Sunday, November 18, 2007

ನಾವು ಶಾಪಗ್ರಸ್ತರೇ?


ಗದಗ-ಹುಬ್ಬಳ್ಳಿ ರಸ್ತೆ ಮತ್ತಷ್ಟು ಕೆಟ್ಟು ಕೆರ ಹಿಡಿದಿದೆ.ರಾಮುಲು ಏನು ಕಿಸಿದರೂ ಗದಗೆಂಬ ಗದಗನ್ನು ಇನ್ನೂ ಸುಧಾರಿಸಲು ಅಗ್ತಿಲ್ಲಾ. ಮ್ಯಾಂಗನೀಸ ಲಾರಿಗಳ ಅಬ್ಬರ ಇನ್ನೂ ಕಡಿಮೆ ಆಗಿಲ್ಲಾ.ಯಾವ ಸಾರ್ವಜನಿಕ ಸ್ಥಳಕ್ಕೆ ಹೋದರೂ ಗುಟಖಾದ ವಾಸನೆ ತಪ್ಪುವದಿಲ್ಲಾ.ಸಾರ್ವಜನಿಕ ಶೌಚಾಲಯಗಳಿಗೆ ಹೋದರಂತೂ "ಇಶ್ಶಿ" ಎಂದು ಮೂಗು ಮುಚ್ಚಿಕೊಳ್ಳದೆ ಹೊರಬರಲಾಗುವದಿಲ್ಲಾ.ಮಣ್ಣಿವಣ್ಣನ್ ಎಷ್ಟು ಲಗಾ ಒಗದ್ರು ಹಳೇ ಹುಬ್ಬಳ್ಳಿಯ ರಸ್ತೆಗಳನ್ನು ಮತ್ತು ಅವುಗಳ ಪಕ್ಕವೇ ಒಂದು, ಎರಡು ಮಾಡಿ ಧನ್ಯರಾಗುವ ಪ್ರಜಾಪ್ರಭುಗಳನ್ನು ಸುಧಾರಿಸಲಾಗುವದಿಲ್ಲ.ಹೊರಟ್ಟಿ ಶಿಕ್ಷಣ ಮಂತ್ರಿಯಾಗಿ ಕಂಡಲ್ಲಿ ರಿಬ್ಬನ್ನು ಕತ್ತರಿಸಿದ್ದೆ ಬಂತು ನಯಾ ಪೈಸೆಯಷ್ಟೂ ಶಿಕ್ಷಣದ ಗುಣಮಟ್ಟ ಅಥವಾ ಶಾಲೆಗಳ ಗುಣಮಟ್ಟ ಸುಧಾರಿಸಲಾಗಲಿಲ್ಲ್ಲ. ಅಲ್ಲಿಗೆ ರೈಲು ಬರುತ್ತೆ, ಇಲ್ಲಿಗೆ ವಿಮಾನ ನಿಲ್ದಾಣ ಬರುತ್ತೆ ಅಂತ ಹಳಿ ಇಲ್ಲದೆ ರೈಲು ಬಿಟ್ಟಿದ್ದೆ ಬಂತು ದೇವರಾಣೆಗೂ ಬರುವ ನೀರಿಕ್ಷೆಯಂತೂ ಇಲ್ಲಾ. ಪಂಚನದಿಗಳ ಜಿಲ್ಲೆ ಅಂತ ಹಾಡಿ ಹೊಗಳಿ ಅಟ್ಟಕ್ಕೆರಿಸಿದ ಬಿಜಾಪುರ ಜಿಲ್ಲೆಯಲ್ಲಿನ ಹಳ್ಳಿಗಳಲ್ಲಿನ ಕುಡಿಯುವ ನೀರಿನ ಸಮಸ್ಯೆ ಇಂದಿಗೂ ತಪ್ಪಿಲ್ಲಾ. ಬೇಸಿಗೆಯಲ್ಲಿ ಇಡಿ ಗದಗಕ್ಕೆ "ನೀರು" ಎನ್ನುವುದು ಮರೀಚಿಕೆ ಆಗಿ ಬಿಡುತ್ತೆ. ( ಕಳೆದ ಕೆಲ ವರ್ಷಗಳಿಂದ ರೈಲಿನಲ್ಲಿ ಕುಡಿಯುವ ನೀರು ಪೂರೈಸಿದ್ದಾರೆ ನಮ್ಮ ಜನಪ್ರತಿನಿಧಿಗಳು ) . ಹುಬ್ಬಳ್ಳಿ- ಧಾರವಾಡದ ಹೈಕೋರ್ಟಿಗೆ ಇನ್ನೂ ಜಾಗ ಹುಡುಕುತ್ತಿದ್ದಾರೆ ಮತ್ತು ಹುಡುಕುತ್ತಲೇ ಇರುತ್ತಾರೆ. ಇನ್ನು ದೂರದ ಗುಲ್ಬರ್ಗ, ಬೀದರ,ಬಳ್ಳಾರಿಗಳ ಬಗ್ಗೆ ಹೇಳಿದರೆ ನಮ್ಮ ಕೆರ ತಗೊಂಡು ನಾವೇ ಹೊಡ್ಕೊಬೇಕು ಹಾಗಿದೆ ಅಲ್ಲಿಯ ಸ್ಥಿತಿ..

ಎಷ್ಟು ತಲೆ ಕೆರೆದುಕೋಂಡರೂ ಅರ್ಥವಾಗದಿರುವುದೇ ಇದು; "ಕಾವೇರಿ" ಅಂದ ಕೂಡಲೇ ಚಪ್ಪಲಿ ಹಾಕ್ಕೊಂಡು, ಮೈಕು ಹಿಡ್ಕೊಂಡು "ಪಾದಯಾತ್ರೆ" ಅಂತ ತಮ್ಮ "ಜನಪರ ಕಾಳಜಿ(?)" ಪ್ರದರ್ಶಿಸಿಲು ಸನ್ನಧ್ಧರಾಗುವ ನಮ್ಮ ರಾಜಕಾರಣಿಗಳಿಗೆ
ಅದೇ ಕಳಕಳಿಯನ್ನು ಕೃಷ್ಣೆಯ ಅಥವಾ ಸಮಸ್ತ ಉ.ಕರ್ನಾಟಕದ ಕುಡಿಯುವ ನೀರಿನ ಸಮಸ್ಯೆಗೆ ಇತಿ ಹಾಡಬಲ್ಲ ಮಹದಾಯಿ ನದಿ ಯೋಜನೆಯ ವಿಷಯದಲ್ಲಿ ಯಾಕೆ ತೋರಿಸಲಾಗುವಿದಿಲ್ಲಾ? ನಮ್ಮ ವಿಷಯದಲ್ಲಿ ಯಾಕೆ ಉದಾಸೀನ ಭಾವ? ಕೇವಲ ಒಂದು ಹಂಗಾಮಿನ ಕಬ್ಬು, ಅಥವಾ ಭತ್ತ ಬರದೇ ಹೋದ್ರೆ ಸತ್ತೇ ಹೋಗುತ್ತೀವಿ ಅನ್ನೊ ತರ ಮಾತಾಡುವ ಹಳೆ ಮೈಸುರು ರೈತರ ಮದ್ಯೆ ಬರೀ ಬರದಲ್ಲೇ ಬದುಕು ದೂಡುತ್ತಿರುವ ನನ್ನ ಜನಗಳ ನೋವು ಯಾಕೇ ಅರ್ಥವಾಗುವುದಿಲ್ಲಾ?. ಪ್ರತಿ ವರ್ಷವೂ ಅದೇ ಬೆಲೆ ಕುಸಿತ, ಅದೇ ಭಿಕ್ಷೆ ಎಂಬಂತೆ ಘೋಷಿಸುವ ಬೆಂಬಲ ಬೆಲೆಯ ನಾಲಾಯಕ್ ನಾಟಕಗಳು. ಪ್ರತಿ ವರ್ಷವೂ ಅದೆ ಕಥೆ. "ಹಾಡಿದ್ದು ಹಾಡೊ ಕಿಸುಬಾಯಿ ದಾಸ" ಎಂಬಂತೆ ಅವೇ ಹಳೆ ಭರವಸೆಗಳು, ಕಣ್ಣೊರಿಸುವ ಹಲ್ಕಟ್ ರಾಜಕೀಯ.ಎಲ್ಲಾ ಸಮಸ್ಯೆಗಳಿಗೂ ಒಂದು ಸಮರ್ಥ ಕೃಷಿನೀತಿ ರೂಪಿಸೋಕೆ ಇನ್ನೂ ಎಷ್ಟು ಹೆಣ ಬೀಳಬೇಕು?.ಬೇಕಾದ್ರೆ ಗಮನಿಸಿ ನೋಡಿ ಬೆಂಗಳೂರಿನ ಬಹುತೇಕ ಕಾಮಗಾರಿಗಳಲ್ಲಿ ದುಡಿಯುತ್ತಿರುವ ಕೂಲಿ ಕಾರ್ಮಿಕರು ಬರೀ ಉ.ಕರ್ನಾಟಕದವರು. ಅಲ್ಲಿಯೇ ಅವರಿಗೆ ಅನ್ನ ಸಿಕ್ಕಿದ್ದರೆ ಇಲ್ಯಾಕೆ ಬಂದು ಕೈಯೊಡ್ದಿ ನಿಲ್ಲುತ್ತಿದ್ದರು? ಸರಕಾರದ ಯೋಜನೆಗಳು ತಲುಪುದಾದರೂ ಯಾರನ್ನು?.ಇತ್ತೀಚಿಗಂತೂ ಮೈನಿಂಗ ಲಾರಿಗಳು ಅಳುದುಳಿದ ಉ.ಕರ್ನಾಟಕದ ರಸ್ತೆಗಳನ್ನೂ ಹಾಳು ಮಾಡಿ ಹತ್ತಿ ಬಿತ್ತುತ್ತಿವೆ, ಕೇಳುವುವರು ಯಾರೂ ಇಲ್ಲದದಂತಾಗಿದೆ. ಯಾಕಂದ್ರೆ ಬಹುತೇಕ ಮೈನಿಂಗ ಕಂಪನಿಗಳು ನಮ್ಮ ನನಪ್ರತಿನಿಧಿಗಳವೇ ಆಗಿವೆ, ಬೇಲಿಯೇ ಎದ್ದು ಹೊಲ ಮೆಯ್ದರೆ ಮಾಡುವುದಾದ್ರು ಏನು? . ಇದನ್ನು ಬಿಟ್ಟ ಹಾಕಿ ಇನ್ನು ಹಲವಾರು ಅವಧಿಗೆ ಅರಿಸಿ ಬರುತ್ತಿರುವ ಮತ್ತು ರಾಜ್ಯದ ಅತ್ಯುನ್ನತ ಪದವಿ ಅಲಂಕರಿಸಿದ ಧರ್ಮಸಿಂಗ, ಖರ್ಗೆ ಮೊದಲಾದವರು ಕಿಸಿದಿದ್ದಾದರೂ ಎನು? ಪಧವೀದರ ಕ್ಷೇತ್ರದಿಂದ ಆರಿಸಿ ಬರುತ್ತಾ ಇರುವ ಎಚ್ಕೆ, ನಮ್ಮ ಪಧವೀದರರಿಗೆ ಮಾಡಿದ ಅನುಕುಲತೆಯಾದ್ರು ಏನು?. ನೀರಾವರಿ ಖಾತೆ ಇಟ್ಕೊಂಡೂ ಸಹ ಇನ್ನೂ ಉ.ಕರ್ನಾಟಕದ ಹಲವು ಯೋಜನೆಗಳು ಅಮೆಗತಿಯಲ್ಲಿ ನಡೆಯುತ್ತಿದ್ದರೂ ಇವರು ಹರಿದಿದ್ದಾದರೂ ಏನು?

ಮುಕಳಿ ತಿರುವಿದಲ್ಲಿ ಒಂದು ಪಾರ್ಕು,ಹೆಜ್ಜೆಗೊಂದು ಬೀದಿದೀಪ, ಹಂಗೆ ತಿಂಗಳುಗಳಿಗೊಮ್ಮೆ ಡಾಂಬರು ಕಾಣುವ ರಸ್ತೆಗಳು ಇವೆಲ್ಲ ಬೆಂಗಳೂರಿಗೆ ಮಾತ್ರವಾ?. ಇಡೀ ಹುಬ್ಬಳ್ಳಿಯಲ್ಲಿ ಇರುವ ಎಕೈಕ ಪಾರ್ಕನ್ನೂ ಸಹ ಉತ್ತಮ ಸ್ಥಿತಿಯಲ್ಲಿ ಇಟ್ಟುಕೊಂಡಿಲ್ಲ, ಅಲ್ಲಿ ಹಂದಿಗಳು ಮಾತ್ರ ಅರಾಮವಾಗಿ ಅಧಿಕಾರಿಗಳ ಹೆಸರಿನಲ್ಲಿ ಸಂಸಾರ ಮಾಡಿಕೊಂಡಿವೆ. ಜನಪ್ರತಿನಿಧಿಗಳು ಹಾಳಾಗ್ಲಿ ಬೆಂಗಳೂರಿನ ಕೊಳೆಗೇರಿ ಮಕ್ಕಳಿಗೆ Lux ಸೋಪು ಉಜ್ಜಿ, ಸ್ನಾನ ಮಾಡಿಸಿ, ಕೊಳೆಗೇರಿ ಸುಧಾರಣೆ ಮಾಡಿದೆ ಅಂತ ಪೇಪರುಗಳಿಗೆ ಹಲ್ಲು ಕಿಸಿದ ಫೋಟೊ ಕಳಿಸಿ ಧನ್ಯರಾಗುವ NGOಗಳಿಗೆ ಉ.ಕರ್ನಾಟಕದ ಅವ್ಯವಸ್ಠೆ, ಬಡತನ ಕಾಣುವುದೇ ಇಲ್ಲಾ. ಇನ್ನು ನಾರಾಯನ ಮೂರ್ತಿ, ಪ್ರೇಮಜೀ ಯವರ ಸಾಮಾಜಿಕ ಕಳಕಳಿ ಬೆಂಗಳೂರು ಬಿಟ್ಟು ಆಚೆ ಬರುವುದೇ ಬೇಡ ಅನ್ನುತ್ತೆ.ಇನ್ನು ಅಲ್ಲೆ ಹುಟ್ಟಿ ಬೆಳೆದ ನಮ್ಮಂತಹವರು ಮಾಡುತ್ತಿರುವುದಂತೂ ಯಾವುದಕ್ಕೂ ಬೇಡ; ಚೆನ್ನಮ್ಮ ರೈಲಿಗೆ ರಿಜರ್ವೆಶನ್ನು ಮಾಡಿಸಿ ಹಬ್ಬಕ್ಕೆ ಮಾತ್ರ ಹೋಗಿ " ನಮ್ಮೂರು ಈ ಜನ್ಮದಲ್ಲಿ ಮಾತ್ರ ಉದ್ದಾರ ಅಗುವದಿಲ್ಲ" ಅಂತ ಜಗ್ಗೇಶ್ ಡೈಲಾಗು ಬಿಟ್ಟು ಬಂದ್ರೆ ನಮ್ಮ ಕರ್ತವ್ಯ ಮುಗಿಯಿತು.

ಮೊನ್ನೆ ದೀಪಾವಳಿಗೆ ಹೋದಾಗ ಅನಿಸಿದ್ದಿಷ್ಟು . ಇಲ್ಯಾಕೆ ಹೀಗೆ? ಅಂತಾ. ಸಮಸ್ಯೆ ವ್ಯವಸ್ಥೆಯದಾ? ಅಥವಾ ನಮ್ಮ ಜನಗಳದಾ? ಅಥವಾ ವ್ಯವಸ್ಠೆ ರೂಪಿಸುತ್ತಿರುವ ರಾಜಕಾರಣಿಗಳದಾ?. ಎಲ್ಲೋ ಓದಿದ ನೆನಪು " If we are not part of the solution, then we are part of the problem" ಅಂತಾ, ಹಂಗಾದ್ರೆ ಬಹುಶಃ ನಾವೂ ಸಹ " part of problem" ಆಗಿರಬಹುದಲ್ವಾ? ಕಣ್ಣ ಮುಂದಿರುವ ಸಾವಿರ ಪ್ರಶ್ನೆಗಳಲ್ಲಿ ಕೆಲವಾಕ್ಕಾದರೂ ಉತ್ತರ ಹುಡುಕುವ ಪ್ರಯತ್ನ ಮಾಡಬೇಕಲ್ವಾ?

10 comments:

ಡಿ ಆರ್ ಮಧುಸೂದನ್ said...

ಇದು ಬರಿ ಗದಗದ ಸಮಸ್ಯೆ ಅಲ್ಲ ಮಾರಾಯ. ಬೆಂಗಳೂರು ಬಿಟ್ರೆ ಬೇರೆ ಎಲ್ಲ ಕಡೆ ಇದೇ ಸಮಸ್ಯೆ ಕಾಡುತ್ತಿದೆ. ಯಾವ ರಾಜಕಾರಣಿಯೂ ಸಮಸ್ಯೆಗಳಿಗೆ ಸ್ಪಂದಿಸುವುದಿಲ್ಲ. ಸಮಾಜಕ್ಕೆ ದುಡಿಯೋದಿಲ್ಲ. ನಾನು ಮಾಡುತ್ತಿರೋದು ತಪ್ಪು ಅಂಥ ಗೊತ್ತಿದ್ರೂ ಇದು ಸಣ್ಣ ಹನಿಯಷ್ಟೇ ಅಂಥ ಸುಮ್ಮನಾಗುತ್ತಾರೆ ಆದರೆ ಹನಿ ಹನಿ ಗೂಡಿದರೆ ಹಳ್ಳ ಅನ್ನೋದನ್ನ ಮರೆತುಬಿಡ್ತಾರೆ. ಈಗೆ ಆದ್ರೆ ಕಷ್ಟ. ಆದ್ರೆ ಇದರ ವಿರುದ್ದ ಹೊರಾಡೋರು ಎಷ್ಟು ಜನ ಸಿಕ್ತಾರೆ. ಒಬ್ಬ ಇಬ್ರು ಮಾಡೋ ಕೆಲ್ಸ ಅಲ್ಲ. ನಾಲ್ಕು ಐದು ಜನ ಸಿಗೋಲ್ಲ. ಆದರೆ ಇದನ್ನು ಹೋಗಲಾಡಿಸಬೇಕು.
ಅಂದ ಹಾಗೆ ನಮ್ಮ ಸರ್ಕಾರ ಸಮಸ್ಯೆಗಳಿಗೆ ಸ್ಪಂದಿಸದರ ವಿರುದ್ದ ಹೊರಾಡೋಕೆ ಒಂದು ವೇದಿಕೆ ಕಲ್ಪಿಸಿದೆ. ತಮ್ಮ ಸಮಸ್ಯೆಗಳು ಈಡೆರದಿದ್ದರೆ ಅದನ್ನ ಸರ್ಕಾರದ ಗಮನಕ್ಕೆ ತರಲು ಒಂದು ವೆಬ್ ಸೈಟ್ ಅನ್ನು ತೆರೆದಿದೆ ಅದು - http://darpg-grievance.nic.in/
ಆದರೆ ಇದನ್ನು ತೆರೆದಿರುವುದು ಸರ್ಕಾರ ಎಂಬುದನ್ನೂ ಮರೆಯಬಾರದು.

Anonymous said...

hey blogna... adbhuta maaDiyallo!! :-)

ರಂಜನಾ ಹೆಗ್ಡೆ said...

ನಿಜ ಕಣ್ರಿ ಪಾತೀಲ್ ಇದು ನಿಮ್ಮೂರಿನ ಸಮಸ್ಯೆ ಮಾತ್ರ ಅಲ್ಲಾ. ಮಲೆನಾಡಾದ ನಮ್ಮೂರಲ್ಲೂ ಇದೇ ಗೋಳು. ಕುಡಿಯುವ ನೀರಿಗೊಂದು ಸಮಸ್ಯೆ ಇಲ್ಲಾ ಅಷ್ಟೆ.

ಈ ಲೇಖನನಾ ಪೆಪರ್ ಗೆ ಕಳಿಸಿದ್ರೆ ಚನ್ನಾಗಿ ಇರುತ್ತೆ.

ಸಂತೋಷಕುಮಾರ said...

@ಮಧು
"ಆದರೆ ಇದನ್ನು ತೆರೆದಿರುವುದು ಸರ್ಕಾರ ಎಂಬುದನ್ನೂ ಮರೆಯಬಾರದು".:-) ಸಮಸ್ಯೆಯ ಮೂಲವೇ ಇದು ಅಲ್ಲವೇ?

@ಸಹನಾ
ತುಂಬಾ ಥ್ಯಾಂಕ್ಸ

@ರಂಜನಾ
ಹೆಚ್ಚು ಸಾಕ್ಷರತೆ ಇರುವ ನಿಮ್ಮ ಕಡೆಯೇ ಇನ್ನೂ ಸಹಿಸಿಕೊಂಡಿದ್ದೀರಾ ಅಂದ್ರೆ ನಿಮ್ಮ ತಾಳ್ಮೆಗೆ ಕಂಗ್ರಾಟ್ಸ ಹೇಳಲೇಬೇಕು..

Anonymous said...

ಸಂತೋಷ್,
’Angry young man' ಆಗಿಬಿಟ್ಟಿದೀರಲ್ಲಪ್ಪ! ಹೀಗೆ ನಿಮಗೊಬ್ಬರಿಗಷ್ಟೇ ಅಲ್ಲ ನಿಮ್ಮ ನಮ್ಮ ಜೋಡಿ ಇರೋ ಎಲ್ಲಾರಿಗೂ ಬರಬೇಕಲ್ಲ. ಮೊದಲು ನಾವು ನಮ್ಮ ಗೋಜಲು ಜೀವನಶೈಲಿಯನ್ನ ಸಿಕ್ಕುಬಿಡಿಸಿ ನೇರಮಾಡಿಕೊಂಡು ಈ ಕೆಲಸಗಳಿಗೆ ಹೊರಡಬೇಕು. ಎಲ್ಲಿಯವರೆಗೆ ನಮಗೆ ಸಾರ್ವಜನಿಕ ಶೌಚಾಲಯಗಳನ್ನ ಶುಚಿಯಾಗಿಟ್ಟುಕೊಳ್ಳಲು ಬರೊಲ್ಲವೋ, ಎಲ್ಲಿಯವರೆಗೆ ನಾವು ನಮ್ಮ ಬೀದಿಗಳನ್ನ ಕಸದತೊಟ್ಟಿ ಅಂತ ಭಾವಿಸ್ತೀವೋ, ಎಲ್ಲಿಯವರೆಗೆ ಲಂಚ ಕೊಡೋಕೆ ಕೈ ಮುಂದು ಮಾಡ್ತೀವೋ ಅಲ್ಲಿಯವರೆಗೆ ಇದು ನಡೀತಾ ಇರತ್ತೆ.. ಮಧು ಅವರು ಹೇಳೋದು ಅಪ್ಪಟ ಸತ್ಯ.
ನಿಮ್ಮ ಕಾಳಜಿ ಪದಗಳಲ್ಲಿ ಉಳಿಯದೆ ಹೋಗಲಿ ಎಂದು ಹಾರೈಸುತ್ತಾ..
ಟೀನಾ.

Anonymous said...

ಭಾಳ ಛಲೊವಿಚಾರ ಮಾಡಿದಿ. ಆದ್ರ ಇದಕ್ಕೆಲ್ಲಾ ಕಾರಣ ಯಾರ ಗೊತ್ತೇನು ? ನಾವ…! ಖುಶಿ ಪಡುವಂತಾ ಸುದ್ದಿ ಏನಂದರ ನಿನ್ನಂಗ ವಿಚಾರ ಮಾಡು ಹುಡುಗುರು ಈಗ ಭಾಳ ಆಗ್ಯಾರ…. ಆದರ ಇದು ಮಾತಿನ್ಯಾಗ ಮುಗದು ಹೋಗ್ ಬಾರದು. ಇದರ ಬಗ್ಗೆ ಮತ್ತ ಏನರ ವಿಚಾರ ಮಾಡಿದ್ದ್ರ ಹೇಳಾಕ್ ಮರೀಬ್ಯಾಡ…

Unknown said...

tumbaaa chennagi think madidiyaa.adre yi samasya bage hariyodu tumbaa ne kashta.yedaralli yella sahakara yirbeku ashte.

Anonymous said...

houdu patil ee samasye bagge 'hariyoddu' tumbane kasta.

ಸಂತೋಷಕುಮಾರ said...

@ ಟೀನಾ,ಸುನೀಲ
ಸಾದ್ಯವಾದುದನ್ನು ಮಾಡಬೇಕೆಂಬ ತುಡಿತವಂತೂ ಇದ್ದೇ ಇದೆ.ಅನಿಸಿದ್ದನ್ನು ಹಂಚಿಕೊಳ್ಳಬೇಕೆಂದು ಇದನ್ನು ಬ್ಲಾಗಿನಲ್ಲಿ ಪ್ರಕಟಿಸಿದ್ದೆ. ನಿಮ್ಮ ಧನಾತ್ಮಕ ಪ್ರತಿಕ್ರಿಯೆಗೆ ಧನ್ಯವಾದಗಳು.

@ ಪೂರ್ಣಿಮಾ,
ನಿಮ್ಮ ಸಹಕಾರ ಇದ್ದೆ ಇದೆಯಂತ ಭಾವಿಸ್ತಿನಿ. ಹನಿ ಹನಿ ಕೂಡಿದರೆ ಹಳ್ಳ ಅಲ್ಲವೇ?

@ಅನಾಮಿಕ ದೊರೆಯೆ,
ದೇವರಾಣೆಗೂ ನಂಗೆ ನಿಮ್ಮ ಕಮೆಂಟಿನ ತಲೆಬುಡವೂ ಅರ್ಥ ಆಗ್ಲಿಲ್ಲಾ.ಅರ್ಥ ಆಗದಿದ್ದರೂ ಪರ್ವಾಗಿಲ್ಲ, ಅಪಾರ್ಥ ಮಾಡಿಕೊಳ್ಳಬಾರದು ಅಂತ ಪ್ರತಿಕ್ರಿಯಿಸಿಲ್ಲ್ಲಾ..

Anonymous said...

tamma,

chalo bariti. hinga mundu barkonta hogu. nanga enara idarabagge maadaakkaadra ninnu kariteni.

ellaru kai tognodrra, enara aagbaudu.

-Prakash Patil