Sunday, February 10, 2008

ಹೀಗೊಂದು ಹುಚ್ಚು ಬರಹ!

ಇನ್ನೂ ಕಾಡುತ್ತಲೇ ಇರುವ ಮುಗಿಯದ ಪ್ರಾತಃ ಕಾಲದ ಸುಂದರ ಸ್ವಪ್ನವೇ,

ಸಂಭೋದನೆ ಬಹಳ ಉದ್ದವಾಯಿತು ಎಂಬ ಅರಿವಿದ್ದರೂ, ಅದನ್ನು ಗಿಡ್ದಗೊಳಿಸಿ ’ಬೋನ್ಸಾಯ್’ ಮಾಡಲು ಮನಸ್ಸಿಲ್ಲದೆ ಹಾಗೆ ಕರೆಯುತ್ತಿದ್ದೆನೆ. ಅಸ್ತಿತ್ವವೇ(?) ಇಲ್ಲದ ನಿನ್ನ ಬಗೆಗಿನ ನನ್ನ ಹುಚ್ಚಿಗೂ, ಹೊರಗೆ ಹೊತ್ತಲ್ಲದ ಹೊತ್ತಲ್ಲಿ ಸುರಿಯುವ ಚುಮು ಚುಮು ಮಳೆಗೂ ಎಂಥಹ ದಿವ್ಯ ಸಂಭಂದವೆಂದು ಇನ್ನೂ ಅರ್ಥ ಮಾಡಿಕೊಳ್ಳಲಾಗುತ್ತಿಲ್ಲಾ ಮತ್ತು ಆ ನೆಪದಿಂದ ಸುಮ್ನೆ ಭಾವುಕನಾಗುವ ನನ್ನ ತೆವಲಾದರೂ ಎಂಥದು ಎಂದು ನಿರ್ಧರಿಸಲಾಗುತ್ತಿಲ್ಲಾ.

ಅಷ್ಟಕ್ಕೂ ನಿನ್ನಿಡೆಗಿನ ಒಂದು ನಿರಂತರ ಹುಡುಕಾಟದ ಅಭಿಯಾನದ ಆಯಸ್ಸೇಷ್ಟು? ಎಂದು ಖಂಡಿತ ನೆನಪಿಲ್ಲಾ, ಅದ್ರೆ ನಿನ್ನ ಬಗೆಗಿನ ತಪನೆ ನಿರ್ಲಜ್ಜಿತವಾಗಿ ಹೆಚ್ಚುತ್ತಲೆ ಹೋಗುತ್ತಿದೆ.ಪ್ರತಿಬಾರಿಯೂ ’ಲವ್ ಲವಿಕೆ’ ’ಈ ಗುಲಾಬಿ ನಿನಗಾಗಿ’ ಓದುವಾಗ ನೀ ಹೀಗಿದ್ದರೆ ಚೆನ್ನ ಅಂದುಕೊಳ್ಳುತ್ತೇನೆ, ಆದರೆ ಇನ್ನೊಂದು ಅಂಕಣ ಓದುತ್ತಲೇ ನೀನು ಹಾಗಿರದೆ, ಹೀಗೆದ್ದರೆ ಇನ್ನೂ ಚೆಂದ ಅಂದುಕೊಳ್ತಿನಿ.ಜಯಂತರ ಕಥೆಗಳಲ್ಲಿನ ಭಾವುಕ ಸ್ತ್ರೀ ಪಾತ್ರಗಳಲ್ಲಿ ನಿನ್ನ ಕಲ್ಪಿಸಿಕೊಳ್ಳಲು ಹೆಣಗಾಡುತ್ತೇನೆ, ರೋಮಾಂಟಿಕ್ ಚಿತ್ರದ ನಾಯಕಿರಲ್ಲಿ ನಿನ್ನ ಹುಡುಕಿ ಪದೆ ಪದೆ ಸೋಲ್ತಿನಿ, ಜಾಹೀರಾತುಗಳಲ್ಲಿ ಬರುವ ಅಂದಗಾರ್ತಿಯರ ಬೆನ್ನು ಬಿದ್ದು, ಅವರಲ್ಲಿ ನಿನ್ನ ಆರೋಪಿಸಿ ಸಮಾಧಾನಗೊಳ್ಳಲೆತ್ನಿಸುತ್ತೆನೆ.

ಗಾಂಧಿ ಬಜಾರಿನ ದೇಸಿ ಹುಡುಗಿಯರ ನಗುವಿನಲ್ಲಿ,ಗುಡಿ ಸುತ್ತುವ ದಾವಣಿಗಳ ಚೆಲುವಿನಲ್ಲಿ,BMTC ಬಸ್ಸಿನ ಮುಂದಿನ ಸೀಟುಗಳಲ್ಲಿ, ಕಾಫಿ ಡೆಯ ಮಗ್ಗುಗಳ ಹಿಂದೆ,ಕೈನಿಗಳ ಮೇಲಿನ ಹಲ್ಮೆಟ್ಟುಗಳಲ್ಲಿ ಹುದಿಗಿರುವ ಮುಖಗಳಲ್ಲಿ,ನನ್ನ ಮೋಬೈಲಿನಲ್ಲಿ ಧಾಖಲಾಗುವ ಆಗುಂತುಕ ನಂಬರಿನ ಮೆಸೇಜುಗಳಲ್ಲಿ,ಮಿಸ್ಡ ಕಾಲ್ ಗಳಲ್ಲಿ, ಸಾವಿರಗಟ್ಟಲೇ ಬರುವ ಫಾರ್ವರ್ಡು ಮೇಲುಗಳಲ್ಲಿ, ಪಿ,ವಿ ಆರ್ ನ ಸ್ತಬ್ದ ಥೇಟರುಗಳಲ್ಲಿ ದೃಶ್ಯಗಳಿಗುನವಾಗಿ ಪ್ರತಿಫಲಿಸುವ ಮುಖಗಳ ಮೇಲೆ, ಟ್ರಾಫಿಕ್ಕಿಗೆ ಸಿಕ್ಕಿ ಬಿದ್ದ ಆಟೋವಿನಲ್ಲಿ ಮೀಟರಿನತ್ತ ಕಣ್ಣು ನೆಟ್ಟ ಸ್ಲೀವ್ ಲೆಸ್ ಚೂಡಿಯಲ್ಲಿ ನಿನ್ನ ಹುಡುಕಿ ಹುಡುಕಿ ಸೋಲುತ್ತೇನೆ.ನಿನ್ನ ಚಿತ್ರವನ್ನು ನನ್ನ ಕಲ್ಪನೆಯ ಕ್ಯಾನವಾಸ್ಸಿನಲ್ಲಿ ಹಿಡಿದಿಡಲೂ ಆಗದೇ, ಸುಮ್ಮನಿರಲೂ ಆಗದೆ ಒಂದು ವಿಚಿತ್ರ ಆತಂಕದಲ್ಲಿ ಮತ್ತು ನಿರಾಶೆಯಲ್ಲಿ ದಿನ ನೂಕುತ್ತಿದ್ದೇನೆ.ಸಾವಿರ ಪಾತ್ರಗಳ ಅಚ್ಚಿನಿಂದ ನಿನ್ನ ಅದ್ದಿ ತೆಗೆದರೂ, ನಿನ್ನಲ್ಲಿ ಇನ್ನೂ ಎನೋ ಕೊರತೆ ಅನ್ನಿಸಿ ’ ಪರಿಪೂರ್ಣ’ ಅನ್ನಿವುಸುವುದೇ ಇಲ್ಲಾ, ಎಂಥದೋ ಅತೃಪ್ತಿ ಕಾಡಿ ಮತ್ತೆ ಹೊಸ ಪಾತ್ರ್ದದ ಅನ್ವೇಷಣೆಗೆ ನನ್ನ ನಾ ದಬ್ಬಿಕೊಳ್ಳುತ್ತೇನೆ.

ಪ್ರತಿಬಾರಿ ಕನ್ನಡಿ ಮೂಂದೆ ನಿಂತಾಗಲೂ,ಹೊಸ ಬಟ್ಟೆ ಆರಿಸುವಾಗಲೂ,ಗಡ್ಡ ಕೆರೆದು ಕೆನ್ನೆ ನುಣುಪು ಮಾಡಿಕೊಳ್ಳುವಗಲೂ, ಹೊಸ ಬರಹದ ಖುಷಿಯಲ್ಲೂ,ಎರಡೇ ಎರಡು ದಿನ ಕಸರತ್ತು ಮಾಡಿ ’ಅಬ್ಬ! ಸ್ವಲ್ಪವಾದರೂ ತೆಳ್ಳಗಾದೆ’ ಎಂಬ ಹುಸಿ ಭ್ರಮೆಯಲ್ಲೂ ಸಹ ನಾನು ಇಲ್ಲದ ನಿನ್ನನ್ನು ಮೆಚ್ಚಿಸಲು ಅರಿಯದೆಯೇ ಹೆಣಗಾಡುತ್ತೆನೆ.ನನ್ನ ಭಾವನೆಗಳ ಅಸ್ತಿತ್ವವೇ ನಿನ್ನನ್ನು ಕಲ್ಪಿಸಿಕೊಳ್ಳುವದರಲ್ಲಿ ಇದೆ ಎಂಬಂತೆ ಹುಚ್ಚು ಹುಚ್ಹಾಗಿ ವರ್ತಿಸುತ್ತೆನೆ. ನಿನ್ನ ’ಇರುವು’ ಸುಳ್ಳೂ ನಿಜವೋ ಗೊತ್ತಿಲ್ಲಾ, ನಿನ್ನ ಇರುವಿಕೆಯ ನಂಬಿಕೆಯಲ್ಲಿ ಬದುಕುತ್ತಿರುವ ಮತ್ತು ಸಾದ್ಯಂತ ಸುಳ್ಳೇ ಪುಳಕಗೊಳ್ಳುವ ನನ್ನ ಭಾವುಕ ಜಗತ್ತಿನ ಅಸ್ತಿತ್ವವಂತೂ ನಿತ್ಯ ನಿರಂತರ ಸತ್ಯ. ಅಷ್ಟಕ್ಕೂ ನೀನು ನಿಜವಾಗಿರಬೇಕೆಂಬ ಅನಿವಾರ್ಯತೆಯಾದರೂ ಏನು? ಕಾಣದ ದೇವರನ್ನು "ಸರ್ವವ್ಯಾಪಿ" ಎಂದು ಆರೋಪಿಸಿ ಧನ್ಯರಾಗುವ ಜಗತ್ತಿನಲ್ಲಿ, ನೀನು ಕಲ್ಪನೆಯೋ, ವಾಸ್ತವವೋ ಎಂದು ತಲೇ ಕೆಡಿಸಿಕೊಳ್ಲುವ ಜರೂರತ್ತಾದರೂ ಏನಿದೆ?

ಈ ಹುಡುಕಾಟದಲ್ಲೇ ಒಂದು ಸುಖವಿದೆ, ನಿರಂತರ ತಪನೆಯಿದೆ,ಕಾಣದ ಅದ್ರೆ ಅನುಭವಿಸಲುಬಹುದಾದ ಒಂದು ತೀವ್ರ ಉತ್ಕಟತೆಯಿದೆ, ನಿನ್ನ ಬಗೆಗಿನ ತೀರದ ಆರಾಧನಾ ಭಾವವಿದೆ, ತೀರದ ಮೋಹವೆದೆ,ಧುಮ್ಮಿಕ್ಕುವ ಭಾವನಾ ಸೆಳೆತವಿದೆ,ಸಿಹಿಯಾದ ನೋವಿದೆ ಮತ್ತೂ ಕಳೆದುಕ್ಕೊಳ್ಳದ ನಿನ್ನ ಇರುವಿಕೆಗಿನ ತುಂಬು ಭರವಸೆಯಿದೆ. ಈ ಜೀವಕ್ಕೆ ಇಷ್ಟು ಸಾಕಲ್ಲವೇ? ಯಾರಿಗ್ಗೊತ್ತು ಬೆಳಗಿನ ಕನಸುಗಳು ನಿಜವಾಗುತ್ತವೆಯಂತೆ! ಹಾಗೆ ನೀನು ಚಂದಮಾಮದ ಕಥೆಗಳಲ್ಲಿ ಬರುವ ಏಳು ಮಲ್ಲಿಗೆ ತೂಕದ ರಾಜಕುಮಾರಿಯರಂತೆ ನನ್ನೆಡೆ ನೀನು ಸಾಗಿ ಬರಬಾರದೇಕೆ?

ಅಂತಹ ಸಿಹಿಸುಳ್ಳಿನ ಚಿಪ್ಪಿನಲ್ಲಿರುವ,
ಚಿರವಿರಹಿ

8 comments:

Sangamesh said...

ನಿನ್ನ ಈ ಭಾವನೆಗಳನ್ನ ಮನನ ಮಾಡ್ಕೊಳ್ತಿರಬೇಕಾದ್ರೆ "ಹುಚ್ಚು ಮನಸ್ಸಿನ ಹತ್ತು ಮುಖಗಳು" ಜ್ಞಾಪಕ ಬಂತು.
ಮುಂಜಾನೆಯ ಸುಂದರ ಕನಸಿನ ಜೊತೆಗೆ ಎದ್ದು, ದಿನದ ನೆನಪುಗಳ ಮೆಲುಕು ಹಾಕುತ್ತಾ ಮಲಗುವ ರಾತ್ರಿಯವರೆಗೂ ಅವಳ ಹೆಜ್ಜೆ ಗುರುತುಗಳ ಹುಡುಕಾಟದಲ್ಲಿ ತೊಡಗಿರುವ ಭಾವನೆಗಳ ಸೊಗಡು ತುಂಬಾ ಚೆನ್ನಾಗಿದೆ.ಕೊನೆಯ paragraph ನ ಸಾಲುಗಳು ತುಂಬಾ ಇಷ್ಟ ಆದ್ವು
ಪ್ರೇಮಿಗಳ ದಿನ ಹತ್ರ ಬರ್ತಿರ್ಬೇಕಾದ್ರೆ ಇಂತಹ ಭಾವನೆಗಳ ಮಹಾಪೂರವೆ ಹರಿದು ಬರಲಿ ಅಂತ ಆಶಿಸ್ತಿನಿ.

ARUN MANIPAL said...
This comment has been removed by the author.
ARUN MANIPAL said...

ಚೆನ್ನಾಗಿದೆ ಬರಹ ತುಂಬಾ ಇಷ್ಟವಾಯಿತು;-)

ಸಂತೋಷಕುಮಾರ said...

ಸಂಗಮೇಶ್
ಅಪರೂಪದ ಅತಿಥಿ ಆಗಿಬಿಟ್ಟಿದಿಯ ನೋಡಪಾ.. ಪ್ರೇಮಿಗಳ ದಿನಕ್ಕೂ ಇದಕ್ಕೂ ಯಾವುದೆ ಸಂಭಂದ ಇಲ್ಲಾ ಮಾರಾಯ, ಇದು ನಿತ್ಯ ನಿರಂತರ ಗೋಳು.. :)

ಅರುಣ್
ಧನ್ಯವಾದಗಳು..

Unknown said...

good writing,i like

Anonymous said...

ಸಂತೋಷ್,
ಬ್ಲಾಗನ್ನ ಅಪ್ಡೇಟು ಮಾಡುತ್ತ ಇಲ್ಲವಲ್ಲ ಅಂತ ಕೆಲವು ಸಾರಿ ನೋಡಿ ಸುಮ್ಮನಾಗಿಬಿಟ್ಟಿದ್ದೆ. ಸ್ವಲ್ಪ ದಿನ ತಡವಾಗಾದರು ಬರೆದಿದೀರಿ. ಒಳ್ಳೇದು. ಹೆಚ್ಚು ಬರೆಯಿರಿ. ಕಾಯ್ತ ಇರ್ತೇವೆ.
-ಟೀನಾ.

Ashwini Kumar Bhat said...

BhavanegaLa lokada atithigaLige shabdagaLa oLLeya roopa koTTiddiya guruve... Ishta aytu baraha... BhavanegaLa sookshmatege bhasheya lepa hachcho kale ellarigoo karagatavagodilla...
Bareyuttiru....

- Hakki :)

ಸಂತೋಷಕುಮಾರ said...

@ಸಿಂಚನಾ,
ಧನ್ಯವಾದಗಳು.

@ಟೀನಾರವರೆ,
ಬಿಡುವು ಸಿಕ್ಕಿರಲಿಲ್ಲಾ, ಸಿಕ್ಕರೂ ಬರೆಯುವ ಮೂಡಿರಲಿಲ್ಲಾ. ಸಾದ್ಯವಾದಷ್ಟು ಬರೆಯಲು ಯತ್ನಿಸುತ್ತೇನೆ.ನೀವು ಆಗಾಗ ಬಂದು ಹೋಗೆ ಮಾಡುತ್ತೀರಿ..

@ಹಕ್ಕಿ
ಎಲ್ಲಾ ನಿಮ್ಮ ಆಶಿರ್ವಾದ ಗುರುವೇ.ಬಂದು ಬೆನ್ನು ತಟ್ಟಿದ್ದಕ್ಕೆ ತುಂಬಾ ಥಾಂಕ್ಸ.