Sunday, November 18, 2007

ನಾವು ಶಾಪಗ್ರಸ್ತರೇ?


ಗದಗ-ಹುಬ್ಬಳ್ಳಿ ರಸ್ತೆ ಮತ್ತಷ್ಟು ಕೆಟ್ಟು ಕೆರ ಹಿಡಿದಿದೆ.ರಾಮುಲು ಏನು ಕಿಸಿದರೂ ಗದಗೆಂಬ ಗದಗನ್ನು ಇನ್ನೂ ಸುಧಾರಿಸಲು ಅಗ್ತಿಲ್ಲಾ. ಮ್ಯಾಂಗನೀಸ ಲಾರಿಗಳ ಅಬ್ಬರ ಇನ್ನೂ ಕಡಿಮೆ ಆಗಿಲ್ಲಾ.ಯಾವ ಸಾರ್ವಜನಿಕ ಸ್ಥಳಕ್ಕೆ ಹೋದರೂ ಗುಟಖಾದ ವಾಸನೆ ತಪ್ಪುವದಿಲ್ಲಾ.ಸಾರ್ವಜನಿಕ ಶೌಚಾಲಯಗಳಿಗೆ ಹೋದರಂತೂ "ಇಶ್ಶಿ" ಎಂದು ಮೂಗು ಮುಚ್ಚಿಕೊಳ್ಳದೆ ಹೊರಬರಲಾಗುವದಿಲ್ಲಾ.ಮಣ್ಣಿವಣ್ಣನ್ ಎಷ್ಟು ಲಗಾ ಒಗದ್ರು ಹಳೇ ಹುಬ್ಬಳ್ಳಿಯ ರಸ್ತೆಗಳನ್ನು ಮತ್ತು ಅವುಗಳ ಪಕ್ಕವೇ ಒಂದು, ಎರಡು ಮಾಡಿ ಧನ್ಯರಾಗುವ ಪ್ರಜಾಪ್ರಭುಗಳನ್ನು ಸುಧಾರಿಸಲಾಗುವದಿಲ್ಲ.ಹೊರಟ್ಟಿ ಶಿಕ್ಷಣ ಮಂತ್ರಿಯಾಗಿ ಕಂಡಲ್ಲಿ ರಿಬ್ಬನ್ನು ಕತ್ತರಿಸಿದ್ದೆ ಬಂತು ನಯಾ ಪೈಸೆಯಷ್ಟೂ ಶಿಕ್ಷಣದ ಗುಣಮಟ್ಟ ಅಥವಾ ಶಾಲೆಗಳ ಗುಣಮಟ್ಟ ಸುಧಾರಿಸಲಾಗಲಿಲ್ಲ್ಲ. ಅಲ್ಲಿಗೆ ರೈಲು ಬರುತ್ತೆ, ಇಲ್ಲಿಗೆ ವಿಮಾನ ನಿಲ್ದಾಣ ಬರುತ್ತೆ ಅಂತ ಹಳಿ ಇಲ್ಲದೆ ರೈಲು ಬಿಟ್ಟಿದ್ದೆ ಬಂತು ದೇವರಾಣೆಗೂ ಬರುವ ನೀರಿಕ್ಷೆಯಂತೂ ಇಲ್ಲಾ. ಪಂಚನದಿಗಳ ಜಿಲ್ಲೆ ಅಂತ ಹಾಡಿ ಹೊಗಳಿ ಅಟ್ಟಕ್ಕೆರಿಸಿದ ಬಿಜಾಪುರ ಜಿಲ್ಲೆಯಲ್ಲಿನ ಹಳ್ಳಿಗಳಲ್ಲಿನ ಕುಡಿಯುವ ನೀರಿನ ಸಮಸ್ಯೆ ಇಂದಿಗೂ ತಪ್ಪಿಲ್ಲಾ. ಬೇಸಿಗೆಯಲ್ಲಿ ಇಡಿ ಗದಗಕ್ಕೆ "ನೀರು" ಎನ್ನುವುದು ಮರೀಚಿಕೆ ಆಗಿ ಬಿಡುತ್ತೆ. ( ಕಳೆದ ಕೆಲ ವರ್ಷಗಳಿಂದ ರೈಲಿನಲ್ಲಿ ಕುಡಿಯುವ ನೀರು ಪೂರೈಸಿದ್ದಾರೆ ನಮ್ಮ ಜನಪ್ರತಿನಿಧಿಗಳು ) . ಹುಬ್ಬಳ್ಳಿ- ಧಾರವಾಡದ ಹೈಕೋರ್ಟಿಗೆ ಇನ್ನೂ ಜಾಗ ಹುಡುಕುತ್ತಿದ್ದಾರೆ ಮತ್ತು ಹುಡುಕುತ್ತಲೇ ಇರುತ್ತಾರೆ. ಇನ್ನು ದೂರದ ಗುಲ್ಬರ್ಗ, ಬೀದರ,ಬಳ್ಳಾರಿಗಳ ಬಗ್ಗೆ ಹೇಳಿದರೆ ನಮ್ಮ ಕೆರ ತಗೊಂಡು ನಾವೇ ಹೊಡ್ಕೊಬೇಕು ಹಾಗಿದೆ ಅಲ್ಲಿಯ ಸ್ಥಿತಿ..

ಎಷ್ಟು ತಲೆ ಕೆರೆದುಕೋಂಡರೂ ಅರ್ಥವಾಗದಿರುವುದೇ ಇದು; "ಕಾವೇರಿ" ಅಂದ ಕೂಡಲೇ ಚಪ್ಪಲಿ ಹಾಕ್ಕೊಂಡು, ಮೈಕು ಹಿಡ್ಕೊಂಡು "ಪಾದಯಾತ್ರೆ" ಅಂತ ತಮ್ಮ "ಜನಪರ ಕಾಳಜಿ(?)" ಪ್ರದರ್ಶಿಸಿಲು ಸನ್ನಧ್ಧರಾಗುವ ನಮ್ಮ ರಾಜಕಾರಣಿಗಳಿಗೆ
ಅದೇ ಕಳಕಳಿಯನ್ನು ಕೃಷ್ಣೆಯ ಅಥವಾ ಸಮಸ್ತ ಉ.ಕರ್ನಾಟಕದ ಕುಡಿಯುವ ನೀರಿನ ಸಮಸ್ಯೆಗೆ ಇತಿ ಹಾಡಬಲ್ಲ ಮಹದಾಯಿ ನದಿ ಯೋಜನೆಯ ವಿಷಯದಲ್ಲಿ ಯಾಕೆ ತೋರಿಸಲಾಗುವಿದಿಲ್ಲಾ? ನಮ್ಮ ವಿಷಯದಲ್ಲಿ ಯಾಕೆ ಉದಾಸೀನ ಭಾವ? ಕೇವಲ ಒಂದು ಹಂಗಾಮಿನ ಕಬ್ಬು, ಅಥವಾ ಭತ್ತ ಬರದೇ ಹೋದ್ರೆ ಸತ್ತೇ ಹೋಗುತ್ತೀವಿ ಅನ್ನೊ ತರ ಮಾತಾಡುವ ಹಳೆ ಮೈಸುರು ರೈತರ ಮದ್ಯೆ ಬರೀ ಬರದಲ್ಲೇ ಬದುಕು ದೂಡುತ್ತಿರುವ ನನ್ನ ಜನಗಳ ನೋವು ಯಾಕೇ ಅರ್ಥವಾಗುವುದಿಲ್ಲಾ?. ಪ್ರತಿ ವರ್ಷವೂ ಅದೇ ಬೆಲೆ ಕುಸಿತ, ಅದೇ ಭಿಕ್ಷೆ ಎಂಬಂತೆ ಘೋಷಿಸುವ ಬೆಂಬಲ ಬೆಲೆಯ ನಾಲಾಯಕ್ ನಾಟಕಗಳು. ಪ್ರತಿ ವರ್ಷವೂ ಅದೆ ಕಥೆ. "ಹಾಡಿದ್ದು ಹಾಡೊ ಕಿಸುಬಾಯಿ ದಾಸ" ಎಂಬಂತೆ ಅವೇ ಹಳೆ ಭರವಸೆಗಳು, ಕಣ್ಣೊರಿಸುವ ಹಲ್ಕಟ್ ರಾಜಕೀಯ.ಎಲ್ಲಾ ಸಮಸ್ಯೆಗಳಿಗೂ ಒಂದು ಸಮರ್ಥ ಕೃಷಿನೀತಿ ರೂಪಿಸೋಕೆ ಇನ್ನೂ ಎಷ್ಟು ಹೆಣ ಬೀಳಬೇಕು?.ಬೇಕಾದ್ರೆ ಗಮನಿಸಿ ನೋಡಿ ಬೆಂಗಳೂರಿನ ಬಹುತೇಕ ಕಾಮಗಾರಿಗಳಲ್ಲಿ ದುಡಿಯುತ್ತಿರುವ ಕೂಲಿ ಕಾರ್ಮಿಕರು ಬರೀ ಉ.ಕರ್ನಾಟಕದವರು. ಅಲ್ಲಿಯೇ ಅವರಿಗೆ ಅನ್ನ ಸಿಕ್ಕಿದ್ದರೆ ಇಲ್ಯಾಕೆ ಬಂದು ಕೈಯೊಡ್ದಿ ನಿಲ್ಲುತ್ತಿದ್ದರು? ಸರಕಾರದ ಯೋಜನೆಗಳು ತಲುಪುದಾದರೂ ಯಾರನ್ನು?.ಇತ್ತೀಚಿಗಂತೂ ಮೈನಿಂಗ ಲಾರಿಗಳು ಅಳುದುಳಿದ ಉ.ಕರ್ನಾಟಕದ ರಸ್ತೆಗಳನ್ನೂ ಹಾಳು ಮಾಡಿ ಹತ್ತಿ ಬಿತ್ತುತ್ತಿವೆ, ಕೇಳುವುವರು ಯಾರೂ ಇಲ್ಲದದಂತಾಗಿದೆ. ಯಾಕಂದ್ರೆ ಬಹುತೇಕ ಮೈನಿಂಗ ಕಂಪನಿಗಳು ನಮ್ಮ ನನಪ್ರತಿನಿಧಿಗಳವೇ ಆಗಿವೆ, ಬೇಲಿಯೇ ಎದ್ದು ಹೊಲ ಮೆಯ್ದರೆ ಮಾಡುವುದಾದ್ರು ಏನು? . ಇದನ್ನು ಬಿಟ್ಟ ಹಾಕಿ ಇನ್ನು ಹಲವಾರು ಅವಧಿಗೆ ಅರಿಸಿ ಬರುತ್ತಿರುವ ಮತ್ತು ರಾಜ್ಯದ ಅತ್ಯುನ್ನತ ಪದವಿ ಅಲಂಕರಿಸಿದ ಧರ್ಮಸಿಂಗ, ಖರ್ಗೆ ಮೊದಲಾದವರು ಕಿಸಿದಿದ್ದಾದರೂ ಎನು? ಪಧವೀದರ ಕ್ಷೇತ್ರದಿಂದ ಆರಿಸಿ ಬರುತ್ತಾ ಇರುವ ಎಚ್ಕೆ, ನಮ್ಮ ಪಧವೀದರರಿಗೆ ಮಾಡಿದ ಅನುಕುಲತೆಯಾದ್ರು ಏನು?. ನೀರಾವರಿ ಖಾತೆ ಇಟ್ಕೊಂಡೂ ಸಹ ಇನ್ನೂ ಉ.ಕರ್ನಾಟಕದ ಹಲವು ಯೋಜನೆಗಳು ಅಮೆಗತಿಯಲ್ಲಿ ನಡೆಯುತ್ತಿದ್ದರೂ ಇವರು ಹರಿದಿದ್ದಾದರೂ ಏನು?

ಮುಕಳಿ ತಿರುವಿದಲ್ಲಿ ಒಂದು ಪಾರ್ಕು,ಹೆಜ್ಜೆಗೊಂದು ಬೀದಿದೀಪ, ಹಂಗೆ ತಿಂಗಳುಗಳಿಗೊಮ್ಮೆ ಡಾಂಬರು ಕಾಣುವ ರಸ್ತೆಗಳು ಇವೆಲ್ಲ ಬೆಂಗಳೂರಿಗೆ ಮಾತ್ರವಾ?. ಇಡೀ ಹುಬ್ಬಳ್ಳಿಯಲ್ಲಿ ಇರುವ ಎಕೈಕ ಪಾರ್ಕನ್ನೂ ಸಹ ಉತ್ತಮ ಸ್ಥಿತಿಯಲ್ಲಿ ಇಟ್ಟುಕೊಂಡಿಲ್ಲ, ಅಲ್ಲಿ ಹಂದಿಗಳು ಮಾತ್ರ ಅರಾಮವಾಗಿ ಅಧಿಕಾರಿಗಳ ಹೆಸರಿನಲ್ಲಿ ಸಂಸಾರ ಮಾಡಿಕೊಂಡಿವೆ. ಜನಪ್ರತಿನಿಧಿಗಳು ಹಾಳಾಗ್ಲಿ ಬೆಂಗಳೂರಿನ ಕೊಳೆಗೇರಿ ಮಕ್ಕಳಿಗೆ Lux ಸೋಪು ಉಜ್ಜಿ, ಸ್ನಾನ ಮಾಡಿಸಿ, ಕೊಳೆಗೇರಿ ಸುಧಾರಣೆ ಮಾಡಿದೆ ಅಂತ ಪೇಪರುಗಳಿಗೆ ಹಲ್ಲು ಕಿಸಿದ ಫೋಟೊ ಕಳಿಸಿ ಧನ್ಯರಾಗುವ NGOಗಳಿಗೆ ಉ.ಕರ್ನಾಟಕದ ಅವ್ಯವಸ್ಠೆ, ಬಡತನ ಕಾಣುವುದೇ ಇಲ್ಲಾ. ಇನ್ನು ನಾರಾಯನ ಮೂರ್ತಿ, ಪ್ರೇಮಜೀ ಯವರ ಸಾಮಾಜಿಕ ಕಳಕಳಿ ಬೆಂಗಳೂರು ಬಿಟ್ಟು ಆಚೆ ಬರುವುದೇ ಬೇಡ ಅನ್ನುತ್ತೆ.ಇನ್ನು ಅಲ್ಲೆ ಹುಟ್ಟಿ ಬೆಳೆದ ನಮ್ಮಂತಹವರು ಮಾಡುತ್ತಿರುವುದಂತೂ ಯಾವುದಕ್ಕೂ ಬೇಡ; ಚೆನ್ನಮ್ಮ ರೈಲಿಗೆ ರಿಜರ್ವೆಶನ್ನು ಮಾಡಿಸಿ ಹಬ್ಬಕ್ಕೆ ಮಾತ್ರ ಹೋಗಿ " ನಮ್ಮೂರು ಈ ಜನ್ಮದಲ್ಲಿ ಮಾತ್ರ ಉದ್ದಾರ ಅಗುವದಿಲ್ಲ" ಅಂತ ಜಗ್ಗೇಶ್ ಡೈಲಾಗು ಬಿಟ್ಟು ಬಂದ್ರೆ ನಮ್ಮ ಕರ್ತವ್ಯ ಮುಗಿಯಿತು.

ಮೊನ್ನೆ ದೀಪಾವಳಿಗೆ ಹೋದಾಗ ಅನಿಸಿದ್ದಿಷ್ಟು . ಇಲ್ಯಾಕೆ ಹೀಗೆ? ಅಂತಾ. ಸಮಸ್ಯೆ ವ್ಯವಸ್ಥೆಯದಾ? ಅಥವಾ ನಮ್ಮ ಜನಗಳದಾ? ಅಥವಾ ವ್ಯವಸ್ಠೆ ರೂಪಿಸುತ್ತಿರುವ ರಾಜಕಾರಣಿಗಳದಾ?. ಎಲ್ಲೋ ಓದಿದ ನೆನಪು " If we are not part of the solution, then we are part of the problem" ಅಂತಾ, ಹಂಗಾದ್ರೆ ಬಹುಶಃ ನಾವೂ ಸಹ " part of problem" ಆಗಿರಬಹುದಲ್ವಾ? ಕಣ್ಣ ಮುಂದಿರುವ ಸಾವಿರ ಪ್ರಶ್ನೆಗಳಲ್ಲಿ ಕೆಲವಾಕ್ಕಾದರೂ ಉತ್ತರ ಹುಡುಕುವ ಪ್ರಯತ್ನ ಮಾಡಬೇಕಲ್ವಾ?