" ಜಿಂದಗಿ ಕಟಿಂಗ್ ಸಲೂನ್ "
ನಮ್ಮೂರಿನಲ್ಲೇ ಜಗತ್ಪ್ರಸಿದ್ದವಾದ ಕಷ್ಟದಂಗಡಿಯ ನಿಂಗನಿಗೆ, ಯಾವ ದೇವತೆ ಕನಸಿನಲ್ಲಿ ಬಂದು ಅವನ ಅಂಗಡಿಗೆ " ಜಿಂದಗಿ ಕಟಿಂಗ್ ಸಲೂನ್" ಎಂಬ ಹೆಸರು ಸೂಚಿಸಿದ್ದಳೋ ಅರಿಯೆ,ರಾತ್ರೋ ರಾತ್ರಿ ಊರಿನ ಎಕೈಕ ಪಾರ್ಟ ಟೈಂ ಪೆಂಟರ ಆದ ಕೊಟ್ರನನ್ನು ಕರೆಸಿ, ಅವನ ಎಂದಿನ ಕಾಗಕ್ಕ ಗುಬ್ಬಕ್ಕ ಶೈಲಿಯಲ್ಲಿ "ಜಿಂದಗಿ ಕಟಿಂಗ್ ಸಲೂನ್" ಎಂದು ಬರೆಸಿ ಧನ್ಯನಾದ.
ನಿಂಗನಿಗೆ ಈ ಕಸುಬು ಅವನ ಹಿರಿಯರು ಬಿಟ್ಟು ಹೋದ ಎಕೈಕ ಬಳುವಳಿ.ನಮ್ಮೂರಿನ ಸಮಸ್ತ ತಲೆಗಳ ಉಸ್ತುವಾರಿಯೂ ಇವನದೇ ಆಗಿತ್ತು.ಅಷ್ಟಕ್ಕು ಇವನ ಕಷ್ಟದಂಗಡಿ ಎಂದರೆ ಊರಿನ ಮಧ್ಯದ ಪಂಚಾಯತಿ ಕಟ್ಟಡಕ್ಕೆ ಅಂಟಿದ, ಹಳೆ ಕಟ್ಟಿಗೆ ಹಲಗೆಗಳ ಗೂಡಂಗಡಿ.ಅದರ ಒಳಭಾಗವನ್ನೆಲಾ ಶುಕ್ರವಾರದ ಚಿತ್ರಮಂಜರಿಯ ಪೇಪರುಗಳನ್ನು ಅಂಟಿಸಿ, ಆ ಗೂಡಂಗಡಿಗೂ ಗ್ಲಾಮರ್ ನೀಡಿದ್ದ. ಆ ಚಿತ್ರಮಂಜರಿಯ ಪುಟ ಆರಿಸುವಾಗಲೂ ವೀಶೆಷ ಕಾಳಜಿ ವಹಿಸಿ, ಆಗಿನ ಕಾಲದ ಯುವಕರ ಅರಾದ್ಯ ದೈವವಾಗಿದ್ದ ಡಿಸ್ಕೊ ಶಾಂತಿ ಮತ್ತು ಸಿಲ್ಕ ಸ್ಮಿತಾರ ಪೋಸುಗಳು ಇರುವಂತೆ ನೋಡಿಕೊಂಡು ತನ್ನ " Marketing strategy " ತೋರಿದ್ದ.ಗೋಡೆಗೆ ತಗುಲಿದಂತೆ ಇರುವ ಒಂದು ಶೆಲ್ಫು, ಅದರ ಮೇಲೆ ತರಹೇವಾರಿ ಕತ್ತರಿಗಳು,ಹೊಲಸು ತುಂಬಿದ ಬಾಚಣಿಕೆಗಳು ಮತ್ತು ಹೆಸರೇ ಕೇಳಿರದ ಲೋಕಲ ಬ್ರಾಂಡಿನ ಬ್ಲೇಡು,ಶೇವಿಂಗ್ ಕ್ರೀಮು, ಸ್ನೋ,ಪೌಡರಗಳು ಮತ್ತು ಇಡೀ ಅಂಗಡಿಗೆ ಕಳಶಪ್ರಾಯವಾದ ಎರಡು ಅಭಿಮುಖವಾದ ಕನ್ನಡಿಗಳು, ಅದರ ಮೇಲೆ ವಿವಿಧ ಹೇರ ಸ್ಟೈಲಿನ ಫೋಟೊ ಮತ್ತದರ ಪಕ್ಕದಲ್ಲಿ ನಮ್ಮೂರ ಪಡ್ಡೆಗಳ ೨೪/೭ ಆರಾದ್ಯ ದೈವವಾದ ರವಿಚಂದ್ರನ್, ಖೂಷ್ಬುಳನ್ನು ತಬ್ಬಿ ನಿಂತ ದೊಡ್ಡ ಪೊಸ್ಟರು.ಇವೆಲ್ಲದರ ಜೊತೆಗೆ ಅಂಗಡಿಯ ತುಂಬೆಲ್ಲಾ ಬಿದ್ದಿರುವ ಕರಿ ಬಿಳಿ ಬಣ್ಣದ ವಿವಿಧ ಸೈಜಿನ ಕೂದಲುಗಳು..
ಈ ನಿಂಗ,ಹೊಸ ಹೆಸರಿನೊಂದಿಗೆ ತಿರುಗುವ ಖುರ್ಚಿಯನ್ನು ಇಡಿ ಅಬ್ಬಿಗೇರಿಗೆ ಪ್ರಥಮವಾಗಿ ಪರಿಚಯಿಸಿ, ಊರಿನ ಮೊದಲಿಗರ ಪಟ್ಟಿಯಲ್ಲಿ ತಾನು ಸೇರಿಕೊಂಡ.ಅಂಗಡಿಗೆ ಬರುವ ಪಡ್ಡೆಗಳಿಗೆ ಮಿಲ್ಟ್ರಿ ಕಟ್ಟಿಂಗು, ಪಂಕು,ಸ್ಲೋಪು,ಸೈಡ್ ಲಾಕು ಅಂತೆಲ್ಲಾ ಅವರ ತಲೆಗಳನ್ನೆಲ್ಲಾ ತನ್ನ ಪ್ರಯೋಗಳಿಗೆ ಒಡ್ಡುತ್ತಿದ್ದ.ತನ್ನಂಗಡಿಗೆ ಹೊಸ ಟೇಪ ರೇಕಾರ್ಡರ್ ತಂದಾಗಲಂತೂ, ಇಡಿ ದಿನ ರವಿಚಂದ್ರನನ " ಕಮಾನು ಡಾರ್ಲಿಂಗ್" ಅಂತ ಹಾಡು ಹಾಕಿ, ದಾರಿಯಲ್ಲಿ ಓಡಾಡುವ ಹೆಂಗಸರಿಗೆ ಮುಜುಗರ ತಂದಿಕ್ಕುತ್ತಿದ್ದ.
ಈ ನಿಂಗ ಮಾತ್ರ ಹೀಗಿದ್ದನೋ ಅಥವಾ ಎಲ್ಲಾ ಊರ ಕ್ಷೌರಿಕರು ಹೀಗೋ ಗೊತ್ತಿಲಾ! ತಲೆಕೂದಲು ಕೆತ್ತುವದರೊಂದಿಗೆ, ಎಲ್ಲ ಮನೆಗಳ
ಗಾಸಿಪ್ಪುಗಳನ್ನು ಉಪ್ಪು ಖಾರ ಹಚ್ಚಿ ಮಸಾಲೆ ಅರೆದು ಹೇಳುತ್ತಿದ್ದ, ಮಲ್ಯನ ಬಗ್ಗೆ ರಂಜನಿಯ ಕಥೆಗಳನ್ನು ಹೇಳುತ್ತಿದ್ದ,"ಬೆಂಗ್ಳೂರಲ್ಲಿ ರಾಜ್ ಕುಮಾರನ್ನ ಬೈದರೆ ಅಲ್ಲೇ ಒದೆ ಬಿಳುತ್ತವೆ" ಅನ್ನುವ ಅತಿರಂಜಿತ ಸುದ್ದಿಗಳನ್ನು ಹೇಳುತ್ತಿದ್ದ ಮತ್ತು ರಾಜ್ಕುಮಾರನ್ನ "ಅಣ್ಣಾವ್ರು" ಅಂತಲೇ ಕರೀಬೇಕು ಅಂತ ಬೆಂಗಳೂರು ಶಿಷ್ಟಾಚಾರ ಕಲಿಸುತ್ತಿದ್ದ, ಸಿನಿಮಾ ನಟಿಯರ ಬಗ್ಗೆ ರೋಚಕ ಕಥೆಗಳನ್ನು ಹೇಳಿ ನಮ್ಮಂತಹ ಪಡ್ಡೆಗಳಿಗೆ ಮಾರ್ಗದರ್ಶನ ಮಾಡುತ್ತಿದ್ದ ಮತ್ತು ಕೆಲ " ಆ ಥರಾ" ನಟಿಯರ ರೇಟುಗಳನ್ನು ಹೇಳಿ ನಮಗೇನೋ ಒಂತರ ಕೂತುಹಲವನ್ನೂ ಮೂಡಿಸಿದ್ದ.ಅವನ ಅಂಗಡಿ ಎಂದರೆ ಮುಕ್ತವಾಗಿ ಶುಕ್ರವಾರದ ಪೇಪರ್ ಓದುವ ಮತ್ತು ಹೀರೋಯಿನ್ನುಗಳನ್ನು ಮುಕ್ತವಾಗಿ ನೋಡುವ ಅಡ್ಡಾ ಆಗಿತ್ತು, ಹಳೆ ರೂಪತಾರಾ ತಂದಿಟ್ಟು ನಮ್ಮ ಕೂತುಹಲವನ್ನು ಇನ್ನು ಹೆಚ್ಚಿಸುತ್ತಿದ್ದ.ಕಾಲೇಜಿಗೆ ಹೋಗುವಾಗ ಯಾವುದಕ್ಕೂ ಇರ್ಲಿ ಅಂತ ಕ್ರಾಪು ತಿದ್ದಿಕೊಳ್ಳುವವರಿಗೆ ಅವನ ಅಂಗಡಿ ಆಧಾರವಾಗಿತ್ತು.ಹುಡುಗರ ಗುಪ್ತ ಸಮಸ್ಯೆಗಳಿಗೆ ಎಲ್ಲಾ ಬಲ್ಲವನಂತೆ ತನಗೆ ತಿಳಿದದ್ದನ್ನು ಹೇಳಿ ಅವರನ್ನೂ ಇನ್ನೂ ಗೊಂದಲಕ್ಕೆ ಕೆಡವುತ್ತಿದ್ದ.
ಮಧ್ಯವಯಸ್ಸು ದಾಟಿದ್ದರೂ ಒಂದು ಬಿಳಿ ಕೂದಲು ಕಾಣಿಸದ ದೊಡ್ಡ ಗೌಡರ ಕರಿಕೂದಲಿನ ರಹಸ್ಯ ಇವನಿಗೆ ಮಾತ್ರ ಗೊತ್ತಿತ್ತು. ಯಾರೇ ಬಂದು " ಗದ್ಲ ಐತೇನೋ ನಿಂಗಪ್ಪಾ? " ಅಂತ ಕೇಳಿದ್ರೆ " ನೆಕ್ಸ್ಟ ನಿಮ್ದ ಪಾಳೆ" ಅಂತೆಲ್ಲಾ ಒಳು ಬಿಟ್ಟು ಅನೇಕ " ನೆಕ್ಸ್ಟು" ಮಾಡಿ ಅವರನ್ನು ಕಾಯಿಸಿ ಕಾಯಿಸಿ ಸತಾಯಿಸುತ್ತಿದ್ದ.ಬಾಯಿ ಸುಮ್ನಿರದ ನಿಂಗ " ಈ ಭಾರಿ ಕಾಂಗ್ರೆಸ್ಸೇ ಬರೋದು " ಅಂತ ಭವಿಷ್ಯ ನುಡಿದು ನಮ್ಮೂರ ಭಜರಂಗಿಗಳ ಕೆಂಗಣ್ಣಿಗೆ ಗುರಿಯಾಗಿದ್ದ. ಒಟ್ನಲ್ಲಿ ನಿಂಗ ನಮ್ಮುರ ಜೀವನದ ಅವಿಭಾಜ್ಯ ಅಂಗವಾಗಿದ್ದ..
ಮೊನ್ನೆ "..... ಮೆನ್ಸ್ ಹೇರ ಸ್ಟೈಲ್" ಹೆಸರಿನ ಕಷ್ಟದಂಗಡಿಗೆ ಹೋಗಿದ್ದೆ " ಸಾರ್ , ಆಯಿಲ್ ಹಾಕ್ಲಾ " ಎಂದು ಕೇಳಿದಾಗ ಆಯಿಲ್ಲಿನ ಮರ್ಮ ತಿಳಿಯದೆ ಹೂಂ ಅಂದೆ. ಸ್ವಲ್ಪ ಎಣ್ಣೆ ಹಚ್ಚಿ ತಲೆ ಉಜ್ಜಿದವನೆ," ಎಷ್ಟು ಗುರು" ಅಂದ್ದಿದ್ದಕ್ಕೆ " ನೈಂಟಿ ರುಪೀಸ್ ಸರ್" ಎಂದು ತಲೆಯ ಜೊತೆಗೆ ಜೇಬನ್ನು ಬೋಳಿಸಿ ಕಳಿಸಿದಾಗ ನಿಂಗ ನೆನಪಾದ." ಉದ್ರಿ ಮಾನಭಂಗ" ಎಂದು ಬರೆದಿದ್ದರೂ ಚೆನ್ನಾಗಿ ಕೆರೆಸಿಕೊಂಡು "ಹತ್ತಿ ಬಂದಾಗ ಇಸಗೊಂಡು ಹೋಗು" ಎಂದು ನಿರ್ದಾಕ್ಷಿಣ್ಯವಾಗಿ ಹೇಳುತ್ತಿದ್ದದು ಮತ್ತು ಅವನು ಉಚಿತವಾಗಿ ಮಸಾಜ್ ಮಾಡುತ್ತಿದ್ದುದು, ಚಿಕ್ಕವನಾಗಿದ್ದಗ " ಕಷ್ಟಕ ಒಲ್ಲೆ " ಅಂತಾ ಅಳುತ್ತಿದ್ದವನನ್ನು ಕಥೆ ಹೇಳಿ ಕ್ಷೌರ ಮಾಡುತ್ತಿದ್ದದು, ಎಲ್ಲಾ ಕಣ್ಮುಂದೆ ಹಾದು ಹೋಯಿತು..