ಸುಮ್ನೆ ದೇಶಾವರಿ ಮಾತುಕಥೆ..
ನಿನ್ನೆ ತಮ್ಮನಿಗೆ ಫೋನನಲ್ಲಿ ಹೇಳುತ್ತಿದ್ದೆ " ಲೇ ಇಲ್ಲಿ ಭಾರೀ ಮಳಿ ಹತ್ತೈತಿ, ಊರ ಕಡೆ ಎನ್ ಸುದ್ದಿ?" ಅಂತಾ.ಮಳೆ ಅಂದರೆ ಸಾಕು ಅವನ ಮೂಡೇ ಆಫ್ ಆಗಿ ಬಿಡುತ್ತೆ ಪಾಪ " ಎಲಾ ಇವನ ಇಲ್ಲಿ ಮೋಡ ಬಿತ್ತಿದ್ರೆ ಅಲ್ಲಿ ಮಳೆ ಆಗೈತಿ ನೋಡು, ಈ ಎಚ್,ಕೆ ಕೈ ಹಾಕಿದಾಗಲೇ ಎನೋ ಕಿತಾಪತಿ ಮಾಡ್ತಾನೆ ಅಂತ ಡೌಟಿತ್ತು " ಅಂತಾ ಬೆಂಗಳೂರಿನ ಮಳೆಗೂ, ಎಚ್,ಕೆ ಪಾಟೀಲರಿಗೂ ಲಿಂಕು ಸೇರಿಸಿ ಮಳೆಯ ಹೊಸ ಫಾರ್ಮುಲಾ ಹುಟ್ಟಿಸಿದ. ಮುಂದುವರೆಸಿ " ಯಣ್ಣಾ! ಹೆಸರು ಆಗ್ಲೇ ಹಳ್ಳ ಹಿಡಿದಾವು, ಜುಬ್ರ ಮಳಿನರ ಆದ್ರ ಶೇಂಗಾ ಜೀವಾ ಹಿಡಿತಾವ.ಒಂದು ದೊಡ್ದ ಮಳಿ ಅಗೋವರೆಗೂ ಉಳ್ಳಾಗಡ್ದಿ ಬಿತ್ತು ಮಾತ ಇಲ್ಲಾ! ಮಳಿ ಗೊತ್ತಿನದಲ್ಲಾ ಬ್ಯಾಡ ಅಂದ್ರೂ ನೇಗಿಲಾ ಹೊಡಿಸಿದಿ , ನೋಡೀಗ ಹೊಲದಾನ ಹೆಂಟಿ ಸಹ ಕರಗಿಲ್ಲಾ; ಅದರಾಗ ಹೆಂಗ ಬಿತ್ತಬೇಕು?. ತಿಳಿಲಿಲ್ಲಾ ಅಂದ್ರಾ ಮುಕಳಿ ಮುಚ್ಚಕೊಂಡು ಸುಮ್ನರಿಬೇಕು, ಈಗ ನೋಡು ಎಲ್ಲಾ ಅಡಿಪಾಲು ಬಾಳೆ ಆತು" ಅಂತಾ ಶುದ್ಧ ಗಾವಟಿ ಭಾಷೆಯಲ್ಲಿ ಮಳೆಯನ್ನೂ, ನನ್ನನ್ನೂ ಚೆನ್ನಾಗಿ ಉಗಿದು ಫೋನಿಟ್ಟ.
ಫೋನಿಟ್ಟ ಕೂಡಲೆ ಕಳೆದ ಮೂರು ವರುಶಗಳಿಂದ ’ಒಂದಾದರೂ ಗಂಡು ರಾಶಿ’ ಮಾಡಲೇಬೇಕೆಂದು ಅವ ನಡೆಸಿದ ಹತಾಶ ಯತ್ನಗಳನ್ನೆಲ್ಲಾ ನೆನೆದು ಪಾಪ ಎನಿಸಿತು. ಇದು ಕೇವಲ ನನ್ನ ತಮ್ಮನೊಬ್ಬನ ಹತಾಶೆಯ ನುಡಿಗಳಲ್ಲಾ, ಉತ್ತರ ಕರ್ನಾಟಕದಲ್ಲಿ ಒಣ ಬೇಸಾಯ ನಂಬಿ ಜೀವ ತೇಯುತ್ತಿರುವ ಎಲ್ಲಾ ರೈತರ ದಿನನಿತ್ಯದ ಅಳಲು. ಅವರಿಗೆ ಬರೀ ಪ್ರಕೃತಿಯಲ್ಲಾ, ಈ ವ್ಯವಸ್ಥೆಯೂ ಮೋಸ ಮಾಡುತ್ತಿದೆ. ನಿಮಗೆ ಗೊತ್ತಿರಲಿಕ್ಕಿಲ್ಲ ಪ್ರತಿಯೊಂದು ರೈತ ಯೋಜನೆಗಳು ನೀರಾವರಿ ರೈತರನ್ನು ಗಮನದಲ್ಲಿಟ್ಟುಕೊಂಡೇ ಮಾಡಲಾಗುತ್ತೆ. ಉದಾಹರಣೆಗೆ ರೈತರ ಪಂಪುಗಳಿಗೆ ಉಚಿತ ವಿದ್ಯುತ ನೀಡುವ ಯೋಜನೆಯನ್ನೇ ತೆಗೆದುಕೊಳ್ಳಿ ನಮ್ಮ್ಲಲ್ಲಿ ಎಷ್ಟು ಜನರಿಗೆ ಪಂಪುಸೆಟ್ಟುಗಳಿವೆ? ನಮ್ಮುರ ಕಡೆಗಳಲ್ಲಿ ಸುಮಾರು ೪೦೦ ಅಡಿ ಕೊರೆಸಿದರೂ ನೀರು ಬರುವದಿಲ್ಲಾ, ಅಂತದ್ರಲ್ಲಿ ಎಲ್ಲಿಂದ ಪಂಪುಸೆಟ್ಟು ಬರಬೇಕು?. ನೀರಾವರಿಗೆ ಶೇ೧೧ ಬಜೆಟ್ಟಿನಲ್ಲಿ ಅನುದಾನ ನೀಡಲಾಗುತ್ತೆ. ನಮ್ಮಲ್ಲಿ ಎಲ್ಲಿಂದ ಬರಬೇಕು ನದಿ,ನೀರಾವರಿ? ಅದೇ ಖಾತರಿಯಿಲ್ಲದ ಮಳೆಯೊಂದಿಗೆ ವರ್ಶಪೂರ್ತಿ ಗುದ್ದಾಡಬೇಕು. ಒಮ್ಮೆ ಮಳೆ ಬಾರದೆ ಕಾಡಿದರೆ( ೨೦೦೬) ಮಗದೊಮ್ಮೆ ಅಡ್ಡ ಮಳೆ ಬಿದ್ದು (೨೦೦೭)ಬೆಳೆದ ಬೆಳೆಗಳನೆಲ್ಲಾ ಅಡಿಪಾಲು ಮಾಡಿಬಿಡ್ದುತ್ತವೆ. ಎಲ್ಲಾ ಮೀರಿಯೂ ಉತ್ತಮ ಬೆಳೆ ಬಂದರೆ ನಮ್ಮ ತಾಯಾಣೆಗೂ ಆ ವರ್ಷ ಸರಿಯಾದ ಬೆಲೆ ಇರುವದೇ ಇಲ್ಲಾ. ಯಾವ ಸೌಬಾಗ್ಯಕ್ಕೆ ನಮ್ಮ ರೈತರು ಇನ್ನೂ ಕೃಷಿಯನ್ನೇ ನೆಚ್ಚಬೇಕು?. ನಮಗಾದರೋ ಕೃಷಿ ಆದಾಯದ ಒಂದು ಮೂಲ, ಆದರೆ ಅದನ್ನೆ ನಂಬಿ ಬದುಕುತ್ತಿರುವವರ ಪಾಡೇನು? ಕಳೆದ ಮೂರ್ನಾಕು ವರ್ಷಗಳಿಂದ ನಮ್ಮ ಊರಿನಲ್ಲಿ ಸರಿಯಾದ ಫಸಲೇ ಇಲ್ಲಾ. ಹೀಗಾದರೆ ದುಬಾರಿಯ ದಿನಗಳಲ್ಲಿ ಅವರು ಬದುಕುವದಾದರೂ ಹೇಗೆ?. ಕೆಲ ವರ್ಷಗಳಿಂದ ’ಕೃಷಿ ವಿಮೆ’ ಅನ್ನುವ ಭಾರೀ ಪ್ರಚಾರದ ಯೋಜನೆಯೊಂದು ಜಾರಿಗೆ ಬಂತು.ನನ್ನ ತಮ್ಮನೂ ನಾಲ್ಕಾರು ಕಚೇರಿ ಓಡಾಡಿ, ಎಲ್ಲಾ ಉತಾರ,ದಾಖಲೆ ತಂದು ವಿಮೆ ಮಾಡಿಸಿದ್ದ. ಯಥಾ ಪ್ರಕಾರ ಆ ವರ್ಷವೂ ಮಳೆ ಬಾರದೆ ಹೋಯ್ತು. ನಂತರ ಕೆಲ ವರ್ಷಗಳ ನಂತರ ವಿಮಾದಾರರ ಅರ್ಹ ಫಲಾನುಬವಿಗಳ ಪಟ್ಟಿ ನೋಡಿದರೆ, ನಮ್ಮ ಹೆಸರೇ ಇಲ್ಲಾ. ನಮ್ಮ ಪಕ್ಕದ ಜಮೀನುಗಳಿಗೆ ಹಣ ಬಂದಿದ್ದರೆ ನಮ್ಮ ಹೆಸರೇ ಇಲ್ಲಾ. ಇಡಿ ಊರಿನಲ್ಲಿ ಬರೀ ನಮ್ಮ ಹೊಲಕ್ಕಷ್ಟೆ ಮಳೆ ಬಂದು, ನಮ್ಮ ಹೊಲದಲ್ಲಷ್ಟೆ ಬೆಳೆ ಬೆಳೆಯಲು ಸಾದ್ಯವಾ?. ನನಗಂತೂ ಸಿಕ್ಕಾಪಟ್ತೆ ರೇಗಿ ಹೋಗಿತ್ತು. ತಮ್ಮನಂತೂ ಪಂಚಾಯಿತಿಗೆ ಹೋಗಿ " ಯಾವಾ ಸೂ..ಮಗ ನಿಮಗ ಸಾಲಿ ಕಲಿಸಿದ್ದು? ಹೊಟ್ಟಿಗೆ ಅನ್ನ ತಿಂತಿರೋ ಬ್ಯಾರೆ ಎನರ ತೀಂತಿರೋ, ಬರ ಅಂತ ಬಂದ್ರ ಎಲ್ಲಾರ ಹೊಲಕ್ಕು ಬರುತ್ತೆ, ಒಬ್ಬರ ಹೊಲಕ್ಕೆ ಮಳಿ ಆಗಿ, ಇನ್ನೋಬ್ಬರ ಹೊಲಕ್ಕೆ ಆಗದೇ ಇರುತ್ತನ್ರಲೆ" ಅಂತಾ ಒದರಾಡಿ ಅವರ ಎದುರಿಗೆ ತಹಶೀಲ್ದಾರರಿಗೆ ಮನವಿ ಕೊಟ್ಟು ಬಂದಿದ್ದ. ನಂತರ ಗ್ರಾಹಕ ನ್ಯಾಯಲಯಕ್ಕೆ ಕೇಸು ಹಾಕಿದೆವು. ಕೊನೆಗೂ ಕೇಸು ನಮ್ಮಂತೆ ಆಯಿತಾದರೂ ಲಾಯರಿಗೆ ಶೇ೩೫ ಫೀ ಕೊಟ್ಟು ಉಳಿದದ್ದನ್ನು ಪಾಲಿಗೆ ಬಂದದ್ದು ಪಂಚಾಮೃತ ಅಂತ ಸುಮ್ಮನಾದೆವು. ನಮ್ಮದಲ್ಲದ ತಪ್ಪಿಗೆ ನಾವೇಕೆ ಪರದಾಡಬೇಕೊ ನಾನರಿಯೆ. ನಮ್ಮಲ್ಲಿ ಅನೇಕ ರೈತರ ಜಮೀನುಗಳ ಅವರ ಹೆಸರನಲ್ಲಿ ಇಲ್ಲವೇ ಇಲ್ಲಾ! ಪರಾಂಪರಾಗತವಾಗಿ ಅವನ್ನೆ ಉತ್ತುತ್ತಾ ಬಂದಿದ್ದಾವೆ. ಹಿಂತವರಿಗೆ ಯಾವ ಸರಕಾರಿ ಯೋಜನೆಗಳೂ ತಲುಪುವುದೇ ಇಲ್ಲಾ. ಆದರೆ ಅವರಿಗೆ ಅವುಗಳ ಪರಿವೇಯೇ ಇಲ್ಲಾ.
ಸುಮಾರು ದಿನಗಳ ಹಿಂದೆ ಬ್ಲಾಗೋಂದರಲ್ಲಿ(ಸುಶ್ರುತನ ಬ್ಲಾಗ್ ಅನಿಸುತ್ತೆ, ಸರಿಯಾಗಿ ನೆನಪಿಲ್ಲಾ)ಯಾವೂದೋ ಚರ್ಚೆಯೋಂದರಲ್ಲಿ , ಒಬ್ಬ ಮಹಾಶಯ ಪ್ರತಿಕ್ರಿಯಿಸುತ್ತಾ ನಮ್ಮ ರೈತರಲ್ಲಿ ಮಾರ್ಕೆಟಿಂಗ ತಂತ್ರಗಳೇ ಇಲ್ಲಾ.ಇಳುವರಿ,ಪೂರೈಕೆ,ಬೇಡಿಕೆ ಇತ್ಯಾದಿಗಳನ್ನು ಪ್ರಸ್ತಾಪಿಸಿ ನಮ್ಮ ರೈತರು ಪೆದ್ದರು ಅಂತಾ ಶರಾ ಬರೆದು ಬಿಟ್ಟಿದ್ದ. ನನ್ನ ಪ್ರಕಾರ ಯಾವೋಬ್ಬ ರೈತನೂ ಮಾರ್ಕೇಟಿಂಗನಲ್ಲಿ MBA ಮಾಡುವುದಿಲ್ಲಾ ಮತ್ತು ಯಾವುದೋ ವಿಶ್ವ ವಿದ್ಯಾಲಯದ ಪಧವೀದರರಂತೂ ಅಲ್ಲವೇ ಅಲ್ಲಾ. ಅಥವಾ ಕೃಷಿ ಪದವಿ ಮಾಡಿದವರು ಹೊಲಕ್ಕೆ ಬಂದು ಊಳುವುದೂ ಇಲ್ಲಾ. ಯಾವುದೇ ಅಡ್ದಕಸುಬಿ ಕಂಪನಿಗೆ ಮನೆಹಾಳು ತಳಿ ಕಂಡು ಹಿಡಿದು ಕೊಟ್ಟು ದುಡ್ದು ಮಾಡುವುದರಲ್ಲೆ ಅವರು ಬ್ಯುಸಿ. ಇನ್ನು ಕೆಲವರು ಕೃಷಿ ಇಲಾಖೆ ಸೇರಿ ದೊಡ್ದ ದೊಡ್ದ ಹೆಗ್ಗಣುಗಳಾಗಿಬಿಡುತ್ತಾರೆ. ಅಂತದುರಲ್ಲಿ ನಮ್ಮ ರೈತರಿಗೆ ಇಳುವರಿ,ಪೂರೈಕೆ,ಬೇಡಿಕೆ ಅಂದರೆ ಎಲ್ಲಿಂದಾ ತಿಳಿಯಬೇಕು?. ಬೇಕಾದರೇ ಕೇಳಿ ನೋಡಿ ಅವರು ಹೇಳುವುದೇ ಇಷ್ಟು "ಯಪ್ಪಾ ಭೂಮಿ ತಾಯಿ ಕಣ್ಣ್ ತೆಗೆದ್ರ ಎನ್ ಕಡಿಮೆ ಮಾರಯಾ.ಆಕಿ ಮನಸ್ಸು ಮಾಡಬೇಕಷ್ಟ!" ಅಂತಾ ನಿರಾತಂಕವಾಗಿ ತಮ್ಮೆಲ್ಲಾ ಕಷ್ಟಗಳನ್ನು ಭೂಮಿ ತಾಯಿ ಮೇಲೆ ಹಾಕಿ ನಿರಮ್ಮಳವಾಗಿರುತ್ತಾರೆ.
ಒಂದೇ ಒಂದು ಹಂಗಾಮಿನ ಬೆಳೆ ಬಾರದೇ ಇದ್ದರೂ ಬಾಯಿ ಬಡಿದುಕೂಂಡು ರಾಜಕೀಯ ಮಾಡಿಬಿಡುವ ಹಳೇ ಮೈಸುರಿನ ಕಡೆಯ " ಶ್ರೀಮಂತ" ರೈತರೆಲ್ಲಿ? ಮತ್ತು ಮಳೆ ಆಗದೆ ಹೋದರೂ ಬದುಕು ಕಟ್ಟಿಕೊಳ್ಳಲು ಹುಟ್ಟಿದ ಊರು,ಸಾಕಿದ ದನಗಳನ್ನು ಸ್ತಿತಿವಂತರ ಮನೆಗೆ ಹೊಡೆದು ಬೆಂಗಳುರು,ಗೋವಾಕ್ಕೆ ಗುಳೆ ಹೋಗುವ ಬಾಯಿ ಸತ್ತ ನನ್ನ ರೈತರೆಲ್ಲಿ?. ಆದರೂ ರೈತರು ಅಂದ ಕೂಡಲೇ ನಮ್ಮ ರಾಜಕಾರಣೆಗಳಿಗೆ ನೆನಪಾಗುವುದು ಕಾವೇರಿ,ಕಬ್ಬು,ನೀರಾವರಿ ಮತ್ತು ಅದರ ಸುತ್ತಲಿನ ರಾಜಕೀಯ. ನನ್ನ ಜನ ಸಾಯುತ್ತಲೇ ಇರುತ್ತಾರೆ, ಇವರು ಅವರ ಸಾವಿನ ಕಾರಣಗಳನ್ನು ಪಟ್ಟಿ ಮಾಡುತ್ತಲೇ ಇರುತ್ತಾರೆ. ಹಾಗೆ ನೋಡಿದ್ರೆ ಇಷ್ಟೆಲ್ಲಾ ಕಷ್ಟಗಳ ನಡುವೆ ಅವರಿಗೆ ಬದುಕಲು ಕಾರಣಗಳನ್ನು ಹುಡುಕಬೇಕು ಅಲ್ವಾ?