೆ ಇದರಿಂದ ಖುಷಿಯಾಗಿದೆ.

ನಾನು ಊರಿಂದ ದೂರವಿದ್ದೆನೆ ಆದರೂ "ಎಲೇಕ್ಷನ್" ನನ್ನ ಬೆನ್ನು ಬಿಟ್ಟಿಲ್ಲ, ನಾನಿರುವ ಭಾಗದ ಲೋಕಸಭಾ ಕ್ಷೇತ್ರದ ಉಪಚುನಾವಣೆ ೨೨ಕ್ಕಿದೆ ಮತ್ತು ಇಲ್ಲಿಯೂ ಥಂಡಾ-ಥಂಡಾ...

-ಶೆಟ್ಟರು

veeru said...

IT IS WONDER FULL SIR HATS OF TO U

NilGiri said...

ನಾವೂ ಮಿಸ್ ಮಾಡ್ಕೋತಾ ಇದ್ದೀವಿ. ಬುರ್ರ್ ಎಂದು ಹೋಗುವ ಕಾರಿನ ಕಿಟಕಿಯಿಂದ ಅವರುಗಳು ಉದುರಿಸುತ್ತಿದ್ದ ಪಾಪ್ಲೆಂಟ್ ಗಳನ್ನು ಆರಿಸಿಕೊಂಡು, ಅದನ್ನೆಲ್ಲಾ ನೀಟಾಗಿ ಜೋಡಿಸಿ, ಪಿನ್ನು ಹೊಡೆದು, ಹಿಂಬದಿಯನ್ನು ಮೆಸೇಜು ಬುಕ್ ತರ ಮಾಡಿ ಇಡುತ್ತಿದ್ದಿದ್ದೆಲ್ಲಾ ನೆನಪಿಗೆ ಬಂತು. ಮೈಸೂರಿಗೆ ಫೋನ್ ಮಾಡಿ ಕೇಳಿದರೆ, ನಮ್ಮಪ್ಪ" ಅಯ್ಯೋ ಎಲೆಕ್ಷನ್ ಬಂದಿದ್ದೂ ಹೋಗಿದ್ದೂ ಗೊತ್ತೇ ಅಗ್ಲಿಲ್ಲ, ಈ ಸಲ ಚೆನ್ನಾಗಾಯ್ತು ಅಂದ್ರು".( ಅವರ ಪ್ರಕಾರ " ಚಂದ" ಅಂದ್ರೇನು ಅಂತ ಗೊತ್ತಿದ್ರಿಂದ) "ಹೌದಾ" ಅಂತ ರಾಗ ಎಳೆದು ಪೋನ್ ಇಟ್ಟೆ.

ಏನೇ ಆಗ್ಲಿ ನಮ್ಮ ಓಟು ಈ ಸಲ ಮಿಸ್ ಆಗಿದ್ದು ಮಾತ್ರ ತೀರಾ ಬೇಜಾರು.

Anonymous said...

ಸಣ್ಣವ್ರಿದ್ದಾಗ, ’ಹೆಗಡೇಗ ನೆಗಡಿ ಬಂದಿತ್ತ..’ ಅಂತ ಹಿಂಗೇನೋ ಒಂದು ಹಾಡು ಕೇಳಿಧಂಗ ನೆನಪು, ಯಾವುದೋ ಎಲೆಕ್ಷನ್ ಕ್ಯಾಂಪೇನ್‍ದಾಗ...

ಪಯಣಿಗ said...

hi dude i was there in b'lore during the elections n ofcourse it was very dull as u rightly said. now i'm in hubli n hubli scenario is same as that of b'lore but in ron ( of course ur in abbigeri also ) the charm of election is more as compared that of 2 b'lore or hubli. n shriramulumania is going 2 workout there. but the deciding factor is the 20 villages of mundaragi which r included 2 our constituency

ಸುಧೇಶ್ ಶೆಟ್ಟಿ said...

ನಿಮ್ಮ ಎಲ್ಲಾ ಬರಹಗಳನ್ನು ತಪ್ಪದೇ ಓದುತ್ತೇನೆ. ನಿಮ್ಮ ಬರಹಗಳಲ್ಲಿನ ವಿಡ೦ಬನೆ ನನಗೆ ತು೦ಬಾ ಅಚ್ಚುಮೆಚ್ಚು.

MD said...

ಬಾಗಲಕೋಟೆ ಕ್ಷೇತ್ರದ ಮತದಾರ ಬಾಂಧವರೇ
ಅಣ್ಣ ತಮ್ಮಂದಿರೆ ಅಕ್ಕ ತಂಗಿಯರೆ ಬಾಬುಸಾಬರೇ ಫಕೀರಪ್ಪನವರೆ
ಹನುಮಣ್ಣ ಹನುಮಕ್ಕ ತಿಮ್ಮಪ್ಪ ತಿಮ್ಮವ್ವ ಬುಡೇನಸಾಬ ಫಾತಿಮಾಬಿ
ಅಲಾಲಲಲಾ .. ಯಾವದಪ್ಪಾ ಈ ಸಾರಿ ಗೆದ್ದು ಬರೋ ಪಾರ್ಟಿ ಅಂದ್ರೆ ಹೇಳ್ತಾರ ಅದ 'ಜನತಾ ಪಾರ್ಟಿ'

"ಚಕ್ರ, ಚಕ್ರ, ಚಕ್ರ, ಚಕ್ರಕ್ಕೆ ಮತ ದೇಶಕ್ಕೆ ಹಿತ"

"ಬಾಗಲಕೋಟೆ ಕ್ಷೇತ್ರದ ಓ ಮತದಾರಣ್ಣಾ.....
ಶ್ರೀ ರಾಮಕೃಷ್ಣ ಹೆಗಡೆ ಇವರಿಗೆ ಜಯಮಾಲೆ ಹಾಕಣ್ಣಾ"

ಚಕೋರ ಈಗ ಪೂರ್ತಿ ನೆನಪಾಯ್ತಾ?

ಸಂತೋಷಕುಮಾರ said...

ಎಲ್ಲರಿಗೂ ತಡವಾಗಿ ಪ್ರತಿಕ್ರಿಸಿದ್ದಕ್ಕೆ ಕ್ಷಮೆ ಇರಲಿ.
ಶೆಟ್ಟರೆ, ನಾವೂ "ಪ್ರಗತಿಪರ" ಅಗೋದು ಯಾವಾಗ? :)

ನೀಲಗಿರಿಯವರ,ನಾವು ಕ್ರಿಕೆಟು ಬ್ಯಾಟು ಕಂಡಿದ್ದು ಈ ಉಮೇದುವಾರರ ಕೃಪೆಯಿಂದಲೇ. ನನ್ನ ತಾಯಿಯೂ ಮೈಕಿನ ಅರ್ಭಟವಿಲ್ಲದ್ದಕ್ಕೆ ಭಲೇ ಖುಷಿಯಾಗಿದ್ರು.ಆದ್ರೆ ಕಾಲು ಬೀಳಿಸಿಕೋಳ್ಳುವ ಉಮ್ಮೆದಿಯಲ್ಲಿ ನನ್ನ ಅಮ್ಮ ಇದ್ರು.

@ಚಕೋರ, ಎಂ ಡಿ.
ನಮ್ದು ಭಾಗಲಕೋಟೆ ಕ್ಷೇತ್ರಾನೆ, ಆದ್ರೆ ಹೆಗಡೆ ನಿಂತಾಗ ನಂಗೆ ಅಷ್ಟು ತಿಳೀತಾ ಇರಲಿಲ್ಲಾ. ಹೆಗಡೆ ಅಂದ್ರೆ ಈಗಲೂ ಗೌರವ ಕೊಡುವ ನಮ್ ಕಡೆ ಜನ ಆಗ ಮಾತ್ರ ಯಾಕೆ ಚೊಂಬು ಕೊಟ್ತ್ದ್ರೋ ಅರ್ಥ ಆಗ್ತಿಲ್ಲ್ಲಾ.

@ಫಿನಿಕ್ಸು,
ಇಲ್ಲಿ ನಿನ್ನ ಚುನಾವಣಾ ಸಮಿಕ್ಷೆ ಬೇಕಿತ್ತಾ?

@ವೀರು,ಸುದೇಶ್,

ಧನ್ಯವಾದಗಳು :)

Sangamesh said...

ಪಾಟೀಲಾ, ನಿನ್ನ ಲೇಖನ ಓದಿ ನಾನು ಸಣ್ಣವ ಇದ್ದಾಗ ಪಾರ್ಟಿ ಧ್ವಜ ತಂದು ನಮ್ಮ ಮನಿ ಮ್ಯಾಲೆ ಹಾರಿಸಿ ಖುಷಿ ಪಟ್ಟಿದ್ದು ನೆನಪಿಗೆ ಬಂತು. ಚುನಾವಣಾ ಕಾಲದಲ್ಲಿ ಪ್ರತಿಯೊಂದು ಹಳ್ಳಿಯಲ್ಲೂ ನಡೆಯುವ ವಿದ್ಯಮಾನಗಳನ್ನು ಕಣ್ಣಿಗೆ ಕಟ್ಟುವಂಗ ವರ್ಣಿಸಿದಿ. ನಂಗೂ ಈ ಸಲಿ ಚುನಾವಣೆ ಬಂದು ಹೋಗಿದ್ದ ಗೊತ್ತಾಗ್ಲಿಲ್ಲಾ.