Monday, November 10, 2008

ಗೆಳೆಯನೊಬ್ಬನ ಕವನಗಳು...

ಇದು ನನ್ನ ಕಾಲೇಜು ಮಿತ್ರ ನೂತನನ "ಆತ್ಮರತಿ"ಯ ಕವನ ಸಂಕಲನದ ಆಯ್ದ ಕವನ.. ನಾವಿನ್ನೂ ಬಿ, ಎಂ, ಎಸ್ ಕಾಲೇಜಿನ "ಚಿರಂತನ"ದ ಕನ್ನಡ ಸ್ಪರ್ಧೆಗಳಲ್ಲಿ ಹೀಚು ಹೀಚಾಗಿ ಎನೇನೋ ಗೀಚಿ "ಸರಸ್ವತಿ ಪುತ್ರ"ರು ಅನ್ನೋ ಭ್ರಮೆಯಲ್ಲಿದ್ದಾಗಲೇ, ನೂತನ ಆಗಲೇ ತನ್ನ ಕವನ ಸಂಕಲನ ಪ್ರಕಟಿಸಿ ನಮ್ಮೆಲ್ಲರ ಅಚ್ಚರಿಗೆ ಕಾರಣವಾಗಿದ್ದ.. ಇಷ್ಟವಾದ ಮತ್ತು ಅರ್ಥವಾದ "ಅಮ್ಮನ ಬುತ್ತಿ ಬೇರಿನಲ್ಲಿ" ಎಂಬ ಒಂದು ಕವನವನ್ನು ಎರವಲು ತಂದು ಇಲ್ಲಿ ಪ್ರಕಟಿಸುತ್ತಿದ್ದೇನೆ..

*****************************************************

ಅಮ್ಮನ ಬುತ್ತಿ ಬೇರಿನಲ್ಲಿ...

ಬೇರಿನಲ್ಲಿ ಬುತ್ತಿ ಕಟ್ಟಿಟ್ಟಿದ್ದಳು ಅಮ್ಮ
ಮರಕೆಲ್ಲಿ ಗೊತ್ತು?
ಎಲ್ಲಿಂದಲೋ ಬಂದ ರಿವಿಕಿರಣಕ್ಕೆ
ಮುಖ ಮಾಡಿತ್ತು!

ಮೈ ಎಲ್ಲ ಮನಮಾಡಿ ಹಸಿರುಗನಸುಗಳ ಹೊತ್ತು
ಮಂದ ಮಾರುತಕ್ಕೆ ಮೈಯ್ಯ ಮರೆತಿತ್ತು!
ಬಳುಕುವ ಬಳ್ಳಿಗೆ ಸೋತು ಅಪ್ಪಿ ಬೆಳೆದಿತ್ತು!
ಬಣ್ನ ಬಣ್ನಗಳ ಹಕ್ಕಿಗಳ ಸಂಸಾರ ಮೈ ಎಲ್ಲ ಹೊತ್ತು
ತಾನೋಬ್ಬನೆ ಆಕಾಶಕ್ಕೇಣಿಯಾಗುವನೆಂದು
ಉಬ್ಬಿ ನಿಂತಿತ್ತು!

ಆಗಸವೂ ಸಿಗದೆ ಅಳುಕಿ ತಡಕಾಡಿ
ಬೇರೂ ಸಿಗದೇ ಬುತ್ತಿಯೂ ಸಿಗದೆ ಕಂಗಾಲಾಗಿತ್ತು!
ಮತ್ತೆ ಬೇರನ್ನರಸಿ ಕೆಳಗಿಳಿದಿತ್ತು!
ತಾನು ತಂದಿದ್ದ ಬುತ್ತಿ ಗೆದ್ದಲ ಗೂಡಿನಲ್ಲಿ
ಜೀರ್ಣವಾಗಿತ್ತು

ಬೇರುಗಳ ಸಂಧಿಯಲ್ಲಿ ಎಲ್ಲೋ ಹಣ್ಣಾಗಿದ್ದ ಈಗ
ಮಣ್ಣಾಗಿದ್ದ ಅದರಮ್ಮ ಹೇಳಿದ್ದು
ಆತ್ಮರತಿಗೆ ಮಾತ್ರ ಕೇಳುವಂತಿತ್ತು;
ಮಗುವೇ ನೀನಿನ್ನೂ ಬೆಳೆಯಬೇಕಿತ್ತು..

ನೂತನ್ ಎಸ್ .ಬಿ

4 comments:

ಸ್ವಗತ.... said...

ನಮ್ಮ ಪಾಟೀಲರ ಬ್ಲಾಗ್ ಅಪ್ಡೇಟ್ ಆಗಿಲ್ಲ ಅನ್ಕೊಂತ ಈಗರ..ನೋಡಿದ್ಯಾ ನೋಡ್ರಿ....ಅಪ್ಡೇಟ್ ಆಗೇ ಬಿಟ್ತೆತಿ.
ನಿಮ್ಮ ಮಿತ್ರ ನೂತನಗ, ನಮ್ದೊಂದ ಧನ್ನ್ಯವಾದ ತಿಳಿಸ್ರಿ. ಕಾಲೇಜ್ ಕಾಲದಾಗ ಇಷ್ಟ ಸುಂದರ ಆದ್ರ ಗಹನವಾದ ಕವಿತೆ ಬರದಾರ ಅಲ್ಲ ಅವ್ರು, ಮೆಚ್ಚಲೇಬೇಕು. ನಿಜವಾಗ್ಲು ಬಹಳ ಸುಂದರ ಕವಿತೆ.

sunaath said...

ಪಾಟೀಲರ,
ನಿಮ್ಮ ಬ್ಲಾಗಿನ through ನಿಮ್ಮ ಗೆಳೆಯರನ್ನು ಪರಿಚಯ ಮಾಡ್ಸಿದಿರಿ.ಧನ್ಯವಾದಗಳು.

ಕವನ ಛಲೋ ಅದ.ಅಭಿನಂದನೆಗಳು.

Anonymous said...

ನಮಸ್ತೆ.. .. ಅಮ್ಮನ ಹಬ್ಬಕ್ಕೆ ಆಮಂತ್ರಿಸಲು ನಿಮ್ಮ ಮನೆಗೆ ಬಂದೆ.. ದಯವಿಟ್ಟು ಬಿಡುವು ಮಾಡಿಕೊಂಡು ಬನ್ನಿ.. ವಿವರಗಳಿಗೆ ನನ್ನ ಬ್ಲಾಗ್ http://minchulli.wordpress.com ನೋಡಿ. ಮರೆಯದೆ ಬನ್ನಿ... ನಿಮ್ಮ ಆಪ್ತರಿಗೆಲ್ಲ ಈ ವಿಚಾರ ಹೇಳಿ ಸಾಧ್ಯವಾದರೆ ಕರೆದುಕೊಂಡು ಬನ್ನಿ.

ಶುಭವಾಗಲಿ,
- ಶಮ, ನಂದಿಬೆಟ್ಟ

ನೂತನ said...

ಧನ್ಯವಾದಗಳು.
ನಾನೂ ಈಗ ಒಂದು ಹೊಸ ಬ್ಲಾಗ್ ಚಾಲೂ ಮಾಡಿದ್ದೀನಿ. ಹೆಸರು "ಕನಸಿನ ಕಡಲು" ಅಂತ. ಅಲ್ಲಿಯೂ ನನ್ನ ಕೆಲವು ಕೂಸುಗಳಿವೆ. ಇಷ್ಟವಾದರೆ ಒಮ್ಮೆ ಮುದ್ದಿಸಿ ಬನ್ನಿ. ಪ್ರತಿಕ್ರಿಯೆ ಕಡ್ಡಾಯ.
Link: www.kanasinakadalu.blogsopt.com