ವರ್ಷದ ಹೊಸ್ತಿಲಿನಲ್ಲಿ..
ಹೆಚ್ಚು ಕಮ್ಮಿ ಒಂದು ವರ್ಷ ಆಯ್ತು ಈ ಬ್ಲಾಗು ಶುರು ಮಾಡಿ, ತೀರಾ ಸರಿಯಾಗಿ ವಾರ, ತಿಥಿ, ನಕ್ಷತ್ರ ನೆನಪಿಲ್ಲಾ. ಇದೇನು ಘನ ಸಾಧನೆಯಲ್ಲ ಎಂಬ ಅರಿವಿದ್ದರೂ; ಎಲ್ಲಾ ಕುರಿಗಳಂತೆ ನಂಗೂ ಬ್ಯಾ ಅನ್ನುವ ಚಪಲ. ಮೊದಮೊದಲು ನಾನೊಬ್ಬ ಬ್ಲಾಗಿಗ ಮತ್ತು ನನ್ನ ಬರಹಗಳಿಗೋಸ್ಕರ ಅನೇಕರು ಕಾದಿರುತ್ತಾರೆ, ನಾನೋಬ್ಬ ಅನಾಹುತ ಬರಹಗಾರ ಎಂಬ ಭ್ರಮೆಯಲ್ಲಿ ಹುಡುಕಾಡಿ, ಹುಡಿಕಾಡಿ ಹೊಸ ಬರಹ ಸೇರಿಸುತ್ತಿದ್ದೆ. ನನ್ನ ಈ ಪಡಿಪಾಟಲನ್ನು ನೋಡಿ ಮಿತ್ರ ಫಿನಿಕ್ಸು ’ನೀನೊಬ್ಬ ಟೈಟಲ್ ಬರಹಗಾರ, ಅಸಲಿಗೆ ನಿನ್ನಲ್ಲಿ ಸರಕೆ ಇಲ್ಲಾ,ಹೆಡ್ಡಿಂಗ್ ಹುಡುಕಿ ಎನನ್ನೋ ತುರುಕುವ ಸಾಹಸ ಬೇಡ’ ಎಂದೆಲ್ಲಾ ಬೈದಾಡಿದ್ದ.ಆದರೆ ತಾನು ಮಾತ್ರ ಒಂದೇ ಒಂದು ಪೋಸ್ಟ ಮಾಡಿ " ಬರೀಲೇ ಸೂ... ಮಗನೇ" ಅಂತಾ ಹೊಡಕೊಂಡ್ರು , ಮೊನ್ನೆ ಮೊನ್ನೆ ನಾನೋಬ್ಬ ಬರಹಗಾರನೇ ಅಲ್ಲ್ಲಾ, ಉತ್ತಮ ಓದುಗ ಮಾತ್ರ ತಡವಾಗಿ ಅರ್ಥ ಮಾಡಿಕೊಂಡು ನನ್ನೆಡೆಗೂ ಆಸೆಯಿಂದ ಯಾವಾಗ ನಾನು ಬರೆಯುವದು ನಿಲ್ಲಿಸಿ ಉಪಕಾರ ಮಾಡುತ್ತೇನೋ ಅಂತಾ ಕಾದು ಕುಳಿತಿದ್ದಾನೆ.
ಇದೆಲ್ಲಾ ಬಿಟ್ಟು ಒಂದು ವರುಷದಲ್ಲಿ ಕಡಿದು ಕಟ್ಟೆ ಹಾಕಿದ್ದಾದರೂ ಏನು ಅಂತ ಕುಳಿತರೇ, ಯಥಾ ಪ್ರಕಾರ ನನ್ನ ಲಘು ದಾಟಿಯ ಬರಹಗಳು ಮತ್ತು ಯದ್ವ ತದ್ವಾ ಫೀಲಾಗಿ ಬರೆದ ಕೆಲ ಹುಚ್ಚಪ್ಯಾಲಿ ಬರಹಗಳು ಮತ್ತು ಕೊನೆಯಲ್ಲಿ ಸುಮ್ಮನಿರಲಾರದೇ ಇರುವೆ ಬಿಟ್ಟುಕೊಂಡ್ರು ಅಂತಾ ಬರೆದ ವರದಿ ಮಾದರಿಯ ಬರಹ.ಆಗ ಕೆಲವರಂತೂ ವಿಷ ಅಂದ್ರು, ಹಾಲಾಹಲ ಅಂದ್ರು. ಇನ್ನೂ ಕೆಲವರು ಶುರುವಿನಲ್ಲಿ ಇಂದ್ರ, ಚಂದ್ರ ಎಂದು ಹೊಗಳುತ್ತಿದ್ದವರು ಒಂದೇ ಒಂದು ಖಂಡನಾತ್ಮಕ ಬರಹಕ್ಕೆ ಪ್ರತಿಕ್ರಿಯೆಯಾಗಿ ದುಬು ದುಬು ತಮ್ಮ ಬ್ಲಾಗ್ ರೋಲಿನಿಂದ ನನ್ನ ಬ್ಲಾಗು ಕಿತ್ತು ಹಾಕಿ ದೊಡ್ಡ ನಿಟ್ಟಿಸುರು ಬಿಟ್ಟರು. ಹರಿಯೋ ನೀರಿಗೆ ದೊಣ್ಣೆ ನಾಯಕನ ಅಪ್ಪಣೆ ಬೇಕೆ?. ನನ್ನ ಅಭಿಪ್ರಾಯ ಸರಿಯಲ್ಲ ಅಂದರೆ ನೇರವಾಗಿ ಚರ್ಚೆಗಿಳಿಯಿಬಹುದಿತ್ತು ಅಥವಾ ಅದನ್ನು ಖಂಡಿಸುವ ಹಕ್ಕು ಎಲ್ಲರಿಗೂ ಇತ್ತು, ಅದು ಬಿಟ್ಟು ಈ ತರದ ಸಣ್ಣತನ ತೋರಿಸಿ ಕಡೆದು ಕಟ್ಟೆ ಹಾಕಿದ ಸಾಧನೆಯಾದ್ರು ಏಂಥದು ಅಂತಾ ಇಲ್ಲಿವರೆಗೂ ತಿಳಿದಿಲ್ಲಾ..
ಈ ಮದ್ಯೆ ಎಲ್ಲರ ಬ್ಲಾಗುಗಳಲ್ಲಿ ಗಂಭೀರವಾಗಿ ಬ್ಲಾಗಿಸುವ ಬಗ್ಗೆ ಚರ್ಚೆಗಳಾಗುತ್ತೀವೆ. ಮೊದಲೇ ಗಂಭೀರತೆಗೂ ನನಗೂ ಎಣ್ಣೆ ಸೀಗೆಕಾಯಿ ಸಂಬಂಧ, ಅಂತಹುದರಲ್ಲಿ ಈ ಬೆಳವಣೆಗೆಗಳು ನನ್ನ ಕೇಡುಗಾಲವನ್ನು ನೆನಪಿಸುತ್ತಿವೆ. ನನ್ನಲ್ಲಿ ಸರಕು ಇದ್ದಷ್ಟು ದಿನ ಬರೆಯುವದು ಅಮೇಲಂತೂ " ಉತ್ತಮ ಓದುಗ" ಎಂದು ಆರೋಪಿಸುಕೊಂಡು ಕಂಡೊರ ಬರಹಗಳನ್ನು ಹಿಗ್ಗಾ ಮುಗ್ಗಾ ವಿಮರ್ಶಿಸುವದಂತೂ ಇದ್ದೇ ಇದೆ. ಇಲ್ಲಿವರೆಗೂ ನನ್ನ ಬರಹಗಳನ್ನು, ತಲೆಹರಟೆಯನ್ನು ಸಹಿಸಿಕೊಂಡು ಬೆನ್ನು ತಟ್ಟಿದ ಮತ್ತು ಬೆನ್ನಿಗೆ ಗುದ್ದಿದ ಎಲ್ಲರಿಗೂ ನನ್ನ ನಮನಗಳು, ಈ ಬಂಧ ನಿರಂತರವಾಗಿರಲಿ..