"ಬಿಗ್" ಎಫ್.ಎಮ್ಮು ಮತ್ತು ಅವರ "ಬಿಗ್(?)" ಐಡಿರಿಯಾಗಳೂ...
ಬೆಂಗಳೂರಿನ ನಂ.1 ಚಾನೆಲ್ ಎಂದು ಗಂಟೆಗೊಮ್ಮೆ ಅರಚಿಕೊಂಡು, ತಮ್ಮನ್ನು ತಾವೇ ಸಮಾಧಾನಿಸಿಕೊಳ್ಳುವ ಸ್ವಯಂಘೋಷಿತ ನಂ೧ಗಳಿಗೆ ಕೆಳಗೆ ಹೇಳಿದಂತಹ ಕ್ರಿಯೇಟಿವ್ ವಿಷಯಗಳು "ಎಲ್ಲಿ" ಹೊಳೆಯುತ್ತವೆಯೋ ನಂಗಂತೂ ಗೊತ್ತಿಲ್ಲಾ.
ಕಾರಣ ಇಷ್ಟೇ! ಲಾರಿ ಮುಷ್ಕರದ ದಯೆಯಿಂದ ಲೇಟಾಗಿ ಹೋಗುವ ಬಾಗ್ಯಕ್ಕೆ ಖುಷಿ ಪಟ್ಟು ಬೆಳಗ್ಗೆ ಬೆಳಗ್ಗೆ ಎಫ್.ಎಮ್ಮು ತಿರುವಿದರೆ ’ಬಿಗ್ ಕಾಫಿ’ಯ ಹರ್ಷ ಚರ್ಚೆಗೆ ಆರಿಸಿಕೊಂಡ ವಿಷಯ " ನೀವು ಯಾರ ಜೊತೆ ’ಮಿಲನ’ ಬಯಸ್ತೀರಾ?" ಅಂತಾ!. ಈ ಹರ್ಷ ಎಂಬ ಆರ್,ಜೆಗೆ ಬೆಳಗ್ಗೆ ಬೆಳಗ್ಗೆ ಕಾಫಿ ಹೊತ್ತಿನಲ್ಲಿ ಇಂತಹ ವಿಷಯ ಯಾಕೆ ಹೊಳೆಯಿತೋ ನಾಕಾಣೆ. ಇಂತಹ ಸ್ವಾರಸ್ಯಕರ(?) ವಿಷಯಕ್ಕೆ ನಮ್ಮ ಬಿಗ್ ಕೇಳುಗ ಮಹಾಶಯರಂತೂ ಜೊಲ್ಲೊರಿಸಿಕೊಳ್ಳುತ್ತಾ ಕೊಟ್ಟ ಉತ್ತರಗಳಂತೂ ಇನ್ನೂ "ಕ್ರಿಯೆಟಿವ್" ಆಗಿದ್ದುವು. ಒಬ್ಬ ಪುಣ್ಯಾತ್ಮ ತನ್ನ ತನ್ನ ಮಾಜಿ ಪ್ರೇಯಸಿಯೋಂದಿಗೆ ಮಿಲನ ಬೇಕಾದರೆ, ಇನ್ನೊಬ್ಬ ರಸಿಕ ತನ್ನ ’ಅತ್ತೆ’ಯೊಂದಿಗೆ ಮಿಲನ ಬಯಸ್ತೀನಿ ಅಂತ ಮೇಸೆಜು ಕುಟ್ಟಿದ್ದ, ಅದನ್ನು ಓದಿದ ನಮ್ಮ ಹರ್ಷನಿಗೆ ಭಲೇ ಖುಷಿ. ಒಬ್ಬ
ಆಧುನಿಕ ನಾರಿಮಣಿಗೆ ತನ್ನ "ಲವ್ವರ್" ಜೊತೆ ’ಅದು’ ಬೇಕಂತೆ.. ಇವರ ಭಂಡ ದೈರ್ಯಕ್ಕೆ ಕಂಡು ನಂಗೆ ತುಂಬಾ ಆಶ್ಚರ್ಯ ಆಯ್ತು.. ಇವು ಕೆಲ ಸ್ಯಾಂಪಲ್ಲುಗಳಷ್ಟೆ, ಇನ್ನೂ ಕೇಳಿದರೆ ಕಿವಿ ಹೊಲಸಾದೀತು ಅಂತಾ ’ಹೆಚ್ಚಾಗಿ ಕನ್ನಡ ಹಾಡುಗಳ’ ಚಾನೆಲ್ಲಿಗೆ ವಲಸೆ ಹೋಗಬೇಕಾಯ್ತು..
ಮತ್ತೆ ಅದೆ ದಿನ ಸಂಜೆ, ಅದೇ ಬಿಗ್ ನಲ್ಲಿ " ನೋ ಟೆನ್ಸನ್" ನಲ್ಲಿ ದೀಪು ಯವುದೋ ಟೀಚರ್ರಿಗೆ ಕರೆ ಮಾಡಿ, ನಿಮ್ಮ ಸ್ಟೂಡೆಂಟ್ ಒಬ್ಬ ನಿಮ್ಮ ಜೊತೆ ಮಲ್ಪೆ ಟೂರಿಗೆ ಹೋಗಿ ಬಂದಾಗಿನಿಂದ ’ಲವ್’ ಮಾಡುತ್ತಿರುವನೆಂದೂ, ನಾನು ಆ ಹುಡುಗನ ಚಿಕ್ಕಪ್ಪನೆಂದೂ ಕೊಡಬಾರದ "ಟೆನ್ಸನ್" ಕೊಡತೊಡಗಿದ.ಪಾಪ ಆ ಟೀಚರ್ರು ಕಂಗಾಲು.
ಮಾದ್ಯಮಗಳು ಒಂದು ಸಮುದಾಯದ ಅಭಿಪ್ರಾಯ ರೂಪಿಸುತ್ತವೆ ಅಂತಾರೆ, ಆದ್ರೆ ಇವರು ರೂಪಿಸುತ್ತಿರುವ ಅಭಿಪ್ರಾಯಗಳಾದರೂ ಎಂತವು?. ತೀರಾ ಈ ಮಟ್ಟದ ಕೀಳು ವಿಚಾರಗಳನ್ನು ಚರ್ಚಿಸುವ ಅಥವಾ ಅಂತಹ ಅಡ್ಡ ಹಾದಿಯಿಂದ "ಟೆನ್ಸನ್" ಕೊಡುವ ದರ್ದಾದರೂ ಏನಿತ್ತು ಅಂತಾ!. ಕನಿಷ್ಟ ಮಟ್ಟದ ಸಾಮಾಜಿಕ ಜಾವಾಬ್ದಾರಿಗಳು ಇವರಿಗೆ ಬೇಡವೆ?. ಎನೇ ಆದರೂ ಸಬ್ಯತೆಯ ಎಲ್ಲೆ ದಾಟುವುದು ನಂಗ್ಯಾಕೋ ಸರಿ ಎನಿಸಲಿಲ್ಲಾ. ಅಷ್ಟಕ್ಕೂ ’ಆ’ ತರದ ವಿಷಯಗಳ ಮೂಲಕ ಇವರು ಸಾಧಿಸ ಹೊರಟಿರುವ ಕ್ರಾಂತಿಯಾದರೂ ಏನು?. ’ಬೇರೆ’ ಎನೋ ಉಪಯೋಗಿಸದೆ ತಲೆ ಉಪಯೋಗಿಸಿ ಯೋಚಿಸಿದರೆ ಚರ್ಚಿಸಲು ಸಾವಿರಾರು ಸಮಸ್ಯೆಗಳಿವೆ, ಸದಭಿರುಚಿಯ ವಿಷಯಗಳಿವೆ.ಎನೋ ಗೊತ್ತಿಲ್ಲಪ್ಪಾ! ಕ್ರಿಯೇಟಿವಿಟಿ ಸೊಂಟದ ಕೆಳಗೇಯೇ ಹುಟ್ಟಬೇಕಾ?
ದೀಪು, ದೇವರಾಣೆಗೂ ನಾವು " ಆ " ಟೈಪಲ್ಲಪ್ಪಾ!!!