Sunday, July 20, 2008

ಸುಮ್ನೆ ದೇಶಾವರಿ ಮಾತುಕಥೆ..

ನಿನ್ನೆ ತಮ್ಮನಿಗೆ ಫೋನನಲ್ಲಿ ಹೇಳುತ್ತಿದ್ದೆ " ಲೇ ಇಲ್ಲಿ ಭಾರೀ ಮಳಿ ಹತ್ತೈತಿ, ಊರ ಕಡೆ ಎನ್ ಸುದ್ದಿ?" ಅಂತಾ.ಮಳೆ ಅಂದರೆ ಸಾಕು ಅವನ ಮೂಡೇ ಆಫ್ ಆಗಿ ಬಿಡುತ್ತೆ ಪಾಪ " ಎಲಾ ಇವನ ಇಲ್ಲಿ ಮೋಡ ಬಿತ್ತಿದ್ರೆ ಅಲ್ಲಿ ಮಳೆ ಆಗೈತಿ ನೋಡು, ಈ ಎಚ್,ಕೆ ಕೈ ಹಾಕಿದಾಗಲೇ ಎನೋ ಕಿತಾಪತಿ ಮಾಡ್ತಾನೆ ಅಂತ ಡೌಟಿತ್ತು " ಅಂತಾ ಬೆಂಗಳೂರಿನ ಮಳೆಗೂ, ಎಚ್,ಕೆ ಪಾಟೀಲರಿಗೂ ಲಿಂಕು ಸೇರಿಸಿ ಮಳೆಯ ಹೊಸ ಫಾರ್ಮುಲಾ ಹುಟ್ಟಿಸಿದ. ಮುಂದುವರೆಸಿ " ಯಣ್ಣಾ! ಹೆಸರು ಆಗ್ಲೇ ಹಳ್ಳ ಹಿಡಿದಾವು, ಜುಬ್ರ ಮಳಿನರ ಆದ್ರ ಶೇಂಗಾ ಜೀವಾ ಹಿಡಿತಾವ.ಒಂದು ದೊಡ್ದ ಮಳಿ ಅಗೋವರೆಗೂ ಉಳ್ಳಾಗಡ್ದಿ ಬಿತ್ತು ಮಾತ ಇಲ್ಲಾ! ಮಳಿ ಗೊತ್ತಿನದಲ್ಲಾ ಬ್ಯಾಡ ಅಂದ್ರೂ ನೇಗಿಲಾ ಹೊಡಿಸಿದಿ , ನೋಡೀಗ ಹೊಲದಾನ ಹೆಂಟಿ ಸಹ ಕರಗಿಲ್ಲಾ; ಅದರಾಗ ಹೆಂಗ ಬಿತ್ತಬೇಕು?. ತಿಳಿಲಿಲ್ಲಾ ಅಂದ್ರಾ ಮುಕಳಿ ಮುಚ್ಚಕೊಂಡು ಸುಮ್ನರಿಬೇಕು, ಈಗ ನೋಡು ಎಲ್ಲಾ ಅಡಿಪಾಲು ಬಾಳೆ ಆತು" ಅಂತಾ ಶುದ್ಧ ಗಾವಟಿ ಭಾಷೆಯಲ್ಲಿ ಮಳೆಯನ್ನೂ, ನನ್ನನ್ನೂ ಚೆನ್ನಾಗಿ ಉಗಿದು ಫೋನಿಟ್ಟ.

ಫೋನಿಟ್ಟ ಕೂಡಲೆ ಕಳೆದ ಮೂರು ವರುಶಗಳಿಂದ ’ಒಂದಾದರೂ ಗಂಡು ರಾಶಿ’ ಮಾಡಲೇಬೇಕೆಂದು ಅವ ನಡೆಸಿದ ಹತಾಶ ಯತ್ನಗಳನ್ನೆಲ್ಲಾ ನೆನೆದು ಪಾಪ ಎನಿಸಿತು. ಇದು ಕೇವಲ ನನ್ನ ತಮ್ಮನೊಬ್ಬನ ಹತಾಶೆಯ ನುಡಿಗಳಲ್ಲಾ, ಉತ್ತರ ಕರ್ನಾಟಕದಲ್ಲಿ ಒಣ ಬೇಸಾಯ ನಂಬಿ ಜೀವ ತೇಯುತ್ತಿರುವ ಎಲ್ಲಾ ರೈತರ ದಿನನಿತ್ಯದ ಅಳಲು. ಅವರಿಗೆ ಬರೀ ಪ್ರಕೃತಿಯಲ್ಲಾ, ಈ ವ್ಯವಸ್ಥೆಯೂ ಮೋಸ ಮಾಡುತ್ತಿದೆ. ನಿಮಗೆ ಗೊತ್ತಿರಲಿಕ್ಕಿಲ್ಲ ಪ್ರತಿಯೊಂದು ರೈತ ಯೋಜನೆಗಳು ನೀರಾವರಿ ರೈತರನ್ನು ಗಮನದಲ್ಲಿಟ್ಟುಕೊಂಡೇ ಮಾಡಲಾಗುತ್ತೆ. ಉದಾಹರಣೆಗೆ ರೈತರ ಪಂಪುಗಳಿಗೆ ಉಚಿತ ವಿದ್ಯುತ ನೀಡುವ ಯೋಜನೆಯನ್ನೇ ತೆಗೆದುಕೊಳ್ಳಿ ನಮ್ಮ್ಲಲ್ಲಿ ಎಷ್ಟು ಜನರಿಗೆ ಪಂಪುಸೆಟ್ಟುಗಳಿವೆ? ನಮ್ಮುರ ಕಡೆಗಳಲ್ಲಿ ಸುಮಾರು ೪೦೦ ಅಡಿ ಕೊರೆಸಿದರೂ ನೀರು ಬರುವದಿಲ್ಲಾ, ಅಂತದ್ರಲ್ಲಿ ಎಲ್ಲಿಂದ ಪಂಪುಸೆಟ್ಟು ಬರಬೇಕು?. ನೀರಾವರಿಗೆ ಶೇ೧೧ ಬಜೆಟ್ಟಿನಲ್ಲಿ ಅನುದಾನ ನೀಡಲಾಗುತ್ತೆ. ನಮ್ಮಲ್ಲಿ ಎಲ್ಲಿಂದ ಬರಬೇಕು ನದಿ,ನೀರಾವರಿ? ಅದೇ ಖಾತರಿಯಿಲ್ಲದ ಮಳೆಯೊಂದಿಗೆ ವರ್ಶಪೂರ್ತಿ ಗುದ್ದಾಡಬೇಕು. ಒಮ್ಮೆ ಮಳೆ ಬಾರದೆ ಕಾಡಿದರೆ( ೨೦೦೬) ಮಗದೊಮ್ಮೆ ಅಡ್ಡ ಮಳೆ ಬಿದ್ದು (೨೦೦೭)ಬೆಳೆದ ಬೆಳೆಗಳನೆಲ್ಲಾ ಅಡಿಪಾಲು ಮಾಡಿಬಿಡ್ದುತ್ತವೆ. ಎಲ್ಲಾ ಮೀರಿಯೂ ಉತ್ತಮ ಬೆಳೆ ಬಂದರೆ ನಮ್ಮ ತಾಯಾಣೆಗೂ ಆ ವರ್ಷ ಸರಿಯಾದ ಬೆಲೆ ಇರುವದೇ ಇಲ್ಲಾ. ಯಾವ ಸೌಬಾಗ್ಯಕ್ಕೆ ನಮ್ಮ ರೈತರು ಇನ್ನೂ ಕೃಷಿಯನ್ನೇ ನೆಚ್ಚಬೇಕು?. ನಮಗಾದರೋ ಕೃಷಿ ಆದಾಯದ ಒಂದು ಮೂಲ, ಆದರೆ ಅದನ್ನೆ ನಂಬಿ ಬದುಕುತ್ತಿರುವವರ ಪಾಡೇನು? ಕಳೆದ ಮೂರ್ನಾಕು ವರ್ಷಗಳಿಂದ ನಮ್ಮ ಊರಿನಲ್ಲಿ ಸರಿಯಾದ ಫಸಲೇ ಇಲ್ಲಾ. ಹೀಗಾದರೆ ದುಬಾರಿಯ ದಿನಗಳಲ್ಲಿ ಅವರು ಬದುಕುವದಾದರೂ ಹೇಗೆ?. ಕೆಲ ವರ್ಷಗಳಿಂದ ’ಕೃಷಿ ವಿಮೆ’ ಅನ್ನುವ ಭಾರೀ ಪ್ರಚಾರದ ಯೋಜನೆಯೊಂದು ಜಾರಿಗೆ ಬಂತು.ನನ್ನ ತಮ್ಮನೂ ನಾಲ್ಕಾರು ಕಚೇರಿ ಓಡಾಡಿ, ಎಲ್ಲಾ ಉತಾರ,ದಾಖಲೆ ತಂದು ವಿಮೆ ಮಾಡಿಸಿದ್ದ. ಯಥಾ ಪ್ರಕಾರ ಆ ವರ್ಷವೂ ಮಳೆ ಬಾರದೆ ಹೋಯ್ತು. ನಂತರ ಕೆಲ ವರ್ಷಗಳ ನಂತರ ವಿಮಾದಾರರ ಅರ್ಹ ಫಲಾನುಬವಿಗಳ ಪಟ್ಟಿ ನೋಡಿದರೆ, ನಮ್ಮ ಹೆಸರೇ ಇಲ್ಲಾ. ನಮ್ಮ ಪಕ್ಕದ ಜಮೀನುಗಳಿಗೆ ಹಣ ಬಂದಿದ್ದರೆ ನಮ್ಮ ಹೆಸರೇ ಇಲ್ಲಾ. ಇಡಿ ಊರಿನಲ್ಲಿ ಬರೀ ನಮ್ಮ ಹೊಲಕ್ಕಷ್ಟೆ ಮಳೆ ಬಂದು, ನಮ್ಮ ಹೊಲದಲ್ಲಷ್ಟೆ ಬೆಳೆ ಬೆಳೆಯಲು ಸಾದ್ಯವಾ?. ನನಗಂತೂ ಸಿಕ್ಕಾಪಟ್ತೆ ರೇಗಿ ಹೋಗಿತ್ತು. ತಮ್ಮನಂತೂ ಪಂಚಾಯಿತಿಗೆ ಹೋಗಿ " ಯಾವಾ ಸೂ..ಮಗ ನಿಮಗ ಸಾಲಿ ಕಲಿಸಿದ್ದು? ಹೊಟ್ಟಿಗೆ ಅನ್ನ ತಿಂತಿರೋ ಬ್ಯಾರೆ ಎನರ ತೀಂತಿರೋ, ಬರ ಅಂತ ಬಂದ್ರ ಎಲ್ಲಾರ ಹೊಲಕ್ಕು ಬರುತ್ತೆ, ಒಬ್ಬರ ಹೊಲಕ್ಕೆ ಮಳಿ ಆಗಿ, ಇನ್ನೋಬ್ಬರ ಹೊಲಕ್ಕೆ ಆಗದೇ ಇರುತ್ತನ್ರಲೆ" ಅಂತಾ ಒದರಾಡಿ ಅವರ ಎದುರಿಗೆ ತಹಶೀಲ್ದಾರರಿಗೆ ಮನವಿ ಕೊಟ್ಟು ಬಂದಿದ್ದ. ನಂತರ ಗ್ರಾಹಕ ನ್ಯಾಯಲಯಕ್ಕೆ ಕೇಸು ಹಾಕಿದೆವು. ಕೊನೆಗೂ ಕೇಸು ನಮ್ಮಂತೆ ಆಯಿತಾದರೂ ಲಾಯರಿಗೆ ಶೇ೩೫ ಫೀ ಕೊಟ್ಟು ಉಳಿದದ್ದನ್ನು ಪಾಲಿಗೆ ಬಂದದ್ದು ಪಂಚಾಮೃತ ಅಂತ ಸುಮ್ಮನಾದೆವು. ನಮ್ಮದಲ್ಲದ ತಪ್ಪಿಗೆ ನಾವೇಕೆ ಪರದಾಡಬೇಕೊ ನಾನರಿಯೆ. ನಮ್ಮಲ್ಲಿ ಅನೇಕ ರೈತರ ಜಮೀನುಗಳ ಅವರ ಹೆಸರನಲ್ಲಿ ಇಲ್ಲವೇ ಇಲ್ಲಾ! ಪರಾಂಪರಾಗತವಾಗಿ ಅವನ್ನೆ ಉತ್ತುತ್ತಾ ಬಂದಿದ್ದಾವೆ. ಹಿಂತವರಿಗೆ ಯಾವ ಸರಕಾರಿ ಯೋಜನೆಗಳೂ ತಲುಪುವುದೇ ಇಲ್ಲಾ. ಆದರೆ ಅವರಿಗೆ ಅವುಗಳ ಪರಿವೇಯೇ ಇಲ್ಲಾ.

ಸುಮಾರು ದಿನಗಳ ಹಿಂದೆ ಬ್ಲಾಗೋಂದರಲ್ಲಿ(ಸುಶ್ರುತನ ಬ್ಲಾಗ್ ಅನಿಸುತ್ತೆ, ಸರಿಯಾಗಿ ನೆನಪಿಲ್ಲಾ)ಯಾವೂದೋ ಚರ್ಚೆಯೋಂದರಲ್ಲಿ , ಒಬ್ಬ ಮಹಾಶಯ ಪ್ರತಿಕ್ರಿಯಿಸುತ್ತಾ ನಮ್ಮ ರೈತರಲ್ಲಿ ಮಾರ್ಕೆಟಿಂಗ ತಂತ್ರಗಳೇ ಇಲ್ಲಾ.ಇಳುವರಿ,ಪೂರೈಕೆ,ಬೇಡಿಕೆ ಇತ್ಯಾದಿಗಳನ್ನು ಪ್ರಸ್ತಾಪಿಸಿ ನಮ್ಮ ರೈತರು ಪೆದ್ದರು ಅಂತಾ ಶರಾ ಬರೆದು ಬಿಟ್ಟಿದ್ದ. ನನ್ನ ಪ್ರಕಾರ ಯಾವೋಬ್ಬ ರೈತನೂ ಮಾರ್ಕೇಟಿಂಗನಲ್ಲಿ MBA ಮಾಡುವುದಿಲ್ಲಾ ಮತ್ತು ಯಾವುದೋ ವಿಶ್ವ ವಿದ್ಯಾಲಯದ ಪಧವೀದರರಂತೂ ಅಲ್ಲವೇ ಅಲ್ಲಾ. ಅಥವಾ ಕೃಷಿ ಪದವಿ ಮಾಡಿದವರು ಹೊಲಕ್ಕೆ ಬಂದು ಊಳುವುದೂ ಇಲ್ಲಾ. ಯಾವುದೇ ಅಡ್ದಕಸುಬಿ ಕಂಪನಿಗೆ ಮನೆಹಾಳು ತಳಿ ಕಂಡು ಹಿಡಿದು ಕೊಟ್ಟು ದುಡ್ದು ಮಾಡುವುದರಲ್ಲೆ ಅವರು ಬ್ಯುಸಿ. ಇನ್ನು ಕೆಲವರು ಕೃಷಿ ಇಲಾಖೆ ಸೇರಿ ದೊಡ್ದ ದೊಡ್ದ ಹೆಗ್ಗಣುಗಳಾಗಿಬಿಡುತ್ತಾರೆ. ಅಂತದುರಲ್ಲಿ ನಮ್ಮ ರೈತರಿಗೆ ಇಳುವರಿ,ಪೂರೈಕೆ,ಬೇಡಿಕೆ ಅಂದರೆ ಎಲ್ಲಿಂದಾ ತಿಳಿಯಬೇಕು?. ಬೇಕಾದರೇ ಕೇಳಿ ನೋಡಿ ಅವರು ಹೇಳುವುದೇ ಇಷ್ಟು "ಯಪ್ಪಾ ಭೂಮಿ ತಾಯಿ ಕಣ್ಣ್ ತೆಗೆದ್ರ ಎನ್ ಕಡಿಮೆ ಮಾರಯಾ.ಆಕಿ ಮನಸ್ಸು ಮಾಡಬೇಕಷ್ಟ!" ಅಂತಾ ನಿರಾತಂಕವಾಗಿ ತಮ್ಮೆಲ್ಲಾ ಕಷ್ಟಗಳನ್ನು ಭೂಮಿ ತಾಯಿ ಮೇಲೆ ಹಾಕಿ ನಿರಮ್ಮಳವಾಗಿರುತ್ತಾರೆ.

ಒಂದೇ ಒಂದು ಹಂಗಾಮಿನ ಬೆಳೆ ಬಾರದೇ ಇದ್ದರೂ ಬಾಯಿ ಬಡಿದುಕೂಂಡು ರಾಜಕೀಯ ಮಾಡಿಬಿಡುವ ಹಳೇ ಮೈಸುರಿನ ಕಡೆಯ " ಶ್ರೀಮಂತ" ರೈತರೆಲ್ಲಿ? ಮತ್ತು ಮಳೆ ಆಗದೆ ಹೋದರೂ ಬದುಕು ಕಟ್ಟಿಕೊಳ್ಳಲು ಹುಟ್ಟಿದ ಊರು,ಸಾಕಿದ ದನಗಳನ್ನು ಸ್ತಿತಿವಂತರ ಮನೆಗೆ ಹೊಡೆದು ಬೆಂಗಳುರು,ಗೋವಾಕ್ಕೆ ಗುಳೆ ಹೋಗುವ ಬಾಯಿ ಸತ್ತ ನನ್ನ ರೈತರೆಲ್ಲಿ?. ಆದರೂ ರೈತರು ಅಂದ ಕೂಡಲೇ ನಮ್ಮ ರಾಜಕಾರಣೆಗಳಿಗೆ ನೆನಪಾಗುವುದು ಕಾವೇರಿ,ಕಬ್ಬು,ನೀರಾವರಿ ಮತ್ತು ಅದರ ಸುತ್ತಲಿನ ರಾಜಕೀಯ. ನನ್ನ ಜನ ಸಾಯುತ್ತಲೇ ಇರುತ್ತಾರೆ, ಇವರು ಅವರ ಸಾವಿನ ಕಾರಣಗಳನ್ನು ಪಟ್ಟಿ ಮಾಡುತ್ತಲೇ ಇರುತ್ತಾರೆ. ಹಾಗೆ ನೋಡಿದ್ರೆ ಇಷ್ಟೆಲ್ಲಾ ಕಷ್ಟಗಳ ನಡುವೆ ಅವರಿಗೆ ಬದುಕಲು ಕಾರಣಗಳನ್ನು ಹುಡುಕಬೇಕು ಅಲ್ವಾ?

10 comments:

ಅರೇಹಳ್ಳಿ ರವಿ said...
This comment has been removed by the author.
ಅರೇಹಳ್ಳಿ ರವಿ said...

ಸಂತೋಷ್
ನಿಮ್ಮ ಕಾಳಜಿ ನೂರು ಪ್ರತಿಶತ ನಿಜ. ಕರ್ನಾಟಕ ರೈತ ಸಂಘವೆಂದರೆ ಅದರ ಸದಸ್ಯರು ನೀರಾವರಿ ಬೆಳೆ ಬೆಳೆಯುವ ರೈತರೇ ಆಗಿರುತ್ತಾರೆ. ಕರ್ನಾಟಕದಲ್ಲಿ ರೈತರು ಬೆಳೆಯೋದು ಕಬ್ಬು, ಭತ್ತ ಮಾತ್ರವೇ ಅಂತ ಇವರ ಭಾವನೆ.

ಹಾಗೆಯೇ ನಮ್ಮ ಜಗತ್ಪ್ರಸಿದ್ಧ ರೈತ ನಾಯಕರೂ ಎದೇ ನೀರಾವರಿ ಭಾಗದಿಂದ ಎದ್ದು ಬಂದವರು. ಕಾವೇರಿ ನದಿಯಲ್ಲಿ ನೀರಿಲ್ಲವೆಂದರೆ ಅದನ್ನು ಕನ್ನಡಕ್ಕೆ ಸಮೀಕರಿಸಿ ಕನ್ನಡ ಹೋರಾಟ ಮಾಡುತ್ತಾರೆ. ಅದಕ್ಕೆ ಕನ್ನಡ ಹೋರಾಟಗಳಿಗೆ ಮಲೆನಾಡು ಮತ್ತು ಕರಾವಳಿ ಭಾಗಗಳಲ್ಲಿ ಮೂರು ಕಾಸಿನ ಬೆಲೆಯೂ ಸಿಗೋಲ್ಲ.

ಗಮನಿಸಿ ನೋಡಿದರೆ ಬೆಂಬಲ ಬೆಲೆಗಳೆಲ್ಲಾ ಸಿಗೋದು ಕಾಫಿ, ತೆಂಗು, ಭತ್ತ, ಕಬ್ಬು, ತಂಬಾಕು, ತರಕಾರಿ ಇಂಥದ್ದೇ ಬೆಳೆಗಳಿಗೆ. ಒಣ ಬೇಸಾಯದ ಬೆಳೆಗಳು ಇಲ್ಲಿ ಇಲ್ಲವೇ ಇಲ್ಲ ಎಂಬಷ್ಟರ ಮಟ್ಟಿಗೆ ನೀರಾವರಿ ರೈತರ ರಾಜಕೀಯ ಬಲವಾಗಿದೆ

ಸಂತೋಷಕುಮಾರ said...

ರವೀ.. ನಿಮ್ಮ ಮಾತು ನಿಜ. ಕಾವೇರಿ ಪ್ರದೇಶದ ರೈತರನ್ನು ಹೊರತುಪಡಿಸಿದರೆ ಉಳಿದವರು ರೈತರೇ ಅಲ್ಲವೇನೋ ಎಂಬಂತೆ ಬಿಂಬಿಸಲಾಗುತ್ತೆ.ನಮ್ಮ ಭಾಗದ ಜನಪ್ರತಿಗಳಂತೂ ಹಿಂತವುಗಳಿಗೆಲ್ಲಾ ತಲೆ ಕೆಡಿಸುವುಗೊಳ್ಳುವುದೇ ಇಲ್ಲಾ. ರೈತ ಸಂಪರ್ಕ ಕೇಂದ್ರ ಅಂತಾ ಮಾಡಿದರು, ಅದರ ಬಾಗಿಲೂ ಯಾವಗಲೂ ಮುಚ್ಚಿರುತ್ತದೆ ಅಥವಾ "ಸಾಹೇಬರು ಚಾ ಕುಡಿಯಾಕ ಹೋಗ್ಯಾರಿ" ಅನ್ನುವ ಮಾತುಗಳೆ ಜಾಸ್ತಿ. ನಮ್ಮಲ್ಲಿ ಎಶ್ಟು ಜನರಿಗೆ "ಯಶಸ್ವಿನಿ" ಕೊಡುಗೆ ಬಗ್ಗೆ ಗೊತ್ತು?, ಆಶ್ರಯ ಯೋಜನೆಯ ಮನೆಗಳಂತೂ ರಾಜಕೀಯ ಪುಡಾರಿಗಳ ವಸೂಲಿ ರಾಜಕಾರಣಕ್ಕೆ ಅನುಕೂಲ ಮಾಡಿಕೊಟ್ಟಿವೆ.. ಎಲ್ಲಾ ಸರಕಾರಿ ಯೋಜನೆಗಳು ಕೆಲ ಉಳ್ಳ ರೈತರ ಸೊತ್ತಾಗಿ,ನಿಜವಾದ ಫಲಾನುಭವಿಗಳನ್ನು ತಲುಪುತ್ತಲೇ ಇಲ್ಲಾ..

Anonymous said...

ಕಾವೇರಿ ತೀರದ ರ್‍ಐತರಂತೆ ನಮ್ಮ ಉ.ಕ.ದ ರೈತರಿಗೇಕೆ
ರಾಜಕೀಯ ಸಾಧ್ಯವಾಗುವದಿಲ್ಲ?
ಕಾರಣ ನಿಚ್ಚಳವಾಗಿದೆ:ಅವರಿನ್ನೂ ಅಷ್ಟೊಂದು corrupt ಆಗಿಲ್ಲ.
ಅಲ್ಲಿನ್ನೂ ಮುಗ್ಧತೆ,ಪೆದ್ದುತನ ಮನೆಮಾಡಿವೆ.
ಹಾಗಂತ ಅದನ್ನೆಲ್ಲ ನಾವು "ಹೆಮ್ಮೆ" ಅಂತ ಭಾವಿಸಿಕೊಂಡರೆ ಹ್ಯಾಗೆ?
ಮುಖ್ಯವಾಗಿ ಹಾಸನ,ಮೈಸೂರು ಕಡೆ ಇರುವಂಥ loud and loaded ರೈತ ನಾಯಕರು
ಉ.ಕ್.ದ ಕಡೆ ಇಲ್ಲದೇ ಇರೋದಾ..?
ಒಟ್ಟಿನಲ್ಲಿ ಸತ್ಯವಾದ ಚಿತ್ರಣ.ದುರಂತದ ಕಥೆ!
-ರಾಘವೇಂದ್ರ ಜೋಶಿ.

sunaath said...

ಸಂತೋಷ,
ನಮ್ಮ ರೈತರ ದುರಂತ ಬದುಕಿನ ಕತೆ ಓದಿ, ಬ್ಯಾಸರ ಆತು.
ಯಾವಾಗರ ಒಮ್ಮೆ ಛಲೋ ಪೀಕು ಬಂದರೂ ಅದಕ್ಕ ಕಿಮ್ಮತ್ತು
ಸಿಗೂದಿಲ್ಲ.
ಭಾಳ comprehensive ಆಗಿ ಬರದೀರಿ.

Anonymous said...

ಸಂತೋಷ,
ಓದಿ ತಲೆಕೆಟ್ಟು ಹೋಯಿತು ಕಣ್ರಿ ಸಂತೋಷ್. ಬಹಳ ಖಡಕ್ಕಾದ, ಪ್ರಾಕ್ಟಿಕಲ್ ಬರಹ. ಮಲೆನಾಡಿನಿಂದ ಬೆಳೆದುಬಂದು ಈಗ ಸರಿಯಾಗಿ ಮಳೆಯೂ ಆಗದ ನನ್ನ ಹಳ್ಳಿಯಲ್ಲಿ ಕಡಿಮೆ ನೀರು ಬಳಸಿ ಬೇಸಾಯ ಮಾಡಿಸಲು ಹೆಣಗುತ್ತಿರುವ ನನಗೆ ನಿಮ್ಮ ಕಾಳಜಿ ಅರ್ಥವಾಗುತ್ತದೆ. ರವಿಯವರು ಹೇಳಿರುವ ಮಾತುಗಳು ನೂರಕ್ಕೆ ನೂರರಷ್ಟು ನಿಜ.
-ಟೀನಾ
(ಇನ್ನೂ ಡಿಲಿಟ್ ಮಾಡುವಂಥ ಕಮೆಂಟುಗಳು ಬರುತ್ತಿದಾವೋ? ಮಾಡರೇಟ್ ಮಾಡುವ ಆಪ್ಷನ್ನು ಹಾಕಿರಲ್ಲ!! :))

ಸಂತೋಷಕುಮಾರ said...

ರಾಘವೇಂದ್ರ,
"ಕಾರಣ ನಿಚ್ಚಳವಾಗಿದೆ:ಅವರಿನ್ನೂ ಅಷ್ಟೊಂದು corrupt ಆಗಿಲ್ಲ.
ಅಲ್ಲಿನ್ನೂ ಮುಗ್ಧತೆ,ಪೆದ್ದುತನ ಮನೆಮಾಡಿವೆ"
ಪೆದ್ದುತನ, ದಡ್ದತನ ಅನ್ನಿ, ನಾನೂ ಒಪ್ತೀನಿ. ಮುಗ್ಥತೆ ಮಾತ್ರ ಖಂಡಿತ ಅಲ್ಲಾ.. ಕೈಲಾಗತನ ಅಂದರೂ ತಪ್ಪಿಲ್ಲಾ..
ನಮ್ಮೂರಲ್ಲೂ ರೈತ ಸಂಘ ಇದೆ, ಆದರೆ ಕೇವಲ ಹೆಸರಿಗೆ ಮಾತ್ರ, ಅಲ್ಲಿರೊರು ನಿಜವಾದ ರೈತರೂ ಅಲ್ಲಾ; ಅವರಿಗೆ ನಿಜವಾದ ರೈತರ ಸಮಸ್ಯೆಗಳು ಅರಿವಾಗುವುದೇ ಇಲ್ಲಾ. ಬೆಳಗಾವಿ ಭಾಗದಲ್ಲಿ ಪ್ರಭಾವಿಯಾಗಿದ್ದ ಬಾಬಾಗೌಡ ಪಾಟೀಲರಂತ ರೈತ ಸಂಘದ ನಾಯಕರಿದ್ದರೂ, ತಮ್ಮ ರಾಜಕೀಯ ಮಾಹತ್ವಾಕಾಂಕ್ಷೆ ತೀರಿಸಿಕೊಳ್ಳಲ್ಲು ರೈತ ಚಳುವಳಿಯ ನೆಪ ಹೇಳಿ ಮುಂದೆ ಬಂದು, ಕೊನೆಗೆ ರೈತ ಸಂಘಕ್ಕೆ ಚಿಪ್ಪು ಕೊಟ್ಟು ಬಿಜೆಪಿ ಸೇರಿ ಮಂತ್ರಿಯೂ ಆದರು. ಹಿಂತಹ ರೈತನಾಯಿಕರನ್ನು ನಂಬಿ ನಮ್ಮ ಕಡೆಯ ರೈತ ಹೇಗೆ ಉದ್ದಾರ ಆದಾನು?

ಸುನಾಥ,
ನೀವೆ ಹೇಳಿ ಜೋಳ, ಗೋಧಿ, ಸೂರ್ಯ ಕಾಂತಿ, ಹತ್ತಿ ಇತ್ಯಾದಿ ಬೆಳೆಗಳಿಗೆ ಇರುವ ಬೆಲೆ?.
ಕಾಫೀ ಮಂಡಳಿ, ಏಲಕ್ಕಿ ಮಂಡಳಿ, ತೆಂಗು ಪ್ರಾಧಿಕಾರ,ತೋಟಗಾರಿಕೆ ಇಲಾಖೆ ಇವುಗಳಲ್ಲಿ ಒಂದಾದರೂ ಊ.ಕರ್ನಾಟಕದ ರೈತನಿಗೆ ಉಪಯೋಗವಿದೆಯಾ?

ಟೀನಾ,
ಭಾಳ ದಿನಾ ಆದ ಮೇಲೆ ಇತ್ತ ಕಡೆ ಸವಾರಿ? :)
ಅಯ್ಯೋ ನಮ್ ಕಥೆ ಇದ್ದಿದ್ದೆ ಬಿಡಿ, ದಿನಾ ಸಾಯುವವರಿಗೆ ಅಳೋರು ಯಾರು? ಅನ್ನೋ ಹಾಗಿದೆ ನಮ್ ಸ್ಥಿತಿ..
ಎನೋ ಪಾ, ನನಗಂತೂ ಯಾವುಗೇ ಕಮೆಂಟೂಗಳು ಮಾಡರೇಟ್ ಮಾಡಲು ಬರ್ತಿಲ್ಲಾ ಅಥವಾ ಅಂತಹಾ ಯಾವುದೇ ಆಪ್ಟನ್ನು ನಾನು ಇಟ್ಟಿಲ್ಲಾ. ಬೇಕಾದವರೂ ಬೇಕಾದು ಬರೆದು ಹೋಗಲಿ ಅಂತಾ ಬಿಟ್ಟಿದ್ದೇನೆ.. ಮುಕ್ತ ಮುಕ್ತ ಮುಕ್ತ :)
ಅಷ್ಟಕ್ಕೂ ಯಾವುದೇ ಒಂದು ಬರಹಕ್ಕೆ ಬಂದ ಪ್ರತಿಕ್ರಿಯೆಗಳನ್ನು ನನ್ನೀಡಿ ಬರಹಗಳಿಗೆ ಅನ್ವಯಿಸಿಕೊಳ್ಳುವೂದೂ ಇಲ್ಲಾ. ಪ್ರತಿಕ್ರಿಯೆಗಳು ಅಂದರೆ ಹೊಗಳಿಕೆಗಳು ಮಾತ್ರ ಆಗಿರಬೇಕು, ಅಂತಾ ಬಯಸುವದೂ ಇಲ್ಲಾ. ಎಲ್ಲರನ್ನೂ ಮೆಚ್ಚಿಸ್ತಿನಿ ಅನ್ನುವ ಹುಂಬ ಪ್ರಯತ್ನವನ್ನೆಂದೂ ಮಾಡುವುದಿಲ್ಲಾ.. Its all part of game ಅಷ್ಟೆ. ಸಚಿನ ತೆಂಡೂಲ್ಕರ್ ಹೆಚ್ಚು ರನ್ ಹೊಡೆದಿದಾನೆ ಅಂದ ಮಾತ್ರಕ್ಕೆ ಕೆಟ್ಟದಾಗಿ ಆಡುತ್ತಿರುವಾಗ ಬೈಯಬಾರದು ಅಂತಾ ಏನಿಲ್ಲವಲ್ಲ :). ಆ ಪ್ರತಿಕ್ರಿಯೆ ಅವನ ಸದ್ಯದ ಆಟಕ್ಕೆ ಅನ್ವಯಿಸುತ್ತೆ ವಿನಾ ಅವನ ಇಡಿ ಕ್ರಿಕೆಟ್ ಜೀವನಕ್ಕಲ್ಲಾ..

ಎನೇ ಆಗಲಿ ಬ್ಲಾಗಿಗೆ ಬರುತ್ತಾ ಇರಿ..

ವಿ.ರಾ.ಹೆ. said...

ರೈತರ ಕಥೆ - ವ್ಯಥೆ ಕೇಳಿ ಬೇಜಾರಾಗುತ್ತದೆ.
ಈಗ ಎಲ್ಲಿ ಹೋದರೂ ಅಷ್ಟೆ ಈ ಸುಖಕ್ಕೆ ಯಾಕೆ ವ್ಯವಸಾಯ ಮಾಡಬೇಕು ನಾವು ಅನ್ನುತ್ತಾರೆ. ಮೊದಲಾದರೆ ಬೇರೆ ಉದ್ಯೋಗಗಳಿರಲಿಲ್ಲ. ಆದರೆ ಈಗ ಹಲವಾರು alternatives ಇರುವಾಗ ಹೀಗೆ ರೈತನಿಗೆ ಕಷ್ಟ ಕೊಡುತ್ತಿದ್ದರೆ ಮುಂದೊಂದು ದಿನ ಈ ದೇಶ ಎಲ್ಲವನ್ನೂ ಆಮದು ಮಾಡಿಕೊಳ್ಳಬೇಕಾದ ಸ್ಥಿತಿಗೆ ಬರಬಹುದು.

Anonymous said...

your writing is very good.. and covered realistic subjct.

Umesh Balikai said...

ಸಂತೋಷ್,

ಭಾಳ ಚಂದ ಬರೆದಿರ್ರೀ.. ನೀವು ಹೇಳೋದು ಖರೆ ಆದ.. ಎಲ್ಲ ಸರ್ಕಾರಿ ಯೋಜನೆಗಳೂ ನೀರಾವರಿ ರೈತರಿಗೋಸ್ಕರ ಮಾಡಿದ್ವು.. ನಮ್ಮ ರೈತರ ಗೋಳು ಕೆಳೋರ್‍ಯಾರು ಇಲ್ಲ .. ನಮ್ಮ ಕಡೆದಾವ್ರು ಮಂತ್ರಿ, ಕಂತ್ರಿ ಏನ ಆದ್ರೂ ನಮ್ಮೊರ ಸ್ಥಿತಿ ಸುಧಾರ್ಣೆ ಆಗ್ಲಿಲ್ಲ... ನಮ್ಮದೂ ಮೂಲ ಕೃಷಿ ಮನೆತನ ಆಗಿದ್ರೂ ನೀವು ಹೇಳಿದ ಎಲ್ಲ ತೊಂದರೆಗಳಿಂದಾಗಿ ಇತ್ತೀಚಿನ ಕೆಲವು ವರ್ಷಗಳಿಂದ ಕಮತಾ ಮಾಡೂದ ಬಿಟ್ಟಿದ್ವಿ.. ಈ ಸಲ ಬ್ಯಾಡಾ ಬ್ಯಾಡಾ ಅಂದ್ರೂ ನಂ ಅಣ್ಣ ಹೊಲಾ ಮಾಡಾಕಹತ್ಯಾನ, ನೋಡಬೇಕು ಎಷ್ಟರಮಟ್ಟಿಗೆ ಅದರಿಂದ ಲಾಭ ಅಗುತ್ತೋ...