ಇದು ಕಥೆಯಲ್ಲಾ !!!
"ನಾನು ಸೈನ್ಸ ಮಾಡಿ, ಈ ಸಾಫ್ಟವೇರಿಗೆ ಬಂದಿದ್ದೇ ತಪ್ಪಾಯ್ತು" ಹಾಗಂತ ನಂಗೆ ಅನಿಸಲು ಇದ್ದ ಕಾರಣಗಳು ತೀರಾ ಗಂಭೀರವಾದವುಗಳೇನಲ್ಲಾ;ಮೊದಲನೆಯದಾಗಿ ನಂಗೆ ಚನ್ನೈಯಲ್ಲಿ ಬೇರೆ ಯಾರು ಮಿತ್ರರೇ ಇರಲಿಲ್ಲ.ಎರಡನೆಯದಾಗಿ ಟಿ,ವಿಯಲ್ಲಿ ಯಾವುದೇ ಮಸಾಲಾ ಕಾರ್ಯಕ್ರಮಗಳಿರಲಿಲ್ಲಾ ಮತ್ತು ನಾನು ತಂದಿದ್ದ ಎಲ್ಲಾ ಪುಸ್ತಕಗಳನ್ನು ಓದಿ ಮುಗಿಸಿ ಆಗಿತ್ತು(ಇನ್ನುಳಿದ ಕಾರಣಗಳನ್ನು ಸೆನ್ಸಾರ್ ಮಾಡಲಾಗಿದೆ :)). ಜೊತೆಗೆ ಹಿಂದಿನ ದಿನ ನನ್ನ ಲೀಡ್ ಜೊತೆ ನಡೆದ ಜಗಳವೂ ನನ್ನ ಈ ಏಕಾಏಕಿ ನಿರ್ಧಾರದ ಹಿಂದಿನ ಪ್ರೇರಣೆಯೂ ಆಗಿರಬಹುದು.ದುತ್ತನೇ ಆ ಕ್ಷಣದಲ್ಲಿ ಹೇಳದೇ ಕೇಳದೇ (ಹೇಳಿದರೂ ಸಹ ನಂಗೆ ಆಗ ಏನು ಮಣ್ಣು ತಿಳಿಯುತ್ತಿರಲಿಲ್ಲ ಬಿಡಿ) ಅವರಿವರ ವಶೀಲಿ ಹಿಡಿದು ಧಾರವಾಡದ ಜೆ ಎಸ್ ಎಸ್ ಸೈನ್ಸ ಕಾಲೇಜಿಗೆ ನನ್ನನ್ನು ಎತ್ತಿ ಹಾಕಿ ಬಂದ ಅಪ್ಪನ ನೆನಪಾಯ್ತು, ನನ್ನ ಈಗಿನ ಎಲ್ಲಾ ಕಷ್ಟಗಳಿಗೂ ಅಪ್ಪನೇ ಕಾರಣ ಎಂದೇನಿಸಿ ಅಪ್ಪನ ಮೇಲೆ ಭಯಂಕರ ಕೋಪ ಉಕ್ಕಿ ಬಂತು, ಜೊತೆಗೆ ಚೆಂದಾಗಿ ಪದ ಹೇಳುತ್ತಾ ಕನ್ನಡ ಕಲಿಸುತ್ತಿದ್ದ ಮಮತಾ ಮೇಡಂರ ನೆನಪು ಸಹ ಸೇರಿ " ಅಪ್ಪ ನನ್ನ ಜೀವನವನ್ನು ಹಾಳು ಮಾಡಿಬಿಟ್ಟ" ಎಂದು ನಾನು ಹಾಳಾದ ಕಾರಣವನ್ನು ಅಪ್ಪನ ಮೇಲೆ ಸಲೀಸಾಗಿ ಎತ್ತಿ ಹಾಕಿದ ಮೇಲೆ ಮನಸ್ಸಿಗೆ ತುಸು ನಿರಾಳವಾದಂತಾಯ್ತು.
ಕೆಟಲಿನಲ್ಲಿ ಮಾಡಿದ ಚಹಾ ಚೆನ್ನಾಗಿರುವುದಿಲ್ಲಾ ಅಂತ ತಿಳಿದಿದ್ದರೂ ಕೆಳಗೆ ಹೋಗಿ ಚಹಾ ಕುಡಿಯಲಾರದ ನನ್ನ ದರಿದ್ರತನಕ್ಕೆ ಎರಡೆರಡು ಎಕ್ಸಟ್ರಾ ಟೀ ಬ್ಯಾಗ ಅದ್ದಿ ಅದೇ ’ಕಡಕ್ ಚಾ’ ಎಂದುಕೊಂಡು ಚಹ ಗುಟುಕರಿಸತೊಡಗಿದೆ, ಯಥಾಪ್ರಕಾರ ಚಹಾ ಒಗರು ಒಗರಾಗಿ ರುಚಿ ಎನಿಸಿತು, ಆ ಕ್ಷಣದಲ್ಲಿ "ದೇವರು ಚಹಾದಲ್ಲೂ ಸಹ ಇಷ್ಟೊಂದು ಸುಖವಿಟ್ಟಿದ್ದಾನೆ" ಎಂಬ ಹೊಸ ಸತ್ಯ ಹೊಳೆದಂಗಾಗಿ ಎನೋ ಹೊಸದನ್ನು ಕಂಡು ಹಿಡಿದ ಧನ್ಯತೆ ಮೂಡಿ ಬಂತು.ಟಿ.ವಿಯಲ್ಲಿ ತಮಿಳಿನ ಧನುಷ್ , ನಯನತಾರಾಳನ್ನು ನಾನಾ ನಮೂನೆಯಲ್ಲಿ ಅಪ್ಪಿ ಕೊಂಡು, ತಬ್ಬಿಕೊಂಡು ಡ್ಯುಯೇಟ್ ಹಾಡುತ್ತಿದ್ದ, ಆ ಘನಘೋರ ದೃಶ್ಯ ಕಂಡು ನನ್ನ ಎಳೆಮನಸ್ಸು ಘಾಸಿಗೊಂಡು " ಎಂಥಾ ಸೂ... ಮಕ್ಳು ಎಂಥೆಂತಾ ಮಾಲ್ ಜೊತೆ ಡ್ಯಾನ್ಸ್ ಹೊಡಿತಾರಾ, ನಮ್ ಜೀವನ ಮಾತ್ರ ಬರೀ ನೋಡುದ ಆತು" ಎಂದೆನಿಸಿ ಭಲೆ ಸಂಕಟವಾಯ್ತು. ಜೊತೆಗೆ ನನ್ನ ಹಾಳಾದ ನನ್ನ ಟೀಮಿನಲ್ಲೂ ಯಾವುದೇ ಸುಂದರ ಫಿಗರುಗಳಿಲ್ಲಾ ಮತ್ತು ಇದ್ದ ಎಕೈಕ ನಾರ್ಥಿ ಫಿಗರಿಗೆ ’ಬಾಯ್ ಫ್ರೆಂಡ’ ಇದ್ದಾನೆ ಎಂದು ನೆನಪಾಗಿ ಮನಸ್ಸು ಮಮ್ಮಲ ಮರುಗಿತು. ಬಾಯ್ ಫ್ರೆಂಡ್ ಇದ್ದರೂ ಅವಳು ಆ ಪಾಟಿ ಎಕ್ಸಪೋಸ್ ಮಾಡ್ತಾಳಲ್ಲಾ ಆ ನನ್ನ ಮಗನ ’ಅದು’ ಉರಿಯುವದಿಲ್ಲವಾ? ಎಂದೆನಿಸಿ ಈ ಬಾರಿ ನನ್ನ ಮಗ ಚೆನ್ನಾಗಿ ಕುಡಿದಾಗ ಅವನ ಬಾಯಿ ಬಿಡಿಸಬೇಕೆಂದು ಸ್ಕೆಚು ಹಾಕಿದೆ.ಕೈಲಿರುವ ಚಹಾ ಬರಿದಾಗತೊಡಗಿತ್ತು ಮತ್ತು " ಚಹ ಜಾಸ್ತಿ ಕುಡಿದರೆ ಇನ್ನೂ ಕರ್ರಗಾಗುತ್ತಾರೆ" ಎಂಬ ನಮ್ಮೂರ ಹುಡುಗರ "ಬ್ಯೂಟಿ ಟಿಪ್" ನೆನಪಾಗಿ, ನಾನೂ ಕರ್ರಗಾಗುತ್ತಿದ್ದಂತೇ ಅನಿಸಿ ಸಂಜೆಯೇ ಬೇರೆ ಯಾವುದೋ " ಮೆನ್ಸ ಕ್ರೀಮು" ಕೊಳ್ಳುವುದೆಂದು ನಿರ್ಧರಿಸಿದೆ.
ರೂಮಿನಲ್ಲಿ ಥಂಡಿ ಜಾಸ್ತಿ ಅನಿಸಿ ಎ.ಸಿ ಆಫ್ ಮಾಡಿದ ಸ್ವಲ್ಪ ಹೊತ್ತಿನಲ್ಲೆ ಮತ್ತೆ ಸೆಕೆ ಅನಿಸತೊಡಗಿ ಅಂಗಿ, ಬನಿಯನ್ನು ಕಳಚಬೇಕೆನಿಸಿದ ಕೂಡಲೇ ಕಳಚಿ ಅವೆರಡನ್ನೂ ದಿಕ್ಕಿಗೊಂದು ತೂರಾಡಿ ಸಿ.ಅಶ್ವತರ ದ್ವನಿ ಅನುಕರಿಸಿ " ಮುಕ್ತ , ಮುಕ್ತ , ಮುಕ್ತ ಆಆಆಆಆಆಅ" ಎಂದು ಅರಚಿ ಮುಕ್ತತೆ ಅನುಭವಿಸಿದೆ. ಇನ್ನೂ ಮಡಚದೇ ಇದ್ದ ಹಾಸಿಗೆ,ರಗ್ಗುಗಳು,ಖಾಲಿ ಬಿಸ್ಲೇರಿ ಬಾಟಲ್ಲುಗಳು, ನನ್ನ ಇತ್ತಿಚಿನ ಕಥೆ ಬರೆವ ಹುಚ್ಚಿನ ಫಲವಾಗಿ ಪೂರ್ಣವಾಗದೇ ಅರ್ಧಕ್ಕೆ ಗರ್ಭಪಾತವಾದ ಅರ್ಧರ್ದ ಕಥೆಗಳ ಹಾಳೆಗಳು ಇಡೀ ರೂಮ್ ತುಂಬಾ ಚೆಲ್ಲಾಪಿಲ್ಲಿಯಾಗಿರುವದನ್ನು ಕಂಡು ’ವಾಯಕ್’ ಎನಿಸಿ ರೂಮ ಬಾಯ್ ಕರೆಯಬೇಕೆನಿಸಿದರೂ " ಬ್ಯಾಚುಲರ ರೂಂ ಹಿಂಗಿದ್ರೆ ಚಂದ" ಅಂತಾ ನನ್ನ ಅಂತರಂಗಕ್ಕೆ ಹೊಳೆದಂಗಾಗಿ ಹಾಸಿಗೆಯ ಮೇಲೆ ಡೈವ್ ಹೊಡೆದು ರಗ್ಗು ಎಳೆದುಕೊಳ್ಳತೊಡಗಿದೆ " ಲೋ! ಮಾರಿ ಮ್ಯಾಲ ಬಿಸಿಲ ಬಿದ್ರೂ, ಮುಕಳಿ ಮ್ಯಾಕ ಮಾಡಿ ಹೆಂಗ ಬಿದ್ದಾನ ನೋಡು ಸಂತ ಬಾಡ್ಯಾ" ಅಂತ ನನ್ನ ಹುಬ್ಬಳ್ಳಿ ಅಮ್ಮ ಕ್ಯಾಕರಿಸಿ ಉಗಿದಂಗಾಗಿ ಗಪ್ಪನೇ ಎದ್ದು ಕೂತು ಮತ್ತೆ ಎಲ್ಲಾ ಚಾನೆಲ್ಲು ಸ್ಕ್ಯಾನು ಮಾಡಿ " ಬಂಗಾರಿ ಬಾರೆ ನೀ ಬುಲ್ ಬುಲ್" ಹಾಡು ಕಂಡ ಕೂಡಲೆ ನಿಲ್ಲಿಸಿ ನಾನೂ ಸಹ ಬುಲ್ ಬುಲ್ ಎಂದು ಹಾಡತೊಡಗಿದೆ. ಆ ಆಟವೂ ಸ್ವಲ್ಪ ಹೊತ್ತಿಗೆ ಬೇಜಾರಾಗಿ , ಮಾಡಲು ಬೇರೆ ಕೆಲ್ಸವಿಲ್ಲದ್ದಕ್ಕೆ ’ ಅದಾದರೂ’ ಮಾಡಿ ಬರೋಣ ಅಂತ "ದಿ ಹಿಂದೂ" ಪೇಪರ್ ಹಿಡಿದುಕೊಂಡು ಪಾಯಖಾನೆಗೆ ಹೋಗಿ ಕಮೋಡಿನ ಮೇಲೆ ಅಂಡು ಊರಿ ಕುಳಿತೆ. ಮೊಟ್ಟ ಮೊದಲ ಬಾರಿ ಕಮೋಡನ್ನು ಕಂಡು ಬೆಚ್ಚಿ ಬಿದ್ದು ಅದರ ಮೇಲೆ ಕೂಡ್ರುವ ಬಗೆ ತಿಳಿಯದೇ ಪೇಚಾಡಿದ್ದು ಕಂಡು ನಗು ಒತ್ತರಿಸಿಕೊಂಡು ಬಂತು. ಈಗ ನಾನೂ ಸಹ ಬಹಳ "ಮುಂದುವರೆದವರ" ಲಿಸ್ಟಿನಲ್ಲಿರುವದರಿಂದ ಈಗ ಕಮೋಡಿನಲ್ಲಿಯೇ ಎಲ್ಲಾ ಸುರಾಗ ,ಸುಲಲಿತ ಅನಿಸುತ್ತದೆ.
ಹೊತ್ತು ಕಳೆಯಲು ಏನಾದರೂ ಮಾಡಲೇಬೇಕು ಅನ್ನಿಸಿ ನನ್ನ ಮೊಬೈಲು ತೆಗೆದು ನನ್ನ ಕಾಲೇಜು ಮಿತ್ರರಿಗೆ ಫೋನಾಯಿಸತೊಡಗಿದೆ.ಒಂದರಡು ಮಾತು ಮುಗಿಯುವಷ್ಟರಲ್ಲಿ " ಮತ್ತೆ ನಿನ್ನ ಕಡೆ ಏನು ಸಮಾಚಾರ?", " ಮುಂದ" ," ಮತ್ತೇ?" ಇವೇ ಜಾಸ್ತಿಯಾಗಿ "ಮತ್ತೆ ಬೆಂಗಳೂರಿಗೆ ಬಂದಾಗ ಈ ಬಾರಿ ಖಂಡಿತ ಭೇಟಿ ಆಗೊಣ! ಎಲ್ಲಾರೂ ಸೇರಿ ಭಾಳ ದಿನ ಆದ್ವು" ಅಂತ ಅದೇ ಹಳೆ ಸವಕಲು ಡೈಲಾಗು ಬಿಟ್ಟು ’ಫೊನಾಯಣ’ ಮುಗಿಸಿದೆ. ಆದರೂ ಗಂಟೆ ಗಟ್ಟಲೇ ( ದಿನಗಟ್ಟಲೇ(?))ತಮ್ಮ ಗರ್ಲ್ ಫ್ರೇಂಡುಗಳ ಜೊತೆ ಹರಟುವ ನನ್ನ ಮಿತ್ರರ ನೆನಪು ಬಂದು " ನನ್ ಮಕ್ಳು ಅಷ್ಟೋತ್ತು ಮಾತಾಡಲು ವಿಷಯಯವಾದ್ರು ಏನಿರುತ್ತೆ?" ಅಂತಾ ಅನಿಸಿದರೂ, ಮೊಬೈಲು ಹೊಂದಿದ ಲಕ್ಷ ಲಕ್ಷ ಹುಡುಗಿಯರಲ್ಲಿ ನನ್ನೊಂದಿಗೆ ಹರಟಲು ಒಬ್ಬ ಹುಡಿಗಿಯನ್ನೂ ಅನುಗ್ರಹಿಸದ ಭಗವಂತನ ತಾರತಮ್ಯಕ್ಕೆ ತುಂಬಾ ಸಿಟ್ಟು ಬಂದರೂ ಏನೂ ಕಿಸಿಯಲಾಗದ ಕಾರಣ ಎಲ್ಲಾ "ವಿಧಿ ವಿಪರ್ಯಾಸ" ಎಂದುಕೊಂಡು ಸುಮ್ಮನಾಗಬೇಕಾಯಿತು.
ಮತ್ತೆ ಮನಸ್ಸು ಬಡ್ದಿಮಗಂದೂ ಮೂಲ ಪ್ರಶ್ನೆಯಡೆಗೆ ತಿರುಗಿ "ನಾನು ಸೈನ್ಸ್ ಮಾಡಿರದೇ ಇದ್ದರೆ ಎನಾಗಿರುತ್ತಿತ್ತು?" ಎಂದು ಊಹಿಸತೊಡಗಿತು. ವರ್ಷಕ್ಕೋಮ್ಮೆ ಸಿಗುವ ಹೈಕಿಗಾಕಿ ವರ್ಷಪೂರ್ತಿ ಹಲ್ಲು ಗಿಂಜಿ ಬಾಲ ಅಲ್ಲಾಡಿಸುವ ಈ ಹಾಳು ಸಾಫ್ಹ್ಟವೇರ್ ಬದುಕಿಗಿಂತ ಅಬ್ಬೀಗೇರಿಯಲ್ಲಿ ಹೊಲ ಮನಿ ನೋಡಿಕೊಳ್ಳುತ್ತ ’ಗೌಡಕಿ’ ಮಾಡುವುದೇ better option ಅನಿಸಿತು ಮತ್ತು ನಾನು ಸೈನ್ಸನ ಹಿಂದೆ ಬಿದ್ದು ಧಾರವಾಡಕ್ಕೆ ಹೋಗದೇ ಇದ್ದರೇ ಹತ್ತನೇ ವರ್ಗದವರೆಗೂ ನನ್ನೋಂದಿಗೆ ಓದಿದ್ದ ನನ್ನ ಕನಸಿನ ಕನ್ಯೆ ಸುಮಾ( ಹಾಜರಾತಿ ಪ್ರಕಾರ) ಉರ್ಫ್ ಸುಮವ್ವ( ಅವರ ಮನೆಯವರ ಪ್ರಕಾರ) ಆಲಿಯಾಸ್ ಸುಮಿ( ಅವಳ ಗೆಳತಿಯರ ಪ್ರಕಾರ) ಕೊನೆಯದಾಗಿ ಸುಧಾರಾಣಿ ( ನಮ್ಮೂರ ಪಡ್ಡೆಗಳ ಪ್ರಕಾರ)ನನ್ನವಳಾಗಿರುತಿದ್ಲಾ? ಎಂಬ ಪ್ರಶ್ನೆಗೆ ಸಕಾರಾತ್ಮಕ ಉತ್ತರ ಊಹಿಸಿಕೊಂಡ ಮೇಲೆ ಮನಸ್ಸಿಗೆ "ನಂದೂ ಅಂತ ಪ್ರೀತಿಸುವ ಜೀವ" ಸಿಕ್ಕಂಗಾಗಿ ಮನಸ್ಸಿಗೆ ನಿರಾಳವೆನಿಸಿತು.ಬಡ್ಡಿಮಗ ಡಿಂಗ್ರಿಯ ಮಾತು ಕೇಳಿ ೯ ನೆಯ ವರ್ಗದಲ್ಲೇ "ಕಣ್ಣು ಕಮಲ, ಸಂಪಿಗೆ ನಾಸಿಕ, ತೊಂಡೆ ತುಟಿ" ಇತ್ಯಾದಿ ಇತ್ಯಾದಿ ಬಲ್ಲ ಉಪಮೇಯಗಳನ್ನು ಬಳಸಿ, ಕೊನೆಯಲ್ಲಿ ’ಚಂದ್ರ ಇರುವುದು ಬಾನಿನಲ್ಲಿ, ಕಮಲ ಇರುವುದು ಕೆಸರಿನಲ್ಲಿ, ನೀನು ಇರುವುದು ನನ್ನ ಹೃದಯದಲ್ಲಿ” ಅಂತೆಲ್ಲಾ ಕ್ರಿಯೇಟಿವಿಟಿಯಿಂದ ಬರೆದಿದ್ದ ನನ್ನ ಜೀವನದ ಮೊದಲ ಪ್ರೇಮ ಪತ್ರ ಸುಮಾಳ ಕೈಗೆ ಸಿಗದೆ( ಇದೂ ಸಹ ಡಿಂಗ್ರಿಯ ಐಡಿರಿಯಾದ ಪುಣ್ಯ ಫಲ)ಅವರ ಮನೆಯ ಆಳು ಮುತ್ಯಾನ ಕೈಗೆ ಸಿಕ್ಕು, ನಂತರ ಅವರಪ್ಪನ Via ಸೈನ್ಸ ಮಾಸ್ತರ್ ಲೋಕಾಪೂರನ ಕೈಗೆ ಸಿಕ್ಕು ಭಲೇ ಧರ್ಮ ಸಂಕಟಕ್ಕೀಡಾಗಿಸಿತು. ಆ ಲೋಕಾಪುರ ನನ್ನ ಕರೆದು " ಗೌಡ್ರು ಸಮುದ್ರದಂಗ ಅದಾರ, ಹೆಂಥಾವ್ರ ಹೊಟ್ಟ್ಯಾಗ ಎಂಥಾ ಮಗ ಹುಟ್ಟಿದೆ ಲೇ" ಅಂಥ ನನ್ನ ಹುಟ್ಟನ್ನೆ ಅವಮಾನಿಸಿ ಅಪ್ಪನನ್ನು ಸಮುದ್ರಕ್ಕೆ ಹೋಲಿಸಿ, ನನ್ನನ್ನು ಊರ ಮೂಂದಿನ ಅಗಸರ ಕೆರೆಗಿಂತಲೂ ಕೀಳಾಗಿಸಿದ ಈ ಸೈನ್ಸ್ ಮಾಸ್ತರು ಸಹ ನಂಗೆ ಸೈನ್ಸ ಮೇಲೆ ಸಿಟ್ಟು ಬರಲು ಕಾರಣವಾ? ಎಂದು ಗುಮಾನಿ ಬರತೊಡಗಿತು. ನಮ್ಮ ಈ ಪ್ರೇಮ ಪತ್ರವೆಂಬ ಜೀವನದ ಶ್ರೇಷ್ಠ ಕೃತಿಯ ಫಲವಾಗಿ ಅಲ್ಲಿಯವರೆಗೂ " ಗೌಡ್ರ ಮಗಾ ಭಾಳ ಶಾಣ್ಯಾ" ಅಂತಾ ಮುಕುಟವಿಲ್ಲದ ರಾಜನಂತಿದ್ದ ನನಗೆ " ಬರ್ತಾ ಬರ್ತಾ ರಾಯರ ಕುದುರೆ ಕತ್ತೆ ಆಯ್ತಂತೆ" ಅನ್ನುವ ಗಾದೆಗೆ ಉದಾಹರಣೆಯಾಗಿಸಿತು.ಇದರ ಜೊತೆಗೆ ಈ ಪ್ರಸಂಗದಿಂದ ಸುಮಾ ಸಹ "ನಾನು ನಿನ್ನ ಆಂಥ ಹುಡುಗ ಅಂತಾ ಅನ್ಕೋಂಡಿದ್ದಿಲ್ಲಾ, ನಾವಿಬ್ಬರೂ ಒಳ್ಳೇಯ ಫ್ರೇಂಡ್ಸ್ ಅಷ್ಟೇ" ಅಂತಾ ಬಾಂಬು ಹಾಕಿ ಎಂದಿಗೂ ಮಾತಲಾಡರದ ನಾವು ಯಾವಾಗಿನಿಂದ ಒಳ್ಳೆಯ ಫ್ರೆಂಡ್ಸ್ ಆದೆವು ಅನ್ನುವುದೇ ತಿಳಿಯದೇ ಗೋಜಲಾಗಿಬಿಟ್ಟಿತ್ತು. ಕೊನೆಗೆ ನಾನು ನನ್ನ ಸುಮಾಳ ಮೇಲಿನ ಲವ್ವನ್ನು ತ್ಯಾಗಮಾಡಬೇಕಾಗಿ ಬಂದ ನನ್ನ ಅಸಹಾಯಕತೆಯೂ ಆ ಹೊತ್ತಲ್ಲದ ಹೊತ್ತಲ್ಲಿ ನೆನಪಾಗಿ ನನ್ನ ಮತ್ತು ಸುಮಾಳ "ವಿಫಲ ಪ್ರೇಮ"ಕ್ಕೆ ಗೌರವ ತೋರಲು " ನಲಿವ ಗುಲಾಬಿ ಹೂವೇ","ಪ್ರೇಮದ ಕಾದಂಬರಿ ಬರೆದೆನು ಕಣ್ಣಿರಲಿ" ಅಂತಾ ಹಾಡೀ ’ ಉಹು ಉಹು ಉಹು’ ಅಂತ ಕೆಮ್ಮಿ ಹಗುರವಾದೆ.ಮತ್ತೆ "ಟ್ರೂ ಲವ್" ಮೂಡ್ ಬಂದಂಗೆ ಆಗಿ ಕೈಗೆ ಸಿಕ್ಕ ಹಾಳೆಯ ಮೇಲೆ ’ಸುಮಾ’ ಅಂತಾ ಬರೆದೆ, ಖುಷಿಯಾಯ್ತು; ಮತ್ತೆ ’ಸುಮಾ ಐ ಲವ್ ಯೂ’ ಅಂತಾ ಬರೆದೆ, ಇನ್ನೂ ಖುಶಿಯಾಯ್ತು; ಕೊನೆಗೆ ’ಸಂತೋಷ್ Weds ಸುಮಾ’ ಅಂತಾ ಬರೆದುಕೊಂಡ ಮೇಲಂತೂ ಖುಷಿ ಉಕ್ಕಿ ಉಕ್ಕಿ ಬಂತು, ಅದೇ ಖುಷಿಯಲ್ಲಿ ಸ್ನಾನಕ್ಕೆ ಹೋಗಿ " ಹೂವು, ಮುಳ್ಳು, ಪ್ರೀತಿ, ಪ್ರೇಮ, ಟೊಂಗೆ, ತಪ್ಪಲು" ಅಂತೆಲ್ಲಾ ಹಾಡು ಹಾಡುತ್ತಾ ಸ್ನಾನ ಮುಗಿಸಿ ’ಸಾವರಿಯಾ’ ಸ್ಟೈಲಲ್ಲಿ ಟಾವೆಲ್ಲು ಸುತ್ತಿಕೊಂಡು ಒಂದೆರಡು ಸ್ಟೆಪ್ಪು ಹಾಕಿದ ಮೇಲೆ, ಸ್ನಾನ ಮಾಡುವ ಮೊದಲೇ ಶೇವ್ ಮಾಡುವುದನ್ನು ಮರೆತಿದ್ದನ್ನು ಕಂಡು ಭಲೇ ಖೇದಯಾಯ್ತು. ನಂತರ ಹುಡುಗಿಯರಿಗೆ ದಾಡಿ ಬಿಟ್ಟ "ಕರಡಿಮರಿ"ಯಂತಹ ಹುಡುಗರೇ ಇಷ್ಟವಾಗುತ್ತಾರೆ ಎಂದು ಯಾವುದೋ ’ಲವ್ ಲವಿಕೆ’ಯಲ್ಲೋ ’ಈ ಗುಲಾಬಿ ನಿನಗಾಗಿ’ಯಲ್ಲೋ ಓದಿದ ನೆನಪಾಗಿ ನಾನು ಶೇವ್ ಮಾಡದೇ ಇರುವ ನಿರ್ಧಾರಕ್ಕೆ ನಾನೇ ಬೆನ್ನು ಚಪ್ಪರಿಸಿಕೊಂಡು ಇರುವ ದಾಡಿಯನ್ನೇ ಟ್ರಿಮ್ ಮಾಡಲು ಕತ್ತರಿ ಹುಡುಕತೊಡಗಿದೆ. ಕನ್ನಡಿ ಮುಂದೆ ನಿಂತು ಸಾದ್ಯಾನುಸಾರ ಸ್ಮಾರ್ಟ್ ಕಾಣಿಸಲು ಯತ್ನಿಸಿ ’ಪರ್ವಾಗಿಲ್ಲಾ ಓಕೆ’ ಅನ್ನಿಸಿದ ಮೇಲೆ ’ಸುಮಾ ಈಗ ಏನು ಮಾಡುತ್ತಿರಬಹುದು?’ಅಂದುಕೊಳ್ಳುತ್ತಿರುವಾಗ ಅವಳ ಮದುವೆಯಾಗಿ ಅವಳ ಗಂಡನೊಂದಿಗೆ, ಕೈಲಿ ಕೂಸು ಹಿಡಿದು ಕಂಠಿ ಬಸವಣ್ಣನ ಜಾತ್ರೆಯಲ್ಲಿ ಖಾರ ಚುರಮುರಿ ತಿನ್ನುತ್ತ್ಜ ನಿಂತಂತೇ ಅನಿಸಿ ಬೆಚ್ಚಿಬಿದ್ದು " ಛೇ ಛೇ ನನ್ನ ಸುಮಾಳ ಮದುವೆ ಇನ್ನೂ ಆಗಿರಲಿಕ್ಕಿಲ್ಲ" ಅಂತಾ ಅನ್ಕೊಂದು ನಿರಾಳವಾಗಿ ಈ ಬಾರಿ ಊರಿಗೆ ಹೋದಾಗ ಖಂಡಿತ ಅವಳನ್ನು ಹುಡುಕಿ ನೇರವಾಗಿ ಮಾತಾಡಿ ಪ್ರಪೋಸ್ ಮಾಡಿಬಿಡಬೇಕು ಅನ್ಕೋಂಡ ಮೇಲೆ ಎನೋ ಗೆದ್ದ ಭಾವ ಮೂಡಿತು..